ADVERTISEMENT

ಮಾರ್ಚ್ 7ಕ್ಕೆ ಕೇಂದ್ರ ವಿ.ವಿ.ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಮಾರ್ಚ್ 7ಕ್ಕೆ ಕೇಂದ್ರ ವಿ.ವಿ.ಗೆ ಚಾಲನೆ
ಮಾರ್ಚ್ 7ಕ್ಕೆ ಕೇಂದ್ರ ವಿ.ವಿ.ಗೆ ಚಾಲನೆ   

ಮಹಾನಗರದ ಆಧುನಿಕ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿರುವ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ (ಸೆಂಟ್ರಲ್‌ ಯುನಿವರ್ಸಿಟಿ ಆಫ್‌ ಬೆಂಗಳೂರು)‌ ನಾಡಿಗೆ ಸಮರ್ಪಣೆಯಾಗಲು ಕ್ಷಣಗಣನೆ ಶುರುವಾಗಿದೆ.

‘ಸುಮಾರು 250 ಕಾಲೇಜುಗಳನ್ನು ಒಳಗೊಂಡಿರುವ ಈ ವಿಶ್ವವಿದ್ಯಾಲಯವು ಜಾಗತಿಕ ಮಟ್ಟದ ಶಿಕ್ಷಣ ನೀಡಬೇಕು. ಅದೇ ಮಹತ್ವಾಕಾಂಕ್ಷೆ ಮತ್ತು ದೂರದೃಷ್ಟಿಯೊಂದಿಗೆ ಎಲ್ಲಾ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದೊಂದು ಜ್ಞಾನಕೋಶವಾಗಬೇಕು ಎಂಬುದು ನಮ್ಮ ಗುರಿ. ಎಲ್ಲಕ್ಕಿಂತ ಮುಖ್ಯವಾಗಿ ‘ಈ ವಿಶ್ವವಿದ್ಯಾಲಯ ನಮ್ಮದು’ ಎಂಬ ಭಾವ ಕಾಲೇಜುಗಳಲ್ಲಿ, ಪ್ರಾಧ್ಯಾಪಕರಲ್ಲಿ, ಪ್ರಾಂಶುಪಾಲರಲ್ಲಿ, ಪೋಷಕರಲ್ಲಿ ಮೂಡಬೇಕು. ಜೊತೆ ಜೊತೆಗೇ ಇಡೀ ಸಮಾಜದ ಕೂಸಾಗಿ ಇದು ಬೆಳೆಯಬೇಕು’ ಎಂಬ ಕನಸು, ವಿ.ವಿ. ಕುಲಪತಿ ಪ್ರೊ.ಎಸ್. ಜಾಫೆಟ್ ಅವರದು.

ಉದ್ಘಾಟನಾ ಸಮಾರಂಭಕ್ಕೆ ಮಾಡಿಕೊಂಡಿರುವ ಪೂರ್ವ ತಯಾರಿಯನ್ನು ಅವರು ಉತ್ಸಾಹದಿಂದ ವಿವರಿಸಿದರು.

ADVERTISEMENT

‘ನಮ್ಮೆಲ್ಲ ಕನಸು ಸಾಕಾರಗೊಳ್ಳುವ ನಿಟ್ಟಿನಲ್ಲಿ, ವಿ.ವಿ. ಉದ್ಘಾಟನೆ ಮೊದಲ ಹೆಜ್ಜೆ. ಮಾರ್ಚ್‌ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿ.ವಿ.ಗೆ ಚಾಲನೆ ನೀಡಲಿದ್ದಾರೆ. ಸೆಂಟ್ರಲ್‌ ಕಾಲೇಜಿನ ಆಕರ್ಷಣೆಗಳಲ್ಲೊಂದಾದ ‘ಕ್ಲಾಕ್‌ ಟವರ್‌’ನ್ನು ದುರಸ್ತಿ ಮಾಡಲಾಗಿದ್ದು, ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿಗಳು ಅದಕ್ಕೆ ಚಾಲನೆ ನೀಡಿದ ಬಳಿಕ ಸೆಂಟ್ರಲ್‌ ಕಾಲೇಜು ಮೈದಾನದ ಬೃಹತ್ ವೇದಿಕೆಯಲ್ಲಿ ವಿ.ವಿ.ಗೆ ಚಾಲನೆ ಕೊಡುತ್ತಾರೆ. ಅಲ್ಲದೆ, ವಿ.ವಿ.ಯ ಲೋಗೊ ಅನಾವರಣ, ‘ವಿ.ವಿ. ಗೀತೆ’ ಘೋಷಣೆ ಮತ್ತು ಗಾಯನ ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಮೊದಲು ವಿ.ವಿ. ವ್ಯಾಪ್ತಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಒಂದು ಗಂಟೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸೆಂಟ್ರಲ್‌ ಕಾಲೇಜಿನ ಹಳೆ ವಿದ್ಯಾರ್ಥಿಗಳಿಗೆ ಅಭಿನಂದಿಸಲು ಏಳು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಎಂ.ಎಸ್.ಸತ್ಯು,
ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌, ಪತ್ರಿಕೋದ್ಯಮಿ ಕೆ.ಎನ್. ಹರಿಕುಮಾರ್‌ ಹಾಗೂ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರು ಸನ್ಮಾನ
ಸ್ವೀಕರಿಸಲಿದ್ದಾರೆ.

‘ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸೆಂಟ್ರಲ್‌ ಕಾಲೇಜೂ ಸೇರಿದಂತೆ ವಿ.ವಿ. ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರು ಸಮಾರಂಭದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಲಿದ್ದು ಆಹ್ವಾನಿತ ಅತಿಥಿಗಳೂ
ಇರುತ್ತಾರೆ. ಎಲ್ಲರಿಗೂ ಆಸನ ಮತ್ತು ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ವಿ.ವಿ. ರಿಜಿಸ್ಟ್ರಾರ್‌ ಪ್ರೊ. ಎಂ.ರಾಮಚಂದ್ರೇ ಗೌಡ ಹಾಗೂ ರಿಜಿಸ್ಟ್ರಾರ್‌ ಪ್ರೊ. ಲಿಂಗರಾಜ್‌ ಗಾಂಧಿ (ಮೌಲ್ಯಮಾಪನ) ನೇತೃತ್ವದಲ್ಲಿ ಹಲವು ತಂಡಗಳು ಕಾರ್ಯೋನ್ಮುಖವಾಗಿವೆ.

‘ನಮ್ಮ ಬೆಂಗಳೂರು’ ಮತ್ತು ‘ನಮ್ಮ ಮೆಟ್ರೊ’ ಎಂಬುದು ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಲ್ಯಾಂಡ್‌ಮಾರ್ಕ್‌ಗಳಾಗಿರುವಂತೆ ‘ನಮ್ಮ ಬೆಂಗಳೂರು ಸೆಂಟ್ರಲ್‌ ವಿ.ವಿ.’ ರೂಪುಗೊಳ್ಳಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆ. ಈ ನಿಟ್ಟಿನಲ್ಲಿ ‘ಗ್ಲೋಕಲ್‌’ ಎಂಬ ಪರಿಕಲ್ಪನೆಯೊಂದಿಗೆ ಹಲವಾರು ಯೋಜನೆಗಳನ್ನು ರೂಪಿಸಿದ್ದೇವೆ’ ಎಂದು ಹೇಳುತ್ತಾರೆ ಪ್ರೊ.ಜಾಫೆಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.