ನಟ ಶಿವರಾಜ್ ಕುಮಾರ್ ಅವರ 101ನೇ ಚಿತ್ರ `ಶಿವ~ ಇಂದು ತೆರೆಕಂಡಿದೆ. ಸುಮಾರು 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಚಿತ್ರವನ್ನು ಅವರು ತಮ್ಮ ಬದುಕಿನ ಹೊಸ ಮನ್ವಂತರ ಎಂದು ಪರಿಗಣಿಸಿದ್ದಾರೆ. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಅವರ ನೂರನೇ ಚಿತ್ರ `ಜೋಗಯ್ಯ~ ನಿರಾಸೆ ಮೂಡಿಸಿತ್ತು. ಆದರೆ `ಶಿವ~ ಈ ನಿರಾಸೆಯನ್ನು ಮರೆಸುವ ಜೊತೆಗೆ ತಮ್ಮ ವೃತ್ತಿ ಬದುಕಿಗೆ ಹೊಸ ಅಡಿಪಾಯ ಹಾಕಲಿದೆ ಎನ್ನುವುದು ಅವರ ಭರವಸೆ.
ಚಿತ್ರದ ಬಗ್ಗೆ ಅವರು ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದಾರೆ. `ಪ್ರತಿ ಚಿತ್ರ ಒಪ್ಪಿಕೊಂಡಾಗಲೂ ತಮ್ಮಲ್ಲಿ ಈ ನಿರೀಕ್ಷೆ ಇದ್ದೇ ಇರುತ್ತದೆ. ಕಥೆಗೆ ಅಗತ್ಯವಿದ್ದಷ್ಟು ಶ್ರಮವನ್ನು ಹಾಕಿದ್ದೇನೆ. ಇದು ನನ್ನ ಮೊದಲನೇ ಸಿನಿಮಾವೆಂಬ ಅನುಭವ ನೀಡಿದೆ ಎನ್ನುವ ಶಿವಣ್ಣ, ಚಿತ್ರದಲ್ಲಿ ಮೈನವಿರೇಳಿಸುವ ಅನೇಕ ಸ್ಟಂಟ್‌ಗಳನ್ನು ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಸ್ಟಂಟ್‌ಗಳನ್ನು ರೋಪ್‌ಗಳ ಸಹಾಯವಿಲ್ಲದೆ ಮಾಡಿದವರಿಲ್ಲ~ ಎನ್ನುವುದು ಅವರ ಹೆಮ್ಮೆಯ ನುಡಿ. `ಶಿವ~ದಲ್ಲಿ ಗ್ರಾಫಿಕ್ ಬಳಕೆಯೂ ಹೆಚ್ಚಾಗಿದೆ. ಚಿತ್ರಕ್ಕೆ ಗ್ರಾಫಿಕ್ ಹೊಸ ಸ್ವರೂಪ ನೀಡಿದೆ ಎನ್ನುವುದು ಅವರ ವಿಶ್ಲೇಷಣೆ.
`ಶಿವ~ದ ಚಿತ್ರಕಥೆಯೇ ಅದ್ಭುತವಾಗಿದೆ. ಅಲ್ಲದೆ ಇದು ಕೆಲವೇ ವರ್ಗದ ಜನರನ್ನು ಮಾತ್ರ ಸೆಳೆಯುವುದಿಲ್ಲ, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಸಿನಿಮಾ ಎನ್ನುವುದು ಅವರ ಮಾತು. ಅಂದಹಾಗೆ, ಚಿತ್ರದಲ್ಲಿ ಸಮಾಜ ಮತ್ತು ಸರ್ಕಾರಕ್ಕೆ ಸಂದೇಶ ರವಾನಿಸುವ ಸೂಕ್ಷ್ಮ ವಿಷಯಗಳು ಚಿತ್ರದಲ್ಲಿವೆಯಂತೆ. ಅವರ ಮತ್ತೊಂದು ಚಿತ್ರ `ಲಕ್ಷ್ಮೀ~ ಸಹ ಸಿದ್ಧವಾಗಿದೆ. ಹಾಂಕಾಂಗ್‌ನಲ್ಲಿ ನಡೆದ ಚಿತ್ರೀಕರಣಕ್ಕೆ ಗ್ರಾಫಿಕ್ ಅಳವಡಿಕೆಯ ಕಾರ್ಯ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದ ಶಿವರಾಜ್‌ಕುಮಾರ್, `ಲಕ್ಷ್ಮೀ~ ಆಸಕ್ತಿಕರ ಸಿನಿಮಾ ಎಂದು ಬಣ್ಣಿಸಿದರು.
ಚಿತ್ರೀಕರಣದ ಸಂದರ್ಭದಲ್ಲಿ ನೃತ್ಯ ನಿರ್ದೇಶಕ ಹರ್ಷ ಹೇಳಿದ ಕಥೆಯೊಂದನ್ನು ಕೇಳಿ ಶಿವರಾಜ್‌ಕುಮಾರ್ ರೋಮಾಂಚನಗೊಂಡರಂತೆ. ಹರ್ಷ ಕಥೆಯನ್ನು ನಿರೂಪಿಸಿದ ಶೈಲಿಯಿಂದಲೇ ಅದನ್ನು ಮೆಚ್ಚಿಕೊಂಡು ಕೂಡಲೇ ಆ ಚಿತ್ರಕ್ಕೆ ಅವರು ಒಪ್ಪಿಗೆಯನ್ನೂ ನೀಡಿದರಂತೆ. ಆ ಚಿತ್ರದ ಸೃಷ್ಟಿಯೂ ಅದ್ಭುತವಾಗಿರಲಿದೆ. ಪರಭಾಷೆಯ ಅದ್ದೂರಿ ವೆಚ್ಚದ ಚಿತ್ರಗಳಿಗೆ ಈ ಚಿತ್ರ ಉತ್ತರ ನೀಡಲಿದೆ ಎನ್ನುವುದು ಅವರ ವಿಶ್ವಾಸ.
ಮಂತ್ರಿ ಮಾಲ್‌ನಲ್ಲಿ ಸಂಜೆ ಸದ್ದು ಗದ್ದಲ ಮಾಮೂಲಿಗಿಂತ ಸ್ವಲ್ಪ ಹೆಚ್ಚೇ ಇತ್ತು. ಮಾಲ್‌ನ ಒಳಗೆ, ಹೊರಗೆ, ಮಹಡಿ ಮೇಲೆ ಎಲ್ಲೆಲ್ಲೂ ಜನ ಸಿನಿಮಾ ತಾರೆಯರಿಗಾಗಿ ಕಾತರದಿಂದ ಕಾದು ನಿಂತಿದ್ದರು. `ಶಿವ~ ಚಿತ್ರದ ನಾಯಕ, ನಾಯಕಿ ಮಾಲ್‌ಗೆ ಕಾಲಿಡುತ್ತಿದ್ದಂತೆ ಎಲ್ಲೆಡೆಯಿಂದಲೂ ಕೂಗು, ಶಿಳ್ಳೆ.
ರೇಡಿಯೋ ಸಿಟಿ ಎಫ್.ಎಂ 91.1 ಹಮ್ಮಿಕೊಂಡಿದ್ದ `ರೇಡಿಯೋ ಸಿಟಿ ಸೂಪರ್ ಸಿಂಗರ್~ 4ನೇ ಸೀಸನ್‌ನ ಆಡಿಷನ್ ಉದ್ಘಾಟನೆಗೆಂದು `ಶಿವ~ ಚಿತ್ರದ ನಾಯಕ ಶಿವರಾಜ್‌ಕುಮಾರ್ ಮತ್ತು ನಾಯಕಿ ರಾಗಿಣಿ ದ್ವಿವೇದಿ ಇಲ್ಲಿಗೆ ಬಂದಿದ್ದರು.
ಸಂಗೀತ ಪ್ರತಿಭಾನ್ವೇಷಣೆಯ (ಟ್ಯಾಲೆಂಟ್ ಹಂಟ್) ಆಡಿಷನ್‌ಗೆ ಚಾಲನೆ ನೀಡುವುದರೊಂದಿಗೆ `ಶಿವ~ ಕುರಿತು ಅಭಿಮಾನಿಗಳೊಂದಿಗೆ ಮಾತು ಹಂಚಿಕೊಳ್ಳಲು ಶಿವಣ್ಣ ಮಾಲ್‌ಗೆ ಬಂದಿದ್ದರು.
`ಈ ಸಿನಿಮಾ ನನ್ನ ಜೀವನದ ಅತ್ಯಮೂಲ್ಯ ಚಿತ್ರ. ನನಗಂತೂ ತುಂಬಾ ಖುಷಿಯಾಗಿದೆ, ಇದರಲ್ಲಿ ನೀವು ಬಯಸುವ ಎಲ್ಲಾ ಮನರಂಜನಾ ಅಂಶಗಳೂ ಇವೆ. ನೀವೆಲ್ಲರೂ ಸಿನಿಮಾ ನೋಡಿ ಖುಷಿ ಪಡಬೇಕು~ ಎಂದು ಹೇಳುತ್ತಿದ್ದ ಅವರ ಮಾತಿನಲ್ಲಿ ಚಿತ್ರದ ಬಗೆ ಉತ್ಸಾಹ ತುಂಬಿತ್ತು.
`ಹೊಡಿಮಗ ಹೊಡಿಮಗ...~ ಹಾಡನ್ನು ಶಿವರಾಜ್ ಕುಮಾರ್ ಹೇಳಲಾರಂಭಿಸಿದ್ದೇ ಅಭಿಮಾನಿಗಳೂ ದನಿಗೂಡಿಸಿದರು. ರಾಗಿಣಿ `ಶಿವ~ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. `ಈ ಚಿತ್ರ ಎಲ್ಲರಿಗೂ ಅಚ್ಚುಮೆಚ್ಚಾಗುತ್ತದೆ. ನನ್ನ ಪಾತ್ರ ನನಗೆ ಸಖತ್ ಖುಷಿ ಕೊಟ್ಟಿದೆ~ ಎನ್ನುತ್ತಾ ಇಂಗ್ಲಿಷ್ ಬೆರೆಸಿದ ಕನ್ನಡದಲ್ಲಿ ಅವರು ಉಲಿದಾಗ ಜೋರು ಚಪ್ಪಾಳೆ. ಅವರ ಮಾತು ತಮ್ಮ ಮುಂಬರುವ ಚಿತ್ರ `ರಾಗಿಣಿ ಐಪಿಎಸ್~ ಕಡೆಗೆ ವಾಲಿತು. `ಆ್ಯಕ್ಷನ್ ಪಾತ್ರ ಮಾಡುವುದು ಅಷ್ಟು ಸುಲಭದ ಮಾತಲ್ಲ. ಅಂತಹ ಪಾತ್ರ ನಿರ್ವಹಿಸಿರುವುದಕ್ಕೆ ಏನೋ ಒಂದು ಖುಷಿಯಾಗಿದೆ. ಈ ಚಿತ್ರ ನಿಮ್ಮನ್ನು ರಂಜಿಸಲಿದೆ~ ಎಂದು ಮಾತು ಮುಗಿಸಿದ ಅವರು ಅಭಿಮಾನಿಗಳತ್ತ ಮುತ್ತು ತೇಲಿಬಿಟ್ಟಾಗ ಅಲ್ಲಿದ್ದ ಕೆಲವರು ಪುಳಕಿತರಾದರು. `
ಈ ಸೂಪರ್ ಸಿಂಗರ್ ಆಡಿಷನ್‌ಗೆ ಹೆಚ್ಚೆಚ್ಚು ಜನ ಸೇರಲಿ. ಉತ್ತಮ ಧ್ವನಿ ನಮ್ಮ ನಡುವೆಯೇ ಇದೆ. ಅಂತಹವರಿಗೆ ರೇಡಿಯೋ ಸಿಟಿ ಉತ್ತಮ ವೇದಿಕೆ ಒದಗಿಸಿದೆ, ಈ ಅವಕಾಶ ಸದುಪಯೋಗಪಡಿಸಿಕೊಳ್ಳಿ~ ಎಂದು ಸಂಗೀತಗಾರರಿಗೆ ಕಿವಿ ಮಾತು ಹೇಳಿ ಹೊರಟರು ಶಿವರಾಜ್‌ಕುಮಾರ್.
ನಿಮ್ಮ ಧ್ವನಿಯಲ್ಲಿ ನಿಮಗೆ ವಿಶ್ವಾಸವಿದ್ದರೆ, ನಿಮ್ಮ ಜೀವನವನ್ನು ನಾವು ಬದಲಾಯಿಸುತ್ತೇವೆ ಎಂಬ ಘೋಷಣೆಯೊಂದಿಗೆ ರೇಡಿಯೋ ಸಿಟಿ ನಿರೂಪಕರೂ ಆಡಿಷನ್‌ಗೆ ಚಾಲನೆ ನೀಡಿದರು.
ಸಿಂಗರ್ ಹಂಟ್‌ನ ಆಡಿಷನ್ ಪ್ರಾರಂಭವಾಗಿದ್ದು, ಮಲ್ಲೇಶ್ವರಂನ ರೇಡಿಯೋ ಸಿಟಿ ಸ್ಟುಡಿಯೋ, ಮಂತ್ರಿಮಾಲ್‌ನಲ್ಲಿ ಧ್ವನಿ ಪರೀಕ್ಷೆ ನಡೆಯುತ್ತದೆ. planetradiocity.com ಮೂಲಕವೂ ಆನ್‌ಲೈನ್ ಆಡಿಷನ್ ಇರುತ್ತದೆ. ಎರಡು ಹಂತಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸೆಪ್ಟೆಂಬರ್‌ನಲ್ಲಿ ಅಂತಿಮ ಸುತ್ತು ನಡೆಯಲಿದೆ. ಆರು ಮಂದಿಗೆ ಅವಕಾಶವಿದ್ದು, ಅವರಿಗೆ ಒಂದು ವಾರ ಗಾಯಕಿ ಮಂಜುಳಾ ಗುರುರಾಜ್ ಅವರ ಬಳಿ ಸಂಗೀತಾಭ್ಯಾಸ ನಡೆಸುವ ಅವಕಾಶ ಸಿಗಲಿದೆ. ಅಂತಿಮ ಸುತ್ತಿನ ತೀರ್ಪುಗಾರರಾಗಿ ಎಂ. ಡಿ. ಪಲ್ಲವಿ, ಅರ್ಜುನ್ ಜನ್ಯ ಪಾಲ್ಗೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.