ADVERTISEMENT

ರಸ್ತೆಗೆ ರಾಮಚಂದ್ರ ರಾವ್ ಹೆಸರು

ಪ್ರೊ.ಮೈ.ವಿ.ಸು
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST
ರಸ್ತೆಗೆ ರಾಮಚಂದ್ರ ರಾವ್ ಹೆಸರು
ರಸ್ತೆಗೆ ರಾಮಚಂದ್ರ ರಾವ್ ಹೆಸರು   

ನಾಡಿನ ಸಂಗೀತಗಾರರಲ್ಲಿ ಚಿಂತಲಪಲ್ಲಿ ರಾಮಚಂದ್ರ ರಾವ್ ಪ್ರಮುಖರು. ಗಾಯಕ, ಬೋಧಕರಾಗಿ ಅವರು ಗಣ್ಯ ಸೇವೆ ಸಲ್ಲಿಸಿದ್ದಾರೆ. ರಾಯರು ನಾಡಿನ ಹಿರಿಯ ಸಂಗೀತ ಮನೆತನಕ್ಕೆ ಸೇರಿದವರು.

ಅವರ ಪೂರ್ವಿಕರಲ್ಲಿ `ಸಂಗೀತರಾಯ~ ತಿಮ್ಮಣ್ಣ ಅನೇಕ ಗೌರವಗಳಿಗೆ ಪಾತ್ರರಾದವರಾದರೆ, ಗವಿ ರಂಗಪ್ಪನವರು ಹಲವು ಕೃತಿಗಳನ್ನು ರಚಿಸಿದ್ದಾರೆ.
 
ತಮ್ಮ ತಂದೆ ವೆಂಕಟರಾಯರಿಂದ ಕಲಿತದ್ದಲ್ಲದೆ ಪಾಲ್‌ಘಾಟ್ ಸೋಮೇಶ್ವರ ಭಾಗವತರು ಮತ್ತು ಪೊನ್ನಯ್ಯ ಪಿಳ್ಳೆ ಅವರಿಂದಲೂ ಮಾರ್ಗದರ್ಶನ ಪಡೆದ ರಾಮಚಂದ್ರರಾಯರು ಚಿಕ್ಕ ಪ್ರಾಯದಲ್ಲೇ ಖ್ಯಾತಿ ಗಳಿಸಿದವರು.

ಒಮ್ಮೆ ರಾಯರ ಒಂದು ಕಛೇರಿಯ ವಿಮರ್ಶೆಯನ್ನು ಮಹಾರಾಜ ನಾಲ್ವಡಿ ಕಷ್ಣರಾಜ ಒಡೆಯರು `ದಿ ಹಿಂದು~ ಪತ್ರಿಕೆಯಲ್ಲಿ ಓದಿದ್ದರು. ಆ ಹಾಡುಗಾರಿಕೆಯನ್ನು ಬಹುವಾಗಿ ಪ್ರಶಂಶಿಸಿದ್ದನ್ನು ಓದಿ, ಕುತೂಹಲಗೊಂಡು, ರಾಯರನ್ನು ಅರಮನೆಗೆ ಆಹ್ವಾನಿಸಿದರು.

ಸ್ವತಃ ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದ ನಾಲ್ವಡಿಯವರನ್ನು ಮೆಚ್ಚಿಸುವುದು ಸುಲಭದ ಮಾತಾಗಿರಲಿಲ್ಲ. ರಾಯರ ಮಧುರವಾದ ಕಂಠ, ಮಿಂಚಿನ ತಾಜಾ ಸಂಗತಿಗಳು, ಆಕರ್ಷಕ ಬಿರ್ಕಾಗಳು ಮಹಾರಾಜರ ಅಪಾರ ಮೆಚ್ಚುಗೆ ಪಡೆದವು. ನಿಗದಿತ ಸಮಯಕ್ಕಿಂತ ಮೂರ್ಮಡಿ ಹೆಚ್ಚು ಹೊತ್ತು ಮಹಾರಾಜರು ಸಂಗೀತ ಕೇಳಿದ್ದೇ ಒಂದು ದಾಖಲೆ.

ಅದರಿಂದ 16ರ ಪ್ರಾಯದಲ್ಲೇ ಚಿಂತಲಪಲ್ಲಿ ರಾಮಚಂದ್ರ ರಾಯರು ಆಸ್ಥಾನ ವಿದ್ವಾಂಸರಾದರು. ತಂದೆ (ವೆಂಕಟರಾಯರು) ಮತ್ತು ಮಗ (ರಾಮಚಂದ್ರ ರಾಯರು) ಇಬ್ಬರ ಗಾಯನವೂ ಅರಮನೆಯಲ್ಲಿ ನಡೆಯಿತು. ಪ್ರಭು ವಿಶೇಷ ಮರ್ಯಾದೆಯನ್ನೂ ಮಾಡಿದರು.

ರಾಜ್ಯದ ಪ್ರಮುಖ ಸಭೆ, ಸಮ್ಮೇಳನಗಳಲ್ಲಿ ಹಾಡಿದ ರಾಮಚಂದ್ರರಾಯರ ಕಾರ್ಯಕ್ರಮಗಳು ದಕ್ಷಿಣ ಭಾರತದಾದ್ಯಂತ ನಡೆದವು. ಅವರ ಹಾಡುಗಾರಿಕೆಯ ಗ್ರಾಮಫೋನ್ ಪ್ಲೇಟ್ ಸಹ ಆ ಕಾಲಕ್ಕೇ ಹೊರಬಂದಿತು. ಬೋಧಕರಾಗಿ ಅನೇಕರಿಗೆ ವಿದ್ಯಾಭ್ಯಾಸವನ್ನೂ ಮಾಡಿಸಿದರು.

ವಿದ್ಯೆ, ಸೇವೆಗಳನ್ನು ಮನ್ನಿಸಿ ರಾಮಚಂದ್ರ ರಾಯರಿಗೆ ಅನೇಕ ಗೌರವ-ಪ್ರಶಸ್ತಿಗಳೂ ಸಂದವು. ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ `ಸಂಗೀತ ಕಲಾರತ್ನ~ ಬಿರುದಿಗೂ ಅವರು (1977) ಭಾಜನರಾದರು.

ಮೈಸೂರು ಪ್ರದೇಶ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1969), ತ್ಯಾಗರಾಜ ಗಾನಸಭೆಯ `ಕಲಾಭೂಷಣ~ ಅವುಗಳಲ್ಲಿ ಪ್ರಮುಖವಾದವು. 1985ರಲ್ಲಿ ಸರಸ್ವತಿಯ ಪಾದಾರವಿಂದವನ್ನು ಸೇರಿದ ರಾಮಚಂದ್ರ ರಾಯರು ಸಂಗೀತ ಸಾಧಕರಿಗೆ ಎಂದೂ ಸ್ಫೂರ್ತಿದಾತರು.

ಇದೀಗ ಅವರು ವಾಸವಾಗಿದ್ದ ಬೀದಿಗೆ `ಚಿಂತಲಪಲ್ಲಿ ರಾಮಚಂದ್ರರಾವ್ ರಸ್ತೆ~ ಎಂದು ನಾಮಕರಣವಾಗುತ್ತಿರುವುದು ಅಭಿನಂದನೀಯ.


-

ಚಿಂತಲಪಲ್ಲಿ ರಾನಚಂದ್ರರಾವ್ ಸ್ಮಾರಕ ಸಮಿತಿ: ಭಾನುವಾರ ಪೂರ್ಣಕುಂಭ ಸ್ವಾಗತ, ಚಿಂತಲಪಲ್ಲಿ ರಾಮಚಂದ್ರರಾವ್ ರಸ್ತೆ ನಾಮಕರಣ ಸಮಾರಂಭ ಮತ್ತು ಸಭಾ ಕಲಾಪ ಸಂಗೀತ ಕಲಾ ರತ್ನವೇದಿಕೆ. ನಾಮಫಲಕದ ಅನಾವರಣ- ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಣ್, ಅತಿಥಿಗಳು- ಸುಬ್ಬನರಸಿಂಹ, ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ, ಎಸ್.ಹರೀಶ್.
ಸ್ಥಳ: ನಂ 73 (ಹೊಸ ನಂ 16), 4ನೇ ಅಡ್ಡ ರಸ್ತೆ, ಈಜುಕೊಳ ಬಡಾವಣೆ, ಮಲ್ಲೇಶ್ವರಂ,  ಬೆಳಿಗ್ಗೆ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT