ADVERTISEMENT

ಶಾಲೆಯಲ್ಲೂ ಒಲಿಂಪಿಕ್ಸ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ಲಂಡನ್ ಒಲಿಂಪಿಕ್ಸ್ ಪ್ರಭಾವ ನಗರದ ಕೆಲ ಶಾಲೆಗಳ ಮೇಲೂ ಬಿದ್ದಿದೆ. ಪೋದಾರ್ ಎಜುಕೇಶನ್ ನೆಟ್‌ವರ್ಕ್, ನರ್ಸರಿ ಮಕ್ಕಳಿಗಾಗಿ `ಹ್ಯಾಪಿ ಜಂಬೋ ಒಲಿಂಪಿಕ್ಸ್ ಫೆಸ್ಟಿವಲ್~ ಏರ್ಪಡಿಸಿದೆ. ಈ ಶಿಕ್ಷಣ ಸಂಸ್ಥೆಯ 18,000 ಪುಟಾಣಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಲ್ಲಿ ಮಕ್ಕಳು ಒಲಿಂಪಿಕ್ಸ್ ರಿಂಗ್‌ಗಳ ಸಂಖ್ಯೆ ಹಾಗೂ ಬಣ್ಣಗಳನ್ನು ಗುರುತಿಸಲಿದ್ದಾರೆ. ವಿವಿಧ ದೇಶಗಳ ರಾಷ್ಟ್ರಧ್ವಜಗಳ ಬಣ್ಣಗಳನ್ನೂ ಪಟ್ಟಿಮಾಡಲಿದ್ದಾರೆ. ಮಕ್ಕಳು ಅವರಿಗಿಷ್ಟವಾದ ಜಾವೆಲಿನ್ (ಸ್ಟ್ರಾ ಮೂಲಕ), ಡಿಸ್ಕಸ್ (ಪೇಪರ್ ತಟ್ಟೆಗಳ ಮೂಲಕ) ಆಟಗಳನ್ನೂ ಆಡಲಿದ್ದಾರೆ. ಎಲ್ಲಾ ಕೇಂದ್ರಗಳ ಮಕ್ಕಳೂ ತಮ್ಮದೇ ಆದ ವಿಭಿನ್ನ ಒಲಿಂಪಿಕ್ಸ್ ಜ್ಯೋತಿ ಹಾಗೂ ಧ್ವಜ ತಯಾರಿಸಲಿದ್ದಾರೆ.

ಅದರೊಂದಿಗೆ ವಿವಿಧ ವಿಭಾಗದ ಆಟಗಳನ್ನು ಸಂಕೇತಗಳೊಂದಿಗೆ ಗುರುತಿಸಲಿದ್ದಾರೆ. ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಮಕ್ಕಳೇ ತಯಾರಿಸಿ ಆಟದಲ್ಲಿ ವಿಜೇತರಾದವರಿಗೆ ಶುಭಾಶಯ ಪತ್ರಗಳನ್ನು (ಗುಡ್‌ಲಕ್ ಕಾರ್ಡ್) ಹಂಚಲಿದ್ದಾರೆ.

ಈ ಮೂಲಕ ಕ್ರೀಡೆ ಕುರಿತಾದ ಆಸಕ್ತಿ ಹಾಗೂ ಒಲಿಂಪಿಕ್ಸ್ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶ. ಎಲ್ಲಾ ಆಟಗಳಲ್ಲಿ ಪಾಲ್ಗೊಂಡು ಅತಿ ಹೆಚ್ಚು ಪದಕ ಪಡೆಯುವಂತೆ ಪ್ರೇರೇಪಿಸುತ್ತೇವೆ ಎಂದರು ಶಾಲೆಯ ಸಂಚಾಲಕಿ ಸ್ವಾತಿ ಪೋಪಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.