ADVERTISEMENT

ರಾಮಭಕ್ತಿಯ ಪುಷ್ಪಕ್ಕೆ ಸಂಗೀತದ ಸುಗಂಧ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ರಾಮಸೇವ ಮಂಡಳಿ ಸಂಗೀತೋತ್ಸವದಲ್ಲಿ ಜನಸ್ತೋಮ
ರಾಮಸೇವ ಮಂಡಳಿ ಸಂಗೀತೋತ್ಸವದಲ್ಲಿ ಜನಸ್ತೋಮ   

ಭಕ್ತಿಗೂ ಸಂಗೀತಕ್ಕೂ ಹೂವಿಗೂ ಸುಗಂಧಕ್ಕೂ ಇರುವ ಸಂಬಂಧ. ಭಕ್ತಿಯೆಂಬ ಪುಷ್ಪದಲ್ಲಿ ಅರಳುವ ಮನಕ್ಕೆ ಸಂಗೀತದ ಸುಗಂಧ ಬೆರೆತಾಗ ದೊರೆಯುವ ಸುಖ ಅನನ್ಯ. ಅಂಥ ಅನನ್ಯ ಸುಖದ ಸಂಗೀತಸುಧೆ ಹರಿಸುತ್ತಿರುವ ಚಾಮರಾಜಪೇಟೆಯ ಶ್ರೀರಾಮಸೇವಾ ಮಂಡಲಿಯ ಶ್ರೀರಾಮನವಮಿ ಸಂಗೀತೋತ್ಸವಕ್ಕೆ ಈಗ 80ರ ಸಂಭ್ರಮ.

ಯುಗಾದಿ ಹಬ್ಬ ವಸಂತೋತ್ಸವಕ್ಕೆ ಮುನ್ನುಡಿ ಬರೆದರೆ ಶ್ರೀರಾಮನವಮಿ ಸಂಗೀತೋತ್ಸವಕ್ಕೆ ಮುನ್ನುಡಿ ಬರೆಯುತ್ತದೆ. ಯುಗಾದಿಯ ಹಬ್ಬದೂಟ ಒಂದು ದಿನದಲ್ಲಿ ಮುಗಿದರೆ, ನವಮಿಯ ಸಂಗೀತದೂಟ ತಿಂಗಳಿಡೀ ನಡೆಯುತ್ತದೆ. ವಸಂತ ಋತುವಿನಲ್ಲಿ ಮಾವಿನ ಎಳೆಚಿಗುರು ತಿಂದು ಹಾಡುವ ಕೋಗಿಲೆಗೂ ಅಪ್ಯಾಯಮಾನ ರಾಮನವಮಿಯ ಈ ಸಂಗೀತೋತ್ಸವ. ಅಂಥ ನೂರಾರು ಹಾಡು ಕೋಗಿಲೆಗಳಿಗೆ ರಾಮನವಮಿ ಎನ್ನುವುದು ಸಂಗೀತದ ರಸದೂಟ ಬಡಿಸಲು ಇರುವ ವೇದಿಕೆ. ಒಂದು ತಿಂಗಳು ನಡೆಯುವ ಉತ್ಸವದಲ್ಲಿ ಸಂಗೀತಪ್ರಿಯರು ನಾದಲೋಕದಲ್ಲಿ ಮುಳುಗಿ ಏಳುತ್ತಾರೆ.

ಈ ಬಾರಿ ನಡೆಯಲಿರುವ ಕೋಟೆ ಮೈದಾನದ ರಾಮನವಮಿ ಸಂಗೀತೋತ್ಸವಕ್ಕೆ 80ರ ಸಂಭ್ರಮ. ಮಾರ್ಚ್ 25ರಿಂದ ಆರಂಭವಾಗುವ ಸಂಗೀತೋತ್ಸವ ಏಪ್ರಿಲ್ 24ರತನಕ ನಡೆಯಲಿದೆ.

ADVERTISEMENT

1939ರಲ್ಲಿ ಎಸ್‌.ವಿ. ನಾರಾಯಣಸ್ವಾಮಿ ರಾವ್‌ ಅವರಿಂದ ಸಣ್ಣಮಟ್ಟದಲ್ಲಿ ಆರಂಭವಾದ ‘ಶ್ರೀ ರಾಮಸೇವಾ ಮಂಡಳಿ’ ಇಂದು ‘ಅತಿದೊಡ್ಡ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವಗಳಲ್ಲಿ ಒಂದಾದ ‘ರಾಮನವಮಿ ಸಂಗೀತೋತ್ಸವ’ ಆಚರಿಸುವ ಮಟ್ಟಕ್ಕೆ ಬೆಳೆದಿದೆ. 80ರ ಸಂಭ್ರಮದಲ್ಲಿರುವ ಸಂಗೀತೋತ್ಸವ ಈ ಬಾರಿ ಜಾಗತಿಕಮಟ್ಟದಲ್ಲೂ ತನ್ನ ಸಂಗೀತಸುಧೆ ಸಾದರಪಡಿಸುತ್ತಿರುವುದು ವಿಶೇಷ.

‘80ನೇ ರಾಮನವಮಿ ಅಂತರರಾಷ್ಟ್ರೀಯ ಸಂಗೀತೋತ್ಸವದ ಸಭಾಂಗಣ ನಿರ್ಮಾಣಕ್ಕೆ ಈಗಾಗಲೇ ಕೋಟೆ ಪ್ರೌಢಶಾಲಾ ಮೈದಾನದಲ್ಲಿ ಭೂಮಿಪೂಜೆ ನಡೆದಿದೆ. ಇಲ್ಲಿ 6,000 ಜನರಿಗೆ ಆಸನ ವ್ಯವಸ್ಥೆ ಹೊಂದಿರುವ ಅತ್ಯಾಧುನಿಕ ತಾತ್ಕಾಲಿಕ ಸಭಾಂಗಣ ನಿರ್ಮಿಸಲಾಗುವುದು’ ಎನ್ನುತ್ತಾರೆ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ವರದರಾಜ್‌.

ಮಾರ್ಚ್‌ 29ರಂದು ಶ್ರೀರಾಮನವಮಿ ಸಂಸ್ಥಾಪನಾ ದಿನ ಆಚರಿಸಲಾಗುವುದು. ಇದರಲ್ಲಿ 80ನೇ ವರ್ಷದ ನೆನಪಿಗಾಗಿ ಡಾ.ಮೈಸೂರು ಮಂಜುನಾಥ್ ಅವರ ನೇತೃತ್ವದಲ್ಲಿ 80 ಸಂಗೀತ ವಿದ್ವಾಂಸರ ಸಂಗೀತ ಸಮ್ಮಿಲನ ನಡೆಯಲಿದೆ. ಈ ಬಾರಿ ಬಾಂಬೆ ಸಹೋದರಿಯರಾದ ಸರೋಜಾ ಮತ್ತು ಲಲಿತಾ ಅವರಿಗೆ ಎಸ್.ವಿ.ನಾರಾಯಣಸ್ವಾಮಿ ರಾಷ್ಟ್ರೀಯ ಪ್ರಶಸ್ತಿ ನೀಡಲಿದ್ದೇವೆ. ಯುವಜನರಿಗಾಗಿ ಯುವ ಸಂಗೀತ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಚಿಣ್ಣರಿಗೆ ಪ್ರತಿಭಾ ಕಾರಂಜಿಯಲ್ಲಿ ಸಂಗೀತ ಸ್ಪರ್ಧೆಯೂ ನಡೆಯಲಿದೆ. ರಾಮನವಮಿಯಲ್ಲಿ ಕಿರಿಯರಿಂದ ಹಿರಿಯರ ತನಕ ಸಂಗೀತ ರಸಪಾಕವೇ ಹರಿಯಲಿದೆ. ಇಂಥ ಸಿಹಿ ಸಂಗೀತ ಪಾಕವನ್ನು ಸಾವಿರಾರು ಸಹೃದಯರು ಸವಿಯಲ್ಲಿದ್ದಾರೆ ಎನ್ನುತ್ತಾರೆ ಅವರು.

ಅಷ್ಟೇ ಅಲ್ಲ ಈ ಬಾರಿ ಸಂಗೀತೋತ್ಸವ ಜಾಗತಿಕ ಮಟ್ಟದಲ್ಲಿ ನಡೆಯಲಿದ್ದು ಅದಕ್ಕಾಗಿ live.ramanavami.org ಜಾಲತಾಣದಲ್ಲಿ ವಿಶ್ವದ 120 ರಾಷ್ಟ್ರಗಳಿಗೆ ಲೈವ್ ಸಿಗಲಿದೆ. ಸಾಕಷ್ಟು ಕಾರ್ಯಕ್ರಮಗಳ ಫೇಸ್‌ಬುಕ್‌ ಲೈವ್ ಸಹ ಇರುತ್ತದೆ.

ರಾಮೋತ್ಸವದ 80ನೇ ವರ್ಷದ ನೆನಪಿಗಾಗಿ ಮಾರ್ಚ್ 29ರಂದು ಸಂಜೆ 6.30ಕ್ಕೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ರಾಮನವಮಿ ಸಂಗೀತೋತ್ಸವ ಪರಂಪರೆ ಕುರಿತು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅತಿಥಿಗಳಾಗಿ ಬರುವ ನಿರೀಕ್ಷೆ ಇದೆ.

ಅಂದು ಲಕ್ಷ್ಮಣ್ ಮತ್ತು ತಂಡದವರಿಂದ ನಾದಸ್ವರ ಮತ್ತು ಗಣೇಶ್ ಮತ್ತು ಕುಮರೇಶ್‌ ಅವರಿಂದ ಪಿಟೀಲು ದ್ವಂದ್ವ ವಾದನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ವರದರಾಜ್.

ಈ ಬಾರಿಯ ಸಂಗೀತೋತ್ಸವದಲ್ಲಿ ತ್ರಿಚೂರ್ ಸಹೋದರರು, ಬಾಂಬೆ ಸಹೋದರಿಯರು, ಪಂಡಿತ್ ವಿಶ್ವಮೋಹನ್ ಭಟ್, ಪ್ರವೀಣ್ ಗೋಡ್ಖಿಂಡಿ, ಕೆ.ಜೆ. ಯೇಸುದಾಸ್, ಲಾಲ್ಗುಡಿ ಬಿ.ಜೆ.ಆರ್.ಕೃಷ್ಣನ್, ಲಾಲ್ಗುಡಿ ವಿಜಯಲಕ್ಷ್ಮಿ, ಎಂ.ಎಸ್.ಶೀಲಾ, ಮಲ್ಲಾಡಿ ಸಹೋದರರು, ವೆಂಕಟೇಶ ಕುಮಾರ್, ರೋನು ಮಜುಂದಾರ್, ಪ್ರಿಯಾ ಸಹೋದರಿಯರು, ಸಾಕೇತರಾಮನ್, ಟಿ.ಎಂ.ಕೃಷ್ಣ ಸೇರಿದಂತೆ 300ಕ್ಕೂ ಹೆಚ್ಚು ಸಂಗೀತ ಕಲಾವಿದರು ನಾದಸುಧೆ ಹರಿಸಲಿದ್ದಾರೆ.

ಟಿಕೆಟ್ ದರ: ₹300 ಹಾಗೂ ₹500. ಆನ್‌ಲೈನ್‌ನಲ್ಲೂ (www.ramanavamitickets.org) ಟಿಕೆಟ್‌ ಖರೀದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.