ADVERTISEMENT

ಯಲಗುಪ್ಪ ಯಕ್ಷ ಪಯಣಕ್ಕೆ ರಜತ ಸಂಭ್ರಮ

ಸುರೇಖಾ ಹೆಗಡೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಯಲಗುಪ್ಪ ಯಕ್ಷ ಪಯಣಕ್ಕೆ ರಜತ ಸಂಭ್ರಮ
ಯಲಗುಪ್ಪ ಯಕ್ಷ ಪಯಣಕ್ಕೆ ರಜತ ಸಂಭ್ರಮ   

ಇಪ್ಪತ್ತೇಳು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರು ಸ್ತ್ರೀವೇಷಧಾರಿಯಾಗಿ ಜನಪ್ರಿಯರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹುಟ್ಟೂರು. ಭರತನಾಟ್ಯ, ಸಂಗೀತ ಹಾಗೂ ಭಾಗವತಿಕೆಯಲ್ಲಿ ಪರಿಣತರು.

ಯಕ್ಷಗಾನ ಕ್ಷೇತ್ರದಲ್ಲಿ  ಅವರು ಸಲ್ಲಿಸಿರುವ ಸೇವೆ ಗುರುತಿಸಿ ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನ ಭಾನುವಾರ ಅವರಿಗೆ ‘ಯಲಗುಪ್ಪ 25’ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಮೆಟ್ರೊ ಮಾತು...

* ಯಕ್ಷಗಾನದೆಡೆಗೆ ಆಸಕ್ತಿ ಬೆಳೆದದ್ದು ಹೇಗೆ?
ಯಕ್ಷಗಾನದ ಹಿರಿಯ ವಿದ್ವಾಂಸ ಚಿಟ್ಟಾಣಿ ರಾಮ ಹೆಗಡೆ  ನನ್ನ ಸೋದರ ಮಾವ. ಹಾಗಾಗಿ ಯಕ್ಷಗಾನ ಕಲೆ ರಕ್ತಗತ ಎನ್ನಬಹುದು. ಮುಖ್ಯವಾಗಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಕುಣಿತ, ಅಭಿನಯ, ರಂಗದ ಮೇಲಿನ ಅವರ ನಿಲುವು ನನ್ನ ಮೇಲೆ ಪ್ರಭಾವ ಬೀರಿದ್ದು ಹೆಚ್ಚು. ಅವರೇ ಸ್ಫೂರ್ತಿ.

ADVERTISEMENT

* ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದೂ ಯಕ್ಷಗಾನವನ್ನು ವೃತ್ತಿಯಾಗಿಸಿಕೊಂಡಿದ್ದೇಕೆ?
ಈ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಕಾಲಿಟ್ಟೆ. ಅಂದು ವೃತ್ತಿ, ಹವ್ಯಾಸಗಳ ವ್ಯತ್ಯಾಸ ಗೊತ್ತಿರಲಿಲ್ಲ. ಕುಣಿಯಬೇಕು, ಯಕ್ಷ ಪ್ರೇಮಿಗಳನ್ನು ರಂಜಿಸಬೇಕು ಎನ್ನುವುದಷ್ಟೇ ಮನಸ್ಸಿನಲ್ಲಿದ್ದದ್ದು.

ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಾ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಾ ಪಾತ್ರಗಳಲ್ಲಿ ಒಂದಾಗುವುದು ಒಂದು ರೀತಿಯಲ್ಲಿ ಮೋಜು ಆಗಿತ್ತು. ಕ್ರಮೇಣ ಇದೇ ಬದುಕಾಯಿತು. ಕಮಲಶಿಲೆ ಹಾಗೂ ಕೆರೆಮನೆ ಮೇಳದ ಜೊತೆ ಅಮೆರಿಕ, ಸಿಂಗಪುರ, ಕುವೈತ್‌, ದುಬೈನಲ್ಲಿಯೂ ಯಕ್ಷಗಾನ ಕಾರ್ಯಕ್ರಮ ನೀಡಿದ್ದೇನೆ.

* ಗಂಡುಕಲೆ ಯಕ್ಷಗಾನ. ಹೀಗಿದ್ದೂ ಸ್ತ್ರೀವೇಷದತ್ತ ಮನಸ್ಸು ಮಾಡಿದ್ದೇಕೆ?
ಹಾಡುಗಾರಿಕೆ ಹಾಗೂ ಗತ್ತಿನ ವೇಷದ ಬಗೆಗೆ ಒಲವಿದ್ದೇ ಯಕ್ಷಗಾನ ಕೇಂದ್ರದೊಳಕ್ಕೆ ಕಾಲಿಟ್ಟೆ. ನನ್ನ ರೂಪ, ಕುಣಿತದ ನಾಜೂಕು ಕಂಡು ಸ್ತ್ರೀವೇಷ ಮಾಡುವಂತೆ ಪ್ರೇರೇಪಿಸಿದ್ದು ಹೇರಂಜಾಲು ವೆಂಕಟರಮಣ ಗಾಣಿಗರು. ಆ ಕಾಲದ ಪ್ರಸಿದ್ಧ ಸ್ತ್ರೀವೇಷಧಾರಿ ಅವರಾಗಿದ್ದರು. ನನ್ನ ಸ್ವಭಾವಕ್ಕೆ ಒಗ್ಗದ ಪಾತ್ರ ಇದಾದರೂ ಪರಕಾಯ ಪ್ರವೇಶವಾದ ಮೇಲೆ ಈ ಪಾತ್ರದ ಮಹತ್ವ ಅರಿತೆ.

* ಸ್ತ್ರೀವೇಷ ಮಾಡುವ ಅನುಭವ?
ಬಹಳ ಕಷ್ಟ. ಗಂಡೊಬ್ಬ ಹೆಣ್ಣಿನ ಭಾವನೆಗಳನ್ನು ಅನುಭವಿಸಿ, ಅಭಿವ್ಯಕ್ತಿಸುವುದು ತೀರಾ ಕಷ್ಟ. ಗಂಡು ಹಾಗೂ ಹೆಣ್ಣಿನಲ್ಲಿ ಒಂದೇ ರೀತಿಯ ಭಾವನೆಗಳು ಉಂಟಾದರೂ ಅದನ್ನು ಪ್ರಕಟಿಸುವ ರೀತಿ ಬೇರೆ. ಈ ವಿಷಯದಲ್ಲಿ ಹೆಣ್ಣು ತೀರಾ ವಿಭಿನ್ನವಾಗಿ ಭಾವನಾತ್ಮಕವಾಗಿ ನಿಲ್ಲುತ್ತಾಳೆ. ಆದ್ದರಿಂದ ಸ್ತ್ರೀವೇಷಧಾರಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಆ ನಿಟ್ಟಿನ ಚಿಂತನೆ, ರಂಗದಲ್ಲಿ ಹೊಸತನ ಅರಳಿಸುವ ಪ್ರಯತ್ನ ಖುಷಿ ನೀಡುತ್ತದೆ.

* ನಿಮ್ಮ ತಯಾರಿ ಹೇಗಿರುತ್ತದೆ?
ಪಾತ್ರಧಾರಿಗೆ ಪಾತ್ರದ ಮಹತ್ವ, ಸನ್ನಿವೇಶಗಳ ಪೂರ್ವಾಪುರ ತಿಳಿದಿರಬೇಕಾಗುತ್ತದೆ. ಪ್ರಸಂಗದ ಪುಸ್ತಕವನ್ನು ಕೂಲಂಕಷವಾಗಿ ಓದಿರಬೇಕು. ಯಕ್ಷ ಕಲಾವಿದ ಜೈಮಿನಿ ಭಾರತವನ್ನು ದೊಡ್ಡದಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರಸ್ತುತ ವಿಷಯಗಳ ಅರಿವೂ ಅನಿವಾರ್ಯ. 

* ಯಕ್ಷಗಾನ ಕೇವಲ ಆರ್ಥಿಕ ಮೂಲವಾಗುತ್ತಿದೆ ಎನಿಸುತ್ತದೆಯೇ?
ಹೌದು. ಕಲಾಪ್ರೀತಿ, ಶ್ರದ್ಧೆ, ಪ್ರಯತ್ನ ಕಡಿಮೆಯಾಗಿದೆ. ಜನಪ್ರಿಯತೆ, ಹಣಕ್ಕೆ ಆದ್ಯತೆ ಹೆಚ್ಚಾಗಿದೆ.

* ಸ್ತ್ರೀಪಾತ್ರದಲ್ಲಿ ನೀವು ಗುರುತಿಸಿದ ಬದಲಾವಣೆ?
ಹಿಂದಿನವರು, ಸ್ತ್ರೀವೇಷದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ  ಸ್ತ್ರೀವೇಷಕ್ಕೆ ಈಗ ಸ್ಟಾರ್‌ವ್ಯಾಲ್ಯೂ ದಕ್ಕಿದೆ. ವಿಭಿನ್ನ ಪ್ರಯೋಗಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆದಿದೆ.

* ನಿಮ್ಮಿಷ್ಟದ ಪಾತ್ರಗಳು ಯಾವುವು? ಯಾರೊಂದಿಗೆ ರಂಗಸ್ಥಳ ಹಂಚಿಕೊಂಡರೆ ಹೆಚ್ಚು ಖುಷಿ ಪಡುತ್ತೀರಿ?
ಶೃಂಗಾರದ ಪಾತ್ರ ಹೆಚ್ಚು ಆಪ್ತ. ಪ್ರಭಾವತಿ, ಮೋಹಿನಿ, ಮೇನಕೆ, ಮೀನಾಕ್ಷಿ, ಅಂಬೆ, ದ್ರೌಪದಿ, ದಾಕ್ಷಾಯಿಣಿ ಪಾತ್ರದಲ್ಲಿ ಅಭಿನಯಿಸುವುದು ಹೆಚ್ಚು ಖುಷಿ. ಕಣ್ಣಿಮನೆ ಹಾಗೂ ಬಳಕೂರು ಕೃಷ್ಣಯಾಜಿ ಅವರೊಂದಿಗೆ ಅಭಿನಯಿಸುವ ಖುಷಿಯೇ ಬೇರೆ.

**

ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರಿಗೆ ಸನ್ಮಾನ: ಕಲಾಧರ ಯಕ್ಷಬಳಗ ಜಲವಳ್ಳಿ ಹಾಗೂ ಅತಿಥಿ ಕಲಾವಿದರಿಂದ ‘ಕಲ್ಯಾಣಮಸ್ತು (ಕನಕಾಂಗಿ–ರತಿ)’ ಯಕ್ಷಗಾನ ಪ್ರದರ್ಶನ.  ಆಯೋಜನೆ– ಮಣೂರು ಮಯ್ಯ ಯಕ್ಷ ಕಲಾ ಪ್ರತಿಷ್ಠಾನ.

ಸ್ಥಳ: ಎ.ಡಿ.ಎ. ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು, ಜೆ.ಸಿ.ರಸ್ತೆ. ಭಾನುವಾರ ಮಧ್ಯಾಹ್ನ 2.30. ಟಿಕೆಟ್‌ ದರ ₹300, ₹200. ಸಂಪರ್ಕಕ್ಕೆ– 94481 01708.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.