ADVERTISEMENT

ಮಹಿಳಾ `ಮಾಗಧವಧೆ'

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2013, 19:59 IST
Last Updated 24 ಫೆಬ್ರುವರಿ 2013, 19:59 IST
ಮಹಿಳೆಯರೇ ಪ್ರಸ್ತುತಪಡಿಸಿದ `ಮಾಗಧವಧೆ' ಪ್ರಸಂಗದ ಒಂದು ದೃಶ್ಯ
ಮಹಿಳೆಯರೇ ಪ್ರಸ್ತುತಪಡಿಸಿದ `ಮಾಗಧವಧೆ' ಪ್ರಸಂಗದ ಒಂದು ದೃಶ್ಯ   

`ಈ ಹೆಂಗ್ಸ್ರು ಎಂಥ ಮಾಡ್ತ ಅಂದ್ಕಂಡಿದಿದೆ. ಅಡ್ಡಿಯಿಲ್ಯೋ ... ಪರವಾಗಿಲ್ಲೆ' ಯಕ್ಷಸಿರಿ ಮಹಿಳಾ ಕಲಾವಿದೆಯರು ಅಭಿನಯಿಯಿಸಿದ `ಮಾಗಧವಧೆ' ಯಕ್ಷಗಾನವನ್ನು ನೋಡಿ ಯಕ್ಷ ವಿದ್ವಾಂಸರೊಬ್ಬರು ತೆಗೆದ ಉದ್ಘಾರವಿದು. ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನಕ್ಕೆ ಈಗ ಮಹಿಳೆಯರು ಲಗ್ಗೆಯಿಟ್ಟು ಸೈ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ ಮಲ್ಲೇಶ್ವರದಲ್ಲಿರುವ ಹವ್ಯಕ ಸಭಾದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯಕಲಾ ಕೇಂದ್ರ ದಕ್ಷಿಣ ಪ್ರಾದೇಶಿಕ ಕಚೇರಿ ಹಾಗೂ ಯಕ್ಷಸಿರಿ ಇವುಗಳ ಸಂಯುಕ್ತ ಆಶ್ರಯದಲ್ಲಿ `ಮಾಗಧವಧೆ' ಎಂಬ ಪ್ರಸಂಗವನ್ನು ಮಹಿಳೆಯರೇ ಪ್ರಸ್ತುತಪಡಿಸಿದರು.

ಆರಂಭದಲ್ಲಿ ಕೃಷ್ಣನ ಪಾತ್ರ ವಹಿಸಿದ ಗೀತಾ ಹೆಗಡೆ `ಬಂದನು ಬಂದನು ದೇವರ ದೇವ' ಪದ್ಯದ ಮೂಲಕ  ಪ್ರವೇಶಿಸಿ ಪ್ರೇಕ್ಷಕರಲ್ಲಿ ವಿದ್ಯುತ್ ಸಂಚಾರ ಉಂಟಾಗುವಂತೆ ಮಾಡಿದರು. ಕೃಷ್ಣನ ಲಾಲಿತ್ಯ, ಆಕರ್ಷಕ ಪ್ರೌಢ ಕುಣಿತ ಹಾಗು ಹಾವ ಭಾವಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದರು.

ನಂತರ ಸತ್ಯಭಾಮೆಯ ಪಾತ್ರಧಾರಿ ನಾಗಶ್ರಿ ಗೀಜಗಾರ್ ತಮ್ಮ ಮಿಂಚಿನ ನಡೆ, ವಿಶೇಷ ಕುಣಿತ ಹಾಗೂ ಚುರುಕಿನ ಸಂಭಾಷಣೆಯಿಂದ ಇಡೀ ಪ್ರೇಕ್ಷಕ ವರ್ಗವನ್ನೇ ಮಂತ್ರಮುಗ್ಧಗೊಳಿಸಿದರು.

ಕೃಷ್ಣ ಸತ್ಯಭಾಮೆಯರ ಸರಸ ಸಲ್ಲಾಪ ನೆರೆದವರನ್ನು ಆನಂದದ ಅಲೆಗಳಲ್ಲಿ ಮಿಂದೇಳುವಂತೆ ಮಾಡಿತು. ಮಾಗಧನ ಪಾತ್ರಧಾರಿ ಮಯೂರಿ ಉಪಾಧ್ಯಾಯ `ನಡುಗಿತು ಲೋಕ ಮಾಗಧನಂತಃಕರಣ ಕಳವಳಿಸಿದುದು...' ಎನ್ನುವ ಪದ್ಯದ ಆರ್ಭಟದೊಡನೆ ಪ್ರವೇಶಿಸಿ ಇಡೀ ಸಭಾಂಗಣವನ್ನೇ ನಡುಗಿಸಿದರು.

`ಮಹಿಳೆಯರೇ ಇವರು?...' ಎಂದು ನಿಬ್ಬೆರಗಾಗುವಂತೆ ಮಾಡಿದರು. ತಮ್ಮ ವಿಶೇಷ ಸ್ವರ, ಕುಣಿತ ಹಾಗೂ ಅಭಿನಯಗಳಿಂದ ಯಾವ ಗಂಡಸಿಗೂ ಕಡಿಮೆ ಇಲ್ಲದಂತೆ ಅಭಿನಯಿಸಿದರು.

ADVERTISEMENT

ಮಾಗಧ ಮತ್ತು ಕೃಷ್ಣರ ಹಾಸ್ಯ ಮಿಶ್ರಿತ ಮಾತುಗಾರಿಕೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಇದರ ಜೊತೆಗೆ ಮಹಿಳೆಯರಲ್ಲಿ ಅಪರೂಪವೆನಿಸುವಂತೆ ಮಮತಾ ಜೋಶಿಯವರ ಹಾಸ್ಯ, ಕಾಂಚಿಕಾ ಭಟ್ ಅವರ ಅರ್ಜುನನ ಗಾಂಭೀರ್ಯ, ವೀಣಾ ರಾವ್ ಅವರ ಭೀಮನ ಶೌರ್ಯ ಪ್ರದರ್ಶನಗಳು ಪ್ರಸಂಗಕ್ಕೆ ಕಳೆ ಕಟ್ಟಿದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.