ADVERTISEMENT

ರೋಗ ಬಂದೀತು ಜೋಪಾನ...

ರೋಹಿಣಿ ಮುಂಡಾಜೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST
ರೋಗ ಬಂದೀತು ಜೋಪಾನ...
ರೋಗ ಬಂದೀತು ಜೋಪಾನ...   

ಮುಂಗಾರು ಕಣ್ಣಾಮುಚ್ಚಾಲೆ ಆಡುತ್ತಿದೆ. ಭರ್ಜರಿ ಮಳೆ ಬಂದೇಬಿಟ್ಟಿತು ಎಂಬಂತೆ ಬಾನ ತುಂಬಾ ಮೋಡ ದಟ್ಟೈಸಿದರೂ ಈ ಬಾರಿ ಧರೆ ಮಿಂದದ್ದು ಕಡಿಮೆಯೇ. ಭೂಮಿಗೆ ಅದೊಂದು ಗುಟುಕು ಅಷ್ಟೆ. ಸುರಿದುದು ಸ್ವಲ್ಪವೇ ಹೌದು. ಆದರೆ, ಬಗೆಬಗೆಯ ಜ್ವರಗಳ ಸಮಸ್ಯೆ ಮಾತ್ರ ಮುಂಗಾರಿಗಿಂತ ದೊಡ್ಡ ಮಟ್ಟದಲ್ಲೇ ಇದೆ.

ಕಂಡಕಂಡಲ್ಲಿ ಎಸೆದ ಕಸ, ರಸ್ತೆಯನ್ನಷ್ಟೆ ಗುಡಿಸಿ ಮೋರಿಯ ಮೂತಿಗೆ ತುಂಬಿದ ಕಸ, ಮೋರಿಯಿಂದೀಚೆ ಎಳೆದು ಗುಪ್ಪೆಹಾಕಿದ ಕೊಚ್ಚೆ, ಬೇಸಿಗೆ ಬೇಗೆ ತಣಿಸಿದ ಎಳನೀರಿನ ಚಿಪ್ಪು, ಹಳೆಯ ಮನೆಯ ತ್ಯಾಜ್ಯ, ಬಚ್ಚಲು ನೀರನ್ನು ಮೊಗೆದುಕೊಳ್ಳುವ ಗಟಾರ... ಇವೆಲ್ಲವೂ ಜ್ವರ ವಾಹಕ ಸೊಳ್ಳೆಗಳ ಕಾರಾಸ್ಥಾನಗಳು.

ಎಲ್ಲೆಂದರಲ್ಲಿ ಕೊಚ್ಚೆ, ಕೊಳಚೆಯೇ ರಾರಾಜಿಸುವ ಈ ಹೈಟೆಕ್ ಸಿಟಿಯಲ್ಲಿ ಈಗ ಮನೆ ಮನೆಯಲ್ಲೂ ಜ್ವರದ್ದೇ ಮಾತು. ವೈದ್ಯರು ಹೇಳುವಂತೆ, ಈ ಬಾರಿ ಅತ್ಯಧಿಕ ತಾಪದ (ಹೈ ಫಿವರ್) ಜ್ವರದ ಪ್ರಕರಣಗಳೇ ಹೆಚ್ಚು.

 

ಡೆಂಗೆಯೆಂದರೆ...


- ಡೆಂಗೆಯಲ್ಲಿ ಮೂರು ವಿಧ. ಸಾಮಾನ್ಯ ಜ್ವರ, ಹೆಮರೇಜ್ ಫಿವರ್ ಹಾಗೂ ಶಾಕ್ ಸಿಂಡ್ರೊಮ್ ಫಿವರ್.
ಮೂರರಲ್ಲೂ ಅತ್ಯಧಿಕ ಮಟ್ಟದಲ್ಲಿ ಮೈ ಸುಡುತ್ತದೆ.

ತಲೆನೋವು, ಮೈಕೈ ನೋವು ಇರುತ್ತದೆ. ಕಣ್ಣುಗುಡ್ಡೆಗಳ ನೋವು ಡೆಂಗೆಯ ವಿಶೇಷ ಲಕ್ಷಣ. ಇದು ಮೂರರಿಂದ ನಾಲ್ಕು ದಿನ ಇದ್ದು ಗುಣವಾಗಬಹುದು. ತಕ್ಕ ಚಿಕಿತ್ಸೆ ಸಿಗದಿದ್ದರೆ ಅದು ಹೆಮರೇಜ್ ಫಿವರ್‌ಗೆ ಬಡ್ತಿ ಪಡೆದುಕೊಳ್ಳುತ್ತದೆ.

-ಈ ಹಂತದಲ್ಲಿ ರಕ್ತ ಹೆಪ್ಪುಗಟ್ಟಲು ಸಹಾಯವಾಗುವ ಕಣಗಳ (ಪ್ಲೇಟ್‌ಲೆಟ್) ಪ್ರಮಾಣ ಗಣನೀಯವಾಗಿ ಇಳಿಕೆಯಾಗಿ ದೇಹದ ಯಾವುದೇ ಭಾಗದಲ್ಲಿ ರಕ್ತ ಸೋರುವಿಕೆ ಉಂಟಾಗಬಹುದು.

ಗಂಭೀರ ಸ್ಥಿತಿಗೆ ತಲುಪಿದಾಗ ಮಲಮೂತ್ರದಲ್ಲೂ ರಕ್ತ ಕಾಣಿಸಿಕೊಳ್ಳಬಹುದು. ಜೊತೆಗೆ ಕೈಕಾಲಲ್ಲಿ ಕೆಂಪು ಚುಕ್ಕೆಗಳು (ಡಾಟ್ಸ್) ಕಂಡುಬರುತ್ತವೆ.

-ಅಂತಿಮ ಹಂತದಲ್ಲಿ ರೋಗಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಶರೀರದ ತಾಪಮಾನ ಕುಂಠಿತಗೊಂಡು ತಣ್ಣಗಾಗುತ್ತದೆ. ಅಪಸ್ಮಾರ (ಫಿಟ್ಸ್) ಉಂಟಾಗುತ್ತದೆ. ರೋಗಿ ಬದುಕುವ ಸಾಧ್ಯತೆ ತೀರಾ ಕಡಿಮೆ.

ADVERTISEMENT

ಜ್ವರ ಬಂದಾಕ್ಷಣ `ಇದು ವೈರಲ್ ಫೀವರ‌್ರು. ನಾಲ್ಕು ದಿನ ಇದ್ದು ಹೋಗುತ್ತದೆ~ ಎಂಬ ಉದಾಸೀನಭಾವದಲ್ಲೋ ಅನುಭವದಿಂದಲೋ ಸುಮ್ಮನಿರುವಂತಿಲ್ಲ. ಅದು ಡೆಂಗೆ ಇದ್ದರೂ ಇರಬಹುದು! ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಮತ್ತು ಆರೋಗ್ಯ ಇಲಾಖೆ ಮುಂಗಾರು ಮಳೆ ಕಾಲಿಡುತ್ತಲೇ ಕಂಟ್ರೋಲ್ ರೂಮ್ ತೆರೆದು ಸೋಂಕು ಜ್ವರಗಳ ಹತೋಟಿಗೆ ಮುಂದಾಗಿದೆ.

ಜಿಲ್ಲಾ ಆರೋಗ್ಯ ಕೇಂದ್ರದ ಅಂಕಿಅಂಶಗಳ ಪ್ರಕಾರ ಡೆಂಗೆ ಜ್ವರದ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿರುವುದು ಕೇವಲ 30 (ಈ ಪೈಕಿ ಒಂದು ಸಾವು).
`ಸೊಳ್ಳೆಗಳಿಂದ ಹರಡುವ ಮಲೇರಿಯಾ, ಚಿಕುನ್‌ಗುನ್ಯಾ ಮಾತ್ರವಲ್ಲದೆ ಒಬ್ಬರಿಂದ ಒಬ್ಬರಿಗೆ ಹರಡುವ ಎಚ್1ಎನ್1 ಭೀತಿಯಿದ್ದರೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಸದ್ಯಕ್ಕೆ ನಮ್ಮ ಮುಂದಿರುವುದು ಡೆಂಗೆ ಜ್ವರದ ಸವಾಲು ಮಾತ್ರ. ವಾರದಿಂದೀಚೆ ಇದೂ ಹತೋಟಿಯಲ್ಲಿದ್ದರೂ ಇಲಾಖೆ ಕಟ್ಟೆಚ್ಚರದಲ್ಲೇ ಇದೆ~ ಎನ್ನುತ್ತಾರೆ ನಗರ ಜಿಲ್ಲಾ ವೈದ್ಯಾಧಿಕಾರಿ ಡಾ. ಪ್ರಭುಚಂದ್ರ.

ಶುದ್ಧ ನೀರಿನಲ್ಲಿ ಸೊಳ್ಳೆ ಸಂಸಾರ!
ಈಡಿಸ್ ಈಜಿಪ್ಟ್ ಎಂಬ ಸೊಳ್ಳೆ ಡೆಂಗೆ ಜ್ವರ ಹರಡುತ್ತದೆ. ಇದರ ಕಾರ್ಯಾಚರಣೆ ಹಗಲಲ್ಲೇ. ಕುಡಿಯುವ ನೀರಿನಲ್ಲಿ, ಬಚ್ಚಲಲ್ಲಿ ಸಂಗ್ರಹಿಸಿಟ್ಟ ನೀರಿನಲ್ಲಿ ಇವು ಮೊಟ್ಟೆಯಿಡುತ್ತವೆ.

ಇದು ಅತ್ಯಂತ ಅಪಾಯಕಾರಿ. ಮೇಲ್ನೋಟಕ್ಕೆ ಕಾಣುವ ಈ `ಲಾರ್ವಾ~ಗಳನ್ನು ನಿರ್ಲಕ್ಷಿಸಿ ಅದೇ ನೀರನ್ನು ಸೇವಿಸಿದರೆ ಡೆಂಗೆ ಜ್ವರ ಬರುತ್ತದೆ. ನಗರದ ನೀರಿನ ಸಮಸ್ಯೆಯ ಹಿನ್ನೆಲೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ, ನಿಜ. ಆದರೆ ಕುಡಿಯುವ ನೀರನ್ನು ಕಡ್ಡಾಯವಾಗಿ ಕುದಿಸಿ ಆರಿಸಿ ಕುಡಿಯಬೇಕು~ ಎಂಬುದು ಅವರ ಕಿವಿಮಾತು.

`ಸೊಳ್ಳೆಗಳ ನಿರ್ಮೂಲನೆ ಮತ್ತು ನಿಯಂತ್ರಣಕ್ಕೆ ಇಲಾಖೆ ಮೊದಲ ಆದ್ಯತೆ ಕೊಡುತ್ತಿದೆ. ಪ್ರತಿ 15ರಿಂದ 20ಸಾವಿರ ಜನವಸತಿ ಪ್ರದೇಶಗಳಲ್ಲಿ ನಮ್ಮ ಕಿರಿಯ ಆರೋಗ್ಯ ಸಹಾಯಕರು `ಲಾರ್ವಾ ಸಮೀಕ್ಷೆ~ಯನ್ನೂ ಕೈಗೊಳ್ಳುತ್ತಿದ್ದಾರೆ. ಅಧಿಕ ಪ್ರಮಾಣದಲ್ಲಿ ಲಾರ್ವಾ ಕಂಡುಬರುವ ಪ್ರದೇಶದಲ್ಲಿ ಸೊಳ್ಳೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗುವುದು~ ಎಂಬುದು ಅವರ ವಿವರಣೆ.

ಬಿಬಿಎಂಪಿ ಕ್ರಮ
`ಸೋಂಕು ಜ್ವರಗಳ ನಿಯಂತ್ರಣಕ್ಕೆ ಪಾಲಿಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸ್ಲಮ್ ಹಾಗೂ ಕೊಳಚೆ ಹೆಚ್ಚಾಗಿ ಇರುವ ಪ್ರದೇಶಗಳ ಶುಚೀಕರಣ, ಸೊಳ್ಳೆ ನಿವಾರಕ ಸ್ಪ್ರೇ ಮುಂತಾದ ಕೆಲಸ ನಡೆಯುತ್ತಿದೆ. ಪಾಲಿಕೆಯ ಆಸ್ಪತ್ರೆಗಳಲ್ಲಿ ಅವಶ್ಯ ಪ್ರಮಾಣದಲ್ಲಿ ಔಷಧಿಗಳನ್ನೂ ಶೇಖರಿಸಿಟ್ಟುಕೊಂಡಿದ್ದೇವೆ~ ಎನ್ನುತ್ತಾರೆ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶಬಾಬು.

ಮಕ್ಕಳು ಜೋಕೆ
ಆಡೋ ಶಾಲೆ (ಪ್ಲೇ ಹೋಮ್)ಗೆ ನಗುನಗುತ್ತಾ ಹೋದ ಮಗು ಮಧ್ಯಾಹ್ನ ಬರುವಾಗ ಮಂಕಾಗಿದೆ. `ಚಾಚಿ ಮಾಡ್ತೇನೆ ಅಮ್ಮ~ ಎಂದು ಅಪ್ಪಿಕೊಂಡಾಗ ತಾಕಿದ ಬಿಸಿಯುಸಿರಿಗೆ ಅಮ್ಮನೂ ಬೆಚ್ಚುತ್ತಾಳೆ. 101 ಡಿಗ್ರಿ ಸೆಲ್ಸಿಯಸ್ ತೋರುತ್ತದೆ ಥರ್ಮೋಮೀಟರ್.

ಪ್ರಾಥಮಿಕ ತಪಾಸಣೆ ನಡೆಸಿದ ವೈದ್ಯರು, `ವೈರಲ್ ಫಿವರ್~ ಅನ್ನುತ್ತಾರೆ. ಔಷಧಿ ಜೊತೆಗೆ ಒಂದಿಷ್ಟು ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳ ಟಿಪ್ಪಣಿ. ಅಮ್ಮ ಕಂಗಾಲು.
ಕಚೇರಿಗೆ ತೆರಳುವ ಅಪ್ಪ ಅಮ್ಮನಿಗೆ ಮಗುವನ್ನು ಪ್ಲೇ ಹೋಮ್‌ಗೋ, ಡೇ ಕೇರ್ ಸೆಂಟರ್‌ಗೋ ಕಳಿಸಲೇಬೇಕಾದ ಅನಿವಾರ್ಯತೆ. ಸ್ವಲ್ಪ ಮೈ ಬಿಸಿ ಇರುವುದು ಗಮನಕ್ಕೆ ಬಂದರೂ ನಿರ್ಲಕ್ಷಿಸಿ ಹಾಗೆಯೇ ಕಳುಹಿಸುವವರೂ ಇದ್ದಾರೆ.

ಅವರದು ರಜೆ ಉಳಿಸುವ ಲೆಕ್ಕಾಚಾರ. ಆದರೆ ಅಪ್ಪ- ಅಮ್ಮನ ಈ ಅನುಕೂಲ ಶಾಸ್ತ್ರಕ್ಕೆ ತೊಂದರೆ ಅನುಭವಿಸುವುದು ಅವರ ಮಗುವಷ್ಟೇ ಅಲ್ಲ, ಅದರ ಸಹಪಾಠಿಗಳೂ ಜ್ವರದ ಬೇಗೆಯಲ್ಲಿ ಬಳಲಬೇಕಾಗುತ್ತದೆ.

ಜ್ವರದ ಲಕ್ಷಣ ಕಂಡುಬಂದರೆ ಬಿಲ್‌ಕುಲ್ ಶಾಲೆಗೆ ಕಳುಹಿಸಬೇಡಿ ಎನ್ನುತ್ತಾರೆ ವೈದ್ಯರು. ರೋಗ ನಿವಾರಣೆಗಿಂತ ನಿಯಂತ್ರಣವೇ ಮೇಲು!

`ಸಾಮಾನ್ಯ ಸೋಂಕು ಜ್ವರ (ವೈರಲ್ ಫಿವರ್) ಆಗಿದ್ದಲ್ಲಿ ಮೂರೋ ನಾಲ್ಕೋ ದಿನಕ್ಕೆ ವಾಸಿಯಾಗುತ್ತದೆ. ಆದರೆ ಡೆಂಗೆ ಜ್ವರವಾಗಿದ್ದರೂ ಆರಂಭಿಕ ಹಂತದಲ್ಲಿ ಹೀಗೆ ಮೂರ‌್ನಾಲ್ಕು ದಿನಕ್ಕೆ ಕಡಿಮೆಯಾದರೂ ವಾರದೊಳಗೆ ಮತ್ತೆ ಕಂಡುಬಂದೀತು.

ಈಗ 101ರಿಂದ 104- 105 ಡಿಗ್ರಿ ಸೆಲ್ಸಿಯಸ್‌ನಷ್ಟು ಹೈ ಫಿವರ್ ಪ್ರಕರಣಗಳೇ ನಮ್ಮಲ್ಲಿ ಹೆಚ್ಚು ಬರುತ್ತಿವೆ. ಜ್ವರ ಮರಳಿ ಬಂದರೆ ಅದು ಡೆಂಗೆ ಆಗಿರುವ ಸಾಧ್ಯತೆ ಹೆಚ್ಚು. ರಕ್ತ ತಪಾಸಣೆಯಿಂದಲೇ ಇದನ್ನು ಪತ್ತೆ ಹಚ್ಚಲು ಸಾಧ್ಯ. ಈ ಮುಂಗಾರು ಮಳೆಯೊಂದಿಗೆ ಅಧಿಕ ತಾಪದ ಪ್ರತ್ಯೇಕ ಪ್ರಕರಣಗಳೂ ಪ್ರತಿದಿನ ದಾಖಲಾಗುತ್ತಿವೆ.

ಇದನ್ನು `ಹೈ ಫಿವರ್~ ಎಂದೇ ಕರೆಯಲಾಗುತ್ತಿದೆ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ~ ಎನ್ನುತ್ತಾರೆ, ನಗರದ ಹಿರಿಯ, ಮಕ್ಕಳ ತಜ್ಞ ಡಾ. ಪಿ.ಎಂ. ಸೆಟ್ಟಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.