ADVERTISEMENT

ಮಾಗಿದ ಕುಂಚ ಮತ್ತು ಪರಿಸರದ ಕತೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಹವಾಮಾನ ವೈಪರೀತ್ಯ ಮತ್ತು ಅದರಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ಇತ್ಯಾದಿ ವಿಷಯಗಳ ಬಗ್ಗೆ ಎಲ್ಲಾ ವಲಯಗಳಲ್ಲಿ ಇನ್ನೂ ಗಂಭೀರ ಚರ್ಚೆ ನಡೆಯುತ್ತಲೇ ಇದೆ. ಈ ಬೆಳವಣಿಗೆಯನ್ನೇ ವಸ್ತುವಾಗಿಸಿಕೊಂಡು ಸಂಶೋಧನೆ, ಅಧ್ಯಯನಗಳೂ ನಡೆದಿವೆ, ನಡೆಯುತ್ತಿವೆ.

ಚಿತ್ರರಂಗ, ಕಲಾಕಾರರು ಮಾತ್ರವಲ್ಲ ಸಾಂಸ್ಕೃತಿಕ ಲೋಕವೂ ಇದಕ್ಕೆ ಸ್ಪಂದಿಸಿದ್ದಿದೆ. ಎಲ್ಲರ ಉದ್ದೇಶ ಒಂದೇ- ಎಲ್ಲಾ ಪ್ರಮಾದಗಳಿಗೆ ನಾವೇ ಕಾರಣ, ಹೊಣೆ ಎಂಬ ವಾಸ್ತವವನ್ನು ತಿಳಿಸಿ ಮುಂದೇನು ಮಾಡಬಹುದು ಎಂಬ ತಿಳಿವಳಿಕೆ ಮೂಡಿಸುವುದು.

ಒಡಿಶಾದ ಹಿರಿಯ ಚಿತ್ರಕಲಾವಿದ ಪ್ರಮೋದ್ ಕುಮಾರ್ ಮೊಹಾಂತಿ ಅವರೂ ಅಂತಹುದೊಂದು ಪ್ರಯತ್ನ ಮಾಡಿದ್ದಾರೆ. ಸದಾ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ, ಅವುಗಳನ್ನು ಕಲಾಕೃತಿಗಳ ಮೂಲಕ ದಾಖಲಿಸುವ ಮೊಹಾಂತಿ, ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿಯಲ್ಲಾಗಿರುವ ಅಸಮತೋಲನವನ್ನು ವಿಷಯವಾಗಿಸಿಕೊಂಡು ಕಲಾಕೃತಿ ರಚಿಸಿದ್ದಾರೆ.

ಸಮುದ್ರದಲ್ಲಿನ ಅಸಹಜ ಏರಿಳಿತಗಳೇ ಇರಬಹುದು, ಜಗತ್ತಿನ ನಾನಾ ಭಾಗಗಳನ್ನು ನಾಮಾವಶೇಷ ಮಾಡಿದ ಸುನಾಮಿಯೂ ಇರಬಹುದು ಅವರ ಕುಂಚದಲ್ಲಿ ಸಮರ್ಥವಾಗಿ ಮತ್ತಷ್ಟೇ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಕಾಡು ನಾಶವಾಗುತ್ತಾ ಬಂದಂತೆ ವನ್ಯಜೀವಿಗಳೂ, ಪಕ್ಷಿಗಳೂ ವಿನಾಶದ ಅಂಚಿಗೆ ಸಾಗಿರುವುದು ಅವರನ್ನು ಬಹುವಾಗಿ ಕಾಡಿರುವುದನ್ನು ಅವರ ಕಲಾಕೃತಿಗಳಲ್ಲಿ ಕಾಣಬಹುದು.

ಮೊಹಾಂತಿ ತಮ್ಮ ಕಲಾಭಿವ್ಯಕ್ತಿಗೆ ಕೇವಲ ಕುಂಚವನ್ನಷ್ಟೇ ನೆಚ್ಚಿಕೊಂಡಿಲ್ಲ. ಶಿಲ್ಪಕಲೆಯಲ್ಲಿಯೂ ಅವರು ಮಹತ್ವದ ಕೃತಿಗಳನ್ನು ನಿರ್ಮಿಸಿದ್ದಾರೆ. 1971ರಲ್ಲೇ ಒಡಿಶಾದ ಕಲ್ಲಿಕೋಟೆ ಸರ್ಕಾರಿ ಕಲಾ ಶಾಲೆಯಲ್ಲಿ ಚಿತ್ರಕಲೆ ಮತ್ತು ಶಿಲ್ಪಕಲೆಯ ಡಿಪ್ಲೊಮಾ ಪಡೆದ ಮೊಹಾಂತಿ, ಶಾಂತಿನಿಕೇತನದಲ್ಲಿ ಶಿಲ್ಪಕಲೆಯ ಬಗ್ಗೆ ಎರಡು ವರ್ಷದ ಸಂಶೋಧನೆಯನ್ನೂ ನಡೆಸಿದವರು.

ಮೊಹಾಂತಿ ಅವರ ಮಾಗಿದ ಕುಂಚದಲ್ಲಿ ಅರಳಿದ ಅಪರೂಪದ ಕಲಾಕೃತಿಗಳು ಈಗ ನಗರದ ಕಲಾಭಿಮಾನಿಗಳಿಗೂ ವೀಕ್ಷಣೆಗೆ ಲಭ್ಯವಾಗಿದೆ.ಕುಮಾರ ಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಡಿ. 1ರಿಂದ ಏರ್ಪಾಡಾಗಿರುವ ಅವರ ಕಲಾಪ್ರದರ್ಶನವನ್ನು ಡಿ. 7ರವರೆಗೂ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7ರವರೆಗೂ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.