ADVERTISEMENT

ಶಿವ ನಾಮ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST
ಶಿವ ನಾಮ
ಶಿವ ನಾಮ   

ಶಿವ  ಶಿವ ಎಂದರೆ ಭಯವಿಲ್ಲ... ಶಿವನಾಮಕ್ಕೆ ಸಾಟಿ ಬೇರಿಲ್ಲ... ಶಿವಭಕ್ತನಿಗೆ ನರಕ ಇಲ್ಲ... ಹೌದು ಸಾಮಾನ್ಯ ದಿನಗಳಲ್ಲೇ ಈ ಪಂಚಾಕ್ಷರ ಮಂತ್ರ ಪಠಣಕ್ಕೆ ಇಷ್ಟೊಂದು ಶಕ್ತಿ. ಇನ್ನು ಶಿವರಾತ್ರಿಯಂದು ಜಾಗರಣೆ, ಆಚರಣೆಗಳಿಂದ ಭಕ್ತ ಈಶ್ವರನ ಕೃಪೆ ಆಶೀರ್ವಾದಕ್ಕೆ ಪಾತ್ರನಾಗುತ್ತಾನೆ ಎನ್ನುವುದು ಆಸ್ತಿಕರ ನಂಬಿಕೆ.

 ಮಾಘಮಾಸದ ಚರ್ತುದರ್ಶಿ ರಾತ್ರಿಯಿಡೀ ಎಲ್ಲ ಶಿವಾಲಯಗಳಲ್ಲಿ ಶಿವ ನಾಮ ಜಪ ದಿನ. ರುದ್ರಾಭಿಷೇಕ, ಮಹಾಮಂಗಳಾರತಿ, ನಿರಂತರ ಶಿವ ಧ್ಯಾನ, ಭಜನೆ, ಪ್ರವಚನ, ಪುರಾಣ ಶ್ರವಣ, ಇಲ್ಲಿನ ಪ್ರಾಂಗಣದಲ್ಲಿ ಜನರ ದೊಡ್ಡ ಸಂದಣಿ.

ಅಂದು ಬೆಳಿಗ್ಗೆಯಿಂದಲೇ ಗೃಹಿಣಿಯರು, ಮಕ್ಕಳು ಮನೆಯ ಮುಂದೆ ರಂಗೋಲಿ ಬಿಡಿಸುವುದು, ಶಿವನಿಗೆ ಇಷ್ಟವಾದ ಬಿಲ್ವ ಪತ್ರೆಯಿಂದ ಶಿವಲಿಂಗ ಸಿಂಗರಿಸುವ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ದೇವರಿಗೆ ಇಷ್ಟವಾದ ಧೂಪ ಆರತಿ  ಮಾಡುವುದರೊಂದಿಗೆ ಬಿಲ್ವಾರ್ಚನೆ, ಶಿವಸಹಸ್ರನಾಮ ಪಠನೆ ನಿರಂತರವಾಗಿರುತ್ತದೆ.

ಮನೆಯಲ್ಲಿ ಶಿವನಿಗೆ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಗಳಿಗೆ ಪಯಣ, ಎಲ್ಲೆಲ್ಲಿ ಶಿವನ ದೇವಾಲಯಗಳಿವೆಯೋ ಅಲ್ಲೆಲ್ಲ ಭಕ್ತರು ದರುಶನ ಮಾಡಿ ಬಂದು ಧನ್ಯರಾಗುತ್ತಾರೆ. ಮನೆಯಲ್ಲಿ ಜಾಗರಣೆ ಇರುವವರಿಗೆ ಫಲಾಹಾರ, ಪಾನಕ, ಕೋಸಂಬರಿ ಜೊತೆಗೆ ಉಪ್ಪಿಟ್ಟು ಸಮಾರಾಧನೆ.

ADVERTISEMENT

ಗವಿಪುರಂ ಬಡಾವಣೆಯ ಗವಿಗಂಗಾಧರೇಶ್ವರ, ವಿಜಯಗರದ ಕನ್ನಿಕಾಪರಮೇಶ್ವರಿ, ಮಲ್ಲೇಶ್ವರದ ಕಾಡುಮಲ್ಲೇಶ್ವರ, ವಾಸವಿ ಕನ್ನಿಕಾಪರಮೇಶ್ವರಿ, ದಕ್ಷಿಣ ನಂದಿತೀರ್ಥ, ನಂಜನಗೂಡು ಶ್ರೀ ಕಂಠೇಶ್ವರ ಸೇವಾ ಸಂಘದ ‘ಮೃತ್ತಿಕಾ ಶಿವಲಿಂಗ’ ಹಾಗೂ ಮಹಾಗಣಪತಿ ದೇವಸ್ಥಾನ ಟ್ರಸ್ಟ್‌ನ ನಾಲ್ಕುಅಡಿ ಎತ್ತರದ ನವರತ್ನ ಖಚಿತ ಶಿವಲಿಂಗ, ಹಳೆ ಏರ್‌ಪೋರ್ಟ್ ರಸ್ತೆಯ ಬೃಹತ್ ಶಿವ ಹೀಗೆ ವಿವಿಧೆಡೆಯ ಶಿವ ದೇವಾಲಯಗಳು ಬುಧವಾರ ರಾತ್ರಿಯಿಡೀ ತೆರೆದಿರುತ್ತವೆ. ಭಕ್ತರ ದಟ್ಟಣೆ ಸಹಜವಾಗೇ ಹೆಚ್ಚಿರುತ್ತದೆ.

ಜಾಗರಣೆಗೆ ಅನುಕೂಲವಾಗಲಿ ಎಂದು ವಿವಿಧೆಡೆ ರಾತ್ರಿಯಿಡೀ ನಗೆ ಜಾಗರಣೆ, ಭಜನೆ, ಸಂಗೀತ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಅನೇಕ ಬಡಾವಣೆಗಳಿಂದ ರಾತ್ರಿಯಿಡಿ ಶಿವ ದೇವಾಲಯಗಳ ದರ್ಶನಕ್ಕೆ ವಾಹನಗಳು ಹೊರಡುವುದೂ ಉಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.