ADVERTISEMENT

‘ಶಿವ’ ತಾಂಡವ !

ಸಿದ್ದು ಆರ್.ಜಿ.ಹಳ್ಳಿ
Published 27 ಏಪ್ರಿಲ್ 2018, 19:30 IST
Last Updated 27 ಏಪ್ರಿಲ್ 2018, 19:30 IST
ಚಿತ್ರ: ತಾಜುದ್ದೀನ್‌ ಆಜಾದ್
ಚಿತ್ರ: ತಾಜುದ್ದೀನ್‌ ಆಜಾದ್   

ನ್ನಅಪ್ಪ ದೇವೇಂದ್ರ ಎಂ.ನಾಯಕ್‌ ಅವರು ರೈಲ್ವೆ ಇಲಾಖೆಯ ನೌಕರ. ಅಮ್ಮ ಸುನಂದಾ ನಾಯಕ್‌. ಅಪ್ಪ ನೌಕರಿಯಲ್ಲಿದ್ದ ಕಾರಣ ನಾನು ಗದಗ, ಹುಬ್ಬಳ್ಳಿಯಲ್ಲಿ ಬೆಳೆದೆ. ಶಾಲೆಗೆ ರಜೆ ಇದ್ದಾಗ ಅಪ್ಪನ ಜತೆ ಕಾರಿಕಟ್ಟಿ ತಾಂಡಾಕ್ಕೆ ಹೋಗುತ್ತಿದ್ದೆ. ಅಲ್ಲಿ ಹಬ್ಬ ಹರಿದಿನಗಳಲ್ಲಿ ನನ್ನ ಸಮುದಾಯದವರು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ನೋಡಿ ಸಂಭ್ರಮಿಸುತ್ತಿದ್ದೆ. ನೃತ್ಯ ಎಂಬುದು ಬಂಜಾರ ಸಮುದಾಯದವರಿಗೆ ರಕ್ತಗತವಾಗಿ ಬಂದಿರುತ್ತದೆ. ಬಹುಶಃ ಹೀಗಾಗಿಯೇ ನಾನು ಡಾನ್ಸ್‌ ಎಂಬ ಮಾಯಾವಿಯ ಬೆನ್ನು ಹತ್ತಿದೆ ಅಂತ ಅನಿಸುತ್ತದೆ.

ಎಸ್ಸೆಸ್ಸೆಲ್ಸಿವರೆಗೂ ಗದಗದಲ್ಲೇ ಓದಿದ ನಾನು, ಅಪ್ಪನ ವರ್ಗಾವಣೆಯ ಸಲುವಾಗಿ ಹುಬ್ಬಳ್ಳಿಗೆ ಬಂದೆ. ಇಲ್ಲಿ ಕೋತಂಬರಿ ವಿಜ್ಞಾನ ಕಾಲೇಜಿನಲ್ಲಿ ಪಿಯುಗೆ ಸೇರಿದೆ. ಓದಿಗಿಂತ ಡಾನ್ಸ್‌ ಕಲಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳುತ್ತಿದ್ದೆ. ಡಾನ್ಸ್‌ ಕಲಿಯಲು ನನ್ನಲ್ಲಿದ್ದ ಪಾಕೆಟ್‌ ಮನಿ ಸಾಕಾಗುತ್ತಿರಲಿಲ್ಲ. ಡಾನ್ಸ್‌ ಎಂದರೆ ಉರಿದುಬೀಳುತ್ತಿದ್ದ ಅಪ್ಪನನ್ನು, ಹಣ ಕೇಳಲು ಧೈರ್ಯ ಸಾಲುತ್ತಿರಲಿಲ್ಲ. ಆದರೂ, ಡಾನ್ಸ್‌ ಕಲಿಯಲೇಬೇಕು ಎಂದ ಉತ್ಕಟ ಆಸೆ ಮನಸ್ಸಿನಲ್ಲಿತ್ತು. ಈ ಮಧ್ಯೆ ‘ಧಾರವಾಡ ಉತ್ಸವ’ ಬಂತು. ಅದರ ಆಡಿಷನ್‌ಗೆ ಹೋದ ನಾನು ದುರದೃಷ್ಟವಶಾತ್‌ ಆಯ್ಕೆ ಆಗಲಿಲ್ಲ. ನಂತರ ಧಾರವಾಡದಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಸಲುವಾಗಿ ಉಚಿತವಾಗಿ ಡಾನ್ಸ್‌ ಕಲಿಯುವ ಅವಕಾಶ ಸಿಕ್ಕಿತು. ಅದಕ್ಕಾಗಿ ಕಾಲೇಜು ಮುಗಿಸಿಕೊಂಡು, ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗಿ ನಿತ್ಯ 2–3 ಗಂಟೆ 2 ತಿಂಗಳು ಅಭ್ಯಾಸ ಮಾಡಿದೆ. ಕೊನೆಗೆ ಕಾರ್ಯಕ್ರಮವೇ ರದ್ದಾದ ಕಾರಣ ಪ್ರದರ್ಶನ ಮಾಡುವ ಅವಕಾಶವೇ ಸಿಗಲಿಲ್ಲ.

ಆದರೆ, 2 ತಿಂಗಳು ಕಲಿತ ನೃತ್ಯ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತು. ಆದ್ದರಿಂದಲೇ ವಿವಿಧ ಕಡೆ ನಡೆದ ನೃತ್ಯ ಸ್ಪರ್ಧೆಗಳಿಗೆ ಹೋಗುತ್ತಿದ್ದೆ. ನಂತರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತನೂ ಆದೆ. ನಂತರ ಈ ಟಿವಿ  ವಾಹಿನಿಯವರು ‘ಗ್ರೇಟ್‌ ಕರ್ನಾಟಕ ಡಾನ್ಸ್‌ ಲೀಗ್‌’ ಸ್ಪರ್ಧೆ ಆಯೋಜಿಸಿದ್ದರು. ಇದು ಅಂತರ ಕಾಲೇಜು ಸ್ಪರ್ಧೆಯಾಗಿತ್ತು. ಪ್ರಾಂಶುಪಾಲರ ಅನುಮತಿ ಪಡೆದು, ನೃತ್ಯದಲ್ಲಿ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿ, ನೃತ್ಯ ತಂಡ ಕಟ್ಟಿ, ಧಾರವಾಡದಲ್ಲಿ ನಡೆದ ಆಡಿಷನ್‌ನಲ್ಲಿ ಭಾಗವಹಿಸಿದೆವು. ಆದರೆಒಂದು ತಿಂಗಳಾದರೂ ವಾಹಿನಿಯವರಿಂದ ಕರೆ ಬರಲಿಲ್ಲ. ಇದರಿಂದ ತುಂಬಾ ಬೇಜಾರಾಯಿತು. ಕೊನೆಗೂ ಒಂದು ತಿಂಗಳ ನಂತರ ಕರೆ ಮಾಡಿ, ಹೈದರಾಬಾದ್‌ಗೆ ಬರಲು ತಿಳಿಸಿದರು.

ADVERTISEMENT

ಹೈದರಾಬಾದ್‌ಗೆ ಹೋಗಲು ಕಾಲೇಜಿನಿಂದ ಹಣಕಾಸು ನೆರವು ಸಿಗಲಿಲ್ಲ. ಆಗ ನಾನೇ ಕಾಸ್ಟ್ಯೂಮ್, ಪ್ರಯಾಣ, ಊಟಕ್ಕಾಗಿ ₹ 15 ಸಾವಿರ ಖರ್ಚು ಮಾಡಬೇಕಾಯಿತು. ಅಲ್ಲಿ ದೊಡ್ಡ ಸ್ಟುಡಿಯೊ, ಭವ್ಯ ವೇದಿಕೆ, ಜಗಮಗಿಸುವ ಬೆಳಕು... ನಮಗೆ ಏಕಕಾಲದಲ್ಲಿ ಸಂತೋಷ ಮತ್ತು ಭಯ ಎರಡನ್ನೂ ತರಿಸಿದವು. ತಾಜ್‌ಮಹಲ್‌ ಚಿತ್ರದ ‘ಖುಷಿಯಾಗಿದೆ ಏಕೋ ನಿನ್ನಿಂದಲೇ’ ಹಾಡಿಗೆ ನೃತ್ಯ ಮಾಡಿದೆವು. ಜಡ್ಜ್‌ ಸ್ಥಾನದಲ್ಲಿದ್ದ ಆ ಚಿತ್ರದ ನಾಯಕ ನಟ ಅಜಯ್ ರಾವ್‌, ಅನುಪ್ರಭಾಕರ್‌, ತ್ರಿಭುವನ್‌ ಮಾಸ್ಟರ್‌ ಅವರಿಂದ ಒಳ್ಳೆಯ ಕಾಮೆಂಟ್‌ ಸಿಕ್ಕಿತು. ಆದರೆ, 2 ಎಪಿಸೋಡ್‌ಗಳ ನಂತರ ನಾವು ಎಲಿಮಿನೇಟ್‌ ಆದೆವು. ಆದರೆ, ಟಿ.ವಿ.ಯಲ್ಲಿ ಪ್ರಸಾರವಾಗಿದ್ದ ಎರಡು ಎಪಿಸೋಡ್‌ಗಳೇ ನನಗೆ ಐಡೆಂಟಿಟಿಯನ್ನು ತಂದುಕೊಟ್ಟವು.

ನಂತರ ನಾನು ‘ಡಿಪ್ಲೊಮಾ ಇನ್‌ ಆಟೊಮೊಬೈಲ್‌’ ಓದಲು ಧಾರವಾಡದ ‘ಜೆಎಸ್‌ಎಸ್‌ ಕೆ.ಎಚ್‌.ಕಬ್ಬೂರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ಗೆ ಹೋದೆ. ಎರಡನೇ ಸೆಮ್‌ನಲ್ಲಿ ಕೆಲವು ಸಬ್ಜೆಕ್ಟ್‌ಗಳು  ಉಳಿದು ಕೊಂಡವು. ನಂತರ, ಪ್ರಾಯೋಗಿಕ ಜ್ಞಾನಕ್ಕಾಗಿ 1 ವರ್ಷ ಬಜಾಜ್‌ ಶೋರೂಂ ನಲ್ಲಿ ಕೆಲಸ ಮಾಡಿದೆ. ಆದರೆ, ಇದ್ಯಾವುದೂ ನನಗೆ ಒಪ್ಪುವುದಿಲ್ಲ ಅಂತ ನನ್ನ ಮನಸು ಹೇಳುತ್ತಿತ್ತು. ನಂತರ, ಬೆಂಗಳೂರಿನಲ್ಲಿ ಡಾನ್ಸ್‌ ವರ್ಕ್‌ಶಾಪ್‌ಗೆ ಸೇರಿದೆ. ಅಲ್ಲಿ ನನ್ನ ಪ್ರತಿಭೆ ಗುರುತಿಸಿ, ’ಸ್ಪೆಷಲ್‌ ಪೊಟೆನ್ಷಿಯಲ್‌ ಬ್ಯಾಚ್‌’ಗೆ ಆಯ್ಕೆ ಮಾಡಿದರು. ಆಗ ಪ್ರತಿ ಶನಿವಾರ ಮತ್ತು ಭಾನುವಾರ ಹುಬ್ಬಳ್ಳಿಯಿಂದ ಬೆಂಗಳೂರಿಗೆ 2 ವರ್ಷ ಪ್ರಯಾಣ ಮಾಡಿದೆ. ಉಳಿದ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ನೃತ್ಯ ಹೇಳಿಕೊಟ್ಟು ತಿಂಗಳಿಗೆ ₹ 500ರಿಂದ ₹ 1 ಸಾವಿರ ಸಂಪಾದಿಸುತ್ತಿದ್ದೆ. ಇದರಿಂದ ಅಪ್ಪ ತುಂಬಾ ಬೇಸರಪಟ್ಟು ಕೊಂಡು, ನಾನೇ ತಿಂಗಳಿಗೆ ₹ 500 ಕೊಡುತ್ತೇನೆ. ಮನೆಯಲ್ಲೇ ಇರು ಅಂದ್ರು. ಆದರೆ, ನಾನು ಬೆವರು ಸುರಿಸಿ ದುಡಿದ ಹಣದಿಂದ ತೃಪ್ತಿ ಸಿಗುತ್ತಿದೆ ಎಂದೆ.

ಈ ಮಧ್ಯೆ, ಸುವರ್ಣ ವಾಹಿನಿಯ ‘ಸೈ2’ ಡಾನ್ಸ್‌ ರಿಯಾಲಿಟಿ ಶೋದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಅಲ್ಲಿ ನನ್ನ ಸಹ ನೃತ್ಯಗಾರ್ತಿ ಅನಾರೋಗ್ಯಕ್ಕೆ ತುತ್ತಾದರು. ಆಗ, ನನಗೆ ಪಾರ್ಟ್‌ನರ್‌ ಇಲ್ಲದಂತಾಯಿತು. ಹೀಗಾಗಿ ನಾನೇ ಜಯಗಳಿಸುತ್ತೇನೆ ಎಂಬ ಅಚಲ ಆತ್ಮವಿಶ್ವಾಸವಿದ್ದರೂ, ಸೆಮಿಫೈನಲ್‌ಗೂ ಮುನ್ನವೇ ಎಲಿಮಿನೇಟ್‌ ಆಗಬೇಕಾಯಿತು.

ನಂತರ, ಜೀ ಕನ್ನಡ ವಾಹಿನಿಯ ‘ಕುಣಿಯೋಣು ಬಾರಾ’ ರಿಯಾಲಿಟಿ ಶೋದಲ್ಲಿ ಭಾಗವಹಿಸಿ, ವಿನ್ನರ್‌ ಪಟ್ಟವನ್ನು ಅಲಂಕರಿಸಿದೆ. ಅಂತಿಮವಾಗಿ ಜಯದ ರುಚಿಯನ್ನು ಅನುಭವಿಸಿದೆ. ಆರಂಭದಲ್ಲಿ, ಬೆಂಗಳೂರಿಗೆ ಬಂದು, ಮೆಜೆಸ್ಟಿಕ್‌ನಲ್ಲಿ ನಿಂತಾಗ ಸುತ್ತಲಿನ ಜನರನ್ನು ನಾನು ಗಾಬರಿಯಿಂದ ನೋಡುತ್ತಿದ್ದೆ. ಟಿ.ವಿ.ಯಲ್ಲಿ ಕಾಣಿಸಿಕೊಂಡ ಮೇಲೆ, ಮೆಜೆಸ್ಟಿಕ್‌ನಲ್ಲಿ ನಿಂತಾಗ ಕೆಲವು ಜನರು ನನ್ನನ್ನು ಗುರುತಿಸಿ, ಮಾತನಾಡಿಸುತ್ತಿದ್ದರು. ಈ ಬದಲಾವಣೆ ನನಗೆ ಖುಷಿ ಕೊಟ್ಟಿತು.

ಪರಿಣತ ಡಾನ್ಸರ್‌ ಆಗಬೇಕಾದರೆ ಇದಕ್ಕೆ ತಕ್ಕ ಶಿಕ್ಷಣವೂ ಅಗತ್ಯ ಎಂಬುದನ್ನು ಮನಗಂಡು, ಬೆಂಗಳೂರಿನ ‘ಅಟ್ಟಕಲರಿ ಸೆಂಟರ್‌ ಫಾರ್‌ ಮೂವ್‌ಮೆಂಟ್‌ ಆರ್ಟ್ಸ್‌’ ಶಿಕ್ಷಣ ಸಂಸ್ಥೆಯಲ್ಲಿ ‘ಡಿಪ್ಲೊಮಾ ಇನ್‌ ಮೂವ್‌ಮೆಂಟ್‌ ಆರ್ಟ್ಸ್‌ ಅಂಡ್‌ ಮಿಕ್ಸೆಡ್‌ ಮೀಡಿಯಾ’ ಎಂಬ ಒಂದು ವರ್ಷದ ಸರ್ಟಿಫಿಕೆಟ್‌ ಕೋರ್ಸ್‌ ಮಾಡಿದೆ. ಇಲ್ಲಿ ಅಂತರರಾಷ್ಟ್ರೀಯ ಮಟ್ಟದ ಶಿಕ್ಷಕರು ಹೇಳಿಕೊಟ್ಟ ಪಾಠ ನೃತ್ಯ ಲೋಕದ ಮತ್ತೊಂದು ಮಗ್ಗುಲನ್ನು ಪರಿಚಯಿಸಿತು.

ವಾರಸ್ದಾರ, ಅರಮನೆ, ದಿಲ್‌ವಾಲ ಸೇರಿದಂತೆ ಐದಾರು ಚಲನಚಿತ್ರಗಳಲ್ಲಿ ಬ್ಯಾಕ್‌ಗ್ರೌಂಡ್‌ ಡಾನ್ಸರ್‌ ಆಗಿ ಕಾಣಿಸಿಕೊಂಡಿದ್ದೇನೆ. ಕೆಲವು ಪ್ರಶಸ್ತಿ ಪ್ರದಾನ ಸಮಾರಂಭ, ರಿಯಾಲಿಟಿ ಶೋಗಳಲ್ಲಿ ಅಸಿಸ್ಟೆಂಟ್‌ ಕೊರಿಯೊಗ್ರಾಫರ್‌ ಆಗಿ ಕೆಲಸ ಮಾಡಿದ್ದೇನೆ. ಹುಬ್ಬಳ್ಳಿಯ ಸಂಸ್ಕೃತಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಪ್ರತಿಭೆ ಮತ್ತು ಸಾಧನೆಯನ್ನು ಗುರುತಿಸಿ, ರಾಧಾಕೃಷ್ಣ ಅಕಾಡೆಮಿ ಆಫ್‌ ಫೈನ್‌ ಆರ್ಟ್ಸ್‌ ಅಂಡ್‌ ಎಜುಕೇಶನ್‌’ ಸಂಸ್ಥೆಯವರು ‘ದಶಕಗಳ ಸಾಧಕರು’ ಎಂಬ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ನನ್ನದೇ ಆದ ಡಾನ್ಸ್‌ ಅಕಾಡೆಮಿ ಆರಂಭಿಸಬೇಕು ಎನ್ನುವ ಕನಸು ಈಗ ನನಸಾಗಿದೆ. 2016ರಲ್ಲಿ ಹುಬ್ಬಳ್ಳಿಯಲ್ಲಿ ಶಿವ ಲಾಸ್ಯ ಡಾನ್ಸ್‌ ಸ್ಟುಡಿಯೊ ತೆರೆದು ನೃತ್ಯಾಸಕ್ತರಿಗೆ ನೃತ್ಯ ಹೇಳಿಕೊಡುತ್ತಿದ್ದೇನೆ. ಇಲ್ಲಿ ಹಣಕ್ಕಿಂತ ಆತ್ಮಸಂತೃಪ್ತಿ ಸಿಗುತ್ತಿದೆ. ಜೀವನಕ್ಕೆ ಇದಕ್ಕಿಂತ ಮತ್ತೇನು ಬೇಕು ಅಲ್ವಾ ಸರ್‌...

(ನೃತ್ಯ ಕಲಾವಿದ ಶಿವಪ್ರಕಾಶ್ ನಾಯಕ್)

**‌

ಕಲರಿಪಯಟ್ಟು, ಸಾಲ್ಸಾ ನೃತ್ಯದ ಸೊಬಗು

ಶಿವ ಲಾಸ್ಯ ಡಾನ್ಸ್‌ ಅಂಡ್‌ ಫಿಟ್‌ನೆಸ್‌ ಸ್ಟುಡಿಯೊದಲ್ಲಿ ಫ್ರೀಸ್ಟೈಲ್‌, ಕಂಟೆಪರರಿ, ಬಾಲಿವುಡ್‌, ಹಿಪ್‌ ಹಾಪ್‌, ಸಾಲ್ಸಾ, ಜಾಜ್‌, ಫೋಕ್‌, ಕಲರಿಯಪಯಟ್ಟು, ಭರತನಾಟ್ಯ, ಬ್ಯಾಲೆ, ಘೂಮರ್‌, ಗಾರ್ಬಾ, ದಾಂಡಿಯಾ ನೃತ್ಯ ಪ್ರಕಾರಗಳನ್ನು ಕಲಿಸಲಾಗುತ್ತದೆ. ಜತೆಗೆ ಗಿಟಾರ್‌, ಕೀಬೋರ್ಡ್‌ ನುಡಿಸುವುದನ್ನೂ ಹೇಳಿಕೊಡಲಾಗುತ್ತದೆ.

ಯೋಗ, ಜುಂಬಾ, ಏರೋಬಿಕ್ಸ್‌ ಮುಂತಾದ ಪ್ರಕಾರಗಳ ಮೂಲಕ ಫಿಟ್‌ನೆಸ್‌ ಮಂತ್ರವನ್ನೂ ಕಲಿಸಲಾಗುತ್ತದೆ. ಇಲ್ಲಿ ಸುಮಾರು 80 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಬೆಳಿಗ್ಗೆ 6ರಿಂದ 8 ಮತ್ತು ಸಂಜೆ 4.30ರಿಂದ ರಾತ್ರಿ 8ರವರೆಗೆ ವಿವಿಧ ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ. ಮಾಹಿತಿಗೆ ಮೊ: 78995 90722 ಸಂಪರ್ಕಿಸಿ.

**

ಕನಸೆಲ್ಲ ನನಸಾಗಿದೆ...

ತನ್ನ ಮಗ ಚೆನ್ನಾಗಿ ಓದಿ, ಸರ್ಕಾರಿ ನೌಕರಿಗೆ ಸೇರಬೇಕು ಎಂಬುದು ಅಪ್ಪನ ಆಸೆ. ಏನೇ ಆಗಲಿ, ಕಷ್ಟಪಟ್ಟು ನೃತ್ಯಾಭ್ಯಾಸ ಮಾಡಿ ‘ಅತ್ಯುತ್ತಮ ಡಾನ್ಸರ್‌’ ಆಗಬೇಕು ಎಂಬುದು ಮಗನ ಕನಸು. ’ಆಸೆ’ ಮತ್ತು ‘ಕನಸು’ ಎಂಬ ಅವಳಿ ದೋಣಿಗಳ ಪಯಣದಲ್ಲಿ ಯಶಸ್ವಿಯಾಗಿ ದಡ ಮುಟ್ಟಿದ್ದು ‘ಕನಸು’!

ಹೌದು, ಶಿವಪ್ರಕಾಶ್‌ ಡಿ. ನಾಯಕ್‌ ಎಂಬ ತರುಣನ ಕನಸು ಈಗ ನನಸಾಗಿದೆ. ಪರ್‌ಫಾರ್ಮರ್‌, ಡಾನ್ಸರ್‌, ಕೊರಿಯೊಗ್ರಾಫರ್‌...ಹೀಗೆ ಹಲವು ಪಾತ್ರಗಳ ಮೂಲಕ ನೃತ್ಯ ಲೋಕದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯ ಶಿರೂರುಪಾರ್ಕ್‌ನಲ್ಲಿ ‘ಶಿವ ಲಾಸ್ಯ ಡಾನ್ಸ್‌ ಅಂಡ್‌ ಫಿಟ್‌ನೆಸ್‌ ಸ್ಟುಡಿಯೊ’ ತೆರೆದು, ನೃತ್ಯಾಸಕ್ತರಿಗೆ ತರಬೇತಿ ನೀಡುವಲ್ಲಿ ನಿರತರಾಗಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಕಾರಿಕಟ್ಟಿ ತಾಂಡಾದ ಬಂಜಾರ ಸಮುದಾಯದ ಶಿವಪ್ರಕಾಶ್‌ ಅವರು, ಹಲವು ಎಡರು ತೊಡರುಗಳನ್ನು ದಾಟಿ, ‘ದಿ ಪ್ರೈಡ್‌ ಆಫ್‌ ಹುಬ್ಳಿ’, ಜೀ ವಾಹಿನಿಯ ‘ಕುಣಿಯೋಣು ಬಾರಾ’ ಚಾಂಪಿಯನ್‌ ಪಟ್ಟ ಹಾಗೂ ‘ದಶಕದ ಸಾಧಕರು’ ಎಂಬ ರಾಜ್ಯ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಳ್ಳುವವರೆಗೆ ಸವೆಸಿದ ಹಾದಿಯನ್ನು ಶಿವಪ್ರಕಾಶ್‌ ಅವರು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.