ADVERTISEMENT

ಶಾಲೆಯಲ್ಲೇ ಆಹಾರಪಾಠ

ಸುರೇಖಾ ಹೆಗಡೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST
ಶಾಲೆಯಲ್ಲೇ ಆಹಾರಪಾಠ
ಶಾಲೆಯಲ್ಲೇ ಆಹಾರಪಾಠ   

ಮಣಭಾರದ ಬ್ಯಾಗನ್ನು ಹೆಗಲಿನಿಂದ ಕೆಳಗಿಳಿಸಿ ಎರಡು ತಿಂಗಳುಗಳೇ ಕಳೆದಿದ್ದವು. ಅಜ್ಜ, ಅಜ್ಜಿ, ಊರು ಎನ್ನುತ್ತಾ ಚಿಣ್ಣರೆಲ್ಲಾ ಓಡಾಟದಲ್ಲೇ ಮೈಮರೆತಿದ್ದರು. ಸೂರ್ಯ ನೆತ್ತಿಗೇರಿದರೂ ಕಣ್ಣು ಬಿಡಲೊಲ್ಲದ ಪುಟಾಣಿ ಮಕ್ಕಳಿಗೆ ಶಾಲೆ ಶುರುವಾಗಿ ದಿನಗಳು ಉರುಳುತ್ತಾ ಬಂದಿವೆ.
 
ಬೆಳಿಗ್ಗೆ ಕಣ್ಣುಜ್ಜುತ್ತಾ, ಅಮ್ಮ ತಿನಿಸಿದ್ದನ್ನು ತಿಂದು ಅರೆತೆರೆದ ಕಣ್ಣಲ್ಲೇ ಶಾಲಾ ವಾಹನ ಹತ್ತುವ ಮಕ್ಕಳನ್ನು ಸ್ವಾಗತಿಸುತ್ತಿವೆ ಶಾಲೆಗಳು. ಹಾಡು ಕುಣಿತ, ಬಣ್ಣಬಣ್ಣಗಳ ಚಿತ್ತಾರಗಳೊಂದಿಗೆ ಮಕ್ಕಳನ್ನು ರಂಜಿಸುತ್ತಾ ಮನ ಗೆಲ್ಲಲು ಮುಂದಾಗಿರುವ ಶಾಲೆಗಳು ಮೌಖಿಕವಾಗಿ ಪಾಠ ಮಾಡುವ ಜಮಾನ ಹೋಗಿ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕಾಲವಿದು. ಹೀಗಾಗಿಯೇ ಕೆಲವು ಶಾಲೆಗಳಲ್ಲಿ ವಿಶೇಷ ದಿನಗಳನ್ನು ಆಚರಿಸುವ ಮೂಲಕ ಮಕ್ಕಳಿಗೆ ಬಣ್ಣ, ತರಕಾರಿ, ಹಣ್ಣು ಮುಂತಾದವುಗಳ ಕಲ್ಪನೆ ಹೇಳಿಕೊಡಲಾಗುತ್ತಿದೆ. ಇದರಿಂದ ವಿಷಯಗಳನ್ನು ಮಕ್ಕಳು ಬೇಗ ಕಲಿತುಕೊಳ್ಳುತ್ತಾರೆ ಹಾಗೂ ಬಹುಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದು ಶಾಲಾ ಸಿಬ್ಬಂದಿ ವರ್ಗದವರ ನಂಬಿಕೆ.

ಸರ್ಕಾರಿ ಶಾಲೆಗಳು ಈ ರೀತಿಯ ಕಾರ್ಯಕ್ರಮಗಳಿಂದ ಹೊರತಾಗಿವೆ. ಆದರೆ ನಗರದ ಕೆಲವು ಆಯ್ದ ಖಾಸಗಿ ಶಾಲೆಗಳಲ್ಲಿ ಈ ಯೋಜನೆಗಳು ಸಾಕಾರಗೊಂಡಿವೆ. ವಿಜಯನಗರದಲ್ಲಿರುವ ಆರ್‌ಎನ್‌ಎಸ್ ವಿದ್ಯಾನಿಕೇತನ ಶಾಲೆ ಹಾಗೂ ಎನ್‌ಆರ್ ಕಾಲೊನಿಯಲ್ಲಿರುವ ಎಪಿಎಸ್ ಪಬ್ಲಿಕ್ ಸ್ಕೂಲ್‌ನವರು ಈ ಹಿನ್ನೆಲೆಯಲ್ಲಿ `ಮೆಟ್ರೊ'ಗೆ ಮಾತಿಗೆ ಸಿಕ್ಕರು.

`ಪ್ರತಿ ತಿಂಗಳಲ್ಲಿ ಒಂದು ನಿರ್ದಿಷ್ಟ ದಿನವನ್ನು ವಿಶೇಷವಾಗಿ ಆಚರಿಸುತ್ತೇವೆ. ಗ್ರೀನ್ ಡೇ, ವೆಜಿಟೇಬಲ್ ಡೇ, ರೆಡ್ ಡೇ, ಬ್ಲ್ಯೂ ಡೇ, ಯಲ್ಲೊ ಡೇ, ಫ್ರೂಟ್ಸ್ ಡೇಗಳನ್ನು ಈವರೆಗೆ ಆಚರಿಸುತ್ತಿದ್ದೆವು. ಈ ವರ್ಷದಿಂದ ಅನಿಮಲ್ ಡೇ, ಪ್ಲಾಂಟ್ ಡೇ, ಸ್ಪೋರ್ಟ್ಸ್ ಡೇ, ಲಿಟರರಿ ಡೇ ಎಂದು ಆಚರಿಸುತ್ತಿದ್ದೇವೆ. ಅಸೆಂಬ್ಲಿ ಸಂದರ್ಭದಲ್ಲಿ ಮಕ್ಕಳಿಗೆ ವೇದಿಕೆ ಏರಿ ಮಾತನಾಡುವುದನ್ನು ಕಲಿಸುತ್ತೇವೆ. ಆಯಾ ಬಣ್ಣ, ಹಣ್ಣುಗಳು, ಗಿಡಗಳಿಗೆ ನೀರು ಹಾಕಬೇಕು, ಅದನ್ನು ಬೆಳೆಸುವುದರ ಮಹತ್ವವೇನು, ಪ್ರಾಣಿಗಳಿಗೆ ಕಲ್ಲು ಹೊಡೆಯಬಾರದು ಇವೇ ಮೊದಲಾದ ನೀತಿ ಪಾಠಗಳನ್ನು ಕಲಿಸುತ್ತೇವೆ' ಎಂದು ಮಾಹಿತಿ ಹಂಚಿಕೊಂಡರು ಆರ್‌ಎನ್‌ಎಸ್ ವಿದ್ಯಾನಿಕೇತನ ಶಾಲೆಯ ನರ್ಸರಿ ವಿಭಾಗದ ಸಂಯೋಜಕಿ ಶೋಭಾ ಕುಮಾರ್.

ನಗರದ ಎಪಿಎಸ್ ಪಬ್ಲಿಕ್ ಸ್ಕೂಲ್‌ನಲ್ಲೂ ಹಲವಾರು ದಿನಗಳ ಆಚರಣೆ ಇದ್ದು, ಮಕ್ಕಳ ಕಲಿಕೆಗೆ ಅವು ಪೂರಕವಾಗಿವೆ. ವಿಭಿನ್ನ ದಿನಾಚರಣೆ ಜೊತೆಗೆ ವಿಶೇಷ ಎನಿಸಿದ್ದು `ಫುಡ್ ವಿತ್ ಫೈರ್', `ಫುಡ್ ವಿದೌಟ್ ಫೈರ್' ಕಲ್ಪನೆ. ಅಂದರೆ, ಮಕ್ಕಳಿಗೆ ಶಾಲೆಯಲ್ಲಿ ಅಡುಗೆ ಮಾಡುವುದನ್ನು ಹೇಳಿಕೊಡುವುದು ಅಥವಾ ಒಲೆ ಹಚ್ಚದೆಯೇ ಮಾಡಬಹುದಾದ ತಿನಿಸುಗಳ ತಯಾರಿ ವಿವರಿಸುವುದು. ಪ್ರಾಂಶುಪಾಲೆ ಡಾ.ಇಂದುಮತಿ ಅವರ ಪ್ರಕಾರ `ಯಾವುದು ಏನು ಎಂಬ ಬಗ್ಗೆ ಮಕ್ಕಳಿಗೆ ಸರಿಯಾದ ಕಲ್ಪನೆ ಬರಲಿ, ಚಿಕ್ಕ ವಯಸ್ಸಿನಲ್ಲೇ ಇವುಗಳ ಮಾಹಿತಿ ಮನಸ್ಸಿಗೆ ನಾಟಲಿ ಎಂಬುದು ಉದ್ದೇಶ. ಮಕ್ಕಳು, ಪೋಷಕರ ಸ್ಪಂದನವೂ ಚೆನ್ನಾಗಿದೆ. ಈ ವಯಸ್ಸಿನಲ್ಲಿಯೇ ಬಣ್ಣಗಳ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ. ಹಣ್ಣು, ತರಕಾರಿಗಳನ್ನು ಮನೆಯಲ್ಲಿ ತಿಂದಿರುತ್ತಾರೆ. ಆದರೆ ಅವುಗಳ ಹೆಸರುಗಳು ಗೊತ್ತಿರುವುದಿಲ್ಲ. ನಾವಿಲ್ಲಿ ಹೇಳಿಕೊಟ್ಟಾಗ ಸುಲಭವಾಗಿ ಗುರುತಿಸುತ್ತಾರೆ'.

ಶಾಲೆ ಹೇಳುವ ಪ್ರಾಯೋಗಿಕ ಕಲಿಕೆಯ ಅಗತ್ಯಗಳನ್ನು ಪೂರೈಸಲು ತಂದೆ-ತಾಯಿಯರು ಒಂದಿಷ್ಟು ಸಮಯ ಮೀಸಲಿಡಬೇಕಿದ್ದರೂ, ಇಂಥ ಕಲಿಕೆಯಿಂದ ತಮ್ಮ ಮಕ್ಕಳು ಚುರುಕಾಗಿ ಬಣ್ಣ, ಹಣ್ಣು-ತರಕಾರಿಗಳನ್ನು ಗುರುತು ಮಾಡುವಂತೆ ಆಗುವುದು ಅವರಲ್ಲಿ ಸಂತಸ ತಂದಿದೆ. ಒಂದು ಕಾಲದಲ್ಲಿ ಸಹಜವಾಗಿಯೇ ಆಗುತ್ತಿದುದು ನಗರದಲ್ಲಿ ಶಾಲಾ ಕಲಿಕೆಯ ಮೂಲಕವೇ ಆಗುವ ಅನಿವಾರ್ಯ ಸೃಷ್ಟಿಯಾಗಿರುವುದಂತೂ ನಿಜ.

ಪುಟಾಣಿಗಳ ಖುಷಿ
ಗೌರಿ, ಧ್ರುಶೆಟ್ಟಿ

`ನಮ್ಮ ಸ್ಕೂಲ್‌ಲ್ಲಿ ಕಲರ್ಸ್‌ ಡೇ, ಫ್ರುಟ್ಸ್ ಡೇ ಎಲ್ಲಾ ಮಾಡಿದ್ರು. ನಂಗೆ ಬೇರೆಬೇರೆ ಬಣ್ಣದ ಡ್ರೆಸ್ ಹಾಕಿಕೊಂಡು ಬರೋಕೆ ಇಷ್ಟ. ಪಿಂಕ್ ನನ್ನಿಷ್ಟದ ಬಣ್ಣ. ಬಲೂನುಗಳು ಅದೇ ಬಣ್ಣದಲ್ಲಿರುತ್ತವಲ್ಲ. ನಂಗೆ ಹಣ್ಣು, ತರಕಾರಿ ಯಾವುದು ಎಂದು ಗುರುತಿಸಲು ಇದರಿಂದ ತಿಳಿಯುತ್ತದೆ' ಎಂದು ಕಣ್ಣರಳಿಸುತ್ತಾ ಕೇಳಿದ ಪ್ರಶ್ನೆಗೆ ಉತ್ತರಿಸಿದಳು ವಿದ್ಯಾನಿಕೇತನದ ಒಂದನೇ ತರಗತಿಯ ಪುಟಾಣಿ ಗೌರಿ. 

`ಇಲ್ಲಿ ಪಿಂಕ್, ಬ್ಲ್ಯೂ, ಗ್ರೀನ್ ಡೇ ಎಲ್ಲಾ ಮಾಡ್ತಾರೆ. ನಂಗೆ ಮ್ಯಾಂಗೊ ಇಷ್ಟ. ಫ್ರೂಟ್ಸ್ ಡೇ ಮಾಡ್ತಾರಲ್ಲ, ಆಗ ನಾವೆಲ್ಲಾ ಮನೆಯಿಂದ ಹಣ್ಣುಗಳನ್ನು ತಗೊಂಡು ಬರುತ್ತೇವೆ. ಎಲ್ಲರೂ ತಂದ ಹಣ್ಣುಗಳನ್ನು ಟೀಚರ್ಸ್‌ ಕತ್ತರಿಸಿ ಫ್ರೂಟ್ ಸಲಾಡ್ ಮಾಡಿ ಕೊಡುತ್ತಾರೆ. ತುಂಬಾ ಚೆನ್ನಾಗಿರತ್ತೆ' ಎಂದು ಹೇಳುತ್ತಾನೆ ವಿದ್ಯಾನಿಕೇತನದ ಒಂದನೇ ತರಗತಿಯಲ್ಲಿ ಓದುತ್ತಿರುವ ಧ್ರುಶೆಟ್ಟಿ.

ಮಕ್ಕಳ ಕಲಿಕೆಗೆ ದಿಲ್‌ಖುಷ್
-ಶುಭಾ ಬಲ್ಲಾಳ್

ADVERTISEMENT

ನನ್ನ ಮಗ 1ನೇ ಕ್ಲಾಸ್ ಬಿ ಸೆಕ್ಷನ್‌ನಲ್ಲಿ ಓದುತ್ತಿದ್ದಾನೆ. ಅರ್ಜುನ್ ಬಲ್ಲಾಳ ಅಂತ ಅವನ ಹೆಸರು. ಈ ಶಾಲೆಗೆ ಹಾಕಿದ ಮೇಲೆ ಅವನಲ್ಲಿ ತುಂಬಾ ಬದಲಾವಣೆ ಕಂಡುಬಂತು. ಇಲ್ಲಿ ಹಣ್ಣುಗಳ ದಿನ, ತರಕಾರಿ ದಿನ ಎಂದೆಲ್ಲಾ ಮಾಡುತ್ತಾರೆ. ಇಲ್ಲಿ ಕಲಿತದ್ದನ್ನು ಮನೆಗೆ ಬಂದು ನನಗೆ ಹೇಳಿ ತೋರಿಸುತ್ತಾನೆ. ಎಲ್ಲಾ ಬಣ್ಣಗಳನ್ನು ಗುರುತಿಸುತ್ತಾನೆ. ಮೊದಲು ಯಾವುದರ ಕುರಿತೂ ಆಸಕ್ತಿ ತೋರುತ್ತಿರಲಿಲ್ಲ. ಈಗ ಆಯಾ ಹೆಸರು ಹೇಳಿ, ಬೇಕು ಎಂದು ಕೇಳುತ್ತಾನೆ. ಹಣ್ಣು ತಿಂದರೆ ಆರೋಗ್ಯ ಉತ್ತಮವಾಗುತ್ತದೆ ಎಂದು ಶಾಲೆಯಲ್ಲಿ ಹೇಳಿಕೊಟ್ಟಿದ್ದಾರೆ. ನನಗೆ ಹಣ್ಣು ತಂದು ಕೊಡುತ್ತೀಯಾ ಎಂದು ಕೇಳುತ್ತಾನೆ. ಅಮ್ಮ ಗಿಡಗಳನ್ನು ಸಾಯಿಸಬಾರದು. ಪ್ರಾಣಿಗಳಿಗೆ ಹೊಡೆಯಬಾರದು ಎಂದು ನನ್ನ ಮುಂದೆ ಪಾಠ ಮಾಡುತ್ತಾನೆ. ಮಗನಲ್ಲಿ ಆದ ಈ ಬದಲಾವಣೆ ಕಂಡು ಖುಷಿ ಎನಿಸುತ್ತದೆ. ಹೀಗಾಗಿ ಶಾಲಾ ಚಟುವಟಿಕೆಗಳಿಗೆ ನಮ್ಮ ಸ್ಪಂದನವೂ ಇದೆ. 

ಇದರಿಂದ ಒಳಿತು
- ಸುಮಾ ಸತೀಶ್ ಹೆಗಡೆ

ಎನ್.ಆರ್.ಕಾಲೊನಿಯಲ್ಲಿರುವ ಎ.ಪಿ.ಎಸ್.ಪಬ್ಲಿಕ್ ಸ್ಕೂಲ್‌ನಲ್ಲಿ ನನ್ನ ಮಗ ಪವನ್ ಓದುತ್ತಿರುವುದು. ಅವನೀಗ ಎಲ್‌ಕೆಜಿಯಲ್ಲಿ ಓದುತ್ತಿದ್ದಾನೆ. ಅಲ್ಲಿ ರೇನ್‌ಬೋ ಡೇ, ರೇನಿ ಡೇ, ವೆಜಿಟೇಬಲ್ ಡೇ, ನಟ್ಸ್ ಡೇ ಹೀಗೆ ಇನ್ನೂ ಅನೇಕ ವಿಶೇಷ ದಿನಗಳನ್ನು ಆಚರಿಸುತ್ತಾರೆ. ಇದರಿಂದ ಮಕ್ಕಳಿಗೆ ಬಣ್ಣ, ತರಕಾರಿ, ಹಣ್ಣುಗಳ ಬಗ್ಗೆ ಸ್ಪಷ್ಟ ಕಲ್ಪನೆ ಬರುತ್ತದೆ. ಈ ಎಲ್ಲವುಗಳಿಗೂ ಸಂಪೂರ್ಣವಾಗಿ ಸ್ಪಂದಿಸುವುದು ತಂದೆತಾಯಿಗಳಿಗೆ ಸ್ವಲ್ಪ ಕಷ್ಟವಾಗಬಹುದು. ಆದರೆ ಮಕ್ಕಳಿಗೆ ಒಳಿತಾಗುತ್ತದೆ ಎಂದರೆ ಖುಷಿಯಿಂದ ಮಾಡುತ್ತೇವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.