ADVERTISEMENT

ಮೆಜೆಸ್ಟಿಕ್ ಮುಂಜಾನೆಯಲ್ಲಿ

ಅನುಪಮಾ ಫಾಸಿ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ಮುಂಜಾನೆ ಸೂರ್ಯ ಮೂಡುವ ಹೊತ್ತು, ಪಕ್ಷಿಗಳೆಲ್ಲ ಬೆಳಗಿನ ಆಕಳಿಕೆಗೆ ಬಾಯಿ ತೆರೆದು ಪಿಳಿಪಿಳಿ ಕಣ್ಣು ಬಿಡುವ ಸಮಯ. ಆದರೆ, ಅಲ್ಲಿ ಆಗಲೇ ದಿನ ನಿತ್ಯದ ಕೆಲಸಗಳು ಆರಂಭವಾಗಿರುತ್ತವೆ. ಬಹುಶಃ ಯಾವತ್ತೂ ಮಲಗದೆ ದಿನದ ಇಪ್ಪತ್ನಾಲ್ಕು ಗಂಟೆಯೂ ಚಲನಶೀಲವಾಗಿರುವಂತಹ ಸ್ಥಳ ಅದೊಂದೇ ಅನಿಸುತ್ತದೆ. ಬದುಕಿನ ಎಲ್ಲ ಧಾವಂತಗಳು, ಎಲ್ಲ ತರಹದ ಮನಸ್ಸುಗಳು ಅಲ್ಲಿ ಸಿಗುತ್ತವೆ. ಬರೀ ಒಂದು ಗಂಟೆ ಕಳೆದರೆ ಸಾಕು ಅಲ್ಲಿಯ ಜೀವನದ ಹಲವು ಮುಖಗಳು ಕಣ್ಣಿಗೆ ಮತ್ತು ಮನಸ್ಸಿಗೆ ಹತ್ತಿರವಾಗಿ ನಿಲ್ಲುತ್ತವೆ.

ಇದು ಮೆಜೆಸ್ಟಿಕ್ ಎಂಬ ಮಹಾನಗರದಲ್ಲಿನ ತಲ್ಲಣಗಳು. ನಿತ್ಯದ ಧಾವಂತದ ಬದುಕು, ಅಳಿಸಿ ಹೋಗುತ್ತಿರುವ ಮನುಷ್ಯ ಸಂಬಂಧಗಳು, ಮುಖವಾಡ ಹೊತ್ತ ಅವಕಾಶವಾದಿಗಳು... ಹೀಗೆ ಎಲ್ಲವನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಗಿಜಿಗುಡುತ್ತಿರುವ ಮೆಜೆಸ್ಟಿಕ್‌ನಲ್ಲಿ ಕಂಡ ಕೆಲವು ದೃಶ್ಯಗಳು ಇಲ್ಲಿವೆ...

ಹಳ್ಳಿಯಿಂದ ಮೊದಲ ಬಾರಿಗೆ ಪೇಟೆಯ ಮಗನ ಮನೆಗೆ ಬಂದ ವೃದ್ಧ ದಂಪತಿಗಳು. ಮಗ ನಾನು ಆಫೀಸ್‌ನಲ್ಲಿರುತ್ತೇನೆ. ಇಷ್ಟನೇ ನಂಬರ್ ಪ್ಲಾಟ್‌ಫಾರ್ಮ್‌ನಲ್ಲಿನ ಬಸ್ ಹತ್ತಿಕೊಂಡು ಬನ್ನಿ ಎಂದು ಹೇಳಿರಬೇಕು. ಮಗ ಕರೆದನೆಂದು ಮನಸ್ಸು ತುಂಬಾ ಹರುಷ ಹೊತ್ತು ಬಂದಿದ್ದ ಆ ವೃದ್ಧ ದಂಪತಿಗಳಿಗೆ, ಈಗ ಬೆಂಗಳೂರಿನ ನಿಲ್ದಾಣವನ್ನು ನೋಡಿ ದಿಗಿಲು.

ತಾವು ಎಲ್ಲಾದರೂ ಕಳೆದು ಹೋಗುತ್ತೇವೇನೋ ಎಂಬ ಭೀತಿಯಲ್ಲಿ ಇಬ್ಬರು ಕೈಯ್ಯನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಕಣ್ಣಲ್ಲಿ ಕಂಡು ಕಾಣದ ನೀರಿನ ಪಸೆ. ಅಲ್ಲಿ ಬಂದು ನಿಲ್ಲುವವರ ಹತ್ತಿರ ಈ ಬಸ್ `ತಾವು ತಲುಪುವ ಬಡಾವಣೆಗೆ~ ಹೋಗುತ್ತೇನಪ್ಪಾ ಎಂದು ಕೇಳುತ್ತ ಬಸವಳಿಯುತ್ತಿದ್ದಾರೆ.

ಇನ್ನೊಂದೆಡೆ, ಅಳುತ್ತಿರುವ ತನ್ನ ಕಂದಮ್ಮನಿಗೆ ಹಾಲುಣಿಸಬೇಕು ಎಂಬ ಕಾತರ ತಾಯಿಗೆ. ಆದರೆ, ಯಾವ ಕಡೆ ತಿರುಗಿದರೂ ಜನ. ಕೊನೆಗೆ ಕಂದನ ಅಳು ಆಕ್ರಂದನವಾದಾಗ ಅಲ್ಲೇ ಮೂಲೆಯ ಬೆಂಚೊಂದರಲ್ಲಿ ಕುಳಿತ ಅಮ್ಮ ತನ್ನ ಕಂದನಿಗೆ ಹಾಲುಣಿಸಲು ಅನುವಾಗುತ್ತಾಳೆ.

ಬೇಗನೆ ಎದ್ದು, ನಿತ್ಯ ಕರ್ಮ ಮುಗಿಸಿ ಬಂದವರು ಬಸ್ಸಿಗಾಗಿ ಕಾದು ನಿಂತಿರುತ್ತಾರೆ. ಬಸ್‌ಗಳಿಗೇ ಸರಿಯಾಗಿ ನಿಲ್ಲಲು ಜಾಗವಿಲ್ಲದಿರುವಾಗ ಜನಜಂಗುಳಿಯಾಗುವುದು ಸಹಜ ತಾನೇ. ಇದರ ನಡುವೆ ಬರುವ ಬಸ್ಸುಗಳ ಡ್ರೈವರ್ ಜೊತೆಗೆ ಸುಖಾಸುಮ್ಮನೆ ಬೈಸಿಕೊಳ್ಳುತ್ತಾರೆ. ಯಾವುದಾದರೂ ಬಸ್ಸು ಬಂತೆಂದರೆ ಸಾಕು, ಆ ಬಸ್ಸಿಗೆ ದುಂಬಿಗಳು ಹೂವನ್ನು ನೋಡಿ ಆಕರ್ಷಿತವಾದಂತೆ ಎಲ್ಲರೂ ಒಂದೇ ಬಾರಿ ಮುತ್ತಿಗೆ ಹಾಕುತ್ತಾರೆ.

ಎಲ್ಲರ ಧ್ಯೇಯ ಒಂದೇ. ಮೊದಲು ಬಸ್ಸು ಹತ್ತಿ ಅಲ್ಲಿ ತನಗೊಂದು ಸೀಟು ದಕ್ಕಿಸಿಕೊಳ್ಳುವುದು. ಕೊನೆಗೆ ಅದು ಈಡೇರದಿದ್ದರೆ ನೂಗುನುಗ್ಗಲಿನಲ್ಲೇ ಹೇಗೋ ಹೊಂದಿಕೊಂಡು ಸಾಗಿ, ನಿಲ್ಲಲೊಂದಿಷ್ಟು ಜಾಗ ಮಾಡಿಕೊಳ್ಳಬೇಕು. ಅಷ್ಟಾದರೆ ಸಾಕು ಎಂಬ ಮನೋಭಾವ. ಅಲ್ಲಿ ಶಕ್ತಿಯಿದ್ದವರು ಮಾತ್ರ ತೂರಿಕೊಳ್ಳಲು ಸಾಧ್ಯ. ದುರ್ಬಲರಾದವರು ಗೊಣಗುತ್ತ ಮುಂದಿನ ಬಸ್ಸಿಗೆ ಕಾಯಬೇಕಷ್ಟೇ. 

 ಒಂದೆಡೆ ಬಾರದ ಬಸ್ಸಿಗಾಗಿ ಕಾಯುತ್ತ, ಬೈದುಕೊಳ್ಳುತ್ತ ಇಷ್ಟು ಹೊತ್ತಾದರೂ ಯಾಕೆ ಬರಲಿಲ್ಲ ಬಸ್ ಎಂದು ವಾಚ್ ನೋಡಿಕೊಳ್ಳುತ್ತ ಇವತ್ತು ತಡವಾಗಿದಕ್ಕೆ ಏನು ಕಾರಣ ನೀಡಿ ತಮ್ಮ ಬಾಸ್‌ನನ್ನು ಹೇಗೆ ಸಮಾಧಾನಿಸಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಿರುವ ಖಾಸಗಿ ಕಂಪೆನಿಗಳ ಉದ್ಯೋಗಿಗಳು. ಇನ್ನೊಂದೆಡೆ ಒಬ್ಬಳು ಹುಡುಗಿ ಬಸ್ಸಿಗಾಗಿ ಕಾಯುತ್ತ ನಿಂತರೆ, ಅವಳನ್ನು ಗಮನಿಸುವ ನೂರಾರು ಕಣ್ಣುಗಳು. ಅಷ್ಟೆಲ್ಲಾ ಜನರ ನೋಟವನ್ನು ಎದುರಿಸಲು ಸಾಧ್ಯವಾಗದೆ ಆ ಹುಡುಗಿ ಬರಲಾರದ ಬಸ್ಸಿಗೆ ಬೈಯುತ್ತ ಆ ಕಡೆ ಒಂದು ಬಾರಿ, ಈ ಕಡೆ ಒಂದು ಬಾರಿ ನೋಡುತ್ತ ತನ್ನ ದೃಷ್ಟಿ ಬದಲಾಯಿಸುತ್ತಿರುತ್ತಾಳೆ. ಅವಳ ಮನಸ್ಸು ಆಗ ಬೆಂಗಳೂರು ರಸ್ತೆ!

ಇನ್ನೊಂದೆಡೆ ನವ ಪ್ರೇಮಿಗಳ ನವಿರಾದ ಪಿಸು ಮಾತುಗಳು. ನಡುನಡುವೆ ಹುಸಿ ಕೋಪ. ನಗು. ಯಾರನ್ನೇ ಆಗಲಿ ಎದುರಿಸುತ್ತೇವೆಂಬ ಭಾವದಿಂದ ಕೈಗಳನ್ನು ಗಟ್ಟಿಯಾಗಿ ಹಿಡಿದು ತಾವೇ ಎಲ್ಲೆಲ್ಲೂ ಎಂಬಂತೆ ಸಾಗುವ ನವ ಪ್ರೇಮಿಗಳು.

ಇನ್ನು ತನ್ನ ಹುಡುಗಿ ಈ ಬಸ್ಸು ಹತ್ತಲು ಬರುತ್ತಾಳೆಂದು ಕಾಯುತ್ತ ನಿಂತ ಯುವಕ ಆ ದಿನ ಅವಳು ಬರದೇ ತುಂಬ ಬೇಸರದಿಂದ ಅಲ್ಲಿಯೇ ಸಿಗರೇಟು ಹಚ್ಚುತ್ತಾನೆ; ಕಣ್ಣಿಗೆ ರಾಚುವಂತೆ ತೂಗುಹಾಕಿರುವ `ಧೂಮಪಾನ ನಿಷೇಧಿಸಿದೆ~ ಎಂಬ ಫಲಕ ನೋಡಿಯೂ ನೋಡದಂತೆ.

ಒಂದು ಕಡೆ ತುಂಬಾ ಹೊತ್ತಿನಿಂದ ಕಾಯಿಸಿದ ಹುಡುಗನ ಮೇಲೆ ಕೋಪ ಒಬ್ಬಳಿಗಾದರೆ, ತನ್ನನ್ನು ನೋಡಲು ಬಂದಿರುವ ಗೆಳೆಯ ತನಗೇನೂ ಗಿಫ್ಟ್ ತಂದಿಲ್ಲವಲ್ಲ ಎಂದು ಮೌನ ತಾಳಿರುವ ಗೆಳತಿ ಒಂದು ಕಡೆ. ಅವರ ಮನ ಒಲಿಸಲು ಕಷ್ಟಪಡುವ ಹುಡುಗರ ಪಾಡು ಅನುಭವಿಸಿದವರಿಗೇ ಗೊತ್ತು!

ಇನ್ನು ಕಾಲೇಜು ಹುಡುಗರ ದಂಡು ಒಂದು ಕಡೆ ಕಲೆತು ಪೋಲಿ ಜೋಕುಗಳನ್ನು ಹೊಡೆಯುತ್ತಾ ಅವರ ಕಾಲೇಜಿನ ಹುಡುಗಿಯ ಬಗೆಗೋ ಅಥವಾ ಕಾಲೇಜು ಲೆಕ್ಚರರ್ ಬಗೆಗೆ ಕಾಮೆಂಟ್ ಮಾಡುತ್ತ ನಿಂತಿರುತ್ತಾರೆ. ಆಗ ಅವರ ಎದುರು ಒಬ್ಬರು ಅಂಧ ವ್ಯಕ್ತಿ ಪ್ಲಾಟ್‌ಫಾರಂ ದಾಟಲು ಕಷ್ಟ ಪಡುತ್ತಿರುತ್ತಾರೆ. ಆಗ ಅವರಲ್ಲಿನ ಒಬ್ಬ ಹುಡುಗ ಚಂಗನೆ ಜಿಗಿದು, ಅವರ ಕೈ ಹಿಡಿದು ಪ್ಲಾಟ್‌ಫಾರಂ ದಾಟಿಸಿ, ಅವರು ಎಲ್ಲಿ ಹೋಗಬೇಕೆಂದು ವಿಚಾರಿಸಿ, ಅವರು ಹೋಗಬೇಕಾದ ಬಸ್ಸು ಹತ್ತಿಸಿ ಬರುತ್ತಾನೆ.

ಇದ್ಯಾವುದರ ಗೊಡವೆಯೇ ಬೇಡ ಎಂಬಂತೆ, ಒಂದಿಬ್ಬರು ಅಲ್ಲಿ ಇಟ್ಟಿರುವ ಬೆಂಚಿನ ಮೇಲೆ ಹಾಯಾಗಿ ತೂಕಡಿಸುತ್ತ ಕುಳಿತಿರುತ್ತಾರೆ.

ಸಂಜೆ ಆಗುತ್ತಿದ್ದಂತೆಯೇ ಇನ್ನೊಂದು ಮೆರುಗು ಪಡೆಯುತ್ತದೆ ಮೆಜೆಸ್ಟಿಕ್.

ಕೆಲಸ ಮಾಡಿ ಬಸವಳಿದು ಬಂದ ಜನಕ್ಕೆ ಮೈ ಒರಗಿದರೆ ಸಾಕು, ನಿದ್ದೆ ಬರುವಂತಿರುತ್ತದೆ. ಆ ಸುಸ್ತು ಮುಖಗಳನ್ನು ಹೊತ್ತೇ ನಾಳೆಯ ಬದುಕಿಗೆ ಮುನ್ನುಡಿ ಬರೆಯುವ ಕನಸು ಕಾಣುತ್ತಾ ನಿಧಾನವಾಗಿ ಮನೆಗೆ ಹೊರಡುವ ಬಸ್ಸು ಹಿಡಿಯುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.