ADVERTISEMENT

ಮುಗ್ಧ ಭಾವನೆಗಳ ಅಭಿವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಮಕ್ಕಳ ಮುಗ್ಧತೆಯ ಭಾವವನ್ನು  ಯಥಾವತ್ತಾಗಿ ನೋಡಲು ಸಾಧ್ಯವಾಗಬಹುದೇ? ಹೌದು! ವಸಂತನಗರದ ಅಲಯನ್ಸ್ ಫ್ರಾನ್ಸಿಸ್‌ನಲ್ಲಿ ಅ. 21ರ ವರೆಗೆ ನಡೆಯುತ್ತಿರುವ ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ  ನೋಡಬಹುದು.

ಹಿರಿಯ ಕಲಾವಿದ ಬಾಲನ್ ನಂಬಿಯಾರ್ ಕಳೆದ 40 ವರ್ಷಗಳಿಂದ ಪ್ರತಿ ಭಾನುವಾರ ಮಕ್ಕಳಿಗೆ ಚಿತ್ರಕಲೆ ಕಲಿಸುತ್ತಾರೆ. ಅವರು ಎಲ್ಲೇ ಹೊರಗೆ ಹೋದರೂ ಭಾನುವಾರ ಮಾತ್ರ ನಗರದಲ್ಲಿ ತಪ್ಪದೇ ಹಾಜರ್. ಚಿತ್ರಕಲೆ ಕಲಿಸುವುದರಲ್ಲಿ ಅವರಿಗೆ ಅಷ್ಟೊಂದು ಶ್ರದ್ಧೆ. ಅವರ ಬಳಿ ತರಬೇತಾದ 6 ರಿಂದ 12 ವರ್ಷದ 17 ಮಕ್ಕಳ 50 ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ.

ಅವರು ಚಿತ್ರಕಲೆಯನ್ನು ಕಲಿಸುವ ಪದ್ಧತಿ ಭಿನ್ನ. ಮಕ್ಕಳಿಗೆ ಮುಕ್ತವಾಗಿ ಬಣ್ಣ ಹಾಕಲು ಬಿಡಬೇಕು, ಯಾವುದೇ ರೀತಿಯ ನಿರ್ಬಂಧ ಹಾಕಬಾರದು, ಪ್ರತಿಯೊಂದು ಮಗುವಿಗೂ ತನ್ನದೇ ಆದ ಕ್ರಿಯಾಶೀಲತೆ, ಸೃಜನಶೀಲತೆ ಇರುತ್ತದೆ. ಅದು ಅರಳಲು ಬಿಡಬೇಕು ಎನ್ನುವುದು ಅವರ ತತ್ವ.

ಈ ಪ್ರದರ್ಶನದಲ್ಲಿ ಆನಾಯ್‌ಟಿಯೋ, ಆಯಾನಾ, ಸೌಮ್ಯ, ತ್ರಿಷಾ, ಹಿರೇಶ, ಯಾಮಿನಿ, ಮಿನಾಕ್ಷಿ, ನಿಮಿತಾ, ಪೂರ್ಣದೇವಿ, ಪ್ರಣಿಕಾ, ಮಂಜೇಶ್ವರ, ಸಿಂಧು ಮುಂತಾದವರ ಚಿತ್ರಗಳು ಗಮನ ಸೆಳೆಯುತ್ತವೆ. ಸಮುದ್ರದಲ್ಲಿ ಸಾಗುತ್ತಿರುವ ಹಡಗು (ಸಿದ್ಧಾರ್ಥ), ಮಿನಾಕ್ಷಿಯು ಉದ್ಯಾನ (ಮೀನಾಕ್ಷಿ),  ಎತ್ತರದ ಬೆಟ್ಟ (ಪ್ರತೀಕ್) ವಿಶಿಷ್ಟವಾಗಿವೆ.

ಬದುಕಿನ ಭಾವನೆಗಳನ್ನೇ ಅನುಭವಿಸದ ಮಗುವಿನ ಕೈಯಲ್ಲಿ ಅದೇ ವಿಷಯ ಕೊಟ್ಟು ಚಿತ್ರ ಬಿಡಿಸುವಂತೆ ಒತ್ತಾಯ ಹೇರುವುದು ಸರಿಯಲ್ಲ. ನಕಲು ಚಿತ್ರಗಳು ಮಕ್ಕಳ ಸೃಜನಶೀಲತೆಯನ್ನೇ ಹಾಳು ಮಾಡುತ್ತವೆ ಎಂಬುದು ನುರಿತ ಕಲಾಶಿಕ್ಷಕರ ಅಭಿಪ್ರಾಯ. ಹೀಗಾಗಿಯೇ ಇಲ್ಲಿ ಮಕ್ಕಳ ಅನುಭವದ ಚಿತ್ರಣಕ್ಕೇ ಆದ್ಯತೆ.

ಮನೋ ವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ ಪ್ರಕಾರ, ಚಿತ್ರಕಲೆಯು ಮನಸ್ಸಿನ ಅಭಿವ್ಯಕ್ತಿಗಳಲ್ಲಿ ಒಂದು. ಇದರ ನೇರ ಸಂವೇದನೆಯನ್ನು ಮಕ್ಕಳಲ್ಲಿ ಕಾಣಬಹುದು. ಪ್ರೀತಿ, ಸುಖ, ದುಃಖ, ಕೋಪ, ಆಸೆ, ಭಯ, ಆತ್ಮಾಭಿಮಾ ಇತ್ಯಾದಿ ಮಕ್ಕಳ ಕುಂಚದಲ್ಲಿ ನಾನಾ ರೂಪ ತಾಳಿವೆ. ನೈಜತೆಯ ಚಿತ್ರಗಳು ಮಾತ್ರವೇ ಚಿತ್ರಗಳಲ್ಲ ಎಂಬುದಕ್ಕೆ ಈ ಚಿತ್ರಕಲಾ ಪ್ರದರ್ಶನವೇ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.