ADVERTISEMENT

ಮಾಲ್‌ನಲ್ಲಿ ಬೌಲಿಂಗ್ ಕಮಾಲ್

ಪ್ರಜಾವಾಣಿ ವಿಶೇಷ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST
ಮಾಲ್‌ನಲ್ಲಿ ಬೌಲಿಂಗ್ ಕಮಾಲ್
ಮಾಲ್‌ನಲ್ಲಿ ಬೌಲಿಂಗ್ ಕಮಾಲ್   

ಬೌಲಿಂಗ್ ದುಬಾರಿ ಕ್ರೀಡೆ. ಯಂತ್ರ ಜೋಡಿಸಿ ಒಂದು ಲೇನ್ ಸಿದ್ಧ ಮಾಡಲು ಲಕ್ಷಗಟ್ಟಲೆ ಹಣ ಸುರಿಯಬೇಕು. ಆಡುವ ಆಸಕ್ತಿ ಇದ್ದರೂ ಜೇಬು ಭಾರ ಕಡಿಮೆ ಆಗುವ ಭಯ.

ಆದ್ದರಿಂದ ಈ ಆಟದ ಕಡೆಗೆ ಗಮನ ಹರಿಸುವವರ ಆರ್ಥಿಕ ಹಿನ್ನೆಲೆ ಗಟ್ಟಿಯಾಗಿರುವುದೂ ಅಗತ್ಯ. ಇಂಥ ಪರಿಸ್ಥಿತಿ ಐದು ವರ್ಷಗಳ ಹಿಂದಿತ್ತು. ಆದರೆ ಈಗ ಮಾಲ್ ಕಲ್ಚರ್ ಬಂದ ನಂತರ ಬೌಲಿಂಗ್ ಕೂಡ ಮಧ್ಯಮ ವರ್ಗದವರಿಗೆ ಕೈಗೆಟಕುವ ಆಟವಾಗಿದೆ ಎನ್ನುವ ಅಭಿಪ್ರಾಯ ಮುಂದಿಟ್ಟಿದ್ದು ಭಾರತ ಟೆನ್‌ಪಿನ್ ಬೌಲಿಂಗ್ ಫೆಡರೇಷನ್ (ಟಿಬಿಎಫ್‌ಐ) ಅಧ್ಯಕ್ಷ ಕಾರ್ತಿ ಪಿ.ಚಿದಂಬರಂ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂಥ ಚಾಂಪಿಯನ್‌ಗಳನ್ನು ನೀಡಿರುವ ಉದ್ಯಾನನಗರಿಗೆ ಭೇಟಿ ನೀಡಿದ್ದ ಅವರು ಬೆಂಗಳೂರಿನಲ್ಲಿ ಬೌಲಿಂಗ್ ಕ್ರೀಡೆಯು ಉತ್ಸಾಹದಿಂದ ಗರಿಗೆದರಿ ನಲಿಯುತ್ತಿರುವುದನ್ನು ಕಂಡು ಸಂತಸಗೊಂಡರು.

ಟಿಬಿಎಫ್‌ಐ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕ್ರೀಡಾ ಪ್ರೋತ್ಸಾಹಕ ಕಣ್ಣನ್ ರಾಮಚಂದ್ರನ್ ಅವರಂಥ ಉತ್ಸಾಹಿಗಳು ಈ ಗುಂಡು ಉರುಳಿಸಿ ಮೊಳ ಉದ್ದದ ಕಂಬಗಳನ್ನು ಬೀಳಿಸುವ ಆಟವನ್ನು ಜನಪ್ರಿಯಗೊಳಿಸಲು ಮಾಡಿರುವ ಸಾಹಸ ಮೆಚ್ಚಿಕೊಂಡರು. ಅವರು ಕಂಡ ಈ ನಗರದ ಬೌಲಿಂಗ್ ಪ್ರೀತಿ ಹಾಗೂ ಈ ಆಟ ಬೆಳೆಯುತ್ತಿರುವ ರೀತಿಯನ್ನು ಸುದೀರ್ಘವಾಗಿ ವಿಶ್ಲೇಷಣೆ ಕೂಡ ಮಾಡಿದರು.

ಯುವ ರಾಜಕಾರಣಿ ಆಗಿದ್ದರೂ ರಾಜಕೀಯ ವಿಷಯ ಬದಿಗಿಟ್ಟು ಉತ್ಸಾಹದಿಂದ ಆಡಿದ ಅವರ ಮಾತು ಪ್ರವಾಹವಾಗಿ, ಕ್ರೀಡಾ ಪ್ರೀತಿಯಾಗಿ ಹರಿಯಿತು.

ಕಾರ್ತಿ ಅವರ ಜೊತೆಗಿನ ಬೌಲಿಂಗ್ ಆಟದ ಚರ್ಚೆಯ ಒಂದಿಷ್ಟು ವಿವರ ಇಲ್ಲಿದೆ:

ಬೌಲಿಂಗ್ ಹಾಗೂ ಬೆಂಗಳೂರು ಬಗ್ಗೆ?
ಒಂದು ರೀತಿಯಲ್ಲಿ ಬೌಲಿಂಗ್ ಕ್ರೀಡೆ ಎಂದರೆ ಬೆಂಗಳೂರು. ಇಲ್ಲಿ ಅನೇಕ ಕಡೆಗಳಲ್ಲಿ ಈ ಆಟಕ್ಕೆ ಅಗತ್ಯ ಇರುವ ಸೌಲಭ್ಯಗಳು ಹೆಚ್ಚುತ್ತಿವೆ. ಬೇರೆಲ್ಲ ನಗರಗಳಿಗಿಂತ ಇಲ್ಲಿ ಮಾಲ್ ಕಲ್ಚರ್ ಸ್ವಲ್ಪ ಜೋರು. ಅದೂ ಬೌಲಿಂಗ್‌ಗೆ ಪ್ರೋತ್ಸಾಹದಾಯಕ ವಾತಾವರಣ ಕಲ್ಪಿಸಿದೆ.

ಇತ್ತೀಚೆಗೆ ಕೆಲವು ಮಾಲ್‌ಗಳಲ್ಲಿ ಕನಿಷ್ಠ ಒಂದಾದರೂ ಬೌಲಿಂಗ್ ಲೇನ್ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಗಮನ ಸೆಳೆಯುವ ಅಂಶವೆಂದರೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಇಲ್ಲಿ ಆಡುವವರನ್ನು ಕಾಣಬಹುದು.

ವೃತ್ತಿಪರ ಆಟಗಾರರಾಗಲು ಸಾಧ್ಯವೆ?
ಸ್ವಲ್ಪ ಕಷ್ಟ. ಈ ಕ್ರೀಡೆಯು ಸದ್ಯ ಆರ್ಥಿಕವಾಗಿ ಸದೃಢವಾಗಿಲ್ಲ. ಇದೇ ಆಟವನ್ನು ಆಡಿಕೊಂಡಿರಿ ಎಂದು ಹೇಳುವ ಸ್ಥಿತಿಯಲ್ಲಿ ಫೆಡರೇಷನ್ ಕೂಡಾ ಇಲ್ಲ. ಆದರೆ ಹವ್ಯಾಸಿ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
 
ಕಾಲೇಜು ಯುವಕರು ಹಾಗೂ ಸಾಫ್ಟ್‌ವೇರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ದಿನಕ್ಕೆ ಒಂದು ತಾಸು ಬೌಲಿಂಗ್ ಆಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅಂಥವರ ನಡುವಿನಿಂದಲೇ ಪ್ರತಿಭಾವಂತ ಆಟಗಾರರು ಮೂಡಿ ಬರುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಗಾರ್ಡನ್ ಸಿಟಿಯಿಂದ ಹೆಚ್ಚು ಹೆಚ್ಚು ಪ್ರಭಾವಿ ಬೌಲಿಂಗ್ ಸ್ಪರ್ಧಿಗಳು ಮೂಡಿಬಂದಿದ್ದಾರೆ.

ಬೌಲಿಂಗ್ ಭವಿಷ್ಯ?
ದಿನ ಬೆಳಗಾಗುವುದರಲ್ಲಿ ದೊಡ್ಡದಾಗಿ ಬೆಳೆಯಲು ಸಾಧ್ಯವಿಲ್ಲ. ಪ್ರಚಾರ ಮಾಡುವ ಪ್ರಯತ್ನ ನಡೆದಿದೆ. ಮುಖ್ಯವಾಗಿ ನಗರ ಪ್ರದೇಶಕ್ಕೆ ಇದು ಸೀಮಿತವಾಗಿ ಉಳಿದಿದೆ. ಜಿಲ್ಲಾ ಕೇಂದ್ರಗಳಲ್ಲಿ ಈ ಆಟವನ್ನು ಆಡುವಂಥ ಹಾಗೂ ಬೌಲಿಂಗ್ ಲೇನ್ ಹಾಕುವಂಥ ಆಸಕ್ತರಿಲ್ಲ. ಸದ್ಯಕ್ಕೆ ಇದು `ಮೆಟ್ರೊ ನಗರ~ದ ಕ್ರೀಡೆಯಾಗಿ ಉಳಿದಿದೆ. ಮಾಲ್ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್‌ಗಳಿಗೆ ಸೀಮಿತವಾಗಿದ್ದ ಬೌಲಿಂಗ್ ಈಗ ಕ್ಲಬ್‌ಗಳಿಗೂ ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿಯೇ ಕೆಲವು ಕ್ಲಬ್‌ಗಳು ಸಿಂಗಲ್ ಲೇನ್ ಹಾಕಿ ಬೌಲಿಂಗ್ ಆಡಿಸುವ ಪ್ರಯತ್ನ ಮಾಡುತ್ತಿವೆ.

ಬೆಳವಣಿಗೆಯಲ್ಲಿ ನಿರ್ಣಾಯಕ ಅಂಶ?
ಉತ್ತಮ ಆರ್ಥಿಕ ಹಿನ್ನೆಲೆ ಇರುವವರಿಂದ ಈ ಕ್ರೀಡೆ ಬೆಳೆಯುತ್ತಿದೆ. ಅದೊಂದೇ ನಿರ್ಣಾಯಕ ಅಂಶ. ತಾಸುಗಳ ಲೆಕ್ಕದಲ್ಲಿ ಹಣ ತೆತ್ತು ಆಡಬೇಕು. ಆದ್ದರಿಂದ ಎಂದೋ ಒಂದು ದಿನ ಆಡುವವರ ಸಂಖ್ಯೆ ಹೆಚ್ಚು. ಆದರೆ ನಿತ್ಯ ಅಭ್ಯಾಸ ಮಾಡಿ ಚಾಂಪಿಯನ್‌ಗಳಾಗುವ ಮಟ್ಟಕ್ಕೆ ಬೆಳೆಯಲು ನಿತ್ಯವೂ ಬೌಲ್ ರೋಲ್ ಮಾಡಬೇಕು.

ಅದು ಸಾಧ್ಯವಾಗುವಲ್ಲಿ ಆಡುವವರ ಆರ್ಥಿಕ ಹಿನ್ನೆಲೆ ಮಹತ್ವದ್ದಾಗುತ್ತದೆ. ಫೆಡರೇಷನ್ ತಾನೇ ಎಲ್ಲ ವೆಚ್ಚವನ್ನು ಭರಿಸುವಂಥ ಸ್ಥಿತಿಯಲ್ಲಿಲ್ಲ. ಪ್ರಾಯೋಜಕತ್ವದ ಒಳಹರಿವು ಹೆಚ್ಚಿದರೆ ನಾವೇ ಆಟಗಾರರಿಗೆ ಉತ್ತಮ ಸಂಭಾವನೆ ನೀಡುವ ಮೂಲಕ ವೃತ್ತಿಪರ ಬೌಲಿಂಗ್ ಸ್ಪರ್ಧಿಗಳನ್ನು ಸಿದ್ಧಪಡಿಸಬಹುದು. ಆ ಕಾಲ ಬಹುಬೇಗ ಬರಲಿ ಎನ್ನುವುದು ನನ್ನ ಆಶಯ.                  
                       

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.