ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಲಾಲ್‌ಬಾಗ್ ಸಮೀಪದ ಮಾವಳ್ಳಿ ಗ್ರಾಮ ದೇವತಾ ಜಾತ್ರೆ, ಸೋಮವಾರದಿಂದ (ಜೂನ್ 8) ಗುರುವಾರ (ಜೂನ್ 11)ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಈ ಜಾತ್ರೆಯನ್ನು ಮೂರು ವರ್ಷಗಳಿಗೊಮ್ಮೆ ಅತ್ಯಂತ ಭಕ್ತಿ–ಪ್ರೀತಿಯಿಂದ ಹಾಗೂ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ದೊಡ್ಡಮಾವಳ್ಳಿ ಶ್ರೀ ಬಿಸಿಲು ಮಾರಮ್ಮ ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಯಲಿದೆ. ಗ್ರಾಮ ಸೇವಾ ಸಂಘ, ದೊಡ್ಡಮಾವಳ್ಳಿ, ದುರ್ಗಮ್ಮ ದೇವಸ್ಥಾನ, ದಂಡುಪಾಳ್ಯ (ಕಲಾಸಿಪಾಳ್ಯ), ಮಾರಮ್ಮ ದೇವಸ್ಥಾನ ಪ್ರಜಾ ಸಂಘ, ಚಿಕ್ಕಮಾವಳ್ಳಿ, ಯಜಮಾನ್ ಚಿನ್ನಯ್ಯ ತೋಟ, ಲಾಲಾಬಾಗ್ ಕೋಟೆ ರಸ್ತೆ, ಸತ್ಯಮ್ಮ ದೇವಸ್ಥಾನ (ಲಾಲ್‌ಬಾಗ್ ಕೋಟೆ ರಸ್ತೆ) ಸೇರಿದಂತೆ ಅನೇಕ ಸಂಘ ಸಂಸ್ಥೆಗಳು, ದೇವಸ್ಥಾನಗಳು ಸೇರಿ ಈ ಜಾತ್ರಾ ಮಹೋತ್ಸವವನ್ನು ಆಯೋಜಿಸಿವೆ.
ಕಾರ್ಯಕ್ರಮಗಳು
ಸೋಮವಾರ (ಜೂನ್ 8) ಸಂಜೆ 6ಕ್ಕೆ ಪ್ರಾರಂಭೋತ್ಸವ. ಮಾರಮ್ಮ ದೇವಸ್ಥಾನದ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಪೂಜೆ, ನಂತರ ಲಾಲ್‌ಬಾಗ್ ಕೋಟೆ ರಸ್ತೆಯಲ್ಲಿರುವ ಭೋಗ ನಂಜುಂಡೇಶ್ವರ ದೇವಾಲಯಕ್ಕೆ ಬೆಲ್ಲದ ಆರತಿಯೊಂದಿಗೆ ಪೂಜೆಯನ್ನು ಸಮರ್ಪಿಸಲಾಗುವುದು.
ಮಂಗಳವಾರ (ಜೂನ್ 9) ಬೆಳಿಗ್ಗೆ 11ಕ್ಕೆ ಶ್ರೀ ಬಿಸಿಲು ಮಾರಮ್ಮ ದೇವಿಗೆ ಹೆಣ್ಣು ಮಕ್ಕಳು ಬಿಂದಿಗೆಗಳಲ್ಲಿ ಅರಿಶಿಣದ ನೀರನ್ನು ತಂದು ಅಭಿಷೇಕ ಮಾಡಿದ ನಂತರ ಮಧ್ಯಾಹ್ನ 1ಕ್ಕೆ ಮಹಾಮಂಗಳಾರತಿ ನಡೆಯುತ್ತದೆ. ಮಧ್ಯಾಹ್ನ 3ಕ್ಕೆ ಮಾರಮ್ಮ ದೇವಿಯ ಉಯ್ಯಾಲೆ ಪೂಜೆ ಮಾಡಲಾಗುವುದು. 7ಕ್ಕೆ ಕುಂಬಾರರ ನಿವಾಸದಿಂದ ಗ್ರಾಮ ದೇವತೆಯನ್ನು ತಂದು, ಲಾಲ್‌ಬಾಗ್ ಕೋಟೆ ರಸ್ತೆಯಲ್ಲಿರುವ ಗ್ರಾಮ ದೇವತೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು.
ಬುಧವಾರ (ಜೂನ್ 10) ಬೆಳಿಗ್ಗೆ 5ಕ್ಕೆ ಮಂಗಳವಾದ್ಯಗಳು, ನಾದಸ್ವರ, ತಮಟೆ, ವಾದ್ಯಗಳೊಡನೆ ಲಾಲ್‌ಬಾಗ್ ಕೋಟೆ ರಸ್ತೆಯಲ್ಲಿರುವ ಗ್ರಾಮ ದೇವತಾ ದೇವಸ್ಥಾನದ ಆವರಣದಿಂದ ಮಾರಮ್ಮ ಮತ್ತು ಶ್ರೀ ಸತ್ಯಮ್ಮ ದೇವತೆಗಳ ಮಲ್ಲಿಗೆ ಮೊಗ್ಗಿನ ಪ್ರಭಾವಳಿ ನಡೆಯಲಿದೆ. ದೊಡ್ಡಮಾವಳ್ಳಿಯ ಮಹಿಳೆಯರು ತಂಬಿಟ್ಟಿನ ಅಲಂಕೃತ ದೀಪಗಳೊಡನೆ ಉತ್ಸವವನ್ನು ಪ್ರಾರಂಭಿಸಲಿದ್ದಾರೆ.
ಗುರುವಾರ (ಜೂನ್ 11) ಮಧ್ಯಾಹ್ನ 3ಕ್ಕೆ ಗ್ರಾಮಗಳ ಯುವಕರಿಗಾಗಿ ಮನರಂಜನಾ ಹಾಗೂ ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7ಕ್ಕೆ ದೇವಿಗಳ ರಥಯಾತ್ರೆ, ಉತ್ಸವಮೂರ್ತಿಗಳೊಡನೆ ಹೂವಿನಿಂದ ಅಲಂಕೃತಗೊಂಡು ಎಲ್ಲಾ ದೇವತೆಗಳ ಮೆರವಣಿಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.