ADVERTISEMENT

ವಸಂತನಗರದಲ್ಲಿ ರೊಟ್ಟಿ ಹಬ್ಬ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಉ ತ್ತರ ಕರ್ನಾಟಕದಿಂದ ಬಂದು ಹೈಟೆಕ್ ನಗರದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವವರು ಊರ ಅಡುಗೆಗೆ ಹಂಬಲಿಸುವುದು ಹೆಚ್ಚು. ಇಲ್ಲಿನ ಇಡ್ಲಿ, ವಡೆ, ರೈಸ್ ಬಾತ್, ಸೆಟ್ ದೋಸೆಗಳ ನಡುವೆ ಹುಟ್ಟೂರಿನ ತಿನಿಸುಗಳ ಸವಿ ನೆನಪು ಸದಾ ಕಾಡುವುದಿದೆ.

ಇನ್ನು, ಕರಾವಳಿ, ಮಲೆನಾಡು ಮುಂತಾದ ವಿವಿಧ ಭಾಗಗಳ ವಿಶಿಷ್ಟ ಭೋಜನ, ತಿಂಡಿ ತಿನಿಸುಗಳು ಈ ಮಹಾ ನಗರದ ಕೆಲವೆಡೆ ಸಿಗುತ್ತಿವೆ. ಅದರ ಜತೆಗೆ ಉತ್ತರ ಕರ್ನಾಟಕದ ಪಕ್ಕಾ ಜವಾರಿ ಹಳ್ಳಿಗಾಡಿನ ವಾತಾವರಣದಲ್ಲಿ ಉತ್ತರ ಕರ್ನಾಟಕದ ರೊಟ್ಟಿ ಊಟದ ಉತ್ಸವ ನಡೆಸುತ್ತಿದೆ ‘ಬೈಲ್ ಮನೆ’.

ವಸಂತನಗರದ ಜೈನ್ ಆಸ್ಪತ್ರೆ ಹತ್ತಿರ ಇರುವ  ಶ್ರೀನಿಧಿ ರಿಯಲ್ ಫುಡ್‌ನ ‘ಬೈಲ್ ಮನೆ’ಯಲ್ಲಿ ಈ ಭಾನುವಾರದಿಂದಲೇ ಆರಂಭವಾದ ಆಹಾರೋತ್ಸವ ಏಪ್ರಿಲ್ 1ರ ವರೆಗೂ ಇದೆ. ಈ ಅವಧಿಯಲ್ಲಿ ಮಧ್ಯಾಹ್ನ 12ರಿಂದ 3.30 ಹಾಗೂ ಸಂಜೆ 7 ರಾತ್ರಿ 10.30ರ ವರೆಗೆ ಜೋಳದ ರೊಟ್ಟಿಯ ಪುಷ್ಕಳ ಭೋಜನ ಲಭ್ಯ.

ಬಾಳೆ ಎಲೆಯ ಮೇಲೆ ಜೋಳದ ರೊಟ್ಟಿ ಭೋಜನದ ಜತೆ ಉತ್ತರ ಕರ್ನಾಟಕದ 30ಕ್ಕೂ ಅಧಿಕ ಜನಪ್ರಿಯ ಸ್ವಾದಿಷ್ಟ ಖಾದ್ಯಗಳು ಮಣ್ಣಿನ ತಟ್ಟೆಗಳಲ್ಲೇ ಸಿಗುತ್ತವೆ. ಬಿದಿರು, ಮಡಕೆಯಿಂದ ಅಲಂಕೃತವಾದ ಹೋಟೆಲಿನಲ್ಲಿ ಹಿಂದಿನ ಕಾಲದ ಬಿದಿರು, ಹುಲ್ಲಿನ ಛಾವಣಿ, ಪುರಾತನ ಕಾಲದ ಮರದ ಕಂಬಗಳು, ಲಾಟೀನು, ಗ್ಯಾಸ್‌ಲೈಟು, ಛತ್ರಿ, ಸೈಕಲ್, ಭತ್ತದ ತಿರಿ, ಕಂಗೊಳಿಸುವ ಹಸಿರಿನ ಗಿಡಗಳ ವಾತಾವರಣ, ಉತ್ತರ ಕರ್ನಾಟಕದ ನಾಟಿ, ಉತ್ತರ ಕರ್ನಾಟಕದ ಕಲಾತ್ಮಕ ಚಿತ್ರಗಳು ಹುಟ್ಟೂರನ್ನು ನೆನಪಿಸುತ್ತವೆ.

ಹಳ್ಳಿಗಾಡಿನ ಬಳಕೆ ಸಾಮಗ್ರಿಗಳು ಹುಟ್ಟೂರಿಗೆ ಹೋದ ಅನುಭವ ನೀಡಲು ಸಜ್ಜಾಗಿವೆ. ಉತ್ತರ ಕರ್ನಾಟಕದಿಂದಲೇ ಬಂದ ಅಡುಗೆಯವರು ಸಾಂಪ್ರದಾಯಿಕ ಉಡುಪು ಧರಿಸಿ ಮಣ್ಣಿನ ಮಡಕೆಯಲ್ಲೇ ಸ್ವಾದಿಷ್ಟ ಅಡುಗೆ ಮಾಡುತ್ತಾರೆ. ಮಜ್ಜಿಗೆ, ಮೊಸರು ಕೂಡ ಮಣ್ಣಿನ ಕುಡಿಕೆಯಲ್ಲಿ ಲಭ್ಯ.

ಉತ್ತರ ಕರ್ನಾಟಕ ದೇಸೀ ಸಂಸ್ಕತಿಯ ವೈಭವೀಕರಣಕ್ಕೂ ಆದ್ಯತೆ ಇದ್ದು ಸುಮಧುರ ಜಾನಪದ ಗೀತೆಗಳ ಹಿನ್ನೆಲೆ ಇರುತ್ತದೆ. ಊಟವಾದ ಮೇಲೆ ಎದುರೇ ಇರುವ ‘ಹೋಳಿ ಬೈಲು ಅರಮನೆ’ಗೆ ನಡೆಯಬಹುದು. ಅಲ್ಲಿ ಕ್ಯಾರೆಟ್ ಜೂಸ್, ಟೊಮೆಟೋ ಜೂಸ್, ಪುದಿನಾ ಜೂಸ್. ತಂಪು ಎಳನೀರು, ರಾಜವೈಭವ ಐಸ್‌ಕ್ರೀಮ್‌ಗಳ ವೈಭವ. ಗಿಳಿ ಶಾಸ್ತ್ರವನ್ನೂ ಕೇಳಬಹುದು.

ಗ್ರಾಹಕರ ಪ್ರತಿಕ್ರಿಯೆ ನೋಡಿಕೊಂಡು ಈ ಖಾದ್ಯ ಪದ್ಧತಿಯನ್ನು ಖಾಯಂಗೊಳಿಸುವ ಹಾಗೂ ರಾಜ್ಯದ ಇತರ ಭಾಗಗಳ ವಿಶಿಷ್ಟ ಆಹಾರ ಪದ್ಧತಿಯ ಉತ್ಸವಗಳನ್ನೂ ನಡೆಸುವ ಆಶಯ ಇದೆ ಎನ್ನುತ್ತಾರೆ ರೆಸ್ಟೊರೆಂಟ್‌ನ ಆಡಳಿತ ನಿರ್ದೇಶಕ ಬೇಳೂರು ರಾಘವೇಂದ್ರ ಶೆಟ್ಟಿ.       

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.