ADVERTISEMENT

ಮಳಿಗೆಗಳಾದವು ಕಾರುಗಳು!

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 19:30 IST
Last Updated 12 ಜುಲೈ 2017, 19:30 IST
ಕಾರ್‌ ಬೂಟ್‌ನಲ್ಲಿ ಕಂಡ ದೃಶ್ಯ
ಕಾರ್‌ ಬೂಟ್‌ನಲ್ಲಿ ಕಂಡ ದೃಶ್ಯ   

–ಮಂಜುನಾಥ ಎಂ.ಆರ್‌.
ಕಾರನ್ನೇ ಮಳಿಗೆಯನ್ನಾಗಿ ಪರಿವರ್ತಿಸಿಕೊಂಡರೆ ಹೇಗಿರುತ್ತದೆ ಎಂಬ ಯೋಚನೆಯನ್ನು ‘ಪ್ರಥಮ್‌ ಇವೆಂಟ್ಸ್‌’ನ ಯುವಕರು ಕಳೆದ ವಾರಾಂತ್ಯದಲ್ಲಿ ಕೃತಿಗಿಳಿಸಿದ್ದರು. ಮಲ್ಲೇಶ್ವರದ ಶಿರೂರ್‌ ಉದ್ಯಾನದಲ್ಲಿ ‘ಕಾರ್‌ ಬೂಟ್‌ ಸೇಲ್‌’ ಎಂಬ ಮೇಳ ನಡೆದಿದ್ದುದು ‘ಕಾರ್‌ ಮಳಿಗೆ’ಯಲ್ಲಿ!

‘ಕಾರ್‌ ಬೂಟ್‌ ಸೇಲ್‌’ ಎಂಬುದು ಈ ಮೇಳಕ್ಕೆ ಅವರಿಟ್ಟ ಹೆಸರು. ಕಾರುಗಳೇ ಅಲ್ಲಿ ಟೆಂಟ್‌ಗಳು. ಅದರಲ್ಲಿಯೇ ವ್ಯಾಪಾರ. ಕಾರಿನ ಡಿಕ್ಕಿಯೇ ಉಗ್ರಾಣ. ರಾಜಧಾನಿಯಲ್ಲಿ ಟೆಂಟ್‌ ಜಾತ್ರೆ ಎಂದರೆ ಕೇಳಬೇಕೆ? ಗ್ರಾಹಕರು ಎಂದಿನಂತೆ ಮುಗಿಬಿದ್ದಿದ್ದರು.

ಬಿಯರ್ ಬಾಟಲಿಯ ಮೇಲೆ ಚಿತ್ರಕಲೆಗಳಿದ್ದ ಒಂದು ‘ಮಳಿಗೆ’ ಎಲ್ಲರ ಗಮನ ಸೆಳೆದಿತ್ತು. ವಿಶ್ವವಿಖ್ಯಾತ ಮೈಸೂರಿನ ದಸರಾ ಆನೆಗೂ, ರಾಜಸ್ಥಾನದ ಜನಪದ ಕಲೆಗೂ ನಂಟು ಬೆಸೆದ ಕಲಾಕೃತಿಯೊಂದನ್ನು ಗ್ರಾಹಕರು ಮತ್ತೆ ಮತ್ತೆ ನೋಡುತ್ತಿದ್ದರು. ಆಫ್ರಿಕಾದ ಬುಡಕಟ್ಟು ಜನಾಂಗದವರು ಮುಖವಾಡ ಧರಿಸಿರುವ ಚಿತ್ರ, ರಾಮಾಯಣ, ಮಹಾಭಾರತ ಕಥೆ ಹೇಳುವ ಮಧುಬನಿ ಮತ್ತು ಕಾಂಬೊ ಕಲೆ, ಬೋಧಿ ವೃಕ್ಷದಡಿ ಧ್ಯಾನಕ್ಕೆ ಕುಳಿತ ಬುದ್ಧನ ಚಿತ್ರಕಲೆಗಳು ಕಲಾಪ್ರೇಮಿಗಳ ಮನ ತಣಿಸುವಂತಿದ್ದವು.

ADVERTISEMENT

ಆಧುನಿಕ ಜಗತ್ತಿಗೆ ಹೊಂದಿಕೊಂಡ ಅಮ್ಮಂದಿರ ಅಡುಗೆ ಕೋಣೆಯೆಲ್ಲಾ ನಾನ್‌ಸ್ಟಿಕ್‌, ಲೋಹ ಇಲ್ಲವೇ ಪ್ಲಾಸ್ಟಿಕ್‌ಮಯ. ವಿದ್ಯುತ್‌, ಸಿಲಿಂಡರ್‌ ಇಲ್ಲದೆ ಇವರ ಅಡುಗೆ ಬೇಯುವುದಿಲ್ಲ. ಆದರೆ ಈ ಮಳಿಗೆಯಲ್ಲಿ ‘ಅಜ್ಜಿಯ ಅರಮನೆ’ಯಲ್ಲಿ, ಕಲ್ಲಿನಿಂದ ತಯಾರಿಸಿದ ಮೊರ, ಬಾಣಲೆ, ದೋಸೆ ಕಾವಲಿ, ಮೊಸರು ಕುಡಿಕೆ, ಉಪ್ಪು ಹಾಗೂ ಉಪ್ಪಿನಕಾಯಿ ಜಾಡಿ, ರುಬ್ಬುವ ಕಲ್ಲು, ದೀಪಗಳಿದ್ದವು.

ಮಧ್ಯ ಅಮೆರಿಕಾದ ‘ಡ್ರ್ಯಾಗನ್‌’ ಹಣ್ಣನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಯುವ ಕೃಷಿಕ ಸುನೀಲ್‌ ಈ ಕಾರ್‌ ಮಳಿಗೆಯಲ್ಲಿ ಮಾರಾಟ ಮಾಡುತ್ತಿದ್ದರು. ಗ್ರಾಹಕರಿಗೆ ಮಾಹಿತಿ ಕೊರತೆ ಇರುವುದರಿಂದ ಹಣ್ಣನ್ನು ಮಾರಾಟ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಿದ್ದರು ಸುನಿಲ್‌.

ಬಹುತೇಕ ಎಲ್ಲಾ ಮಾರಾಟ ಮೇಳಗಳಲ್ಲಿ ಸಿಗುವಂತೆ ಡ್ರೆಸ್ಸಿನಾ, ಮನಿ ಪ್ಲ್ಯಾಂಟ್‌, ಸ್ನೇಕ್‌ ಪ್ಲಾಂಟ್‌, ಸ್ಪೈಡರ್‌ ಪ್ಲ್ಯಾಂಟ್‌, ಪೀಸ್‌ ಲಿಲ್ಲಿ ಸಸ್ಯಗಳ ಮಾರಾಟ ಮಳಿಗೆಗಳಲ್ಲಿಯೂ ಗ್ರಾಹಕರು ಅಧಿಕ ಸಂಖ್ಯೆಯಲ್ಲಿದ್ದರು. ಹೀಗೆ, ದೊಡ್ಡ ಮೈದಾನ, ವಿಶಾಲವಾದ ಮಳಿಗೆಗಳ ಹಂಗು ಇಲ್ಲದೆ ಕಾರುಗಳಲ್ಲೇ ನಡೆದ ಈ ಮಾರಾಟ ಮೇಳ ಸಿಲಿಕಾನ್‌ ಸಿಟಿಯಲ್ಲಿ ಹೊಸ ಸಾಧ್ಯತೆಯೊಂದನ್ನು ಪರಿಚಯಿಸಿದ್ದು ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.