ADVERTISEMENT

ಯುಗಾದಿ ನೆನಪಿನ ಜೋಕಾಲಿ ಜೀಕುತ್ತ...

ಸುಶೀಲಾ ಡೋಣೂರ
Published 7 ಏಪ್ರಿಲ್ 2016, 19:40 IST
Last Updated 7 ಏಪ್ರಿಲ್ 2016, 19:40 IST
ಯುಗಾದಿ ಸಂಭ್ರದಲ್ಲಿ ಕಿರುತೆರೆ ಕಲಾವಿದರಾದ ಸೋನುಗೌಡ ಮತ್ತು ಕಿರಣ್ ರಾಜ್
ಯುಗಾದಿ ಸಂಭ್ರದಲ್ಲಿ ಕಿರುತೆರೆ ಕಲಾವಿದರಾದ ಸೋನುಗೌಡ ಮತ್ತು ಕಿರಣ್ ರಾಜ್   

ಯುಗಾದಿ ಎಂದರೆ ಹಾಗೇನೇ. ಎಷ್ಟು ಯುಗಗಳು ಉರುಳಿದರೂ ಅದು ಮತ್ತೆ ಮತ್ತೆ ಮರಳಲೇಬೇಕು. ಆದರೆ ಆ ಹರ್ಷ, ಆ ಸಂಭ್ರಮ, ಆ ಖುಷಿಯ ಕ್ಷಣಗಳು ಈಗಲೂ ಯುಗಾದಿಯೊಂದಿಗೆ ಬೆಸೆದುಕೊಂಡಿವೆಯೇ? ಬದಲಾಗುತ್ತಿರುವ ಬದುಕಿನೊಂದಿಗೆ ಹಬ್ಬದ ಸಡಗರದಲ್ಲಿಯೂ ವ್ಯತ್ಯಾಸವಾಗಿದ್ದು ನಿಜವೇ? ಹಬ್ಬದ ಜೊತೆಗಿನ ತಮ್ಮ ಭಾವ ಬೆಸುಗೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

‘ಯುಗಾದಿ’ ಎಂದರೆ ಹೊಸ ಯುಗದ ಆರಂಭ. ಪ್ರಕೃತಿಯೂ ತನ್ನ ಹಳೆಯ ರೂಪವನ್ನು ಕಳಚಿಟ್ಟು, ಹೊಸ ಮನ್ವಂತರಕ್ಕೆ ಸಜ್ಜಾಗುವ ಸಮಯವಿದು. ಅಂತೆಯೇ ನಮ್ಮ ಬದುಕಿನಲ್ಲೂ ಹೊಸ ದಿನ, ಹೊಸ ವರ್ಷ, ಹೊಸ ಸಂಭ್ರಮ ಹೆಜ್ಜೆ ಇಡುತ್ತದೆ ಎನ್ನುವುದು ನಂಬಿಕೆ.

ಅಂದು ಹೊಸ ಬಟ್ಟೆ ತೊಟ್ಟು, ಸಿಹಿ–ಕಹಿಯ ಮಿಶ್ರಣವನ್ನು ಸವಿದು, ಬದುಕಿನಲ್ಲಿ ಎದುರಾಗುವ ಕಷ್ಟ–ಸುಖವನ್ನು ಸಮನಾಗಿ ಕಾಣಲು ಸಿದ್ಧರಾಗುವ ಹಬ್ಬವಿದು. ಅಲ್ಲದೆ, ಹೊಂಗೆಯ ನೆರಳು, ತುಂಗೆಯ ಕಂಪು, ಬೇವು-ಮಾವುಗಳ ಹೊಸ ಚಿಗುರು ಈ ಬಿರು ಬೇಗೆಯಲ್ಲಿ ಬಸವಳಿದ ಮನಕ್ಕೆ ಉಲ್ಲಾಸ ನೀಡುವುದು ನಿಜ.

ಆದರೆ ಬದಲಾಗುತ್ತಿರುವ ನಗರ ಜೀವನಕ್ಕೆ ತಕ್ಕಂತೆ ಯುಗಾದಿಯೂ ಬದಲಾಗುತ್ತಿದೆ. ಬದಲಾವಣೆ ಎನ್ನುವುದು ಹಳೆಯದನ್ನು ಕಳಚಿ, ಹೊಸದನ್ನು ಎಳೆದುಕೊಳ್ಳುತ್ತ ಸಾಗುವ ಕಾಲಮಾನ. ಇಂತಹ ಬದಲಾವಣೆಯಲ್ಲಿ ಬದಲಾದ, ಬದಲಾಗುತ್ತಿರುವ ಆಚರಣೆಯ, ಪದ್ಧತಿಗಳ ಬಗ್ಗೆ ಕೆಲವರಿಲ್ಲಿ ಮಾತನಾಡಿದ್ದಾರೆ.

ADVERTISEMENT

*
ಎಲ್ಲರೂ ಒಟ್ಟಿಗೇ ಸೇರುವ ಸಂತಸ
ಹಬ್ಬ ಎಂದರೆ ಸ್ನೇಹಿತರ ಬಂಧು–ಬಳಗವೆಲ್ಲ ಒಟ್ಟಿಗೇ ಸೇರಿ ಸಂಭ್ರಮಿಸುವ ಒಂದು ನೆಪವಷ್ಟೇ. ಆ ಕಾರಣಕ್ಕೇ ಭಾರತೀಯ ಮನೆಗಳಲ್ಲಿ ಹಬ್ಬಗಳಿಗೆ ಒಂದು ವಿಶೇಷ ಸ್ಥಾನವಿದೆ.

ಕಾಲ ಎಷ್ಟೇ ಬದಲಾದರೂ ಹಬ್ಬದ ಆಚರಣೆಯಲ್ಲಿ ಏನೇ ವ್ಯತ್ಯಾಸವಾದರೂ ಹಬ್ಬ ಎಂದೊಡನೆ ಮನದಲ್ಲಿ ಮನೆಮಾಡುವ ಖುಷಿ ಇದ್ದೇ ಇರುತ್ತದೆ.  ಮನೆಗೆ ತೋರಣ ಕಟ್ಟಿ, ದೊಡ್ಡ ರಂಗೋಲಿ ಬಿಡಿಸಿ, ಪೂಜೆ ಮುಗಿಸಿ, ಬೇವು–ಬೆಲ್ಲ ಮಾಡಿ ಮನೆ–ಮನೆಗೆ ಹಂಚಿ ಬಂದಾಗಲೇ ಮನಕ್ಕೆ ಸಮಾಧಾನ. ಸಂಜೆಯಾದರೂ ಒಬ್ಬರಾದ ಮೇಲೆ ಒಬ್ಬರು ಮನೆಗೆ ಬರಬೇಕು. ಎಲ್ಲರೊಂದಿಗೆ ಬೆರೆತು ನಲಿಯಬೇಕು ಎಂದು ಹಂಬಲಿಸುವ ಮನಕ್ಕೆ ಆಯಾಸದ ಚಿಂತೆ ಇರುವುದಿಲ್ಲ.
- ಲಲಿತಾ ದಿಲಿಪ್‌ಕುಮಾರ್‌, ದೇವಯ್ಯಾ ಪಾರ್ಕ್

*
ಆ ಹಬ್ಬದ ಗಮ್ಮತ್ತೇ ಬೇರೆ
ನಾವು ಚಿಕ್ಕೋರಿದ್ದಾಗ ನಮ್ಮೂರು ಧಾರವಾಡದಲ್ಲಿ ಆಚರಿಸುತ್ತಿದ್ದ ಯುಗಾದಿಗೂ ಇಂದು ಇಲ್ಲಿ ಆಚರಿಸುವ ಯುಗಾದಿಗೂ ಸಾಕಷ್ಟು ಅಂತರವಿದೆ. ಬೆಳ್ಳಂಬೆಳಿಗ್ಗೆ ಎದ್ದು, ಎಣ್ಣೆ ಸ್ನಾನ ಮುಗಿಸಿ, ಹೊಸ ಬಟ್ಟೆ ತೊಟ್ಟು, ಬೇವಿನ ಮರ–ಮಾವಿನ ಮರಗಳನ್ನೆಲ್ಲ ಸುತ್ತಿ, ಹಸಿರೆಲೆಗಳನ್ನು ತಂದು ತೋರಣ ಕಟ್ಟಿ, ಶಾವಿಗೆ ಪಾಯಸ ಸವಿಯುವ ಆ ಗಮ್ಮತ್ತೇ ಬೇರೆ ಇರುತ್ತಿತ್ತು.

ಈ ಮೆಟ್ರೊ ನಗರದಲ್ಲಿ ಹಬ್ಬದ ರೂಪವೂ ಬದಲಾಗಿದೆ. ಹಬ್ಬದಾಚರಣೆಯನ್ನು ಕೈಬಿಡಲು ಆಗುವುದಿಲ್ಲ. ಇಲ್ಲಿ ಏನಿದೆ, ಏನು ಸಿಗುತ್ತದೆ ಅದರಲ್ಲಿಯೇ ಹಬ್ಬ ಮಾಡಬೇಕು. ದುಡ್ಡು ಕೊಟ್ಟು ನಾಲ್ಕೆಲೆ ಮಾವಿನ ಎಲೆ ತಂದು ತೋರಣ ಕಟ್ಟಬೇಕು. ಪಾಯಸ ಮಾಡಿ, ಗಂಡ–ಮಕ್ಕಳೊಟ್ಟಿಗೆ ಕುಳಿತು ಉಣ್ಣುವುದಕ್ಕಷ್ಟೇ ಹಬ್ಬ ಸೀಮಿತವಾಗಿದೆ.
- ದೀಪಾ ಹೊಳಿಮಠ, ರಾಜಾಜಿನಗರ

*
ಸಂಬಂಧಗಳ ಅಂತರ...
ಆಗೆಲ್ಲ  ಚಿಕ್ಕ ಮಕ್ಕಳು, ಮನೆಯ ಹಿರಿಯರು, ಸ್ನೇಹಿತರು–ನೆಂಟರಿಷ್ಟರೆಲ್ಲ ಒಂದೇ ಮನೆಯಲ್ಲಿ ಸೇರಿ ಆಚರಿಸುತ್ತಿದ್ದ ಹಬ್ಬದ ಸಡಗರವೇ ಬೇರೆ. ಆಗ ಬಹುತೇಕ ಎಲ್ಲಾ ಮನೆಗಳಲ್ಲೂ ಅಂತಹ ತುಂಬು ಕುಟುಂಬದ ವಾತಾವರಣ ಕಾಣುತ್ತಿತ್ತು. ಈಗ ಹಾಗಿಲ್ಲ. ಸಂಬಂಧಗಳು ದೂರವಾಗುತ್ತಿವೆ. ಯಾರಿಗೂ ರಗಳೆ ಬೇಡ. ಅವರವರು ತಂತಮ್ಮ ಮನೆಗಳಲ್ಲಿಯೇ ಸಾಧಾರಣವಾಗಿ ಹಬ್ಬದ ಪದ್ಧತಿ ಮಾಡಿ ಮುಗಿಸಿ ಬಿಡುತ್ತಾರೆ.

ಮಕ್ಕಳೂ ದೊಡ್ಡವರಾದ ಮೇಲೆ ಸ್ನೇಹಿತರೊಂದಿಗೇ ಹೆಚ್ಚು ಸಮಯ ಕಳೆಯುತ್ತಾರೆ. ಹೀಗಾಗಿ ಅವರಲ್ಲೂ ಹಬ್ಬದ ಸಂಭ್ರಮ ಉಳಿದುಕೊಂಡಿಲ್ಲ.  ಹಾಗಂತ ನಾವು ಹಬ್ಬದಾಚರಣೆಯನ್ನು ಕೈಬಿಡಲಾಗದು. ಮನುಷ್ಯ ಸಂಬಂಧಗಳು ಸಡಿಲವಾಗುತ್ತಿರುವ ಈ ಸಮಯದಲ್ಲಿ ದೇವರೊಂದಿಗಿನ ಬಾಂಧವ್ಯವನ್ನು ಕಟ್ಟಿಗೊಳಿಸುವ ಆಶಯವಷ್ಟೇ. ಹೀಗಾಗಿ ನೆಂಟರ ಮನೆಗಳ ಬದಲು ದೇವಸ್ಥಾನಗಳಿಗೆ ಹೋಗುವುದೇ ಒಳ್ಳೆಯದು ಎನಿಸಿದೆ. ಕಾಲ ಬಂದಂತೆ ಹೋಗಬೇಕಲ್ಲವೇ?
- ರಾಣಿ ಶ್ರೀನಿವಾಸ್‌, ವಿಜಯನಗರ

*
ನೀರಿಲ್ಲದ ಹಬ್ಬ
ಈ ಬಾರಿಯ ಹಬ್ಬ ಯಾಕೋ ಪ್ರತಿ ಬಾರಿಗಿಂತ ಸಪ್ಪೆ ಅನಿಸುತ್ತಿದೆ. ಬಿಸಿಲಿನ ಜಳವೂ ಹೆಚ್ಚಿದೆ. ಮಾರುಕಟ್ಟೆಯಲ್ಲಿಯೂ ಅಷ್ಟೇನೂ ಸಂಭ್ರಮ ಕಾಣುತ್ತಿಲ್ಲ. ಹಬ್ಬದ ಮುನ್ನಾದಿನದ ಗಡಿಬಿಡಿ, ಸಡಗರ ಇಲ್ಲ. ಬೆಳಗಿನ ಹತ್ತು ಗಂಟೆಗೆಲ್ಲ ಸೂರ್ಯ ಕೆಂಡದುಂಡೆಯಾಗುತ್ತಾನೆ. ಮನೆಯಿಂದ ಆಚೆ ಹೋಗಲೂ ಆಗದ ಜಡತ್ವ. ಬೆಂಗಳೂರಿನಂತಹ ಮೆಟ್ರೊ ನಗರದಲ್ಲಿಯೂ ಕಾಡುತ್ತಿದೆ ನೀರಿನ ಸಮಸ್ಯೆ. ದಿನಬೆಳಗಾದರೆ ಮನೆ ಮುಂದೆ ಕಸ ಸಂಗ್ರಹಿಸುವ ಗಾಡಿ ಬರಲಿಲ್ಲ ಎನ್ನುವ ಚಿಂತೆ... ಇದೆಲ್ಲದರ ನಡುವೆ ಹಬ್ಬದ ಸಂಭ್ರಮ ಮರೆತಂತಾಗಿದೆ.
- ರಾಜೇಶ್ವರಿ, ಮಲ್ಲೇಶ್ವರ

*
ಪ್ರೀತಿ ವೃದ್ಧಿಸಿ
ಸಂಬಂಧಗಳನ್ನೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿಯಲ್ಲಿ  ನಾವಿದ್ದೇವೆ. ಈ ಹಬ್ಬ ಪರಸ್ಪರರಲ್ಲಿ ವಿಶ್ವಾಸ–ಪ್ರೀತಿಯನ್ನು ವೃದ್ಧಿಸುವಂತಹ ಆಚರಣೆಯಾಗಬೇಕು. ಕೆಲಸ-ಕಾರ್ಯದ ಕಾರಣದಿಂದಲೋ,  ಅಂತರದ ಕಾರಣದಿಂದಲೋ, ವೈಮನಸ್ಸಿನ ಕಾರಣದಿಂದಲೋ ಎಲ್ಲರೂ ಒಂದೆಡೆ ಸೇರುವುದೇ ಅಪರೂಪ.

ಸಂಬಂಧಗಳನ್ನೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿಯಲ್ಲಿ  ನಾವಿದ್ದೇವೆ. ಈ ಹಬ್ಬ ಪರಸ್ಪರರಲ್ಲಿ ವಿಶ್ವಾಸ–ಪ್ರೀತಿಯನ್ನು ವೃದ್ಧಿಸುವಂತಹ ಆಚರಣೆಯಾಗಬೇಕು. ಕೆಲಸ-ಕಾರ್ಯದ ಕಾರಣದಿಂದಲೋ,  ಅಂತರದ ಕಾರಣದಿಂದಲೋ, ವೈಮನಸ್ಸಿನ ಕಾರಣದಿಂದಲೋ ಎಲ್ಲರೂ ಒಂದೆಡೆ ಸೇರುವುದೇ ಅಪರೂಪ.
ಅಂತಹ ಸಂಬಂಧಗಳನ್ನು ಒಂದೆಡೆ ತಂದು ಪರಸ್ಪರರ ನಡುವೆ ಸ್ನೇಹ ಹೆಚ್ಚಿಸಲು ನೆಪವಾಗಬೇಕು ಈ ಹಬ್ಬ. ಎಲ್ಲೆಡೆ ಸಡಿಲವಾಗುತ್ತಿರುವ ಸಂಬಂಧಗಳನ್ನು ಈ ಯುಗಾದಿ ಗಟ್ಟಿಗೊಳಿಸಲಿ ಎನ್ನುವುದೇ ಆಶಯ.
- ಪೂರ್ಣಿಮಾ ನಂದಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.