ADVERTISEMENT

ಮೆಟ್ರೊದಲ್ಲಿ ಕನಸಿನ ಪಯಣ

ಸತೀಶ್‌ ಬಿ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

‘ಕಷ್ಟ ಎಂದರೆ ಸಾಧನೆ ಅಸಾಧ್ಯ. ಧೈರ್ಯದಿಂದ ಮುನ್ನುಗಿದಾಗ ಮಾತ್ರ ಏನಾದರೂ ಸಾಧಿಸಬಹುದು. ವಿಮಾನ ಹಾರಿಸುವಷ್ಟೇ ಜವಾಬ್ದಾರಿ ‘ಮೆಟ್ರೊ ರೈಲು’ ಓಡಿಸುವಾಗ ಇರುತ್ತದೆ. ಛಲದಿಂದ ಎಂತಹ ಒತ್ತಡವನ್ನು ಬೇಕಾದರೂ ನಿಭಾಯಿಸಬಹುದು’ ಎನ್ನುವುದು ಜೆ.ಪಿ.ಕಾವ್ಯಶ್ರೀ ಅವರ ಆತ್ಮವಿಶ್ವಾಸದ ನುಡಿ.

ನಗರದ ಸಂಪಿಗೆ ರಸ್ತೆಯಿಂದ ಪೀಣ್ಯವರೆಗಿನ ಮೆಟ್ರೊ ರೈಲಿನಲ್ಲಿ ಚಾಲಕಿಯಾಗಿರುವ ಅವರು ಮೆಟ್ರೊ ರೈಲಿನ ಚಾಲನೆಯ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಂಡರು...

‘ನಾನು ಮೂಲತಃ ಮಂಡ್ಯದವಳು. ಡ್ರೈವಿಂಗ್‌ ನನ್ನ ಇಷ್ಟದ ಕ್ಷೇತ್ರ. ಚಿಕ್ಕಂದಿನಿಂದಲೂ ಪೈಲೆಟ್‌ ಆಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಮುಗಿಸಿ ಎರಡು ವರ್ಷ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿದೆ. ಬಳಿಕ ಪರೀಕ್ಷೆ ಮತ್ತು ಸಂದರ್ಶನವನ್ನು ಯಶಸ್ವಿಯಾಗಿ ಮುಗಿಸಿದ ನಂತರ ‘ಮೆಟ್ರೊ’ದಲ್ಲಿ ಲೋಕೊ ಪೈಲೆಟ್‌ ಆಗಿ ಆಯ್ಕೆಯಾಗಿದ್ದೇನೆ.

ಆ ಮೂಲಕ ನನ್ನ ಅರ್ಧ ಆಸೆ ಈಡೇರಿದೆ. ಮುಂದೊಂದು ದಿನ ವಿಮಾನದ ಪೈಲೆಟ್‌ ಆಗುತ್ತೇನೆ’ ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು.
‘ಸಿಕ್ಕಿರುವ ಕೆಲಸವನ್ನು ಶ್ರದ್ಧೆಯಿಂದ ನಿಭಾಯಿಸುವ ಜವಾಬ್ದಾರಿ ನನ್ನ ಮೇಲಿದೆ. ಅದರ ನಂತರವಷ್ಟೆ ಮುಂದಿನ ಗುರಿಯತ್ತ ಪಯಣ’ ಎನ್ನುತ್ತಾರೆ.

‘ಮಹಿಳೆಯಾಗಿ ರೈಲು ಓಡಿಸಲು ಕಷ್ಟವಾಗುವುದಿಲ್ಲವೇ?’ ಎಂದು ಎಲ್ಲರೂ ಕೇಳುತ್ತಾರೆ. ಆದರೆ, ಎಂದೂ ನನಗೆ ಹಾಗೆ ಅನಿಸಿಲ್ಲ. ನನ್ನ ಇಷ್ಟದ ಕ್ಷೇತ್ರ ಇದಾಗಿರುವುದರಿಂದ ಕಷ್ಟವೇನೂ ಇಲ್ಲ. ಜವಾಬ್ದಾರಿ ಎಂದು ನಿರ್ವಹಿಸುವುದಷ್ಟೆ ನನ್ನ ಮುಂದಿರುವ ಸವಾಲು. ಪತಿ ಮಂಜುನಾಥ್‌ ಸಹ ಇಲ್ಲಿಯೇ ಕೆಲಸ ಮಾಡುತ್ತಿರುವುದರಿಂದ ಸಹಕಾರ ಸಿಗುತ್ತಿದೆ.

ಪೈಲೆಟ್‌ ಆಗಲು ಎಂಜಿನಿಯರಿಂಗ್‌ ಮಾಡಿರಬೇಕು. ಹಾಗಾಗಿ ಇಬ್ಬರೂ ನಗರದ ಬಿಎಂಎಸ್‌ ಸಂಜೆ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮಾಡುತ್ತಿದ್ದೇವೆ’ ಎಂದು ಗುರಿಯೆಡೆಗಿನ ತಮ್ಮ ಪ್ರಯತ್ನವನ್ನು ವಿವರಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.