ADVERTISEMENT

ಮನೆ ಮೇಲೊಂದು ರಂಗಮಂದಿರ

ರಂಗಭೂಮಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ
ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ   

ಕುಮಾರಸ್ವಾಮಿ ಲೇಔಟ್‌ನ ಗೋಪಿನಾಥ್ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ರಂಗಭೂಮಿ ಅವರ ಆಸಕ್ತಿಯ ಕ್ಷೇತ್ರ. 30×40 ನಿವೇಶನದಲ್ಲಿರುವ ತಮ್ಮ ಮನೆಯ ಮಲೆಯೇ ಸಣ್ಣದೊಂದು ರಂಗಮಂದಿರ ಕಟ್ಟಿಕೊಂಡು ಕಲಾಸೇವೆ ಮಾಡುತ್ತಿದ್ದಾರೆ. ಅದಕ್ಕೆ ‘ಕೆವಿಎಸ್ ಆಪ್ತ ರಂಗಮಂದಿರ’ ಎಂಬ ಹೆಸರಿಡುವ ಮೂಲಕ ನೀನಾಸಂನ ಸುಬ್ಬಣ್ಣ ಅವರ ಹೆಸರನ್ನೂ ಸದಾ ನೆನಪಿಸುತ್ತಾರೆ.

ಗೋಪಿನಾಥ್ ಅವರು 90ರ ದಶಕದಲ್ಲಿ ನೀನಾಸಂನಲ್ಲಿ ‘ಥಿಯೇಟರ್‌ ಆರ್ಟ್‌’ ಕುರಿತು ಅಭ್ಯಾಸ ಮಾಡಿದ್ದರು. ಈ ಸಂದರ್ಭ ನಾಡಿನ ವಿವಿಧೆಡೆ ಇರುವ ವಿವಿಧ ಮಾದರಿ ರಂಗಮಂದಿರಗಳ ಕಾರ್ಯಚಟುವಟಿಕೆಗಳನ್ನು ಅಭ್ಯಾಸ ಮಾಡಲೆಂದು ನಾಡು ಸುತ್ತಿದ್ದರು. ಅದೇ ಅನುಭವ ಬಳಸಿಕೊಂಡು ಶಿಕ್ಷಣ ಮತ್ತು ರಂಗಭೂಮಿಯ ನಂಟು ಬೆಸೆಯಲು ಯತ್ನಿಸಿದರು. ಮಕ್ಕಳ ಪಠ್ಯದಲ್ಲಿರುವ ಗದ್ಯ–ಪದ್ಯಗಳನ್ನೇ ನಾಟಕವಾಗಿಸುವ ಇವರ ಪ್ರಯತ್ನ ಯಶ ಕಂಡಿತು. ಮುಂದಿನ ದಿನಗಳಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿಯೇ ರಂಗಮಂದಿರ ರೂಪಿಸಿದರು.

ಮನೆ ಮೇಲಿನ ರಂಗಮಂದಿರದ ಪರಿಕಲ್ಪನೆಯೇ ಹೊಸತಾದ್ದರಿಂದ ಉದ್ಘಾಟನೆಗೊಂಡು ವರ್ಷವಾದರೂ ಜನರ ಸುಳಿವೇ ಇರಲಿಲ್ಲ. ಜನರನ್ನು ಸೆಳೆಯುವ ಸಲುವಾಗಿ ಗಿರೀಶ್ ಕಾಸರವಳ್ಳಿ ಸಿನಿಮಾ ಸೇರಿದಂತೆ, ಜಗತ್ತಿನ ಅತ್ಯತ್ತಮ ಸಿನಿಮಾಗಳನ್ನು ಪ್ರದರ್ಶಿಸಲಾಯಿತು. ಹೀಗಾಗಿ ನಿಧಾನವಾಗಿ ರಂಗಮಂದಿರದಲ್ಲಿ ಜನರ ಹೆಜ್ಜೆ ಗುರುತು ಮೂಡಲಾರಂಭಿಸಿದವು.

ADVERTISEMENT

ಬಳಿಕ ಕಲೆ- ಸಾಹಿತ್ಯದ ಅಧ್ಯಯನಕ್ಕಾಗಿ ಜಿ.ಎಸ್‌.ಶಿವರುದ್ರಪ್ಪನವರ ನೇತೃತ್ವದಲ್ಲಿ 'ಸಾಹಿತ್ಯ ದರ್ಶನ', ವಿದ್ಯಮಾನಗಳ ಚರ್ಚೆಗಾಗಿ ಜಯಂತ್‌ ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ 'ಕಾಫಿ ಕೂಟ', ನವೋದಯ ಸಾಹಿತ್ಯ ವಿಮರ್ಶೆಗಾಗಿ ಕಿ.ರಂ.ನಾಗರಾಜು ಅವರ ನೇತೃತ್ವದಲ್ಲಿ 'ಕಲಾಪದ’ದಂಥ ಹಲವು ಕಾರ್ಯಕ್ರಮಗಳು ಆರಂಭವಾದವು.

ಪ್ರತಿವರ್ಷ 'ಮಕ್ಕಳ ಸಂಸ್ಕೃತಿ ಶಿಬಿರ' ಏರ್ಪಡಿಸಿ ಕೇವಲ 22 ದಿನಗಳಲ್ಲಿ 7,8,9ನೇ ತರಗತಿಯ ಕನ್ನಡ ಪಠ್ಯವನ್ನು ನಾಟಕವಾಗಿ ಕಲಿಸುವ ಪ್ರಯತ್ನ ನಡೆಯಿತು. ಕೆರೆಗಳ ಉಳಿವಿಗಾಗಿ 'ಕೆರೆ ಕರಗುವ ಸಮಯ' ಜಾಗೃತಿ ಆಂದೋಲನ ಆರಂಭಿಸಲಾಯಿತು. ‘ನಿರ್ಭಯಾ’ ಪ್ರಕರಣಕ್ಕೆ ಪ್ರತಿರೋಧವಾಗಿ ಹಲವು ಮಹಿಳಾ ಪ್ರಧಾನ ಸಿನಿಮಾಗಳೂ ಪ್ರದರ್ಶನ ಕಂಡವು.

(ಕೆವಿಎಸ್‌ ಆಪ್ತ ರಂಗಮಂದಿರದ ಉದ್ಘಾಟನೆಯಲ್ಲಿ ಯು.ಆರ್‌.ಅನಂತ ಮೂರ್ತಿ ಹಾಗೂ ಚಂದ್ರಶೇಖರ ಕಂಬಾರ)

ನಾಟಕ, ಸಂವಾದ, ಸಿನಿಮಾ, ಚಿತ್ರಕಲಾ ಮೇಳ, ಯೋಗ, ಅಭಿನಯ ತರಬೇತಿಯಂತಹ ಪ್ರಕ್ರಿಯೆಗಳು ನಿರಂತರವಾಗತೊಡಗಿದ ಮೇಲೆ ರಂಗಮಂದಿರದ ಖ್ಯಾತಿ ರಾಜ್ಯದ ಮೂಲೆ ಮೂಲೆಗೂ ಪಸರಿಸಿದೆ. ರಂಗಭೂಮಿ ಮತ್ತು ಇತರ ಸೃಜನಶೀಲ ಚಟುವಟಿಕೆಗಳಿಗೆ ರಂಗ ಮಂದಿರ ಲಭ್ಯ. ಇದರಲ್ಲಿ ಸುಮಾರು 60 ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದು. ಅನೇಕ ಆಸಕ್ತರು ಇದರ ಪ್ರಯೋಜನ ಪಡೆದಿದ್ದಾರೆ.

ಹೆಸರಿಗೆ ತಕ್ಕಂತೆ 'ಆಪ್ತ' ಭಾವ ಮೂಡಿಸುವ ಇದರ ಪ್ರಭಾವದಿಂದ ಇದೀಗ ಬಾಷ್ ಕಂಪೆನಿ ಉದ್ಯೋಗಿ ನಾಗಭೂಷಣ್, ವೈದ್ಯ ವಸಂತಕುಮಾರ್, ರಂಗಕರ್ಮಿ ಇಕ್ಬಾಲ್ ಅಹಮದ್, ಸುರೇಶ್ ಆನಗಳ್ಳಿ ಸೇರಿದಂತೆ ಹಲವರು ತಮ್ಮ ಮನೆಗಳ ಮೇಲೆ ರಂಗಮಂದಿರಗಳನ್ನು ನಿರ್ಮಿಸುತ್ತಿದ್ದಾರೆ.

'ಕೆ.ವಿ.ಎಸ್ ಆಪ್ತ' ಹೆಸರು ಬಂದದ್ದು
ಯಾವುದೇ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸುವ ಅಪ್ರತಿಮರನ್ನು ರೂಪಿಸಿ ಸಮಾಜವನ್ನು ಮುನ್ನಡೆಸುವಂತೆ ಮಾಡುವುದೇ ನಮ್ಮ ಉದ್ದೇಶ. ಹೆಗ್ಗೋಡಿನಂತಹ ಸಣ್ಣ ಹಳ್ಳಿಯಲ್ಲಿ ರಂಗಮಂದಿರ ಕಟ್ಟಿ ಯಶಸ್ವಿಯಾಗಿದ್ದ ಕೆ.ವಿ.ಸುಬ್ಬಣ್ಣ ಅವರೇ ಇದಕ್ಕೆ ಸ್ಫೂರ್ತಿ. ಮನೆಯವರ ಹಾಗೂ ಆತ್ಮೀಯರ ಸಹಕಾರದಿಂದ ರಂಗ ಮಂದಿರ ನಿರ್ಮಿಸಿದೆ.

ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಆಪ್ತಭಾವ ಮೂಡಬೇಕು ಎನ್ನುವ ಕಾರಣಕ್ಕೆ 'ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ' ಎಂಬ ಹೆಸರು ಇರಿಸಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಮತ್ತು ಚಂದ್ರಶೇಖರ ಕಂಬಾರರು 2006ರಲ್ಲಿ ರಂಗ ಮಂದಿರ ಉದ್ಘಾಟಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರದ ನಿರ್ಮಿಸಿರುವ ಗೋಪಿನಾಥ್.

ವಿಳಾಸ: ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ, ನಂ.151, 7ನೇ ಅಡ್ಡರಸ್ತೆ, ಟೀಚರ್ಸ್ ಕಾಲೊನಿ, 1ನೇ ಹಂತ, ದಯಾನಂದ ಸಾಗರ್ ಕಾಲೇಜು ಸಮೀಪ, ವಸುಧಾ ಭವನದ ಎದುರು, ಬೆಂಗಳೂರು- 560078. ಮೊ- 8892795666, ಇಮೇಲ್- kvssamuha@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.