ADVERTISEMENT

ರಂಗದ ಮೇಲೇ ತಾಲೀಮು!

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 19:30 IST
Last Updated 19 ಜೂನ್ 2012, 19:30 IST

ತಾಲೀಮು ನಡೆಸದೆ ನೃತ್ಯ ಪ್ರದರ್ಶನ ನೀಡಿದರೆ ಹೇಗಿರುತ್ತದೆ ಎನ್ನುವುದಕ್ಕೆ ಕಳೆದ ಶುಕ್ರವಾರ ಎ.ಡಿ.ಎ ರಂಗಮಂದಿರದಲ್ಲಿ ನಡೆದ ನೃತ್ಯಸಂಜೆ ಒಂದು ಉತ್ತಮ ಉದಾಹರಣೆ.

ವೇದಿಕೆಯಲ್ಲಿ ನಿಂತ ವಿದ್ಯಾರ್ಥಿಗಳು ಅತ್ತಿತ್ತ, ಸುತ್ತಮುತ್ತ ನೋಡುತ್ತ `ಹೇಗೆಹೇಗೋ~ ನರ್ತಿಸಿದರೆ, ಗಾಯಕ ಮತ್ತು ನಟ್ಟುವಾಂಗದವರು ವೇದಿಕೆಯಲ್ಲೇ ರಿಹರ್ಸಲ್ ನಡೆಸಿದರು. ಒಟ್ಟಿನಲ್ಲಿ ನೃತ್ಯ ಸಂಜೆ ಗೊಂದಲಮಯ ಸಂಜೆಯಾಗಿ ಕಳೆಯಿತು.

ಮೊದಲ ಬಾರಿಗೆ ವೇದಿಕೆ ಏರುವ ವಿದ್ಯಾರ್ಥಿಗಳಿಗೆ ಎಷ್ಟೇ ತಾಲೀಮು ನೀಡಿ, `ಈ ಸೈಡ್‌ವಿಂಗ್‌ನಿಂದ ಬಂದು, ಇಂತಹ ನಿರ್ದಿಷ್ಟ ಸ್ಥಳದಲ್ಲಿ ನಿಂತು, ಇದೇ ರೀತಿ ನರ್ತಿಸಿ, ಆ ಸೈಡ್‌ವಿಂಗ್‌ನಿಂದ ನಿರ್ಗಮಿಸಿ~ ಎಂದು ಹತ್ತಾರು ಬಾರಿ ಹೇಳಿದರೂ ತಪ್ಪು ಮಾಡುವುದು ಸಹಜ. ಅದು ಕ್ಷಮ್ಯ.

ಹಾಗೆಂದು ಪ್ರತಿಯೊಂದು ನೃತ್ಯದಲ್ಲೂ ತಪ್ಪುಗಳಾಗಬಾರದಲ್ಲವೆ? ಅಂತಹ ಹೆಚ್ಚಿನ ರಿಹರ್ಸಲ್ ದೊರೆತ ಯಾವ ಲಕ್ಷಣವೂ ಅಲ್ಲಿ ಕಂಡು ಬರಲಿಲ್ಲ. ಗುರುವೂ ಅಂದು ನರ್ತಿಸಿದ್ದು ಒಂದು ಕಾರಣ ಇರಬಹುದು.

ಮೊದಲಿನ ಕೌತ್ವಂನಿಂದಲೇ ವಿಘ್ನಗಳು ಆರಂಭವಾದವು. ಗಾಯಕ, ನಟ ಕಾರ್ತಿಕ್ ಹೆಬ್ಬಾರ್ `ಹೆಜ್ಜೆ ತಪ್ಪಿ~ ತಡವರಿಸಿದರು. ಆರಂಭದಲ್ಲಿ ವೇದಿಕೆಗೆ ಬಂದ ಇಬ್ಬರು ಪುಟಾಣಿಗಳು `ಓ ಈ ಲೈನಿಗಲ್ಲ... ಮುಂದಿನದ್ದಕ್ಕೆ ನಮ್ಮ ಎಂಟ್ರಿ~ ಎಂದು ಪುಸಕ್ಕನೆ ಒಳಗೋಡಿದರು. ಇಂತಹ ಎಡವಟ್ಟುಗಳು ಹಲವು ಬಾರಿ ಪುನರಾವರ್ತನೆಗೊಂಡವು.

ಪುಷ್ಪಾಂಜಲಿ, ಗಣೇಶ ಕೌತ್ವಂ, ತಿಶ್ರ ಅಲರಿಪು, ಯಾರೇ ರಂಗನ ಕರೆಯ ಬಂದವರು, ಸುಬ್ರಹ್ಮಣ್ಯ ಕೌತ್ವಂ, ಕೃಷ್ಣಾ ಬಾರೋ ರಂಗ ಬಾರೋ, ನಟೇಶ ಕೌತ್ವಂ ನೃತ್ಯಗಳನ್ನು ದಿಯಾ ನೃತ್ಯಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.

`ಪಾಪ... ಪುಟ್ಟ ಮಕ್ಕಳನ್ನೂ ಒಳಗೊಂಡ ವಿದ್ಯಾರ್ಥಿಗಳು. ಮೊದಲ ಬಾರಿ ವೇದಿಕೆ ಏರಿದ್ದರೆ...~ ಎಂದು ಸಹನೆಯಿಂದ ಕುಳಿತಿದ್ದ ಪ್ರೇಕ್ಷಕರಿಗೆ ಸವಾಲೆಸೆಯುವಂತಿದ್ದವರು ಅಂದಿನ ಕಾರ್ಯಕ್ರಮ ನಿರೂಪಕರು.

ಅವರ ನಿರೂಪಣೆಯ ಸ್ಯಾಂಪಲ್ ನೋಡಿ: `ಈ ಮಕ್ಕಳೆಲ್ಲ ಅದೆಷ್ಟು ಅದ್ಭುತವಾಗಿ ನರ್ತಿಸಿದರೆಂದರೆ ಇದನ್ನು ನೋಡಿದರೆ ಅವರ ಗುರುಗಳು, ಅವರ ಗುರುಗಳ ಗುರುಗಳು ಮತ್ತು ಅವರ ಗುರುಗಳ ಗುರುಗಳ ಗುರುಗಳು ಹೇಗೆ ನರ್ತಿಸಬಹುದು ಎಂದು ತಿಳಿಯುತ್ತದೆ....~ ಎಂದು ಅವರ ಗುರುಗಳು, ಅವರ ಗುರುಗಳ ಗುರುಗಳ ಸಾಧನೆಯನ್ನು ಪ್ರತಿಯೊಂದು ನೃತ್ಯದ ನಡುವೆ ಬಣ್ಣಿಸಿದರು. ಹಾಗೆ ನೋಡಿದರೆ ಆ ಮಕ್ಕಳ ಗುರು ಪರಂಪರೆಯವರೆಲ್ಲ ಉತ್ತಮ ಸಾಧನೆ ಮಾಡಿದ, ಒಳ್ಳೆಯ ಹೆಸರು ಮಾಡಿದ ಗೌರವಾನ್ವಿತ ಗುರುಗಳೇ.    

ಇದ್ದುದರಲ್ಲಿ ಸಮಾಧಾನ ತಂದಿದ್ದು ಆ ಮಕ್ಕಳ ಗುರು ರೋಹಿಣಿ ಧನಂಜಯ ಅವರ ನೃತ್ಯ. ಭರತನಾಟ್ಯ ಮತ್ತು ಸಮಕಾಲೀನ ನೃತ್ಯದಲ್ಲಿ ತರಬೇತಿ ಪಡೆದಿರುವ ರೋಹಿಣಿ ಅವರು ಪ್ರಸ್ತುತ ತಮ್ಮ ಸಹೋದರಿ ಶುಭಾಧನಂಜಯ ಅವರ ಬಳಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ.

ಗಂಭೀರ ನಾಟ ರಾಗ, ಮಿಶ್ರ ತ್ರಿಪುಟ ತಾಳದ ಮಲ್ಲಾರಿ ಮತ್ತು ಮಣ್ಣಿನ ಮಡಕೆಯ ಮಾಡುವ ವಿಶಿಷ್ಟ ಪೇರಿಣಿ ನೃತ್ಯ ಪ್ರದರ್ಶಿಸಿದ ರೋಹಿಣಿ ನೃತ್ತದಲ್ಲಿ ಬೆಳಗಿದರು. ಕಾರ್ಯಕ್ರಮದ ಮುಖ್ಯ ಭಾಗವಾಗಿ ಕೃಷ್ಣನ ಕುರಿತಾದ ವರ್ಣನೆ ಇರುವ ಅಠಾಣ ರಾಗ, ಆದಿ ತಾಳದ `ನೀ ನೆರೆ ನಮ್ಮಿ ನಾನುರ~ ವರ್ಣ ಪ್ರದರ್ಶಿಸಿದರು.
 
ವರ್ಣದಲ್ಲಿ ಸಂಚಾರಿ ಭಾವಕ್ಕೆ ವಿಪುಲ ಅವಕಾಶಗಳಿದ್ದರೂ- ಕಂಸ ವಧೆ, ಪೂತನಿ ಸಂಹಾರ, ರಾಸಲೀಲೆ, ಅರ್ಜುನನಿಗೆ ಗೀತೆಯ ಉಪದೇಶ, ಮಣ್ಣು-ಬೆಣ್ಣೆ ತಿಂದ ಪ್ರಸಂಗ ಇತ್ಯಾದಿ- ಒಂದೇ ಒಂದು ಅಂಶವನ್ನೂ ವಿಸ್ತರಿಸದೇ ಇದ್ದದ್ದು ಆಶ್ಚರ್ಯ ಎನಿಸಿತು. ಸಂಚಾರಿ ಭಾವಗಳಿಗೆ ಅವಕಾಶ ನೀಡಿದ್ದರೆ ವರ್ಣ ಇನ್ನೂ ಕೊಂಚ ಆಪ್ಯಾಯಮಾನವೆನಿಸುತ್ತಿತ್ತು.

ನೃತ್ಯಸಂಜೆಗೆ ರೋಹಿಣಿ ಅವರ ಗುರು, ಸಹೋದರಿ ಶುಭಾ ಧನಂಜಯ್ (ನಟುವಾಂಗ), ಲಿಂಗರಾಜು (ಮೃದಂಗ), ಎಚ್.ಎಸ್.ವೇಣುಗೋಪಾಲ್ (ಕೊಳಲು), ಅನಂತ ಸತ್ಯಮೂರ್ತಿ (ಪಿಟೀಲು) ಸಹಕಾರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.