ADVERTISEMENT

ಶಿಲ್ಪ ಸೊಗಸು

ಸತೀಶ ಬೆಳ್ಳಕ್ಕಿ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಮಾತಿಗೆ ನಿಲುಕದ, ಭಾವಕ್ಕಷ್ಟೆ ಅರ್ಥವಾಗುವ ಕೆಲವೊಂದು ಸಂಗತಿಗಳಿವೆ. ಮನದೊಳಗೆ ನವಿರಾಗಿ ಒಸರುವ, ಒಮ್ಮಮ್ಮೆ ಭೋರ್ಗರೆವ ಇಂತಹ ಭಾವನೆಗಳಿಗೆ ಮಾತಿನ ಚೌಕಟ್ಟು ಹಾಕುವುದು ಕಷ್ಟ. ತಾಯಿ ಮಗುವಿಗೆ ಹಾಲುಣಿಸುವಾಗ ಪಡೆಯುವ ಧನ್ಯತೆ, ಕಂದನನ್ನು ಎದೆಗವಚಿಕೊಂಡಾಗ ಆಕೆಗೆ ಸಿಗುವ ಅವರ್ಣನೀಯ ಅನುಭೂತಿ, ಪ್ರೇಮಿಗಳು ಏಕಾಂತದಲ್ಲಿ ಸಂಧಿಸಿದಾಗ ಅನುಭವಿಸುವ ರೋಚಕತೆ, ಇನಿಯನ ತೋಳಿನಲ್ಲಿ ಬಂದಿಯಾದ ಹುಡುಗಿಯೊಬ್ಬಳು ಅನುಭವಿಸುವ ಮಿಶ್ರಭಾವ ಇವೆಲ್ಲವೂ ಮಾತಿಗೆ ನಿಲುಕುವುದಿಲ್ಲ. ಭಾವಕ್ಕಷ್ಟೇ ಗೋಚರವಾಗುವಂತಹ ಅವಿಸ್ಮರಣೀಯ ಸಂಗತಿಗಳು.

ಸ್ಪೇನ್‌ನ ವೇಲೆನ್ಸಿಯಾದ ಖ್ಯಾತ ಶಿಲ್ಪ ಕಲಾವಿದ ರೌಲ್ ರೂಬಿಯೊ ಇಂತಹ ಅನೇಕ ಭಾವಗಳಿಗೆ ಶಿಲ್ಪರೂಪ ನೀಡಿದ್ದಾರೆ. ಮನಸ್ಸಿನೊಳಗೆ ಅವಿತಿರುವ ಭಾವಗಳು, ಹುಚ್ಚುಕನಸುಗಳು, ಸಾಹಿತ್ಯ, ಇತಿಹಾಸ, ಪುರಾಣ ಕಾವ್ಯ ಹಾಗೂ ಪ್ರಕೃತಿ ಈ ಎಲ್ಲ ಸಂಗತಿಗಳು ರೌಲ್ ಅವರ ಕಲಾಕೃತಿಗೆ ಸ್ಫೂರ್ತಿ ನೀಡಿವೆಯಂತೆ.

ಇವರ ಕೈಚಳಕದಲ್ಲಿ ಮೂಡಿಬಂದಿರುವ ರಾಮ-ಸೀತೆ ಹಾಗೂ ಬುದ್ಧನ ವಿಗ್ರಹಗಳು ಎಲ್ಲರ ಕೇಂದ್ರ ಬಿಂದು. ಈ ಕಲಾವಿದ ಈಚೆಗೆ ಯುಬಿ ಸಿಟಿಯಲ್ಲಿರುವ ಯಾದ್ರೊ ಮಳಿಗೆಗೆ ಆಗಮಿಸಿದ್ದರು. ಅಲ್ಲಿ ಶಿಲ್ಪಕಲಾಕೃತಿ ಮಾಡಿ ತೋರಿಸಿ, ಅಚ್ಚರಿ ಹುಟ್ಟಿಸಿದರು. ವೀಕ್ಷಕರೊಂದಿಗೆ ಸಂವಾದ ನಡೆಸಿದರು. ಜತೆಗೆ ತಮ್ಮ ಶಿಲ್ಪ ಕಲಾಕೃತಿಗಳ ಬಗ್ಗೆ ಮಾತನಾಡಿದರು. ಅದನ್ನು ಅವರ ಮಾತುಗಳಲ್ಲಿಯೇ ಕೇಳಿ...

ADVERTISEMENT

`ನನಗೆ ಶಿಲ್ಪಕಲೆಯ ಬಗ್ಗೆ ಇನ್ನಿಲ್ಲದ ಆಸಕ್ತಿ. ಭಾರತೀಯ ಪರಂಪರೆ ಹಾಗೂ ಪುರಾಣ ಕಾವ್ಯಗಳ ಬಗ್ಗೆ ನನ್ನಲ್ಲಿ ಕೌತುಕ ಮನೆಮಾಡಿದೆ. ಇಲ್ಲಿನ ಶ್ರೀಮಂತ ಸಂಸ್ಕೃತಿಯನ್ನೇ ಶಿಲ್ಪದಲ್ಲಿ ಪಡಿಯಚ್ಚುಗೊಳಿಸಿದ್ದೇನೆ. ಇಂತಹ ಆಸಕ್ತಿಯ ಫಲವಾಗಿಯೇ ರೂಪುಗೊಂಡಿದ್ದು ರಾಮ-ಸೀತೆಯ ಕಲಾಕೃತಿ. ಈ ಶಿಲ್ಪವನ್ನು ರೂಪಿಸುವ ಮುನ್ನ ಸಾಕಷ್ಟು ಹೋಂವರ್ಕ್ ಮಾಡಿದ್ದೇನೆ. ರಾಮ-ಸೀತೆ ಬಗ್ಗೆ ತಿಳಿದುಕೊಳ್ಳಲು ಇಂಟರ್‌ನೆಟ್ ಜಾಲಾಡಿದ್ದೇನೆ. ಚಿತ್ರಪಟಗಳನ್ನು ವೀಕ್ಷಿಸಿದ್ದೇನೆ. ಇಲ್ಲಿನ ನೇಟಿವಿಟಿಗೆ ಹೊಂದುವಂತೆ ಶಿಲ್ಪ ರೂಪಿಸಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಇವೆಲ್ಲದರ ಮೊತ್ತವಾಗಿ ರಾಮ-ಸೀತೆಯರ ಸುಂದರ ವಿಗ್ರಹ ಮೈದಳೆಯಿತು. ಈ ಕಲಾಕೃತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂದಹಾಗೆ, `ದಿ ಸ್ಪಿರಿಟ್ ಆಫ್ ಇಂಡಿಯಾ~ ಹೆಸರಿನಡಿಯಲ್ಲಿ ಈ ಕಲಾಕೃತಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಇಲ್ಲಿ ರಾಮ ಸೀತೆಯ ಜತೆಗೆ ರಾಧಾಕೃಷ್ಣ, ಲಕ್ಷ್ಮಿ ಹಾಗೂ ಗಣೇಶನನ್ನು ಏಳು ಅವತಾರಗಳಲ್ಲಿ ರೂಪಿಸಿದ್ದೇನೆ. ಬಾನ್ಸುರಿ, ವೀಣೆ, ಮೃದಂಗ ಹಾಗೂ ನೃತ್ಯ ಭಂಗಿಯಲ್ಲಿರುವ ಗಣೇಶನ ವಿಗ್ರಹಗಳು ಕೂಡ ಎಲ್ಲರ ಆಸಕ್ತಿ ಕೆರಳಿಸುತ್ತಿವೆ. ಮುಂದೆ ಲಕ್ಷಣ ಹಾಗೂ ಹನುಮಾನ್ ವಿಗ್ರಹವನ್ನು ಸೃಷ್ಟಿಸುವ ಒಲವೂ ಇದೆ. ವಿಶ್ವದ ಅನೇಕ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ವಿಗ್ರಹಗಳಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದ್ದೇನೆ.

ದೇವತೆಗಳ ವಿಗ್ರಹಗಳ ಜತೆಗೆ ಮನುಷ್ಯನ ಭಾವನೆಗಳನ್ನು ಶಿಲ್ಪದ ರೂಪದಲ್ಲಿ ಕಟ್ಟಿಕೊಡುವುದು ನನ್ನ ಹವ್ಯಾಸ. ಸ್ವೀಟ್ ಕೇರ್ಸ್‌, ಸಿಲೆಸ್ಟ್ಯಲ್ ಜಾಯ್, ಬಾಸ್ಕೆಟ್‌ಬಾಲ್ ಡಂಕ್, ಟೆನಿಸ್ ಏಸ್, ದಿ ಗೆಸ್ಟ್ ಮೊದಲಾದ ಶಿಲ್ಪಕಲಾಕೃತಿಗಳು ಇದಕ್ಕೆ ಕನ್ನಡಿ ಹಿಡಿಯುತ್ತವೆ. ಈ ಶಿಲ್ಪಗಳಲ್ಲಿ ಮನುಷ್ಯನ ಮನಸ್ಸಿನಲ್ಲಿ ಅಡಗಿಕೊಂಡಿರುವ ಭಾವನೆಗಳೆಲ್ಲಾ ಜೀವಂತ ರೂಪ ಪಡೆದುಕೊಂಡಿವೆ.

ಯಾದ್ರೊ ವಿಶ್ವದ ಅತ್ಯಂತ ಜನಪ್ರಿಯ ಬ್ರಾಂಡ್.  ಗುಣಮಟ್ಟ ಹಾಗೂ ಸೌಂದರ್ಯದಿಂದ ಇದು ಮನಸೆಳೆಯುತ್ತದೆ. ಸಹೋದರರಾದ ಜಾನ್ ಜೋಸ್ ಮತ್ತು ವಿನ್ಸೆಂಟ್ ಯಾದ್ರೊ 1953ರಲ್ಲಿ ಯಾದ್ರೊ ಬ್ರಾಂಡನ್ನು ಹುಟ್ಟುಹಾಕಿದರು. ಈ ಬ್ರಾಂಡ್ ಇಂದು 123 ದೇಶಗಳ್ಲ್ಲಲಿ ಜನಪ್ರಿಯತೆ ಗಳಿಸಿದೆ. ಪೋರ್ಸೆಲಿನ್‌ನಿಂದ (ನಯವಾದ ಹಾಗೂ ಹೊಳಪುಳ್ಳ ಒಂದು ಬಗೆಯ ಮಣ್ಣು) ತಯಾರು ಮಾಡಿದ ಶಿಲ್ಪಕಲಾಕೃತಿ  ಇಂದು ಖ್ಯಾತಿಗಳಿಸಿದೆ. ಯಾದ್ರೊ ಇಲ್ಲಿಗೆ ಕಾಲಿಟ್ಟು 12 ವರ್ಷ ಆಯ್ತು. ಅಲ್ಲಿಂದ ಈತನಕ ಅದು ಜನಪ್ರಿಯವಾಗೇ ಇದೆ.

`ಯಾದ್ರೊನಲ್ಲಿ ವಿವಿಧ ಬಗೆಯ ಹಾಗೂ ವಿವಿಧ ಶ್ರೇಣಿಯ ಶಿಲ್ಪಕಲಾಕೃತಿಗಳು ಲಭ್ಯ. ಸಾಂಪ್ರದಾಯಿಕ, ಐತಿಹಾಸಿಕ, ಆಧುನಿಕ ಹೀಗೆ ಎಲ್ಲ ಬಗೆಯ ಶಿಲ್ಪಗಳಿವೆ. ಮಿರುಗುಟ್ಟುವ ಮೇಲ್ಮೈನ ಈ ಶಿಲ್ಪಗಳ ಚೆಲುವು ಅನೇಕರನ್ನು ಸೆಳೆಯುತ್ತದೆ. ಯುಬಿ ಸಿಟಿಯಲ್ಲಿರುವ ಯಾದ್ರೊ ಮಳಿಗೆಯಲ್ಲಿ ಮೂರು ಸಾವಿರದಿಂದ ಹಿಡಿದು 10 ಲಕ್ಷದವರೆಗಿನ ಶಿಲ್ಪಗಳು ಲಭ್ಯವಿದೆ~.

ಅಂದಹಾಗೆ, ರೌಲ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಅವರಿಗೆ ಭಾರತ ಎಂದಾಕ್ಷಣ ಬಾಲಿವುಡ್ ಹಾಗೂ ಹೋಳಿ ಹಬ್ಬ ನೆನಪಾಗುತ್ತದಂತೆ. ಸಮಯ ಸಿಕ್ಕಾಗಲೆಲ್ಲಾ ಹಿಂದಿ ಸಿನಿಮಾಗಳನ್ನು ನೋಡುವ ಅವರಿಗೆ ಕತ್ರೀನಾ ಕೈಫ್ ಮತ್ತು ಸಲ್ಮಾನ್ ಖಾನ್ ಅಂದರೆ ತುಂಬಾ ಇಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.