ADVERTISEMENT

ರೂಂ ಯುವಕರ ಲಿಮ್ಕಾ ಸಾಹಸ

ಅಮಿತ್ ಎಂ.ಎಸ್.
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಕನ್ನಡದ ಹುಡುಗರ ಚಿತ್ರವೊಂದು ಸದ್ದಿಲ್ಲದೆ ಲಿಮ್ಕಾ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಮೂಡಿಸಿ ಬಂದಿದೆ. ಹಲವು ವೈಶಿಷ್ಟ್ಯಗಳ ಈ ಸಿನಿಮಾ ತಯಾರಾಗಿದ್ದು ರಾಜಾಜಿನಗರ 6ನೇ ಬ್ಲಾಕ್‌ನ ರೂಂ ಒಂದರಲ್ಲಿ. ಅಂದಹಾಗೆ ಚಿತ್ರದ ಹೆಸರು ಸಹ `ರೂಂ~. ಏಕೈಕ ಕಲಾವಿದ, ಒಂದೇ ಸ್ಥಳದಲ್ಲಿ, ಒಂದೇ ಕೋನದಲ್ಲಿ ಸೆರೆ ಹಿಡಿದ ಚಿತ್ರ ಲಿಮ್ಕಾ ದಾಖಲೆ ಪುಟ ಸೇರಿದೆ.

ದೊಡ್ಡ ಕಮರ್ಷಿಯಲ್ ಚಿತ್ರಕ್ಕೆ ಹೊಂದಿಕೊಳ್ಳುವ ಕಥೆಯೊಂದನ್ನು ಕೇವಲ ಎಂಟು ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವುದು ನಿರ್ದೇಶಕ ನವಿ. ಕೇವಲ 11.3 ಅಡಿ ಉದ್ದ, 11.3 ಅಡಿ ಅಗಲದ ವಿಶಾಲದ ಕೋಣೆಯೊಳಗೆ ಒಂದು ಗಂಟೆ ಆರು ನಿಮಿಷ ಅವಧಿಯ ಚಿತ್ರವನ್ನು ಕೇವಲ 7 ಗಂಟೆಯಲ್ಲಿ ಚಿತ್ರೀಕರಿಸಲಾಗಿದೆ.
 
ಈ ಚಿತ್ರ ತಯಾರಿಸಿರುವವರು ನಾಲ್ವರು ಸ್ನೇಹಿತರು. ನವಿ ಗೆಳೆಯರಾದ ಪೃಥ್ವಿಕುಮಾರ್ ಮತ್ತು ಅನಿಲ್‌ಕುಮಾರ್ ಚಿತ್ರದ ಸಂಕಲನ ಕೆಲಸ ಮಾಡಿದ್ದರೆ, ಚಿತ್ರದಲ್ಲಿ ಬರುವ ಏಕೈಕ ನಟನಾಗಿ ಡೆಲ್ ಕಂಪೆನಿಯ ಉದ್ಯೋಗಿಯಾಗಿರುವ ಅವರ ಸ್ನೇಹಿತ ಕುಲದೀಪ್ ನಟಿಸಿದ್ದಾರೆ.
 
ಚಿತ್ರದ ಮತ್ತೊಂದು ವಿಶೇಷವೆಂದರೆ ಇದರಲ್ಲಿ ನಾಯಕನ ಗೆಳೆಯನಾಗಿ ಪಾರಿವಾಳವೊಂದು ಅಭಿನಯಿಸಿರುವುದು. ಕುಲದೀಪ್ ಮತ್ತು ಪಾರಿವಾಳ ಇಬ್ಬರಿಗೂ ಚಿತ್ರಕ್ಕಾಗಿ ಆರು ತಿಂಗಳು ತರಬೇತಿ ನೀಡಲಾಗಿದೆ.

ಬೆಂಗಳೂರಿನಲ್ಲಿ ಅಲ್ಪ ಸಂಬಳ ಪಡೆಯುವ ಯುವಕನೊಬ್ಬ ಹಳ್ಳಿಯಲ್ಲಿರುವ ಪೋಷಕರಿಗೆ ಹಣ ಕಳುಹಿಸಲು ದುಸ್ಸಾಹಸಕ್ಕೆ ಕೈಹಾಕುವ ಕಥೆಯುಳ್ಳ ಚಿತ್ರವಿದು. ಚಿತ್ರ ಸಾಮಾನ್ಯ ಯುವಕನ ತವಕ ತಲ್ಲಣಗಳು, ಜವಾಬ್ದಾರಿ, ಹಣಕ್ಕಾಗಿ ಕೆಟ್ಟ ಕೆಲಸಕ್ಕೆ ಕೈ ಹಾಕುವಂತಹ ಪರಿಸ್ಥಿತಿಯ ಒತ್ತಡ, ದುರಂತ ಅಂತ್ಯದ ಚಿತ್ರಣವನ್ನು ಬಿಂಬಿಸುತ್ತದೆ.
 
ಅನಿವಾರ್ಯವಾಗಿ ರೈಲಿಗೆ ಬಾಂಬ್ ಇರಿಸುವ ಕೆಲಸ ಒಪ್ಪಿಕೊಳ್ಳುವ ಯುವಕ ಅದರಿಂದ ಹಣ ಪಡೆಯುತ್ತಾನೆ. ಆದರೆ ಅದೇ ರೈಲಿನಲ್ಲಿ ಬೆಂಗಳೂರಿಗೆ ಹೊರಡುವ ಆತನ ತಂದೆ ತಾಯಿ ಮತ್ತು ಅಕ್ಕ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾಗುತ್ತಾರೆ.

ಒಳ್ಳೆ ಕೆಲಸ ಮಾಡಿದಾಗ ನಾಯಕನಿಗೆ ಬೆಂಬಲ ನೀಡುವ ಪಾರಿವಾಳ, ಆತ ಕುಕೃತ್ಯಕ್ಕೆ ಇಳಿದಾಗ ಆತನನ್ನು ಬೆಂಬಲಿಸುವುದಿಲ್ಲ. ನಾಯಕ, ಪಾರಿವಾಳ ಎರಡೂ ಪಾತ್ರಗಳದ್ದು ದುರಂತ ಅಂತ್ಯ.

ಸುಮಾರು ಎರಡು ವರ್ಷ ವಿವಿಧ ನಿರ್ದೇಶಕರ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಡಿಪ್ಲೊಮಾ ಪದವೀಧರ ನವೀನ್, ತಮ್ಮನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಬೇಸರದಿಂದ ಚಿತ್ರರಂಗದಿಂದ ಹೊರಬಂದು ಸ್ವತಂತ್ರ ಸಿನಿಮಾ ನಿರ್ದೇಶಿಸಲು ಮುಂದಾದರು. ಅದರ ಫಲವೇ `ರೂಂ~. 2010ರಲ್ಲಿಯೇ ನಿರ್ಮಿಸಲಾದ ಈ ಚಿತ್ರ 2012ರಲ್ಲಿ ಲಿಮ್ಕಾ ದಾಖಲೆಗೆ ಸೇರಿಕೊಂಡಿದೆ.

ಹಣವನ್ನು ಸರಿಯಾದ ಮಾರ್ಗದಲ್ಲಿ ಸಂಪಾದಿಸಬೇಕು, ಜೀವನದಲ್ಲಿ ಹಣವೊಂದೇ ಮುಖ್ಯವಲ್ಲ, ವ್ಯಕ್ತಿಯ ಉತ್ತಮ ಕೆಲಸಗಳನ್ನು ಮಾತ್ರ ಸ್ನೇಹಿತ ಪ್ರೋತ್ಸಾಹಿಸಬೇಕು ಮುಂತಾದ ಸಂದೇಶಗಳನ್ನು ಚಿತ್ರದಲ್ಲಿ ನೀಡಲಾಗಿದೆ ಎನ್ನುತ್ತಾರೆ ನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.