ADVERTISEMENT

ಮುರಳಿ ಗಾನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST
ಮುರಳಿ ಗಾನ
ಮುರಳಿ ಗಾನ   

ನವ ವರ್ಷದ ಮೊದಲ ವಾರಾಂತ್ಯ. ನಗರದ ಸಾಂಸ್ಕೃತಿಕ ಗಮ್ಯವಾಗಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಅಪರೂಪದ ಕಾರ್ಯಕ್ರಮ. ಕರ್ನಾಟಕ ಸಂಗೀತದಲ್ಲಿ ದಂತಕತೆಯಾಗಿರುವ ಮೇರು ಗಾಯಕ ಬಾಲಮುರಳಿಕೃಷ್ಣ ಅವರಿಂದ ಅಲ್ಲಿ ಸಂಗೀತ ಸುಧೆ. ಈ ಗಾಯಕನ ಮಧುರ ಕಂಠಕ್ಕೆ ಪಿಟೀಲು ವಾದಕಿ ಜ್ಯೋತ್ಸ್ನಾ ಸಾಥ್.

ಬರೀ ಇಷ್ಟೇ ಆಗಿದ್ದರೆ ಈ ಸಂಗೀತ ಕಛೇರಿ ಅಷ್ಟು ಆಸಕ್ತಿ ಹುಟ್ಟಿಸುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಇಬ್ಬರಿಗೂ ಕೆಲ ಐರೋಪ್ಯ ಕಲಾವಿದರು ಸಾಥ್ ನೀಡಲಿದ್ದಾರೆ. ಬಾಲಮುರಳಿ ಅವರ ಜೊತೆ ಶುದ್ಧ ಕರ್ನಾಟಕ ಸಂಗೀತದ ಜುಗಲ್‌ಬಂದಿ ನಡೆಸುವ ಜ್ಯೋತ್ಸ್ನಾ , ಭಾರತೀಯ- ಐರೋಪ್ಯ ವಾದ್ಯ ಸಂಗೀತ ಗೋಷ್ಠಿಯನ್ನೂ ನಡೆಸಿಕೊಡಲಿದ್ದಾರೆ. ಹಾಗಾಗಿ ಇದು ವಿಶ್ವ ಫ್ಯೂಷನ್ ಸಂಗೀತ ಕಛೇರಿ.

ಬಾಲಮುರಳಿ ಕರ್ನಾಟಕ ಸಂಗೀತದ ದೈತ್ಯ ಪ್ರತಿಭೆ. 80 ದಾಟಿರುವ ಈ ಹಿರಿಯ ಕಲಾವಿದ ವಿಶ್ವದಾದ್ಯಂತ  25 ಸಾವಿರ ಸಂಗೀತ ಕಛೇರಿ ನಡೆಸಿಕೊಟ್ಟಿದ್ದಾರೆ. ಹೊಸ ರಾಗಗಳ ಅನ್ವೇಷಣೆ, ಕೃತಿ ರಚನೆ, ಸಂಗೀತ ಸಂಯೋಜನೆ, ಸಂಗೀತ ಪಾಠ, ಕಛೇರಿಯಲ್ಲಿ ತಮ್ಮ ಜೀವನದ 70 ವರ್ಷ ಕಳೆದಿದ್ದಾರೆ.  72 ಮೇಳಕರ್ತ ರಾಗಗಳಲ್ಲಿ ಸಂಗೀತ ಸಂಯೋಜನೆ ಮಾಡಿರುವುದು ಅವರ ಅಗ್ಗಳಿಕೆ.

ಬಾಲಮುರಳಿ ಅವರಿಗೆ ಹೋಲಿಸಿದಲ್ಲಿ ಜ್ಯೋತ್ಸ್ನಾ ಚಿಕ್ಕವರಾದರೂ ಅವರು ಅಷ್ಟೇ ಕ್ರಿಯಾಶೀಲ ಸಂಗೀತಗಾರ್ತಿ. ಲಂಡನ್‌ನಲ್ಲಿ ನೆಲೆನಿಂತು ಕರ್ನಾಟಕ ಸಂಗೀತದ ಎಲ್ಲೆಯನ್ನು ಯುರೋಪ್‌ನಲ್ಲಿ ವಿಸ್ತರಿಸುತ್ತಿದ್ದಾರೆ.

ವಾದ್ಯ ಸಂಗೀತ
 ಕಾರ್ತಿಕ್ ಮಣಿ:
ವಿಶೇಷ ತಾಳವಾದ್ಯ, ಎನ್. ಅಮೃತ: ಭಾರತೀಯ ತಾಳವಾದ್ಯ. ಶರ್ಡಕ್ ಸಾಲೋಮನ್: ಕೀ ಬೋರ್ಡ್, ಥಾಲಿಸ್ (ಯುಕೆ): ಡ್ರಮ್ಸ, ಕೀತ್ ಪೀಟರ್ಸ್‌: ಬಾಸ್ ಗಿಟಾರ್, ಟೋನಿ ದಾಸ್: ಬಾಸ್ ಗಿಟಾರ್.

ಅಂಗವೈಕಲ್ಯ ಹೊಂದಿರುವ ಬಡ ವರ್ಗದ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸುವ ಸ್ಪರ್ಶ ಆಸ್ಪತ್ರೆಯ `ಸ್ಪರ್ಶ ವಚನ~ ಕಾರ್ಯಕ್ರಮದ ಸಹಾಯಾರ್ಥ ಈ ಸಂಗೀತ ಸಂಜೆ ನಡೆಯಲಿದೆ.ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಸಂಜೆ:6.30.

5000, 3000, 2000, 1000 ಮತ್ತು 500 ರೂಪಾಯಿಗಳ ದೇಣಿಗೆ ಪಾಸ್‌ಗಳನ್ನು ಹೊಸೂರು ರಸ್ತೆಯ ಸ್ಪರ್ಶ ಆಸ್ಪತ್ರೆ, ಇನ್‌ಫಂಟ್ರಿ ರಸ್ತೆಯ ಸ್ಪರ್ಶ ಆಸ್ಪತ್ರೆ, ಮಲ್ಲೇಶ್ವರದ ಅನನ್ಯ ಮತ್ತು ಗಾಯನ ಸಮಾಜದಲ್ಲಿ ಪಡೆಯಬಹುದು. ಆನ್‌ಲೈನ್ ಟಿಕೆಟ್‌ಗಾಗಿ www.indianstage.in, www.buzzintown.com
ವಿವರಗಳಿಗೆ ಡಾ. ಚಂದ್ರಶೇಖರ್ ಅವರನ್ನು 99809 09853 ಮೂಲಕ ಸಂಪರ್ಕಿಸಬಹುದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.