
ನಮ್ಮೂರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಆನೆದೊಡ್ಡಿ. ಬೆಸುಗರಹಳ್ಳಿಯಲ್ಲಿ ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಸರಿಯಾಗಿ ಓದುತ್ತಿರಲಿಲ್ಲ. ಬಾಲ್ಯದಲ್ಲಿ ಮದುವೆ ಕಾರ್ಯ, ಮೈಕ್ ಸೆಟ್ ಹಾಕುವವರ ಜತೆ ಹೋಗುತ್ತಿದ್ದೆ. ಅಪ್ಪನಿಗೆ ಇದು ಸರಿ ಕಾಣಲಿಲ್ಲ. ಕುಂಬಾರರ ವೆಂಕಟಾಚಲ ಕುಂಬಾರಿಗೆ ಬಿಟ್ಟು ನಮ್ಮೂರಿಂದ ಬೆಂಗಳೂರು ಸೇರಿದ್ದ. ಮೂರು ತಿಂಗಳ ನಂತರ ಊರಿಗೆ ಬಂದಿದ್ದ.
‘ನಮ್ಮ ಹುಡುಗನದ್ದು ಎಸ್ಸೆಸ್ಸೆಲ್ಸಿ ಪಾಸಾಗಿದೆ. ಬೆಂಗಳೂರಿನಲ್ಲಿ ಒಂದು ಕೆಲಸ ಕೊಡಿಸು’ ಎಂದು ವೆಂಕಟಾಚಲನ ಜತೆ ಬೆಂಗಳೂರಿಗೆ ಕಳುಹಿಸಿದರು. ಬಸವನಗುಡಿಯ ಸುಜಾತ ಜಾಹೀರಾತು ಕಂಪೆನಿಯಲ್ಲಿ ರಸ್ತೆಗಳಲ್ಲಿ ಜಾಹೀರಾತು ಬೋರ್ಡು ಕಟ್ಟುವ ಕೆಲಸ.
ಬೆಂಗಳೂರು ಸರಿ ಬರಲಿಲ್ಲ. ರೇಷ್ಮೆ ಬೆಳೆಯೋಣ ಎಂದು ಊರಿಗೆ ಹೋದೆ. ದೊಡ್ಡಮ್ಮನ ಮಗ ಜಿ.ಪಿ.ಓನಲ್ಲಿ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಾಷ್‌ಬಾಯ್ ಕೆಲಸ ಮಾಡಲು ಅಲ್ಲಿ ನನ್ನನ್ನು ಸೇರಿಸಿದರು. ವಾರಕ್ಕೆ ಕೈಗಳಿಗೆಲ್ಲ ಗಾಯ. ನಂತರ ಅಲ್ಲಿ ಲಿಫ್ಟ್ ಆಪರೇಟರ್ ಕೆಲಸಕ್ಕೆ ಸೇರಿದೆ. ನಮ್ಮಣ್ಣ ಜಿ.ಪಿ.ಓ ಮುಂದೆ ಸಣ್ಣ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದ.
ನನಗೆ ಕಾಫಿ– ಟೀ ಮಾರುವುದನ್ನು ಕಲಿಸಿದ. ಸಂಜೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಶೂ ಲೇಸ್ ಮಾರಾಟ ಮಾಡುತ್ತಿದ್ದೆ. ಆ ಸಮಯಲ್ಲಿ ಮಂಜುಪಿಳ್ಳೆ ಮತ್ತು ರಾಜೇಂದ್ರನ್ ಎಂಬುವವರು ಜಿ.ಪಿ.ಓನಲ್ಲಿ ಅಧಿಕಾರಿಗಳಾಗಿದ್ದರು. ನನಗೆ ಒಂದು ಕೆಲಸ ಕೊಡಿ ಎಂದೆ. ಎಸ್ಸೆಸ್ಸೆಲ್ಸಿ ಮೆರಿಟ್ ಮೇಲೆ ಗ್ರಾಮೀಣ ಡಾಕ್ ಸೇವಕ್ ಕೆಲಸ ಕೊಟ್ಟರು. ಐದು ವರುಷಗಳ ನಂತರ ಪರೀಕ್ಷೆ ಬರೆದು ಅಂಚೆ ಪೇದೆ ಆದೆ. ಮದುವೆಯೂ ಆಯಿತು.
ಜಿ.ಪಿ.ಓ. ಸಂಬಳದಿಂದ ಬದುಕು ನಡೆಯುತ್ತಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೂ ಕಚೇರಿ ಕೆಲಸ. ಸಂಜೆಯ ಬಿಡುವಿನಲ್ಲಿ ಮತ್ತೇನಾದರೂ ಮಾಡಬೇಕು ಎನ್ನುವ ಹುಮ್ಮಸ್ಸು. ಸಿನಿಮಾ ನಟರು ಕಲಾಕ್ಷೇತ್ರದಲ್ಲಿ ಸಿಗುತ್ತಾರೆ ಎಂದು ಸ್ನೇಹಿತರಲ್ಲಿ ಕೆಲವರು ಹೇಳಿದರು. ನಾನು, ಸ್ನೇಹಿತ ಪಂಚಾಕ್ಷರಿ ಮತ್ತಿತರರು ಕಲಾಕ್ಷೇತ್ರಕ್ಕೆ ಬಂದೆವು. ‘ಮುದುಕನ ಮದುವೆ’ ನಾಟಕ ನಡೆಯುತ್ತಿತ್ತು.
ಜಯಮ್ಮ ಎನ್ನುವ ಸಂಘಟಕರನ್ನು ಭೇಟಿ ಮಾಡಿ ನಾವು ನಾಟಕ ಮಾಡಬೇಕು ಎಂದೆವು. ಸಿಜಿಕೆ ಅವರ ಬಳಿ ಕರೆದುಕೊಂಡು ಹೋದ ಅವರು, ‘ಸರ್ ಈ ಹುಡುಗರು ನಾಟಕ ಮಾಡಬೇಕಂತೆ’ ಎಂದರು. ಆಗ ನಮ್ಮ ಬಗ್ಗೆ ಸಿಜಿಕೆ ವಿಚಾರಿಸಿದರು. ಸಿಜಿಕೆಗೆ ನನ್ನನ್ನು ಹತ್ತಿರವಾಗಿಸಿದ್ದು ಕಲಾವಿದರಾದ ಮುರುಡಯ್ಯ. ಸಿಜಿಕೆ ಹೊರಗೆ ಪ್ರಯಾಣ ಬೆಳೆಸಿದರೆ ಜತೆಯಲ್ಲಿ ಒಬ್ಬ ಹುಡುಗ ಬೇಕಿತ್ತು. ‘ನೀನು ರಜೆ ಹಾಕಿ ನನ್ನ ಜತೆ ಬರುತ್ತಿಯಾ?’ ಎಂದರು. ಮೊದಲ ಸಲ ಸಾಣೆಹಳ್ಳಿಗೆ ಕರೆದುಕೊಂಡು ಹೋದರು.
ಎಂ.ಪಿ. ಪ್ರಕಾಶ್ ಸೇರಿದಂತೆ ದೊಡ್ಡ ದೊಡ್ಡ ಜನರ ಬಳಿಗೆ ಕರೆದುಕೊಂಡು ಹೋದಾಗ, ‘ಇವರು ನನ್ನ ಸ್ನೇಹಿತ ಚಂದ್ರು’ ಎಂದು ಪರಿಚಯಿಸುತ್ತಿದ್ದರು. ಅದು ನನಗೆ ಹೆಚ್ಚು ಖುಷಿಕೊಡುತ್ತಿತ್ತು. ‘ರಂಗನಿರಂತರ’ರ ಉಸ್ತುವಾರಿಗೆ ನೇಮಿಸಿದರು. ಸಂಘಟನೆಯನ್ನು ಹೇಗೆ ಮತ್ತು ಯಾವ ರೀತಿ ಬೆಳೆಸಬೇಕು. ಸಾಹಿತಿಗಳನ್ನು ಹೇಗೆ ಕರೆಯಬೇಕು ಇತ್ಯಾದಿ ಹಲವು ವಿಷಯಗಳನ್ನು ಕಲಿಸಿದರು. ಕೆಲವು ನಾಟಕಗಳಲ್ಲಿ ಬಣ್ಣವನ್ನೂ ಹಚ್ಚಿದೆ. ಆದರೆ ಸಂಘಟನೆ ಮೇಲೆ ಹೆಚ್ಚು ಆಸಕ್ತಿ. ನನಗೆ ಒಂದು ಐಡೆಂಟಿಟಿ ಇದೆ ಎಂದರೆ ಅದರ ಪೂರ್ಣ ಪಾಲು ಸಿಜಿಕೆ ಅವರಿಗೆ.
ನನಗೆ ಜಿ.ಪಿ.ಓ ಚಂದ್ರು ಎಂದು ಹೆಸರು ಇಟ್ಟಿದ್ದು ಸಿಜಿಕೆ. ‘ಆನೆದೊಡ್ಡಿ ಸಣ್ಣಯ್ಯ ಚಂದ್ರಶೇಖರ್ ಹೆಸರು ದೊಡ್ಡದಾಯಿತು. ಇದು ಬೇಡ. ನೀನು ಇನ್ನು ಮುಂದೆ ಜಿಪಿಓ ಚಂದ್ರು’ ಎಂದು ಹೆಸರು ಇಟ್ಟರು. ಮುಂದಿನ ದಿನಗಳಲ್ಲಿ ನಾಟಕಗಳ ಆಹ್ವಾನ ಪತ್ರಿಕೆಯಲ್ಲಿ ಜಿಪಿಓ ಚಂದ್ರು ಎಂದು ಅವರೇ ಮುದ್ರಿಸಿದರು. ಬೆಂಗಳೂರಿನ ಸುಮಾರು 100ಕ್ಕೂ ಹೆಚ್ಚು ತಂಡಗಳ ಹೆಸರು–ವಿಳಾಸ–ಹಿನ್ನೆಲೆ ನನಗೆ ತಿಳಿದಿದೆ.
ಹಲವು ತಂಡಗಳಿಗೆ ನನ್ನ ಕೈಯಲ್ಲಾದ ಕೆಲಸ ಮಾಡಿಕೊಟ್ಟಿದ್ದೇನೆ. ಎಲ್ಲ ಸಂಘಟನೆಗಳವರೂ ಪ್ರೀತಿಯಿಂದ ಕರೆಯುತ್ತಾರೆ. ಇಂಥವರು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ನನ್ನ ಸಂಪರ್ಕದಲ್ಲಿರುವವರಿಗೆ ಮೆಸೇಜ್ ಮಾಡುವೆ, ಪತ್ರ ಬರೆಯುವೆ. ಟಿಕೆಟ್ ಕೌಂಟರ್ ನೋಡಿಕೊ, ವೇದಿಕೆ ನೋಡಿಕೋ, ಸಭಾಂಗಣ ನಿರ್ವಹಣೆ ಮಾಡು, ಕಲಾವಿದರನ್ನು ಕರೆದುಕೊಂಡು ಬಾ, ಅತಿಥಿಗಳ ಸತ್ಕಾರ ಮಾಡು ಹೀಗೆ ಯಾವುದೇ ತಂಡ ಏನೇ ಕೆಲಸ ನಿರ್ವಹಿಸಿದರೂ ಮಾಡಿದ್ದೇನೆ.
ವಸ್ತ್ರವಿನ್ಯಾಸ, ರಂಗಪರಿಕರಗಳು ಎಲ್ಲಿ ಸಿಕ್ಕುತ್ತವೆ, ಎಷ್ಟು ಬೆಲೆ ಹೀಗೆ ಹಲವು ವಿಷಯಗಳ ಬಗ್ಗೆಯೂ ಸಂಪರ್ಕಿಸಿದ್ದಾರೆ. ಪ್ರಾಮಾಣಿಕ ಕೆಲಸ ಮಾಡಿದ್ದರಿಂದಲೇ ಇಲ್ಲಿವರೆಗೂ ಗುರ್ತಿಸಿ ತಮ್ಮ ಚಟುವಟಿಕೆಗಳಲ್ಲಿ ನೆರವಾಗುವಂತೆ ಬಹಳಷ್ಟು ಮಂದಿ ಕೇಳುತ್ತಿರುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಘಟನೆಗಳು ನಿಗದಿತ ಹಣವನ್ನು ಪ್ರಚಾರಕ್ಕೆ ನೀಡುವರು.
ಆ ಹಣದಲ್ಲಿ ಆಹ್ವಾನ ಪತ್ರಿಕೆ ಕಳುಹಿಸಲಾಗುತ್ತದೆ. ಆಹ್ವಾನ ಪತ್ರಿಕೆಯ ಜತೆಗೆ ಒಂದು ಪತ್ರವನ್ನೂ ಬರೆಯುವೆವು. ಅಂತಿಮವಾಗಿ ಎಷ್ಟು ಹಣ ಯಾವುದಕ್ಕೆ ವೆಚ್ಚವಾಯಿತು ಎಂದು ಕಾಸು–ಕಾಸಿನ ಲೆಕ್ಕವನ್ನು ನೀಡುವೆ. ಈ ವಿಷಯದಲ್ಲಿ ಶಿಸ್ತು ಉಳಿಸಿಕೊಂಡಿರುವ ಕಾರಣಕ್ಕೆ ಎಲ್ಲರೂ ಇವ ನಮ್ಮವ ಇವ ನಮ್ಮವ ಎನ್ನುವಂತೆ ತಮ್ಮ ಕಾರ್ಯಕ್ರಮಗಳಲ್ಲಿ ಒಬ್ಬನನ್ನಾಗಿಸಿಕೊಳ್ಳುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.