ADVERTISEMENT

ಮನೆಯೊಳಗೇ ಇದೆ ಮನಮೆಚ್ಚುವ ಬಣ್ಣ

ಪ್ರಜಾವಾಣಿ ವಿಶೇಷ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST
ಮನೆಯೊಳಗೇ ಇದೆ ಮನಮೆಚ್ಚುವ ಬಣ್ಣ
ಮನೆಯೊಳಗೇ ಇದೆ ಮನಮೆಚ್ಚುವ ಬಣ್ಣ   

ರಾಸಾಯನಿಕ ಅಂಶಗಳುಳ್ಳ ಸಿಂಥೆಟಿಕ್‌ ಬಣ್ಣಗಳು ಚರ್ಮ, ಕೂದಲು ಮತ್ತು ಕಣ್ಣಿಗೆ ಮುಖ್ಯವಾಗಿ ಅಪಾಯಕಾರಿ ಎಂದಾದರೆ ಆರೋಗ್ಯಕರವಾದ ಪರ್ಯಾಯ ಮಾರ್ಗವಿದ್ದೇ ಇದೆ ಎಂಬುದು ಸಮಾಧಾನದ ಸಂಗತಿ.

ಆದರೆ ಸಾವಯವ/ಹರ್ಬಲ್‌/ ನೈಸರ್ಗಿಕ ಬಣ್ಣಗಳನ್ನೇ ಬಳಸಿ ಎಂದು ಹೇಳುವುದು ಸುಲಭ. ಅವು ಸಿಂಥೆಟಿಕ್‌ ಬಣ್ಣಗಳಷ್ಟು ಸಲೀಸಾಗಿ ಸಿಗುವುದಿಲ್ಲ ಎಂಬುದು ಸಾಮಾನ್ಯವಾದ ದೂರು. ಅದಕ್ಯಾಕೆ ತಲೆಕೆಡಿಸಿಕೊಳ್ಳಬೇಕು? ನಿಮ್ಮ ಅಡುಗೆ ಮನೆಯ ಡಬ್ಬಗಳಲ್ಲೇ ಅಡಗಿರುವ ಸಂಗತಿ ಗೊತ್ತೇ? ಮಾರುಕಟ್ಟೆಯಲ್ಲಿ ಸಿಗುವಷ್ಟು ಢಾಳಾದ ಬಣ್ಣ ಮನೆಯಲ್ಲಿ ತಯಾರಿಸುವ ಬಣ್ಣದ ಪುಡಿಯಲ್ಲಿ ಸಿಗದಿದ್ದರೂ ನಿಶ್ಚಿಂತೆಯಿಂದ ತಲೆಯಿಂದ ಕಾಲಿನವರೆಗೂ ಹಚ್ಚಿಕೊಂಡರೂ ಕಿಂಚಿತ್ತೂ ತೊಂದರೆಯಾಗದು ಎಂಬುದು ಗಮನಾರ್ಹ. 

ಹಳದಿ
ಅರಸಿನದ ಪುಡಿ ಮತ್ತು ಕಡ್ಲೆಹಿಟ್ಟು ಬೆರೆಸಿ ಮುಖಕ್ಕೆ ಪ್ಯಾಕ್‌ ತಯಾರಿಸಿಕೊಳ್ಳುತ್ತೀರಲ್ಲ? ಅದೇ ಎರಡು ಪುಡಿಗಳಿಗೆ ಯಾವುದೇ ಟಾಲ್ಕಂ ಪೌಡರ್‌ ಅಥವಾ ಮುಲ್ತಾನಿ ಮಿಟ್ಟಿ ಬೆರೆಸಿದರೆ ಆಕರ್ಷಕ ಹಳದಿ ಬಣ್ಣ ಸಿದ್ಧ!

ಇನ್ನು ಕೆಲವರು ಮಾರಿಗೋಲ್ಡ್‌ ಎಂಬ ಹಳದಿ ಚೆಂಡು ಹೂವುಗಳನ್ನು ನೆರಳಿನಲ್ಲಿ ಒಣಗಿಸಿ, ಚೆನ್ನಾಗಿ ಪುಡಿ ಮಾಡಿಕೊಂಡು ಅದಕ್ಕೆ ಹೆಸರುಬೇಳೆ ಹಿಟ್ಟು ಬೆರೆಸಿದರೂ ಆಕರ್ಷಕವಾದ ಹಳದಿ ಬಣ್ಣ ಸಿದ್ಧವಾಗುತ್ತದೆ. ಇದನ್ನು ಮುಂದಿನ ವರ್ಷದ ಹೋಳಿ ಹಬ್ಬಕ್ಕೆ ಟಿಪ್ಸ್‌ ಆಗಿ ನೆನಪಿಟ್ಟುಕೊಳ್ಳಿ.

ಕೆಂಪು
ಹೋಳಿ ಹಬ್ಬದಲ್ಲಿ ಎಲ್ಲರ ಮೆಚ್ಚಿನ ಬಣ್ಣ ಕೆಂಪು. ಚರ್ಮಕ್ಕೆ ಕಾಂತಿ ನೀಡಲು ಬಳಸುವ ಕೆಂಪು ಚಂದನದ ಪುಡಿಯನ್ನೇ ಹೋಳಿಯ ಕೆಂಪು ಬಣ್ಣವಾಗಿ ಬಳಸಬಹುದು. ಅದು ದುಬಾರಿಯಾಯಿತು ಎನ್ನುತ್ತೀರಾ? ಸಿಂಧೂರವನ್ನೇ (ಕುಂಕುಮ) ಬಳಸಿ. ಪೇಸ್ಟ್‌ ತಯಾರಿಸುವುದಾದರೆ ಕೆಂಪು ದಾಸವಾಳಗಳನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ರುಬ್ಬಿ ಬಳಸಿ.

ಗುಲಾಬಿ
ಗುಲಾಬಿ ಬಣ್ಣವಿಲ್ಲದ ರಂಗಿನೋಕುಳಿಯನ್ನು ಊಹಿಸಲೂ ಸಾಧ್ಯವಿಲ್ಲ. ಬೀಟ್‌ರೂಟನ್ನು ತೆಳುವಾಗಿ ಕತ್ತರಿಸಿ (ಸ್ಲೈಸ್) ರಾತ್ರಿ ನೀರಿನಲ್ಲಿ ನೆನೆಸಿಡಬೇಕು. ಈ ನೀರನ್ನಾದರೂ ಬಳಸಬಹುದು, ಬೇಯಿಸಿ ಅದರ ನೀರಿನಲ್ಲಾದರೂ ಓಕುಳಿಯಾಡಬಹುದು ಇಲ್ಲವೇ ನೆನೆಸಿಟ್ಟ ನೀರಿನೊಂದಿಗೆ ಬೀಟ್‌ರೂಟ್‌ ರುಬ್ಬಿ ಪೇಸ್ಟ್‌ ರೂಪದಲ್ಲೆ ಗುಲಾಲ್‌ ಆಡಬಹುದು.

ಮನೆಯೊಳಗೇ ಹೋಳಿ ಬಣ್ಣಗಳನ್ನು ದಕ್ಕಿಸಿಕೊಳ್ಳುವ ಬಗೆಯನ್ನು ನೋಡಿದ್ದಾಯಿತು. ಹೋಳಿ ಆಡಲು ಕೇಸರಿ ಮತ್ತು ಹಸಿರು ಬಣ್ಣಗಳೂ ಬೇಕಲ್ಲ? ಅವನ್ನು ಮನೆಯಿಂದಾಚೆ ಹುಡುಕಬೇಕಿದೆ.

ಕೇಸರಿ
ಮುತ್ತುಗದ ಹೂವು ಗೊತ್ತಲ್ಲ? ಬೆಂಕಿಯುಂಡೆಯಂತಹ ಕಡು ಬಣ್ಣದ, ಪ್ರತಿ ಪಕಳೆಯೂ ಬಾನಮುಖಿಯಾಗಿ ನಿಲ್ಲುವ ಸೊಗಸೇ ಭಿನ್ನ. ಹೋಳಿ ಹಬ್ಬಕ್ಕೆ ಕೇಸರಿ ಬಣ್ಣವನ್ನು ಸಿದ್ಧಪಡಿಸಲು ಒಂದಷ್ಟು ಮುತ್ತುಗದ ಹೂವುಗಳಿದ್ದರೆ ಸಾಕು. ಈ ಹೂವಿನ ದಳಗಳನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ರುಬ್ಬಿದರೆ ಕೆಂಪು ಕೇಸರಿ ಬಣ್ಣದ ಪೇಸ್ಟ್‌ ಸಿದ್ಧವಾಗುತ್ತದೆ. ಪೇಸ್ಟ್‌ ಬೇಡ ಎನ್ನುವವರು ಅದೇ ದಳಗಳನ್ನು ನೀರಿನಲ್ಲಿ ಕುದಿಸಿ ಕೇಸರಿ ಬಣ್ಣದ ಕಷಾಯವನ್ನೇ ಓಕುಳಿಗೆ ಬಳಸಬಹುದು.

ಹಸಿರು
ಸಿಲಿಕಾನ್‌ ಸಿಟಿಯ ರಸ್ತೆ ಬದಿಯಲ್ಲಿ ಯಥೇಚ್ಛವಾಗಿ ಕಾಣಸಿಗುವ ಗುಲ್‌ಮೊಹರ್ ವೃಕ್ಷಗಳು ಹೋಳಿ ಹಬ್ಬವನ್ನು ನೈಸರ್ಗಿಕ ಬಣ್ಣದೊಂದಿಗೆ ಆಚರಿಸಲು ನೆರವಾಗುತ್ತವೆ ಎಂದರೆ ನಂಬುತ್ತೀರಾ? ಇದರ ಎಲೆಗಳನ್ನು ಒಣಗಿಸಿ ಪುಡಿ ಮಾಡಿದರೆ ಕಡುಹಸಿರು ಬಣ್ಣ ಹೋಳಿ ಹಬ್ಬಕ್ಕೆ ದಕ್ಕಿದಂತೆಯೇ. ಕೂದಲಿಗೆ ಬಣ್ಣ ಮೆತ್ತುವುದು ಕೆಲವರಿಗೆ ಇಷ್ಟ. ಅಂಥವರು ಮದರಂಗಿ/ಹೆನ್ನಾವನ್ನು ಹಸಿರು ಪುಡಿಯಾಗಿ ಬಳಸುವುದು ಸೂಕ್ತ.

ಮಾರುಕಟ್ಟೆಯಲ್ಲಿ ಓಡಾಡಿ ಮಾರಕ ಬಣ್ಣದ ಪುಡಿಗಳಿಗೆ ದುಡ್ಡು ತೆತ್ತು ಖರೀದಿಸಿ ಅಪಾಯವನ್ನು ಬೋನಸ್‌ ಆಗಿ ಆಹ್ವಾನಿಸಿಕೊಳ್ಳುವ ಬದಲು ಹೀಗೆ, ಹೋಳಿ ಹಬ್ಬಕ್ಕೆ ದೇಸಿ ರಂಗು ತುಂಬುವುದೇ ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.