ADVERTISEMENT

ವಿದ್ಯಾರ್ಥಿಗಳಿಂದ ಮಂಡೇಲಾಗೆ ಗೌರವ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

ದೇಶ ವಿದೇಶ ವಿದ್ಯಾರ್ಥಿಗಳಿಗೆ ಮ್ಯಾನೇಜ್‌ಮೆಂಟ್‌ ಶಿಕ್ಷಣ ನೀಡುತ್ತಿರುವ ನಗರದ ಸೇಂಟ್ ಹಾಪ್‌ಕಿನ್ಸ್ ಶಿಕ್ಷಣ ಸಂಸ್ಥೆಯು ಇತ್ತೀಚೆಗೆ ಅಗಲಿದ ಆಫ್ರಿಕಾದ ಗಾಂಧಿ ಎಂದೇ ಖ್ಯಾತರಾಗಿದ್ದ ಡಾ. ನೆಲ್ಸನ್‌ ಮಂಡೇಲಾ ಅವರಿಗೆ ಗೌರವ ಸಲ್ಲಿಸಲು ವೇದಿಕೆಯಾಯಿತು.

ಈ ಸಂಸ್ಥೆಯಲ್ಲಿ ಆಫ್ರಿಕಾ ಖಂಡದ 100ಕ್ಕೂ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಸಂಸ್ಥೆಯು ನೆಲ್ಸನ್‌ ಮಂಡೇಲಾ ಅವರ ನೆನಪಿನಲ್ಲಿ ಶಾಂತಿನಗರದ ಫುಟ್‌ಬಾಲ್‌ ಮೈದಾನದಲ್ಲಿ ಅಂತರ ಆಫ್ರಿಕಾ ಫುಟ್‌ಬಾಲ್‌ ಪಂದ್ಯಾವಳಿಯನ್ನು ಆಯೋಜಿಸಿತ್ತು.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಪಂದ್ಯಕ್ಕೆ ಚಾಲನೆ ನೀಡಿದರು. ‘ಮಹಾತ್ಮ ಗಾಂಧಿಯವರ ಅಹಿಂಸಾ ತತ್ವವನ್ನು ಪ್ರತಿಪಾದಿಸಿದವರು ನೆಲ್ಸನ್ ಮಂಡೇಲಾ. ಅವರಿಗೆ ಅವರದೇ ದೇಶದ ವಿದ್ಯಾರ್ಥಿಗಳು ಗೌರವ ಸಮರ್ಪಿಸುತ್ತಿರುವುದು ಸಂತಸದ ಸಂಗತಿ’ ಎಂದು ಅವರು ಬಣ್ಣಿಸಿದರು.

‘ಉತ್ಕೃಷ್ಟ ದರ್ಜೆಯ ಶಿಕ್ಷಣ ಅತ್ಯಂತ ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ಸಿಗುವಂತಾಗಲೆಂಬುದೇ ನಮ್ಮ ಸಂಸ್ಥೆಯ ಉದ್ದೇಶ. ಆದ್ದರಿಂದ ಇಂತಹ ಕಾರ್ಯಕ್ರಮ ಮಾಡಲು ನಾವು ಸದಾ ಬದ್ಧರಾಗಿದ್ದೇವೆ’ ಎಂದು ಕಾಲೇಜಿನ ನಿರ್ದೇಶಕ ಯೂನಸ್ ಅಹಮದ್  ತಿಳಿಸಿದರು.
ಈ ಕಾಲೇಜಿನಲ್ಲಿ ಆಫ್ರಿಕಾ ಖಂಡದ ನೈಜಿರಿಯಾ, ಕ್ಯಾಮರೂನ್, ಐವರಿ ಕೋಸ್ಟ್, ತಾನ್‌ಜೇನಿಯಾ, ಉಗಾಂಡ ಮತ್ತು ಸುಡಾನ್ ದೇಶದ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋರ್ಸ್ ಅಭ್ಯಾಸ ಮಾಡುತ್ತಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳ ಫುಟ್‌ಬಾಲ್ ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಪಂದ್ಯಾವಳಿಯಲ್ಲಿ ಗೆದ್ದ ತಂಡಕ್ಕೆ ₨ ೧೫,೦೦೦ ಬಹುಮಾನ ಮತ್ತು ರನ್ನರ್ ಅಪ್ ತಂಡಕ್ಕೆ ₨ ೧೦,೦೦೦ ನಗದು ಬಹುಮಾನ. ಅಂತಿಮ ಪಂದ್ಯಾವಳಿ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನ ಸ್ಟೇಡಿಯಂನಲ್ಲಿ ನಡೆಯಲಿದ್ದು, ಗೆದ್ದ ಸ್ವಲ್ಪ ಪ್ರಮಾಣದ ಹಣವನ್ನು ಜೆ.ಪಿ. ನಗರದ ಡಿಸೈರ್ ಸೊಸೈಟಿಯಲ್ಲಿರುವ ಎಚ್‌ಐವಿ ಪೀಡಿತ ಮಕ್ಕಳ ಆರೋಗ್ಯ ಚಿಕಿತ್ಸೆಗೆ ವಿದ್ಯಾರ್ಥಿಗಳು ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT