ADVERTISEMENT

ಮಾಧುರಿ `ಮನೋಹರಿ'

ಸತೀಶ ಬೆಳ್ಳಕ್ಕಿ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST

ಉದ್ಯಾನ ನಗರಿಯಲ್ಲಿ ಹುಟ್ಟಿಬೆಳೆದ `ಹೂ' ಹುಡುಗಿ ಮಾಧುರಿ ಮನೋಹರ್ ಫ್ಯಾಷನ್ ಜಗತ್ತಿನ ಹೊಸ ನಕ್ಷತ್ರ. ಪ್ರಸಾದ್ ಬಿದಪ್ಪ ಅವರ ಗರಡಿಯಲ್ಲಿ ಅರಳಿದ ಗುಲಾಬಿ. ಫ್ಯಾಷನ್, ನೃತ್ಯ, ಫೋಟೋಗ್ರಫಿಯಂತಹ ಹವ್ಯಾಸಗಳನ್ನು ಇರಿಸಿಕೊಂಡಿರುವ ಮಾಧುರಿಗೆ ಸಿನಿಮಾರಂಗಕ್ಕೆ ಜಿಗಿಯುವ ತುಡಿತ. ಈಗಾಗಲೇ ಕೆಲವು ಅವಕಾಶಗಳು ಹುಡುಕಿಕೊಂಡು ಬಂದರೂ, ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೆ ಉತ್ತಮ ಪಾತ್ರಕ್ಕಾಗಿ ಎದುರುನೋಡುತ್ತಿದ್ದಾರೆ. ಒಳ್ಳೆ ಚಿತ್ರ ಸಿಕ್ಕ ತಕ್ಕಣ ಚಿತ್ರರಂಗ ಪ್ರವೇಶ ಮಾಡಬೇಕು ಎಂಬುದು ಅವರ ಕನಸು.

ಬೆಂಗಳೂರಿನ ಹುಡುಗಿ ಮಾಧುರಿ ಮನೋಹರ್ ಪಿಯುಸಿ ಓದಿದ್ದು ಕ್ರೈಸ್ಟ್ ಕಾಲೇಜಿನಲ್ಲಿ. ಪಿಯು ನಂತರ ನ್ಯೂ ಹೊರೈಜಾನ್ ಕಾಲೇಜಿನಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪೂರೈಸಿ ಈಗ ಟಿಸಿಎಸ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈಕೆ ರೂಪದರ್ಶಿ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ. ವೃತ್ತಿಪರ ಸಮಕಾಲೀನ ನೃತ್ಯ ಕಲಿಸುತ್ತಿರುವ ಅವರಿಗೆ ಮುಂದೊಂದು ದಿನ `ವಿಶೇಷ ಸಾಮರ್ಥ್ಯ'ದ ಮಕ್ಕಳಿಗಾಗಿಯೇ ನೃತ್ಯ ಪ್ರದರ್ಶನ ಏರ್ಪಡಿಸಿ ಅವರಿಗೆ ನೆರವಾಗುವ ಉದ್ದೇಶವಿದೆ.

ಕಳೆದ ನಾಲ್ಕು ವರ್ಷದಿಂದ ರ್‍ಯಾಂಪ್‌ವಾಕ್ ಮಾಡುತ್ತಿರುವ ಮಾಧುರಿ ಖ್ಯಾತ ವಸ್ತ್ರವಿನ್ಯಾಸಕರ ಉಡುಗೆಗಳನ್ನು ತೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಡೆದ ವಿಭಾಗ ಮಟ್ಟದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ, `ಪಾಂಡ್ಸ್ ಫೆಮಿನಾ ಮಿಸ್ ಗ್ಲೋಯಿಂಗ್ ಸ್ಕಿನ್' ಕಿರೀಟ ಧರಿಸಿರುವುದರ ಜತೆಗೆ ಪ್ರಸಾದ್ ಬಿದಪ್ಪ ಅವರ ಅನೇಕ ಶೋಗಳಿಗೆ ಕೈ ಜೋಡಿಸಿದ್ದಾರೆ. ಸಿಲ್ಕ್ ಎಕ್ಸ್‌ಪೋ ಶೋನಲ್ಲಿ ಭಾಗವಹಿಸಿದ ಅನುಭವವೂ ಇವರ ಬತ್ತಳಿಕೆಯಲ್ಲಿದೆ.

ಮಿರಾಂಡ ಕೇರ್, ಡೌಟ್‌ಜೆನ್ ಕರೊಸ್, ನತಾಲಿಯಾ ವಾಡಿಯಾನೋವಾ, ಕ್ಯಾಂಡೈಸ್ ಮತ್ತಿತರರು ಮಾಧುರಿಯ ನೆಚ್ಚಿನ ರೂಪದರ್ಶಿಗಳಂತೆ. ಹಾಗೆಯೇ, ರಿತು ಕುಮಾರ್, ವೆಂಡಿಲ್ ರಾಡ್ರಿಕ್ಸ್, ಬಾರ್ಬರಾ ಕಾಸಸೊಲಾ ಹಾಗೂ ಜೆಜೆ ವಲ್ಯಾ ಮಾಧುರಿಯ ನೆಚ್ಚಿನ ಡಿಸೈನರ್‌ಗಳು.

`ವೋಗ್, ಎಲ್ಲೆ, ಹಾರ್ಪರ್ಸ್‌ ಬಜಾರ್ ಮತ್ತು ಗ್ಲಾಮರ್ ನಿಯತಕಾಲಿಕೆಗಳು ನನಗೆ ಅಚ್ಚುಮೆಚ್ಚು. ಫ್ಯಾಷನ್ ಜಗತ್ತಿನಲ್ಲಿ ಆಗುವ ಸಂಕ್ರಮಣವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಸದಾ ಎಫ್ ಟೀವಿ ನೋಡುತ್ತೇನೆ. ಯಾವುದೇ ವಸ್ತ್ರಗಳನ್ನು ಧರಿಸಿದರೂ ಅವು ನಮ್ಮ ಮೈಗೊಪ್ಪುವಂತಿರಬೇಕು. ಧರಿಸಿದಾಗ ಹಿತಾನುಭವ ನೀಡಬೇಕು. ಹಾಗಿದ್ದಾಗ ಮಾತ್ರ ನಮ್ಮ ಮೈ ಮನಸ್ಸು ಆತ್ಮವಿಶ್ವಾಸದಿಂದ ಜಿಗಿಯುತ್ತದೆ. ಪ್ರಫುಲ್ಲವಾಗಿರುತ್ತದೆ. ಗಾಢ ಬಣ್ಣದ ಬಟ್ಟೆಗಳೆಂದರೆ ನನಗೆ ತುಂಬ ಇಷ್ಟ. ಜೆಗ್ಗಿಂಗ್ಸ್, ಟೀ ಶರ್ಟ್, ಜಂಪ್ ಸೂಟ್ಸ್ ಹಾಗೂ ಹಾಟ್ ಪ್ಯಾಂಟ್ಸ್‌ಗಳೆಂದರೆ ಅಚ್ಚುಮೆಚ್ಚು' ಅನ್ನುತ್ತಾ ಫ್ಯಾಷನ್ ಮಂತ್ರವನ್ನು ಪಠಿಸುತ್ತಾರೆ.

ಯಾವುದೇ ಒಂದು ಶೋನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಪೂರ್ವ ತಯಾರಿ ಮುಖ್ಯ. ರರ್‍ಯಾಂಪ್ ವಾಕ್ ಮಾಡುವುದಕ್ಕೂ ಮುನ್ನ ಮಾಧುರಿ ಸಹ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರಂತೆ. `ರೂಪದರ್ಶಿಯರಿಗೆ ಸೌಂದರ್ಯವೇ ಶಕ್ತಿ. ಚರ್ಮದ ಕಾಂತಿ ಹೆಚ್ಚಿದ್ದಷ್ಟು ಚೆಲುವು ಇಮ್ಮಡಿಗೊಳ್ಳುತ್ತದೆ.

ನಮ್ಮ ಸಹಜ ಚೆಲುವನ್ನು ಕಾಯ್ದುಕೊಳ್ಳಲು ಕೆಲವೊಂದು ಸಂಗತಿಗಳನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ವೃತ್ತಿ ದೃಷ್ಟಿಯಿಂದ ಒಳ್ಳೆಯದು. ನಾನು ಯಾವುದೇ ಒಂದು ಶೋನಲ್ಲಿ ಪಾಲ್ಗೊಳ್ಳುವ ಮುನ್ನ ಹಿಂದಿನ ರಾತ್ರಿ ಆರಾಮವಾಗಿ ನಿದ್ದೆ ಮಾಡುತ್ತೇನೆ. ಅದಕ್ಕೂ ಮುನ್ನ ನನ್ನೊಳಗಿನ ಚಿಂತೆ, ಒತ್ತಡಗಳನ್ನೆಲ್ಲಾ ನಮ್ಮ ಮನೆಯ ಹೊರಗಿರುವ ಮರದ ಕೊಂಬೆಗೆ ನೇತು ಹಾಕಿಬಿಡುತ್ತೇನೆ. ಎಲ್ಲ ಚಿಂತೆ ಬಿಟ್ಟು ಮನೆಯೊಳಕ್ಕೆ ಕಾಲಿಟ್ಟಾಗ ನನ್ನ ಮನಸ್ಸು ಪ್ರಶಾಂತವಾಗಿರುತ್ತದೆ.

ಒತ್ತಡವಿಲ್ಲದ ಸ್ಥಿತಿಯಲ್ಲಿದ್ದುಕೊಂಡು ಒಂದು ದೀರ್ಘ ನಿದ್ದೆ ಮಾಡಿ ಎದ್ದಾಗ ಬೆಳಗು ಅಪೂರ್ವವಾಗಿರುತ್ತದೆ. ಮೈಮನಸ್ಸು ಹಗುರಾಗಿರುತ್ತದೆ. ನನಗೆ ಎಲ್ಲ ಬಗೆಯ ತಾಜಾ ಹಣ್ಣುಗಳೂ ಇಷ್ಟ. ತ್ವಚೆಗೆ ಕಾಂತಿ ತರುವ ಹಣ್ಣು ತಿಂದು ತುಂಬಾ ನೀರನ್ನು ಕುಡಿಯುತ್ತೇನೆ. ಇಡೀ ದಿನ ಚಟುವಟಿಕೆಯಿಂದಿರುತ್ತೇನೆ' ಎನ್ನುತ್ತಾ ತಮ್ಮ ಸೌಂದರ್ಯದ ಗುಟ್ಟು ಬಿಚ್ಚಿಡುತ್ತಾರೆ ಮಾಧುರಿ.
  
ರ್‍ಯಾಂಪ್‌ವಾಕ್ ಮಾಡುವುದರ ಜತೆಗೆ ಫೋಟೋಗ್ರಫಿ  ಬಗ್ಗೆಯೂ ಒಲವು ಬೆಳೆಸಿಕೊಂಡಿರುವ ಮಾಧುರಿ ಬಿಡುವು ಸಿಕ್ಕಾಗ ತಾವೇ ಸಾಕಿರುವ ಮುದ್ದು ಮೊಲಗಳ ಜತೆ ಮಗುವಿನಂತೆ ಆಟವಾಡಿಕೊಳ್ಳುತ್ತಾರಂತೆ. ಫ್ಯಾಷನ್ ಜಗತ್ತಿನಲ್ಲಿದ್ದರೆ ಅಲ್ಲಿನ ಆಳ-ಅಗಲ ಅರಿತುಕೊಳ್ಳುವುದರ ಜತೆಗೆ ಫ್ಯಾಷನ್ ದಿಗ್ಗಜರನ್ನು ಪರಿಚಯ ಮಾಡಿಕೊಳ್ಳಬಹುದು ಎನ್ನುವ ಮಾಧುರಿಗೆ ಈಗಾಗಲೇ ಅನೇಕ ರೂಪದರ್ಶಿ ಸ್ನೇಹಿತರಿದ್ದಾರೆ.

ರೂಪದರ್ಶಿಗಳಾಗಬೇಕೆಂದು ಬಯಸುವವರಿಗಾಗಿ ಮಾಧುರಿ ಟಿಪ್ಸ್ ಸಹ ನೀಡುತ್ತಾರೆ. `ಫ್ಯಾಷನ್ ಜಗತ್ತಿನ ಮೋಹದ ಜಾಲ ದೊಡ್ಡದು. ಇಲ್ಲಿ ಏನು ಮಾಡಿದರೂ ಆತ್ಮವಿಶ್ವಾಸದಿಂದ ಮಾಡಬೇಕು. ನಮ್ಮ ದೃಷ್ಟಿ ಸದಾ ಗುರಿಯ ಕಡೆಗೆ ಮಾತ್ರ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದನ್ನು ಕಲಿಯಬೇಕು. ಹಾಗಿದ್ದಾಗ ಮಾತ್ರ ನಮ್ಮ ಜೀವನದಲ್ಲಿ ಯಾವುದೇ ಅಚಾತುರ್ಯ ನಡೆಯುವುದಿಲ್ಲ' ಎಂದು ಅವರು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.