ADVERTISEMENT

ಮೊದಲ ಮೆಟ್ರೊ ಪಯಣ

ಎಸ್.ವಿಜಯ ಗುರುರಾಜ
Published 3 ಸೆಪ್ಟೆಂಬರ್ 2017, 19:30 IST
Last Updated 3 ಸೆಪ್ಟೆಂಬರ್ 2017, 19:30 IST
ಮೊದಲ ಮೆಟ್ರೊ ಪಯಣ
ಮೊದಲ ಮೆಟ್ರೊ ಪಯಣ   

ಹಿರಿಯ ನಾಗರಿಕರೆಲ್ಲ ಸೇರಿ ಪ್ರತಿ ಮುಂಜಾನೆ ವಾಕಿಂಗ್ ಮುಗಿಸಿ, ಸ್ವಲ್ಪ ಹೊತ್ತು ಉದ್ಯಾನವನದಲ್ಲಿ ಕುಳಿತು ಕುಶಲೋಪರಿಯಲ್ಲಿ ತೊಡಗುವುದು ನಮ್ಮ ದಿನಚರಿ. ಅಂದು ಸಂಜೆ ನಾವೆಲ್ಲ ಸಭೆ ಸೇರಿದೆವು. ರಾಜಾಜಿನಗರದ ಇಸ್ಕಾನ್ ಬಳಿಯ ಮೆಟ್ರೊ ಮೂಲಕ ಮಂತ್ರಿ ಮಾಲ್‌ಗೆ ತೆರಳಿ ಶಾಂಪಿಂಗ್ ಮುಗಿಸಿ ಉಡುಪಿ ದೋಸೆ ತಿಂದು ಬರೋಣ ಎಂಬ ನಿರ್ಧಾರ ಮಾಡಿದೆವು.

ಮಾರನೇ ದಿನ ಹತ್ತು ಮಂದಿ ಮಹಿಳೆಯರು ಮೆಟ್ರೊ ನಿಲ್ದಾಣದತ್ತ ಸಂಭ್ರಮದಿಂದ ಹೆಜ್ಜೆ ಹಾಕಿದೆವು. ಟಿಕೆಟ್ ಪಡೆದು, ರೈಲಿಗಾಗಿ ಕಾದೆವು. ಮೊದಲ ಬಾರಿಗೆ ಟ್ರೈನ್ ಹತ್ತಿ ಸೀಟಿನಲ್ಲಿ ಕುಳಿತ ನಮ್ಮ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.

ಟ್ರಿನ್ ಎಂಬ ಶಬ್ಧದೊಂದಿಗೆ ಅಪರ್ಣಾರ ಮಧುರ ದನಿಯಲ್ಲಿ ಆಯಾ ನಿಲ್ದಾಣಗಳ ಹೆಸರು ಕೇಳಿ ಬರುತ್ತಿತ್ತು. ರೈಲು ನಿಲ್ಲುತ್ತಿದ್ದಂತೆಯೇ ಜನಸಾಗರ ನುಗ್ಗುತ್ತಿತ್ತು.

ADVERTISEMENT

ರೈಲು ಈಗ ಮಂತ್ರಿಮಾಲ್ ನಿಲ್ದಾಣಕ್ಕೆ ಬರಲಿದೆ ಎಂದು ತಿಳಿದ ಕೂಡಲೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದ ನಾವು ಕೊಂಚ ಗಡಬಡಿಸಿದೆವು. ಇಷ್ಟು ಬೇಗ ಇಳಿಯಬೇಕಲ್ಲ ಎನಿಸಿತಾದರೂ, ಮತ್ತೆ ಮರಳುವಾಗ ಅದರಲ್ಲೇ ಹೋಗುತ್ತಿವಲ್ಲಾ ಎಂದು ಸಮಾಧಾನಗೊಂಡು ಮಂತ್ರಿ ಮಾಲ್‌ನತ್ತ ನಡೆದೆವು.

ಫಳಫಳಿಸುತ್ತಿದ್ದ ಮಾಲ್‌ನಲ್ಲಿ ತಿರುಗಾಡಿ ಶಾಪಿಂಗ್ ಮಗಿಸಿ, ಉಸ್ಸಪ್ಪ ಎಂದು ಉಸಿರುಬಿಟ್ಟೆವು. ಹಸಿದ ಹೊಟ್ಟೆ ಫುಡ್‌ಕೋರ್ಟ್‌ನತ್ತ ದಾರಿ ತೋರಿತು. ಆದರೆ ಎಲ್ಲಿ ಹುಡುಕಿದರೂ ದೋಸೆ ಸ್ಟಾಲ್ ಕಾಣಲೇ ಇಲ್ಲ. ಬರೀ ಪೀಜ್ಜಾ, ಬರ್ಗರ್, ಹೀಗೇ ಏನೇನೋ ಕಾಣಿಸುತ್ತಿತ್ತು. ನಮಗೆ ಸರಿ ಕಾಣಲಿಲ್ಲ. ಸುಮ್ಮನೆ ನಿಂತಿದ್ದೆವು.

ತುಪ್ಪದ ಮಸಾಲೆ ಸುವಾಸನೆಯನ್ನೇ ಹುಡುಕುತ್ತಿದ್ದ ನಾವು, ಇನ್ನೂ ಉಡುಪಿ ಮಸಾಲ ದೋಸೆ ಸ್ಟಾಲ್ ತೆರೆದಿಲ್ಲ ಎಂದು ತಿಳಿದಾಗ ತೆಪ್ಪಗೆ ಲಿಫ್ಟ್ ಏರಿ ಗ್ರೌಂಡ್‌ಗೆ ಬಂದೆವು. ಅಲ್ಲಿ 'ಹಟ್ಟಿ ಕಾಪಿ' ಎಂಬ ಬೋರ್ಡ್ ನಮ್ಮನ್ನು ಸ್ವಾಗತಿಸಿತು. ಹಟ್ಟಿ ಕಾಪಿ ಬಾಯಿಗೆ ಬಸಿದುಕೊಂಡು ಮತ್ತೆ ಮೆಟ್ರೊ ಹತ್ತಿದೆವು.

ಬರುವಾಗ ಇದ್ದಿದ್ದ ಉತ್ಸಾಹ ತೆರಳುವಾಗ ಇರಲಿಲ್ಲ. ರಾಜಾಜಿನಗರಕ್ಕೆ ಬಂದಿಳಿದ ನಮ್ಮ ದಂಡು ಹೋಟೆಲನ್ನೇ ಹುಡುಕುತ್ತಿತ್ತು. ಅಲ್ಲಿಂದ ಮುನ್ನಡೆದ ನಾವು ಬನಶಂಕರಿ ನಿಲ್ದಾಣದಲ್ಲಿ ಇಳಿದರಾಯಿತು ಎನ್ನುತ್ತಾ ಹರಟೆಯ ಹಾಡಿಗೆ ಧ್ವನಿಯಾಗಿ ಸಾಗಿದೆವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.