ಬೇಸಿಗೆ ಅಂದ್ರೆ ನೆನಪಾಗುವುದೇ ಅಜ್ಜನ ಮನೆ. ಅಜ್ಜನ ಮನೆಯಲ್ಲಿ ಕಲಿಯುವ ಆಟ-ಪಾಠ, ಹಾಡು-ಕುಣಿತ ಎಲ್ಲವೂ ವ್ಯಕ್ತಿತ್ವವನ್ನೇ ನಿರ್ಮಾಣ ಮಾಡುತ್ತವೆ.
ಈಗಿನ ಬೇಸಿಗೆ ಶಿಬಿರಗಳು ಶಾಲೆಯ ಮುಂದುವರಿದ ಭಾಗಗಳಂತೆ ಎನಿಸುತ್ತವೆ. ಅಥವಾ ಮೈ ಮುರಿಯುವ, ಮೈ ದಣಿಯುವ, ಮಣಿಯುವ ಶಿಬಿರಗಳಿದ್ದರೂ ಅಲ್ಲಿ ಮನ ಅರಳುವುದೆಷ್ಟು? ವ್ಯಕ್ತಿತ್ವ ನಿರ್ಮಾಣವಾಗುವುದು ಎಂತು?
ಇಂಥವೇ ಪ್ರಶ್ನೆಗಳು ಎದುರಾದಾಗಲೇ ಒಂದು ಭಿನ್ನವಾದ ಬೇಸಿಗೆ ಶಿಬಿರ ಆರಂಭಿಸುವ ಯೋಜನೆ ರೂಪುಗೊಂಡಿತು ಎಂದು 15 ವರ್ಷಗಳ ಹಿನ್ನೆಲೆಯನ್ನು ನೆನಪಿಸಿಕೊಂಡಿದ್ದು ಶ್ರೀವತ್ಸ ಚಕ್ರವರ್ತಿ.
ಬೆಂಗಳೂರಿನ ಬಸವನಗುಡಿಯಲ್ಲಿರುವ ಅವರ ಮನೆಯಲ್ಲಿ ಕಳೆದ 15 ವರ್ಷಗಳಿಂದ ಒಂದು ಉಚಿತ ಬೇಸಿಗೆ ಶಿಬರವನ್ನು ಏರ್ಪಡಿಸುತ್ತಿದ್ದಾರೆ. ಇಲ್ಲಿ ಮಕ್ಕಳು ಭಾವಗೀತೆ, ಸುಗಮ ಸಂಗೀತ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಪರಿಚಯ ಮಾಡಿಕೊಳ್ಳುತ್ತಾರೆ. ಒಂದೊಂದು ನೃತ್ಯದ ತುಣಕನ್ನೂ ಪ್ರದರ್ಶಿಸಲಾಗುತ್ತದೆ.
ಇದೊಂಥರ ಅಭಿರುಚಿ ಬೆಳೆಸುವ ಕೆಲಸ. ಆಸಕ್ತಿ ಇದ್ದಲ್ಲಿ ಮಕ್ಕಳು ಈ ಕಲೆಗಳಲ್ಲಿ ಯಾವುದಾದರೂ ಒಂದನ್ನು ಸಂಪೂರ್ಣವಾಗಿ ಕಲಿಯಲು ಒಲವು ತೋರಬಹುದು ಎಂಬ ಆಶಯ ಈ ಶಿಬಿರದ್ದು ಎನ್ನುತ್ತಾರೆ ಚಕ್ರವರ್ತಿ.
ಇಷ್ಟೇ ಅಲ್ಲ, ಸಂಸ್ಕೃತ ಶ್ಲೋಕಗಳನ್ನು ಅರ್ಥ ಸಹಿತ ವಿವರಿಸುತ್ತಲೇ 3-4 ದಿನಗಳಲ್ಲಿ ಮನದಟ್ಟು ಮಾಡಿ, ಮನನ ಮಾಡಿಸುತ್ತಾರೆ. ಸಂಸ್ಕೃತದ `ಟಂಗ್‌ಟ್ವಿಸ್ಟರ್~ಗಳನ್ನು ಸುಲಲಿತವಾಗಿ ಹೇಳುವಂತೆ ಮಾಡಲಾಗುತ್ತದೆ. ನಾಲಗೆ ಹೊರಳಿಸುವುದು ಒಂದು ಕಲೆ. ಹಾಗೆ ಹೊರಳಿಸುತ್ತಲೇ ಕಷ್ಟಕರ ಶಬ್ದಗಳಿದ್ದರೂ ರಾಮಾಯಣದ ಕೆಲ ದೃಶ್ಯಗಳನ್ನೇ ರಾಗಬದ್ಧವಾಗಿ ಹೇಳುವುದನ್ನು ಕಲಿಸಲಾಗುತ್ತದೆ.
ಶಂಕರಾಚಾರ್ಯ ಸ್ತೋತ್ರಗಳನ್ನೂ ಹೇಳಿಕೊಡಲಾಗುತ್ತದೆ. ಓಹ್ ಈ ಸ್ತೋತ್ರ, ಶ್ಲೋಕ, ಕತೆ, ಹಾಡು ಇಷ್ಟೇನಾ.. ನಿಜಕ್ಕೂ ಅಜ್ಜನ ಮನೆಯ ಅಡಗೂಲಜ್ಜಿಯ ಕತೆ ಇದ್ದಂಗಿದೆ ಎಂಬ ತೀರ್ಮಾನಕ್ಕೆ ಬರಬೇಡಿ. ಸಮಕಾಲೀನ ತಂತ್ರಜ್ಞಾನ, ಪ್ರಾಚೀನ ಸಂಸ್ಕೃತಿ ಎರಡನ್ನೂ ಒಟ್ಟೊಟ್ಟಿಗೆ ಕರೆದೊಯ್ಯುವ ಪ್ರಯತ್ನ ಚಕ್ರವರ್ತಿ ಅವರದ್ದು. ಅವರ ಮಗ ಶ್ರೀಧರ ಚಕ್ರವರ್ತಿ ವಿಜ್ಞಾನಿ. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಸಂಶೋಧಕ. ಪ್ರತಿ ಶನಿವಾರ ಹಾಗೂ ಭಾನುವಾರ ವೀಡಿಯೊ ಚಾಟ್ ಮೂಲಕ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಸಲಹೆಗಳನ್ನು ನೀಡುತ್ತಾರೆ.
ಶಿಬಿರಾರ್ಥಿಗಳೊಂದಿಗೆ ಸಂವಾದ ಮಾಡುತ್ತಾರೆ. ಸಂಶಯಗಳಿಗೆ ಪರಿಹಾರವನ್ನೂ ನೀಡುತ್ತಾರೆ.
ಸಂಗೀತ, ಸಾಹಿತ್ಯ ತಂತ್ರಜ್ಞಾನವಷ್ಟೇ ಅಲ್ಲ, ಭೂಗೋಳ, ಇತಿಹಾಸ, ಗಣಿತ ಮುಂತಾದವನ್ನೂ ಹೇಳಿಕೊಡಲಾಗುತ್ತದೆ. ದಶದಿಕ್ಕುಗಳ ಬಗ್ಗೆ ಮಾಹಿತಿ ನೀಡುತ್ತಲೇ ಇಡೀ ಬೆಂಗಳೂರಿನ ದಿಕ್ಕು ದೆಸೆಗಳನ್ನು ತಿಳಿಸಿಕೊಡಲಾಗುತ್ತದೆ.
ಭೂಗೋಳ ಹಾಗೂ ಈ ದಿಕ್‌ದರ್ಶನ ಅತ್ಯಂತ ಜನಪ್ರಿಯ ವಿಷಯಗಳಾಗಿವೆ ಎನ್ನುತ್ತಾರೆ ಶ್ರೀವತ್ಸ ಅವರು.
ಶಿಬಿರದ ಸಮಯ ಬೆಳಿಗ್ಗೆ 10ರಿಂದ 3. ಊಟ ಉಚಿತ. ನೋಂದಣಿ ಶುಲ್ಕ 100 ರೂಪಾಯಿ. ಮೊದಲು ಬಂದವರಿಗೆ ಆದ್ಯತೆ. 200 ಮಕ್ಕಳಿಗೆ ಅವಕಾಶ. ಜೊತೆಗೆ ಪಾಲಕರೂ ಭಾಗವಹಿಸಬಹುದು.
ವಿಳಾಸ: ಶ್ರೀವತ್ಸ ಚಕ್ರವರ್ತಿ, ನಂ 70 ಗೋವಿಂದಪ್ಪ ರಸ್ತೆ, ಲಾಲ್‌ಬಾಗ್ ಪಶ್ಚಿಮ ಗೇಟ್ ಬಳಿ ಬಸವನಗುಡಿ ಬೆಂಗಳೂರು. ಮಾಹಿತಿಗೆ: 2657 2212/ 9901572212
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.