ADVERTISEMENT

ಮನೆಯೇ ಪಾಠಶಾಲೆ

ಸುರೇಖಾ ಹೆಗಡೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST
ದಾಲಿ ಲಕ್ಷ್ಮೀನರಸಿಂಹ ಭಟ್ಟ
ದಾಲಿ ಲಕ್ಷ್ಮೀನರಸಿಂಹ ಭಟ್ಟ   

ಎಳವೆಯಿಂದಲೇ ನನ್ನ ಮುಂಜಾವು ಶುರುವಾಗುತ್ತಿದ್ದುದು ಮಂತ್ರಘೋಷಗಳನ್ನು ಕೇಳುತ್ತಾ. ತಲತಲಾಂತರದಿಂದ ಪೌರೋಹಿತ್ಯವನ್ನೇ ನಂಬಿಕೊಂಡು ಬಂದ ಕುಟುಂಬ ನನ್ನದು. ಇದೇ ಕ್ಷೇತ್ರವನ್ನು ವೃತ್ತಿಯಾಗಿಸಿಕೊಂಡ 47ನೇ ತಲೆಮಾರಿನವ ನಾನು.

ಹುಟ್ಟೂರು ಮೈಸೂರು. ಮಹಾರಾಜರ ಕಾಲದಿಂದಲೂ ನಮ್ಮ ಮನೆತನದವರಿಗೆ ವಿಶೇಷ ಆದ್ಯತೆ ಇತ್ತು. ಹೀಗಾಗಿ ಬಡತನ ನಮ್ಮನ್ನು ಕಾಡಲಿಲ್ಲ. ಏಳನೇ ತರಗತಿವರೆಗೆ ಓದಿದ್ದೇನೆ. ಸಾಧಾರಣ ಮಧ್ಯಮ ಕುಟುಂಬದಲ್ಲಿ ಬೆಳೆದ ನನಗೆ 11ನೇ ವಯಸ್ಸಿಗೆ ಉಪನಯನ ಮಾಡಿದರು. 12ನೇ ವಯಸ್ಸಿನಿಂದ ವೇದಪಾಠ ಶುರುವಾಯಿತು. ರಕ್ತಗತ ಕ್ಷೇತ್ರವಾದ್ದರಿಂದ ಶ್ಲೋಕ, ಮಂತ್ರ, ವೇದಗಳ ಅಧ್ಯಯನ ನನಗೆ ಖುಷಿ ನೀಡಿತು.

ಅಪ್ಪ, ತಾತಂದಿರೇ ಗುರುಗಳು, ಮನೆಯೇ ಪಾಠಶಾಲೆ ಆಗಿತ್ತು. ನಿತ್ಯ ವೇದಪಾಠವಾಗುತ್ತಿತ್ತು. ಆಮೇಲೆ ನಾನು ಅಭ್ಯಾಸ ಮಾಡಬೇಕು. ಆಗೆಲ್ಲಾ ವೇದ ಕಲಿಯುತ್ತಿದ್ದವರು ಜಾಸ್ತಿ. ಅಪ್ಪ ಹಾಗೂ ದೊಡ್ಡಪ್ಪ ರಾತ್ರಿ ಒಂದು, ಎರಡು ಗಂಟೆಯವರೆಗೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದುದು ಇನ್ನೂ ನನಗೆ ನೆನಪಿದೆ. ನಮ್ಮ ಮನೆಯಲ್ಲಿ ಮಂತ್ರಘೋಷಗಳು ಎಷ್ಟು ಸಾಮಾನ್ಯವಾಗಿತ್ತೆಂದರೆ ಅಮ್ಮನಿಗೆ ಶ್ಲೋಕಗಳೆಲ್ಲಾ ಬಾಯಿಪಾಠ ಆಗಿಬಿಟ್ಟಿದ್ದವು. ನಾನು ತಪ್ಪಿದರೆ ಅವರೇ ನನ್ನನ್ನು ತಿದ್ದುತ್ತಿದ್ದರು.

ADVERTISEMENT

ನಾನೊಬ್ಬನೇ ಮಗ. ಬಲು ಪ್ರೀತಿಯಿಂದ ಬೆಳೆಸಿದರು. ಆದರೆ ವೇದಾಭ್ಯಾಸದ ವಿಷಯದಲ್ಲಿ ಅಪ್ಪ ಕಟ್ಟುನಿಟ್ಟು. ಸಂಸ್ಕೃತ, ಆಚಾರ ವಿಚಾರಗಳನ್ನು ಚೆನ್ನಾಗಿ ಬಲ್ಲವರಾದ್ದರಿಂದ ನಿಯಮದ ಚೌಕಟ್ಟನ್ನು ಮೀರುವಂತಿರಲಿಲ್ಲ. ಅಪ್ಪ ಈ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದರಿಂದ ವೇದಪಾಠಶಾಲೆಯಲ್ಲಿ ಶಿಕ್ಷಕನಾಗುವ ಅವಕಾಶ ಸಿಕ್ಕಿತು. 1938ರಲ್ಲಿ ಬೆಂಗಳೂರಿಗೆ ಬಂದೆವು. 1954ರವರೆಗೂ ಶಿಕ್ಷಕ ವೃತ್ತಿಯಲ್ಲಿ ಅವರು ಮುಂದುವರೆದರು.

ನಮ್ಮ ಕುಟುಂಬದಲ್ಲಿ ಎಲ್ಲರೂ ಋಗ್ವೇದವನ್ನು ಓದಿದವರೇ. ನಾನೂ ಅದನ್ನೇ ಕಲಿತೆ. ಸಾಮವೇದ, ಯಜುರ್ವೇದಗಳನ್ನು ಹೆಚ್ಚು ಅಧ್ಯಯನ ಮಾಡಿಲ್ಲ. ಆದರೂ ಅವುಗಳ ಬಗೆಗೆ ಸ್ವಲ್ಪಮಟ್ಟಿನ ಜ್ಞಾನ ಸಂ‍ಪಾದಿಸಿಕೊಂಡಿದ್ದೇನೆ. ಚಿಕ್ಕಂದಿನಿಂದಲೇ ಅಪ್ಪನೊಂದಿಗೆ ಪೌರೋಹಿತ್ಯಕ್ಕೂ ಹೋಗುತ್ತಿದ್ದೆ. ಈ ಕ್ಷೇತ್ರವನ್ನು ನಿಧಾನವಾಗಿ ನನ್ನೊಳಗೆ ಇಳಿಸಿಕೊಂಡೆ. ಜಯಚಾಮರಾಜ ಒಡೆಯರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆ ಸಂದರ್ಭದಲ್ಲಿ ನಮಗೂ ಅರಮನೆಗೂ ಒಳ್ಳೆಯ ಸಂಪರ್ಕವಿತ್ತು. ಸ್ವಾತಂತ್ರ್ಯಾನಂತರ ಎಲ್ಲವೂ ಬದಲಾಯಿತು ಎನ್ನಿ. ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ನಾನು ಮೈಸೂರು ಅರಮನೆಯಲ್ಲಿ ಧರ್ಮಾಧಿಕಾರಿ ಆಗಿದ್ದೆ. ಆಸ್ಥಾನ ಪಂಡಿತರು ಎಂದೂ ಕರೆಯುತ್ತಿದ್ದರು.

ವೇದಾಧ್ಯಯನ, ಪೌರೋಹಿತ್ಯದ ಜೊತೆಗೆ ನಾನು ಬೇರೆಬೇರೆ ಸಂಸ್ಥೆಗಳಲ್ಲಿ ಸಂಸ್ಕೃತ ಪಾಠವನ್ನೂ ಹೇಳಿಕೊಡುತ್ತಿದ್ದೆ. ಈಗ ನನಗೆ 91 ವರ್ಷ. ಶಿಕ್ಷಕ ವೃತ್ತಿಯಲ್ಲಿ ನನ್ನದು 60 ವರ್ಷಗಳ ಅನುಭವ. ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಾ ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಈ ಕ್ಷೇತ್ರ ನನಗೆ ಅಪ್ಯಾಯಮಾನವಾಯಿತು. ನನ್ನ ವಿದ್ಯಾರ್ಥಿಗಳಿಂದ ವೇದ ಪರೀಕ್ಷೆ ಬರೆಸುತ್ತಿದ್ದೆ. ದೇಶದ ಬೇರೆಬೇರೆ ಪ್ರದೇಶಗಳಲ್ಲಿ ಆಗ ಪರೀಕ್ಷೆ ನಡೆಯುತ್ತಿತ್ತು. ಅಲ್ಲಿನ ಶಿಕ್ಷಕರು ನಮ್ಮ ಮಕ್ಕಳಿಗೆ, ನಾವು ಅವರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು. ಆ ಶಿಕ್ಷಕ ವೃತ್ತಿಯ ನೆನಪುಗಳು ಇಂದಿಗೂ ಖುಷಿ ಕೊಡುತ್ತವೆ.

ಅಂದಹಾಗೆ ಶೃಂಗೇರಿ ಶಂಕರ ಮಠ, ಪೂರ್ಣಪ್ರಜ್ಞ ವಿದ್ಯಾಪೀಠ, ಮಾಗಡಿ ಕಾರಣಿಕರ ವೇದಿಕ ಧರ್ಮ ಪಾಠಶಾಲಾ, ವೇದ ಪ್ರಕಾಶನ ಸಂಸ್ಥೆ, ಯೋಗೇಶ್ವರ ವೇದ ಪಾಠಶಾಲೆ ಹೀಗೆ ನಗರದ ವಿವಿಧ ಸಂಸ್ಥೆಗಳಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ನನ್ನ ಅನೇಕ ಶಿಷ್ಯರು ಆಸ್ಟ್ರೇಲಿಯ, ಅಮೆರಿಕ ಮುಂತಾದ ದೇಶಗಳಲ್ಲಿ ಪುರೋಹಿತರಾಗಿರುವುದು ಹೆಮ್ಮೆ ಎನಿಸುತ್ತದೆ.

**

ವೇದವನ್ನು ಅನುಭವಿಸಿದ ವಿದ್ವಾಂಸ

ರಾಜ್ಯದ ಋಗ್ವೇದ ವಿದ್ವಾಂಸರ ಪೈಕಿ ಮೊದಲ ಸಾಲಿನಲ್ಲಿ ನಿಲ್ಲುವವರು ದಾಳಿ ನರಸಿಂಹಭಟ್ಟರು (ಜನನ: ಮೇ 28, 1927). ಮೈಸೂರು ಮಹಾರಾಜರ ಪೋಷಣೆಯಲ್ಲಿದ್ದ ಇವರ ಪೂರ್ವಜರು ಶಿಕ್ಷಣ ಪರಂಪರೆಯನ್ನು ಉಳಿಸಿ, ಬೆಳೆಸುವ ಮೂಲಕ ಋಗ್ವೇದ ಸಂಹಿತೆ ಮತ್ತು ವ್ಯಾಖ್ಯಾನಗಳಿಗೆ ನೀಡಿದ ಕೊಡುಗೆಯೂ ದೊಡ್ಡದು.

ಸತತ 60 ವರ್ಷ ಪಾಠ ಹೇಳಿದ ಅನುಭವ ಇರುವ ದಾಳಿ ಲಕ್ಷ್ಮಿನರಸಿಂಹಭಟ್ಟರು ಕನ್ನಡದಲ್ಲಿ ಪೌರೋಹಿತ್ಯದ ಪುಸ್ತಕಗಳನ್ನು ಬರೆಯುವ ಮೂಲಕ ಪೌರೋಹಿತ್ಯ ವೃತ್ತಿಗೆ ಒಂದು ಶಿಸ್ತು ತರಲು ಯತ್ನಿಸಿದ ಮೊದಲಿಗರು. ಇಳಿ ವಯಸ್ಸಿನಲ್ಲಿಯೂ ಅವರ ಬದುಕು ನಿಯಮಗಳ ಚೌಕಟ್ಟಿನಲ್ಲಿಯೇ ಸಾಗುತ್ತಿದೆ. ಅಧ್ಯಯನ- ಅಧ್ಯಾಪನಗಳು ಉಸಿರಿನಷ್ಟೇ ಸಹಜವಾಗಿ ಅವರನ್ನು ಬೆರೆತುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.