ADVERTISEMENT

ಶಿವ ಶರಣರ ದರ್ಶನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ತುಂಬಿದ ಅನುಭವ ಮಂಟಪದಲ್ಲಿ ಮೈಮರೆತಿದ್ದ ಆಯ್ದಕ್ಕಿ ಮಾರಯ್ಯನನ್ನು ಆಯ್ದಕ್ಕಿ ಲಕ್ಕಮ್ಮ ಎಚ್ಚರಿಸುತ್ತಾಳೆ. ಹೆಚ್ಚಿನ ದವಸ ಧಾನ್ಯ ತಂದ ಮಾರಯ್ಯನನ್ನು ಬಾಗಿಲಲ್ಲಿಯೇ ತಡೆದು `ಈಸಕ್ಕಿಯಾಸೆ ನಮಗ್ಯಾಕೆ? ಈಶ್ವರನೊಪ್ಪ~ ಎಂದು ಎಚ್ಚರಿಸಿ ಮರಳಿ ಕಳಿಸುತ್ತಾಳೆ.

ಆಗ ಅಲ್ಲಿ ಸೇರಿದ್ದ ಸಭಿಕರಿಂದ ಕರತಾಡನ. ಇದು ನಡೆದದ್ದು ಕಲ್ಯಾಣದಲ್ಲಲ್ಲ; ಹಂಪಿನಗರದ ಗ್ರಂಥಾಂಗಣದಲ್ಲಿ. 

ವಚನಜ್ಯೋತಿ ಬಳಗವು ತನ್ನ 15ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ `ವಚನಾಮೃತವರ್ಷಿಣಿ~ ಮಹೋತ್ಸವದಲ್ಲಿ ನಡೆದ ಶರಣರ ವೇಷಭೂಷಣ ಸ್ಪರ್ಧೆಯಲ್ಲಿ. ನಗರದ ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಶರಣರ ವೇಷ ಧರಿಸಿಕೊಂಡು ಹಲವು ಪ್ರಸಂಗಗಳನ್ನು ಅಭಿನಯಿಸಿದ್ದು 12ನೇ ಶತಮಾನದ ಶರಣರನ್ನು ನೆನಪಿಸುವಂತಿತ್ತು.

ADVERTISEMENT

ವಚನ ವೇಷಭೂಷಣ ಸ್ಪರ್ಧೆಯಲ್ಲದೆ ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನ ಚಿತ್ರ, ವಚನ ರಸಪ್ರಶ್ನೆ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ಹತ್ತಾರು ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಸುನೀತ, ದೇವೇಂದ್ರಕುಮಾರ ಪತ್ತಾರ್, ರವೀಂದ್ರ ಸೊರಗಾವಿ, ಆನಂದ ಮಾದಲಗೆರೆ, ಅನೂಪ್ ಸೀಳಿನ್, ವೀಣಾಮೂರ್ತಿ, ಹುಲಿಕಲ್ ನಾಗರಾಜ್, ಚೇತನಾ ಮುಧೋಳ್ ಮೊದಲಾದವರು ಎರಡು ದಿನಗಳ ಕಾಲ ಸಂಗೀತ ಸಂಭ್ರಮವನ್ನು ನಡೆಸಿಕೊಟ್ಟರು. 

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗೋಪಾಲ್ ವಾಜಪೇಯಿ, ಎಚ್.ಡಿ. ರೇಣುಕುಮಾರ್, ಶಾಂತಾ ಜಯಕುಮಾರ್, ಕಮಲಾ ಬಾಳೇಕುಂದ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಚಿವ ವಿ. ಸೋಮಣ್ಣ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್. ಸದಾಶಿವಯ್ಯ, ಮೋನೋ ಸಿಇಓ ಎಂ.ಎಸ್. ನಾಗೇಂದ್ರ ಮಕ್ಕಳಿಗೆ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.