ADVERTISEMENT

ಶ್ರೀಕೃಷ್ಣ ಸಂಧಾನ ಯಕ್ಷಗಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಸಪ್ತಕ, ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಹಾಗೂ ಕೆರೆಮನೆ ಯಕ್ಷ ನಕ್ಷತ್ರಗಳ ನೆನಪಿನಲ್ಲಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಇದೇ ಭಾನುವಾರ ಶ್ರೀಕೃಷ್ಣ ಸಂಧಾನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ರಾಜ್ಯ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಎಂ.ಎಲ್.ಸಾಮಗ ದುರ್ಯೋಧನನ ಪಾತ್ರದಲ್ಲಿ ಹಾಗೂ ಕೆರೆಮನೆ ಶಿವಾನಂದ ಹೆಗಡೆ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಂತ ಹೆಗಡೆ (ಭಾಗವತರು), ಪರಮೇಶ್ವರ ಹೆಗಡೆ, ತಾರೆಸರ (ಮದ್ದಳೆ), ಗಜಾನನ ಹೆಗಡೆ (ಚಂಡೆ)ಯಲ್ಲಿ ಸಹಕರಿಸುವರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಸಚ್ಚಿದಾನಂದ ಹೆಗಡೆ ಶಿರಸಿ ಹಾಗೂ ಸಮಾಜ ಸೇವಕ ಎನ್.ಆರ್.ನಾರಾಯಣ ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಈ ಸಂದರ್ಭದಲ್ಲಿ ವಿ.ಆರ್.ಹೆಗಡೆ ಅವರನ್ನು ಸನ್ಮಾನಿಸಲಾಗುವುದು.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಡತೋಕ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಹೆಗಡೆ ಎಂ.ಎ, ಎಲ್.ಎಲ್.ಬಿ.ಪದವೀಧರರು. ಅಧ್ಯಾಪಕನಾಗಿ ವೃತ್ತಿ ಆರಂಭಿಸಿದರೂ ಸುಪ್ತವಾದ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ತುಡಿತಗಳ ಒಲವಿನಿಂದ ಕೇಂದ್ರ ಸರ್ಕಾರದ ನೌಕರಿಗೂ ರಾಜೀನಾಮೆ ನೀಡಿದವರು.

2001ರಲ್ಲಿ ಆರಂಭವಾದ `ಅಗ್ನಿ ಸೇವಾ ಟ್ರಸ್ಟ್~ ಇದರ ಕಾರ್ಯಾಧ್ಯಕ್ಷರು ಹಾಗೂ `ಯಕ್ಷಗಾನ ಯೋಗಕ್ಷೇಮ ಅಭಿಯಾನ~ದ ಸಾರಥಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಲಾ ಸೇವಕ ಹಾಗೂ ಕಲಾ ಪೋಷಕರಾಗಿ ಇವರು ಮಾಡಿರುವ ಸೇವೆ ಪರಿಗಣಿಸಿ ಭಾನುವಾರ ಹೆಗಡೆ ಅವರನ್ನು ಸನ್ಮಾನಿಸಲಾಗುವುದು.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 5. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.