ADVERTISEMENT

ರಿಯಾಲಿಟಿ ಶೋ ಕ್ಷಣಿಕ ಸುಖ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ಕೆನೆ ಬಣ್ಣದ ಪೈಜಾಮ, ದಪ್ಪ ಅಂಚಿನ ಬಿಳಿ ಪಂಚೆ, ಕೆಂಪು ಶಲ್ಯ ಹೊದ್ದು ಕಾರ್ಯಕ್ರಮಕ್ಕೆ ನಲ್ವತ್ತೈದು ನಿಮಿಷ ಮುಂಚಿತವಾಗಿ ಬಂದು ಕುರ್ಚಿಯಲ್ಲಿ ಆಸೀನರಾದ ಹಿರಿಯ ಸಂಗೀತ ತಜ್ಞ ಪ್ರೊ.ಆರ್.ವಿಶ್ವೇಶ್ವರನ್ ಅವರನ್ನು ಕಂಡವರಿಗೆ ಅಚ್ಚರಿ.
 
ಸಂಗೀತದ ಮೇರು ಪರ್ವ ಇಷ್ಟೊಂದು ಸರಳ ಜೀವಿಯೇ ಎಂಬ ಪ್ರಶ್ನೆ ಸಹಜವಾಗಿಯೇ ಕಾಡಿತ್ತು. ವೇದಿಕೆಯ ಮುಂಭಾಗದ ಕುರ್ಚಿಯಲ್ಲಿ ಅಷ್ಟೇ ನಿರಾಳವಾಗಿ ಕುಳಿತ ಅವರ ಕಾಲಿಗೆ ಬಾಗಿ ಆಶೀರ್ವಾದ ಪಡೆದು ಬೆನ್ನು ನೇವರಿಸಿಕೊಳ್ಳುವ ತವಕ. 

ಮೂರು ದಶಕಗಳ ಕಾಲ ಮೈಸೂರಿನ ಲಲಿತಕಲಾ ಕಾಲೇಜಿನಲ್ಲಿ ವೀಣೆಯ ಪಾಠ ಹೇಳಿ, 64 ವರ್ಷ ಆಕಾಶವಾಣಿಯ `ಎ~ ದರ್ಜೆ ಕಲಾವಿದನಾಗಿ ದುಡಿದು, ಇದೀಗ 82ರ ಹರೆಯದಲ್ಲೂ ಸಂಗೀತ ಪ್ರೀತಿಗೆ ಸುಕ್ಕು ಬರದಂತೆ, ಮೀಟುವ ವೀಣೆಯ ತಂತಿಗೆ ತುಕ್ಕು ಬರದಂತೆ ಜತನದಿಂದ ಕಾಯ್ದವರು.
 
ಸಾಂಸ್ಕೃತಿಕ ನಗರಿ ಮೈಸೂರಿನಿಂದ ಉದ್ಯಾನನಗರಿಯ `ಆಕಾಶವಾಣಿ ಹಬ್ಬ~ ಉದ್ಘಾಟಿಸಲು ಬಂದಿದ್ದ ಅವರು ಮೆಟ್ರೋದೊಂದಿಗೆ ಹಂಚಿಕೊಂಡ ಕೆಲ ಮಧುರ ಕ್ಷಣಗಳು...

ನಿಮ್ಮ , ವೀಣೆಯ ಸಂಬಂಧ..

ಅಗಾಧ. ವರ್ಣನೆಗೆ ಮೀರಿದ್ದು. ನನಗೆ ಮಾನುಷ ಗುರುವಿಲ್ಲ. ದೇವಿ ಸರಸ್ವತಿಯೇ ನನ್ನ ಗುರು. ಆಕೆಯೇ ಬಂದು ನನ್ನ ಬೆರಳುಗಳಲ್ಲಿ ಕುಳಿತು ವೀಣೆ ನುಡಿಸುತ್ತಾಳೆ ಎಂಬ ನಂಬಿಕೆ ನನ್ನದು.
 
ನಾನು ವೀಣೆಯನ್ನು ಆಯ್ದುಕೊಂಡೆ ಎನ್ನುವುದಕ್ಕಿಂತ ಆಕೆ ನನ್ನನ್ನು ಸ್ವೀಕರಿಸಿದಳು ಎಂಬುದು ಹೆಚ್ಚು ಸೂಕ್ತ ಎನಿಸುತ್ತದೆ. ಕೆಲವರು ಪರಂಪರೆಯನ್ನು ಹಿಂಬಾಲಿಸುತ್ತಾರೆ, ನಾನು ಅದೇ ಪರಂಪರೆಯನ್ನು ಸೃಷ್ಟಿಸಲು ಬಯಸಿದೆ ಅಷ್ಟೇ.

ಗುರುವಿಲ್ಲದೆ ವೀಣೆ ಅಭ್ಯಾಸ...!

ಹೌದು. ನಾನು ಗಾಯನದಂತೆ ವೀಣಾ ವಾದನವೂ ಇರಲಿ ಎಂಬ ತತ್ವವನ್ನು ಪ್ರತಿಪಾದಿಸಿದವನು. ಮೈಸೂರು ಇಲ್ಲವೇ ಮದರಾಸು ಶೈಲಿಯನ್ನು ಒಪ್ಪಿಕೊಳ್ಳಲು ಸುತಾರಾಂ ಇಷ್ಟವಿರಲಿಲ್ಲ.

ಆಗ ಕೇಳುತ್ತಿದ್ದ ವಾದ್ಯಗಳಲ್ಲಿ ಮೀಟು ಹೆಚ್ಚಿದ್ದರೆ ಗಮಕ ಪ್ರಾಶಸ್ತ್ಯ ಕಳೆದುಕೊಳ್ಳುತ್ತಿತ್ತು. ಇದರ ಹೊರತಾದ ಸಂಗೀತ ಬೇಕು ಎಂಬುದು ನನ್ನ ಆಶಯವಾಗಿತ್ತು. ಮೊದಲ ಬಾರಿ ವೀಣೆ ಕೈಯಲ್ಲಿ ಹಿಡಿದಾಗ ರಾಗತಾಳಗಳ ಪಾಠವಾಗಿರಲಿಲ್ಲ.
 
ಒಂಬತ್ತನೇ ವಯಸ್ಸಿಗೆ ಮೊದಲ ಕಚೇರಿ ನೀಡಿದಾಗ ಸಾಂಪ್ರದಾಯಿಕ ಸಂಗೀತ ಜಗತ್ತಿನ ಅರಿವಿರಲಿಲ್ಲ. ಮೂರು ತಿಂಗಳ ಸ್ವಅಭ್ಯಾಸದ ಬಳಿಕ ಸತತ ಮೂರೂವರೆ ಗಂಟೆಗಳ ಕಛೇರಿ ನೀಡಿದ್ದೆ.

ಹೊಸ ಪ್ರಕಾರಕ್ಕೆ ದೊರೆತ ಪ್ರತಿಕ್ರಿಯೆ ಹೇಗಿತ್ತು...

ಯಾವುದೇ ಹೊಸ ಉತ್ಪನ್ನ ಮಾರುಕಟ್ಟೆಗೆ ಬಂದಾಗ ಸಿಗುವ ಪ್ರತಿಕ್ರಿಯೆಯಂತೆ ಸಾಕಷ್ಟು ಟೀಕೆ ಬಂದಿತ್ತು. ಈತ ಹಳೆ ತಲೆಮಾರಿನ ಪದ್ಧತಿಯೊಂದಿಗೆ ಆ ಶ್ರಮವನ್ನೆಲ್ಲಾ ಮೂಲೆಗುಂಪು ಮಾಡುತ್ತಿದ್ದಾನೆ ಎಂಬ ಆರೋಪವೂ ಇತ್ತು.
 
ಆದರೆ ಮನಸ್ಸಿನೊಳಗೆ ಅವರಿಗೂ ಮೆಚ್ಚುಗೆ ಇತ್ತು. ವೀಣಾ ವಾದನಕ್ಕೆ ಹೊಸ ರೂಪ ಕೊಡಬೇಕೆಂಬ ತುಡಿತ ಅವರಲ್ಲೂ ಇತ್ತು. ಹೀಗೆ ಮಿಶ್ರ ಪ್ರತಿಕ್ರಿಯೆಯೇ ದೊರೆಯಿತು.

ಇಂದಿನ ಸಂಗೀತಾಭ್ಯಾಸಿಗಳಲ್ಲಿ ಶ್ರದ್ಧೆ ಕಡಿಮೆಯಾಗುತ್ತಿದೆಯೇ?

ಎಳೆವಯಸ್ಸಿನವರೂ ವೇದಿಕೆ ಏರಿ ಹಿರಿಯರಿಗಿಂತ ಕಡಿಮೆಯಿಲ್ಲ ಎಂಬ ಸಾಧನೆ ತೋರಿದಾಗ ಇಂತಹ ಆಪಾದನೆಗಳು ಬರುವುದು ಸಾಮಾನ್ಯ. ನಾನು ಮೊದಲು ಕಛೇರಿ ನೀಡಿದ್ದು 9ನೇ ವರ್ಷದಲ್ಲಿ. 5ನೇ ವಯಸ್ಸಿನಿಂದಲೇ ಅಣ್ಣ ಸೀತಾರಾಂ ಅವರಿಂದ ಅಂಕುರಾರ್ಪಣೆ ಮಾಡಿದ್ದೆ.
 
ನಾನು ಕಂಡಂತೆ ನನ್ನ ಮುಂದಿನ ಮೂರು ತಲೆಮಾರುಗಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದರೆ ಶ್ರದ್ಧೆಗೆ ಬರ ಇದೆ. ಕಲೆಯ ಮೌಲ್ಯಗಳು ಅಷ್ಟೇ ಬಿಗಿಯಾಗಿ ಹಿಡಿಯುವ ಪರಿ ಇಂದಿನ ಜಮಾನದವರಲ್ಲಿ ಇಲ್ಲ.

ರಿಯಾಲಿಟಿ ಶೋಗಳಿಗಾಗಿ ಸಂಗೀತ ಕಲಿಯುವ ಪ್ರವೃತ್ತಿ ಬೆಳೆಯುತ್ತಿದೆಯೇ...
ಮುಖ್ಯವಾಗಿ ರಿಯಾಲಿಟಿ ಶೋ ಸಂಗೀತ ಕ್ಷೇತ್ರಕ್ಕೆ ಪ್ರವೇಶಿಸಲು ಅವಕಾಶ ನೀಡಿದ್ದೇ ತಪ್ಪು. ಆ ಬಳಿಕ ಅದನ್ನು ಶಾಸ್ತ್ರೀಯ ಪದ್ಧತಿಯೊಳಗೆ ತೂರಿಕೊಳ್ಳಲು ಬಿಟ್ಟದ್ದು ಮತ್ತೊಂದು ತಪ್ಪು.
 
ಅಲ್ಲಿ ವಿಜೃಂಭಿಸುವ ಮಂದಿ ಸಾರ್ವಜನಿಕ ವೇದಿಕೆಗಳಲ್ಲಿ ಕಂಗಾಲಾಗಿ ಸತ್ವ ಕಳೆದುಕೊಂಡು ಕೆಲ ದಿನಗಳಲ್ಲಿ ಮುಖ್ಯವಾಹಿನಿಯಿಂದ ದೂರ ಸರಿಯುತ್ತಾರೆ. ಇದು ತಾತ್ಕಾಲಿಕ ಸುಖಕ್ಕಷ್ಟೇ ಸೀಮಿತ. ಇನ್ನೊಂದರ್ಥಲ್ಲಿ ಇದು ಸಂಗೀತದ ಹೊಸ ಮಾರುಕಟ್ಟೆ ತಂತ್ರ.

ಆಕಾಶವಾಣಿ ನಿಮ್ಮ ಸಂಬಂಧದ ಬಗ್ಗೆ...

ಅದು ನನ್ನಂಥ ಹತ್ತಾರು ಕಲಾವಿದರ ತಾಯಿಬೇರು. ನನ್ನ ಆಕಾಶವಾಣಿ ನಂಟು 64 ವರ್ಷದ್ದು. ಬಾಲಪ್ರತಿಭೆಯಾಗಿ ಹಾಡಿದ್ದನ್ನೂ ಸೇರಿಸಿದರೆ 70 ವರ್ಷಕ್ಕೂ ಹಿಂದೆ ಸರಿಯಬೇಕಾಗುತ್ತದೆ.

ಆಕಾಶವಾಣಿ ಹರಿಕಾರ ಗೋಪಾಲಸ್ವಾಮಿ ನನ್ನ ಬದುಕಿನ ಹಾದಿಯನ್ನು ಬದಲಾಯಿಸಿದವರು. ಮೈಸೂರು ವಿವಿ ಮನಶ್ಶಾಸ್ತ್ರದ ಎಂ.ಎ.ಗೆ ಅರ್ಜಿ ಪಡೆಯಲು ಹೋಗಿದ್ದಾಗ ಇಂಡಾಲಿಜಿ ಓದುವಂತೆ ಸಲಹೆ ನೀಡಿದ್ದರು.

ಅಲ್ಲಿಂದ ಆರಂಭವಾದ ನನ್ನ ಆಕಾಶವಾಣಿ ನಂಟು ಇಂದಿನವರೆಗೂ ಮುಂದುವರೆದಿದೆ. ಧ್ವನಿಮುದ್ರಿಕೆ ಪ್ರಸಾರಕ್ಕಷ್ಟೇ ಸೀಮಿತವಾಗದೆ ಆಕಾಶವಾಣಿ ಮತ್ತಷ್ಟು ಕಲೆಗಾರರಿಗೆ ವೇದಿಕೆ ಕಲ್ಪಿಸಲಿ ಎಂಬ ಕಳಕಳಿ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.