ADVERTISEMENT

ಮುಂಗೋಪಿ ನಟಿಯ ಭಾವುಕತೆಯ ಗುಟ್ಟು

ಸುಮನಾ ಕೆ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST
ಮುಂಗೋಪಿ ನಟಿಯ ಭಾವುಕತೆಯ ಗುಟ್ಟು
ಮುಂಗೋಪಿ ನಟಿಯ ಭಾವುಕತೆಯ ಗುಟ್ಟು   

ಈಟೀವಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೀತೆ’ ಧಾರಾವಾಹಿ ನೋಡುತ್ತಿದ್ದವಳಿಗೆ ತಾನೂ ಆ ಥರಾನೇ ಟೀವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ. ಆ ಧಾರಾವಾಹಿ­ಯಲ್ಲಿ ನಟಿಸುತ್ತಿದ್ದ  ಒಬ್ಬರು ತಮ್ಮ ದೂರದ ಸಂಬಂಧಿ ಎಂದು ಗೊತ್ತಾದಾಗ ಶೂಟಿಂಗ್‌ ಸಮಯದಲ್ಲಿ ಅವರ ಬಳಿ ಹೋಗಿ ತನ್ನ ಮನದ ಆಸೆಯನ್ನು ವ್ಯಕ್ತಪಡಿಸಿದರು. ‘ನಿನ್ನ ಫೋಟೊ ಕೊಟ್ಟಿರು, ನಿರ್ದೇಶಕರ ಬಳಿ ಮಾತನಾಡುತ್ತೇನೆ’ ಎಂದು ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟರೂ ಈಕೆಗೆ ತಾನು ನಟಿಯಾಗೇ ಬಿಟ್ಟೆ ಎಂಬಷ್ಟು ಸಂತಸ.

ಫೋಟೊ ಕೊಟ್ಟು ಬಂದ ಸ್ವಲ್ಪ ದಿನಗಳಲ್ಲೇ ನಿರ್ದೇಶಕ ಅಶೋಕ್‌ ಕಶ್ಯಪ್‌ ತಮ್ಮ ‘ಸುರಭಿ’ ಧಾರವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಮುಂದಿಟ್ಟಾಗ ಖುಷಿಯೋ ಖುಷಿ. ಆಗ ಆಕೆ ಇನ್ನೂ ಒಂಬತ್ತರ ಬಾಲೆ. ಝೀ ಟಿವಿಯಲ್ಲಿ ಪ್ರಸಾರ­ವಾಗುವ ‘ರಾಧಾಕಲ್ಯಾಣ’ದ ರಾಧಿಕಾ ಅಲಿಯಾಸ್‌ ಕೃತಿಕಾ  ಬಣ್ಣದ ಜಗತ್ತಿನ ಹೊಸ್ತಿಲು ದಾಟಿದ್ದು ಹೀಗೆ.

ಕೃತಿಕಾ ಬಣ್ಣದ ಪಯಣ
ಕೃತಿಕಾ ಎಂಟನೇ ತರಗತಿಯಲ್ಲಿ ಓದು­ತ್ತಿದ್ದ ಸಂದರ್ಭದಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಜಿಂಬಾ’ ಧಾರಾವಾಹಿಯ ಮುಖ್ಯ ನಾಯಕಿ ಅನಿವಾರ್ಯ ಕಾರಣಗಳಿಂದ ಧಾರಾವಾಹಿಯಿಂದ ಹೊರನಡೆದಾಗ ಅಶೋಕ್‌ ಕಶ್ಯಪ್‌ ಅವರು ಕೃತಿಕಾಗೆ ಆಹ್ವಾನ ನೀಡಿದರು.

   ಈ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದ ಕೃತಿಕಾಗೆ ಸಿನಿಮಾದಲ್ಲಿ ನಟಿಸಲು ಅವಕಾಶಗಳು ಬಂದವು. ‘ಪಟ್ರೆ ಲವ್ಸ್‌ ಪದ್ಮ’ ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿ ನಟಿಸಿದರು. ನಂತರ ‘ಪ್ರೇಮಿಸಂ’, ‘ಆಟೋ’, ಜಗ್ಗೇಶ್‌ ಅಭಿನಯದ ‘ಲಿಫ್ಟ್‌ ಕೊಡ್ಲಾ’ ಚಿತ್ರಗಳಲ್ಲಿ ಕೃತಿಕಾ ಅಭಿನಯಿಸಿದರು. ನಂತರ ಕಿರುತೆರೆಗೆ ಮರಳಿ ಉದಯ ಟೀವಿ ಮೂಲಕ ‘ಮನೆಮಗಳು’ ಧಾರಾವಾಹಿಯಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದರು.

ನಟನೆಯಿಂದ ಓದಿಗೆ ಅಡ್ಡಿ ಉಂಟಾಗು­ತ್ತದೆ­ಯೆಂದು ಅಪ್ಪ ಕಾಳಜಿ ವ್ಯಕ್ತಪಡಿಸಿದಾಗ, ನಟನೆಗೆ ತಾತ್ಕಾಲಿಕ ಬಿಡುವು ಕೊಟ್ಟ ಕೃತಿಕಾ ತಮ್ಮ ಮೂಲ ಊರು ಸಾಗರಕ್ಕೆ ತೆರಳಿ ಪಿ.ಯು ಕಾಲೇಜಿಗೆ ಸೇರಿಕೊಂಡರು. ದ್ವಿತೀಯ ಪಿ.ಯು.ಸಿ ಫಲಿ­ತಾಂಶ ಬಂದು ಡಿಗ್ರಿಗೆ ಸೇರಿಕೊಂಡಾಗ ‘ರಾಧಾ ಕಲ್ಯಾಣ’ ನಿರ್ದೇ­ಶಕರು ಕರೆ ಮಾಡಿದರು. ಪದವಿ ಓದಿಗೆ ತಿಲಾಂಜಲಿ ಬಿಟ್ಟು, ಬೆಂಗಳೂರು ಬಸ್ಸು ಹತ್ತಿದರು. 

‘ರಾಧಾ ಕಲ್ಯಾಣ’ದಲ್ಲಿ ಅಕ್ಕನಿಗಾಗಿ, ಗಂಡನ ಮನೆಗಾಗಿ ಸದಾ ಒಳ್ಳೆಯದನ್ನು ಬಯಸುವ ಸೊಸೆಯ ಪಾತ್ರ. ಕೃತಿಕಾ ನಿರ್ವಹಿಸಿರುವ ರಾಧಾ ಪಾತ್ರದ ಸುತ್ತಲೇ ಕಥೆ ಹೆಣೆದಿರುವುದರಿಂದ ಜನ ಹೋದಲ್ಲೆಲ್ಲಾ ಗುರು­ತಿಸು­ತ್ತಾರೆ.

‘ಅಭಿಮಾನಿಗಳು ನಟನೆಯ ಬಗ್ಗೆ ಮೆಚ್ಚುಗೆ ಮಾತುನಾಡುವಾಗ ಖುಷಿಯಾಗುತ್ತದೆ, ಇನ್ನು ಕೆಲವರು ಜಗತ್ತಿ­ನ­ಲ್ಲಿರುವ ಕಷ್ಟಗಳೆಲ್ಲಾ ರಾಧಿಕಾ ಒಬ್ಬಳಿಗೇ ಬರುತ್ತದಾ? ಎಂದು ವ್ಯಂಗ್ಯ­ವಾಡುವಾಗ ನೋವಾಗುತ್ತದೆ’ ಎನ್ನುತ್ತಾರೆ ಕೃತಿಕಾ.

ಐದು ವರ್ಷಗಳ ಹಿಂದೆ ಅಪ್ಪನನ್ನು ಕಳೆದುಕೊಂಡ ಕೃತಿಕಾಗೆ ಅಮ್ಮನೇ ದಾರಿದೀಪ. ಶೂಟಿಂಗ್‌ ಕಾರಣದಿಂದ ನಗರದಲ್ಲಿ ಉಳಿದುಕೊಂಡಿರುವ ಕೃತಿಕಾ ಅಮ್ಮನ ಕೈ ಅಡುಗೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ‘ಅಮ್ಮ ಸಾಗರದಲ್ಲಿ ಸರ್ಕಾರಿ ಉದ್ಯೋಗಿ. ತಿಂಗಳಲ್ಲಿ ಒಂದೆರಡು ಬಾರಿಯಷ್ಟೇ ಅಮ್ಮನ  ಕೈ ರುಚಿ ಸಿಗುತ್ತದೆ. ಈಗ ಮೂರು ತಿಂಗಳಿಂದ ನಾನೇ ಅನ್ನ, ಸಾಂಬಾರು ಮಾಡಿಕೊಳ್ಳುತ್ತಿದ್ದೇನೆ’ ಎನ್ನುವ ಕೃತಿಕಾಗೆ ಚಿತ್ರಾನ್ನ ಬಲು ಇಷ್ಟ.

ಫಿಟ್‌ನೆಸ್‌ ಮಂತ್ರ
ಸೌಂದರ್ಯದ ಗುಟ್ಟಿನ ಬಗ್ಗೆ ಕೇಳಿದರೆ, ಎಣ್ಣೆ ಪದಾರ್ಥ, ಐಸ್‌ಕ್ರೀಮ್ಸ್‌, ಚಾಕಲೇಟ್ಸ್‌ನಿಂದ ಅವರು ದೂರ.  ‘ಶೂಟಿಂಗ್‌ ಇರುವುದರಿಂದ ಜಿಮ್‌ಗೆ ಹೋಗೋಕೆ ಸಾಧ್ಯವಾಗುವು­ದಿಲ್ಲ. ಈಗ ಮಳೆಗಾಲ ಆರಂಭ­ವಾಗಿ­ರು­ವು­­ದ­­ರಿಂದ ಕುಡಿಯುವ ನೀರಿನ ಬಗ್ಗೆ, ಕೆಲ ತರಕಾರಿ ಸೇವನೆ ಮುನ್ನ ಮುನ್ನೆಚ್ಚರಿಕೆ ವಹಿಸುತ್ತೇನೆ. ಇದಲ್ಲದೇ ಎರಡು ಮೂರು ತಿಂಗಳಿಗೊಮ್ಮೆ ಫೇಶಿಯಲ್‌, ಬ್ಲೀಚ್‌, ಬಾಡಿ ಮಸಾಜ್‌ ಮಾಡಿಸಿ­ಕೊಳ್ಳು­­ತ್ತೇನೆ. ಬೆಂಗಳೂರು ಹೊರ ಭಾಗಕ್ಕೆ ಹೋದಾಗ ಬೇಗ ಟ್ಯಾನ್‌ ಆಗುತ್ತೇನೆ. ಅದಕ್ಕಾಗಿ ಆಗಾಗ ಟ್ಯಾನ್‌ ಪ್ಯಾಕ್‌ ಮಾಡಿಸಿಕೊಳ್ಳುತ್ತೇನೆ. ಶೂಟಿಂಗ್‌ ಅವಧಿಯಲ್ಲಿ ಕಣ್ಣಿನ ಅಲಂಕಾರಕ್ಕೆ ಹೆಚ್ಚು ಒತ್ತು ನೀಡುತ್ತೇನೆ’  ಎಂದು ಫಿಟ್‌ನೆಸ್‌ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.

ನಟನೆ ಹೊರತುಪಡಿಸಿ ಕೃತಿಕಾಗೆ ಕಾದಂಬರಿ, ಕಥೆ ಪುಸ್ತಕ ಓದುವುದು ತುಂಬ ಇಷ್ಟ. ಬಿಡುವು ಸಿಕ್ಕಾಗಲೆಲ್ಲಾ ಸಹ­ನಟ­­ರೊಂದಿಗೆ ಪಿಕ್‌ನಿಕ್‌ಗೆ ಹೋಗ್ತಾರಂತೆ. ಇದ­ಲ್ಲದೇ ಲಾಂಗ್‌ ಡ್ರೈವ್‌ ಹೋಗುವುದು ಇವರ ನೆಚ್ಚಿನ ಹವ್ಯಾಸಗಳಲ್ಲೊಂದು.

ನಿಮ್ಮ ಕನಸಿನ ಹುಡುಗ ಹೇಗಿರಬೇಕು ಎಂದರೆ ಕಣ್ಣು ಮಿಟುಕಿಸುವ ಕೃತಿಕಾ, ‘ಹುಡುಗ ಸ್ಮಾರ್ಟ್‌ ಇರಬೇಕು ಅಂತ ನಾನು ಬಯಸಲ್ಲ. ಆದ್ರೆ ಕೆಲಸ ಇಲ್ದೆ ಖಾಲಿ ಕುಳಿತಿರಬಾರದು. ನನ್ನ ಭಾವನೆಗಳಿಗೆ ಬೆಲೆ ನೀಡಬೇಕು’ ಎನ್ನುವ ಈ ಹುಡುಗಿಗೆ ವೃತ್ತಿ ಬದುಕಿನ ಕುರಿತು ದೊಡ್ಡ ಕನಸುಗಳಿವೆ.

ತುಂಬಾ ಮುಂಗೋಪಿ
‘ರಾಧಾ ಕಲ್ಯಾಣದ ರಾಧಿಕಾಳಷ್ಟು ನಾನು ಮೃದುವಲ್ಲ. ತುಂಬಾ ಮುಂಗೋಪಿ. ರಾಧಾ ಆದರೆ ತುಂಬಾ ಎಮೋಷನಲ್‌. ಮನಸ್ಸಿಗೆ ನೋವಾದಾಗ ಒಬ್ಬಳೇ ಕುಳಿತು ಅಳುತ್ತೇನೆ’ ಎನ್ನುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.