ಟೀವಿ ಎಂಬ ಬೆಡಗಿನ ಲೋಕದಲ್ಲಿ ನಡೆಯುವ ರಿಯಾಲಿಟಿ ಶೋಗಳ ಸೆಳೆತ ಮಧ್ಯಮ ವರ್ಗದ ಬಡಪಾಯಿ ಪೋಷಕರನ್ನು ಬಲಿತೆಗೆದುಕೊಳ್ಳುತ್ತಿದೆಯೇ? ಸಂಗೀತ ಉದ್ಯಮ ಸಾಗುತ್ತಿರುವ ಹಾದಿ ಹೇಗಿದೆ? ಇಂದು, `ವಿಶ್ವ ಸಂಗೀತ ದಿ~ದ ಹಿನ್ನೆಲೆಯಲ್ಲಿ ಸಂಗೀತಲೋಕದ ಸಾಧಕ-ಬಾಧಕಗಳ ಕುರಿತು ಈ ಕ್ಷೇತ್ರದವರೇ ಮಾತನಾಡಿದ್ದಾರೆ.
`ಖಿನ್ನತೆಯತ್ತ...~
ಇತ್ತೀಚಿನ ದಿನಗಳಲ್ಲಿ ಸಂಗೀತ ಶಾಲೆಗೆ ಮಕ್ಕಳನ್ನು ಕರೆತರುವ ಬಹುತೇಕ ಪೋಷಕರ ಗುರಿ ಯಾವುದೋ ರಿಯಾಲಿಟಿ ಶೋ. ಆದಷ್ಟು ಬೇಗ ಮಗುವನ್ನು ಸ್ಪರ್ಧೆಗೆ ತಯಾರು ಮಾಡಿ ಎಂದು ಬಹಿರಂಗವಾಗಿಯೇ ಬೇಡಿಕೆ ಸಲ್ಲಿಸುತ್ತಾರೆ.
ಅಷ್ಟೇ ನಿರ್ದಾಕ್ಷಿಣ್ಯವಾಗಿ ನಾನೂ, `ಸಾಧ್ಯವಿಲ್ಲ, ಒಂದೆರಡು ತಿಂಗಳಲ್ಲಿ ಸಂಗೀತ ಕಲಿಯಲು ಬಾರದು~ ಎಂದು ಉತ್ತರಿಸಿ ಸಾಗಹಾಕುತ್ತೇನೆ. ಟೀವಿ ಎಂಬ ಬೆಡಗಿನ ಲೋಕದ ಸೆಳೆತ ಮಧ್ಯಮ ವರ್ಗದ ಬಡಪಾಯಿ ಪೋಷಕರನ್ನು ಬಲಿತೆಗೆದುಕೊಳ್ಳುತ್ತಿದೆ.
ಟಿ.ವಿ. ಚಾನೆಲ್‌ಗಳೂ ಅಷ್ಟೇ, ವಿಜೇತರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಘೋಷಿಸಿ ಕೊನೆಗೆ ನೀಡದೆ ಸುಮ್ಮನಾಗುತ್ತದೆ. ಇದರಿಂದ ಖಿನ್ನತೆಗೊಳಗಾದ ಮಕ್ಕಳು ನನ್ನ ಬಳಿ ಬಂದಿದ್ದೂ ಇದೆ. ಅವರಿಗೆ ಮತ್ತೆ ಧೈರ್ಯ ತುಂಬಿ ಹಾಡುವಂತೆ ಪ್ರೇರೇಪಿಸುವುದು ಸುಲಭದ ಮಾತಲ್ಲ.
ರಿಯಾಲಿಟಿ ಶೋಗಳಿಗೆ ತೀರ್ಪುಗಾರಳಾಗುವುದೂ ನನಗಿಷ್ಟವಿಲ್ಲ. ಒಮ್ಮೆ ಹೋಗಿದ್ದಾಗ ಅಲ್ಲಿ ಟಿಆರ್‌ಪಿಗಾಗಿ ಮಕ್ಕಳು ಕಣ್ಣೀರಿಳಿಸುವುದನ್ನು ಕಂಡು ಬೇಸತ್ತು ಪ್ರಾಯೋಜಕರ ಬಳಿ ಜಗಳವಾಡಿ ಅರ್ಧದಲ್ಲೇ ಎದ್ದು ಬಂದಿದ್ದೆ.
ನಿರಂತರ ಕಲಿಕೆಯಿಂದಷ್ಟೇ ಸಂಗೀತ ಒಲಿಯುತ್ತದೆ. ರಿಯಾಲಿಟಿ ಶೋನ ಕೊನೆಯ ಹಂತಕ್ಕೆ ಬಂದಿರುವ ಮಂದಿ ಯಾವುದೋ ಹಾಡಿನ ಫೈನ್‌ಟ್ಯೂನ್‌ಗೆ ನನ್ನ ಬಳಿ ಬಂದರೆ ಅವರಿಗೆ ಸಂಗೀತ ಜ್ಞಾನವಿದ್ದರೆ ಮಾತ್ರ ಹೇಳಿಕೊಡುತ್ತೇನೆ. ಸಂಗೀತಾಭ್ಯಾಸವು ಯಾವುದೋ ಕಾರ್ಯಕ್ರಮದ ಒಂದು ಆಡಿಷನ್‌ಗೆ ಸೀಮಿತವಾಗಬಾರದು ಎಂದಷ್ಟೇ ನನ್ನ ಕಳಕಳಿ. ಒಂದಷ್ಟು ಮಂದಿ ಸಂಗೀತದತ್ತ ಒಲವು ತೋರುತ್ತಿರುವುದು ಸಂತಸದ ಸಂಗತಿ.
ಸಾಹಿತ್ಯವಿಲ್ಲದ ಸಿನಿಮಾ ಹಾಡುಗಳು ಕನ್ನಡ ಸಂಗೀತ ಲೋಕಕ್ಕೆ ದೊಡ್ಡ ಏಟು ನೀಡುತ್ತಿವೆ. ಆಡು ಭಾಷೆಯ ಪದಗಳೂ, ಅನ್ಯಭಾಷೆಯ ಲೇಪ, ಮೃದುತ್ವವಿಲ್ಲದ ದಪ್ಪ ದನಿ, ಅಪರಿಪೂರ್ಣ ವಾಕ್ಯದಂತಿರುವ ಪದ ಪ್ರಯೋಗಗಳು ಸಂಗೀತದ ಕಾವ್ಯಮಯ, ಕಂಠಮಾಧುರ್ಯ ಮೊದಲಾದ ಭಾವಗಳನ್ನು ತಿಂದುಹಾಕಿವೆ.
`ಹಳೆ ಪಾತ್ರ...ಹಳೆ ಕಬ್ಣ... ಹಳೆ ಪೇಪರ್ ತರ ಹೋಯ್...~ ಎಂಬುದೇ ಹಾಡಿನ ಪಲ್ಲವಿಯಾದರೆ ಅದಕ್ಕೆ ಕೊನೆ ಇಲ್ಲವೇ, ಇಲ್ಲಿ ಹೋಯಿ ಎಂಬುದು ಪೂರ್ಣವಿರಾಮವೇ, ಉದ್ಗಾರವೂ ಪದವಾಗುವುದೇ? ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಮಾಧುರ್ಯಪ್ರಧಾನ ಹಾಡುಗಳನ್ನೇ ಹಾಡಿದ್ದ ನಮಗೆ ಇವೆಲ್ಲಾ ಹಿಂಸೆ ಎನಿಸುತ್ತದೆ. ಯಾಕೋ ಹೊಸಬರ ಈ ಪ್ರಯೋಗಗಳನ್ನು ಒಪ್ಪಿಕೊಳ್ಳಲಾಗುತ್ತಿಲ್ಲ.
-ಮಂಜುಳಾ ಗುರುರಾಜ್, ಗಾಯಕಿ
ಶ್ರದ್ಧೆ ಇಲ್ಲ
ರಿಯಾಲಿಟಿ ಶೋಗಳಲ್ಲಿ ವಿಜೇತರಾದವರು ಪತ್ರ ಹಿಡಿದು ಸಿನಿಮಾಗಳಲ್ಲಿ ಅವಕಾಶ ಕೇಳಿ ಬರುತ್ತಾರೆ. ಟೆಸ್ಟಿಂಗ್ ಸಮಯದಲ್ಲಿ ಹೊಸ ಟ್ಯೂನ್ ಕೊಟ್ಟಾಗ `ಬ್ಬೆ..ಬ್ಬೆ..ಬ್ಬೆ~ ಎನ್ನುತ್ತಾರೆ. ಟೀವಿ ಕಾರ್ಯಕ್ರಮದ ಆಡಿಷನ್‌ಗಾಗಿ ಒಂದೆರಡು ಹಾಡುಗಳನ್ನಷ್ಟೇ ನೀಟಾಗಿ ಕಲಿತು ಬರುವವರಿಗೆ ಸಂಗೀತದ ಜ್ಞಾನ ಇರುವುದಿಲ್ಲ.
ಒಂದು ಬಾರಿ ಕಿರುತೆರೆಯಲ್ಲಿ ಮಿಂಚಿದ ಮಾತ್ರಕ್ಕೆ ಅವರು ಶ್ರೇಷ್ಠ ಗಾಯಕರಾಗುವುದಿಲ್ಲ. ಪ್ರಯತ್ನ, ಶ್ರದ್ಧೆ ಏನೂ ಇಲ್ಲದೆ ಸಿನಿಮಾಗಳಲ್ಲಿ ಅವಕಾಶ ಕೊಡುವುದಾದರೂ ಹೇಗೆ?
ಹಾಗೆಂದು ಎಲ್ಲರೂ ಅವಕಾಶ ವಂಚಿತರಾಗುವುದಿಲ್ಲ. ಆಕಾಂಕ್ಷಾ ಬಾದಾಮಿ, ಲಕ್ಷ್ಮೀ ನಾಗರಾಜ್, ಸಂತೋಷ್ ಮೊದಲಾದವರು ಚಲನಚಿತ್ರದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹಾಡುಗಾರಿಕೆಯಲ್ಲಿ ಅವರದೇ ಶೈಲಿ ರೂಪಿಸಿಕೊಂಡರೆ ಬೇಗ ಕ್ಲಿಕ್ ಆಗುತ್ತಾರೆ. ಅನ್ಯಭಾಷೆಯ ಹಾಡುಗಾರರಿಗೆ ಮಣೆ ಹಾಕುವುದರಲ್ಲಿ ತಪ್ಪೇನಿದೆ.
ಪಿ.ಬಿ. ಶ್ರೀನಿವಾಸ್, ಎಸ್. ಪಿ. ಬಾಲಸುಬ್ರಹ್ಮಣ್ಯ, ಪಿ.ಸುಶೀಲಾ ಬೇರೆ ಭಾಷೆಯಿಂದ ಬಂದೂ ನಮ್ಮವರಾಗಿಲ್ಲವೇ. ಇದಕ್ಕಾಗಿ ಕೇವಲ ಸಂಗೀತ ನಿರ್ದೇಶಕರನ್ನು ಹೊಣೆ ಮಾಡುವುದು ಸರಿಯಲ್ಲ.
ಒಂದು ಚಿತ್ರದ ಐದು ಹಾಡುಗಳ ಪೈಕಿ ಎರಡನ್ನು ಮುಂಬೈ ಮೂಲದ ಗಾಯಕರು ಹಾಡಿದ್ದರೆ, ಇನ್ನೆರಡು ಹಾಡುಗಳು ಸ್ಥಳೀಯ ಕಂಠಗಳಿಂದಲೇ ಮೂಡಿಬಂದಿರುತ್ತವೆ. ಎಫ್‌ಎಂ ಚಾನೆಲ್‌ಗಳು ಮಾತ್ರ ಅನ್ಯಭಾಷಿಗರ ಹಾಡನ್ನೇ ಮತ್ತೆ ಮತ್ತೆ ಕೇಳಿಸುತ್ತವೆ. ಇದರಿಂದ ನಮ್ಮವರಿಗೆ ಸಿಕ್ಕ ಅವಕಾಶಗಳು ಕಣ್ಣಿಗೆ ಬೀಳುವುದೇ ಇಲ್ಲ.
ಸಿನಿಮಾ ಹಾಡುಗಳ ಸಾಹಿತ್ಯ ಬಡವಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. `ಜಂಗ್ಲಿ~ ಚಿತ್ರದಲ್ಲಿ `ಹಳೆ ಪಾತ್ರೆ...~ ಹಾಡು ರಾಕ್ ಶೈಲಿಯಲ್ಲಿದ್ದರೆ `ನೀನೆಂದರೆ ನನ್ನೊಳಗೆ...~ ಹಾಡು ಮಾಧುರ್ಯ ಪ್ರಧಾನವಾಗಿಲ್ಲವೇ? ಎಲ್ಲಾ ವಯೋಮಾನದವರನ್ನೂ ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡಬೇಕಲ್ಲವೇ? ಹಂಸಲೇಖ ಬಳಿಕ ಜಯಂತ ಕಾಯ್ಕಿಣಿ ಕನ್ನಡ ಸಂಗೀತ ಲೋಕಕ್ಕೆ ಹೊಸ ರೂಪ ನೀಡುತ್ತಿದ್ದಾರೆ.
ಅವರ ಈ ಪ್ರಯತ್ನದಿಂದ ಕವಿಗಳಾದ ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಸಂಗೀತ ನಿರ್ದೇಶಕರಾದ ಅರ್ಜುನ್‌ಜನ್ಯ, ಶ್ರೀಧರ್ ಸಂಭ್ರಮ್, ವೀರ್ ಸಮರ್ಥ್ ಮೊದಲಾದ ಹೊಸ ತಲೆಮಾರಿನವರೂ ಎಚ್ಚೆತ್ತು ಸ್ಪರ್ಧೆಗಿಳಿದಿದ್ದಾರೆ. ಸಂಗೀತ ಲೋಕಕ್ಕಿದು ಉತ್ತಮ ಬೆಳವಣಿಗೆಯೇ.
- ವಿ.ಮನೋಹರ್, ಸಂಗೀತ ನಿರ್ದೇಶಕ
`ಬೇಡಿಕೆ ಕಡಿಮೆ~
ಸ್ವರಗಳ ಹಿಂದೆ ಹೋದರೆ ನೇರವಾಗಿ ಸ್ವರ್ಗಕ್ಕೆ ಹೋಗಬಹುದು ಎಂದು ನಂಬಿದವನು ನಾನು. 90ರ ದಶಕಕ್ಕೆ ಹೋಲಿಸಿದರೆ ಇಂದು ಸಂಗೀತ ಹೊಸದಾರಿಯತ್ತ ಹೊರಳಿಕೊಂಡಿದೆ. ಸಂಗೀತದಲ್ಲಿ ವಿದ್ಯುತ್ ಚಾಲಿತ ಪರಿಕರಗಳು ಪರಿಚಯವಾಗುತ್ತಲೇ ಸಾಹಿತ್ಯದಲ್ಲೂ ಬದಲಾವಣೆ ಬಂತು.
ಇಂದು `ಅಪ್ಪಾ ಲೂಸಾ... ಅಮ್ಮಾ ಲೂಸಾ...~ ಹಾಡುಗಳೇ ಇಷ್ಟವಾಗುತ್ತದೆ ಎಂಬುದೇನೋ ನಿಜ, ಆದರೆ ಆ ಸುಖ ಕ್ಷಣಿಕ. ಸಾಹಿತ್ಯಿಕವಾಗಿ ಶ್ರೀಮಂತವಾಗಿಲ್ಲದ ಯಾವುದೇ ಹಾಡು ಜನಮನಗಳಲ್ಲಿ ಉಳಿಯುವ ಸಾಧ್ಯತೆ ಕಡಿಮೆ.
ರಿಯಾಲಿಟಿ ಶೋಗಳಲ್ಲಿ ಒಮ್ಮೆ ಮುಖತೋರಿ ಸೆಲೆಬ್ರಿಟಿಗಳಾದವರು ಮತ್ತೆ ಕಾಣಿಸಿಕೊಳ್ಳುವುದು ಕಡಿಮೆ. ಅದಕ್ಕೆ ಕಾರಣ ಅವರ ಸೀಮಿತ ಕಲಿಕೆ. ವೇದಿಕೆ ಮೇಲೆ ಹಾಡುವ ಆ ಒಂದು ಹಾಡನ್ನಷ್ಟೇ ಕಲಿತು ಬಂದಿರುತ್ತಾರೆ. ಶಾಸ್ತ್ರೀಯ ಪ್ರಕಾರಗಳ ಪರಿಚಯ ಅವರಿಗಿರುವುದಿಲ್ಲ. ಇನ್ನೊಬ್ಬರ ಶೈಲಿಯನ್ನು ಅನುಕರಿಸಿ ಹಾಡುವವರ ಆಯುಷ್ಯವೂ ಅಲ್ಪವೇ.
ನಮ್ಮಲ್ಲೇ ಸಾಕಷ್ಟು ಕೋಗಿಲೆಗಳು ಇವೆ ಎಂದಾದ ಮೇಲೆ ಅನ್ಯಭಾಷಿಗರಿಗೆ ಮಣೆ ಹಾಕುವುದು ಸರಿಯಲ್ಲ. ಸೋನು ನಿಗಮ್ ಹಾಡಿದ ಕ್ಯಾಸೆಟ್‌ಗಳನ್ನು ಕ್ಯೂನಲ್ಲಿ ನಿಂತು ಖರೀದಿಸುತ್ತಾರೆ ಎಂಬ ತಪ್ಪು ಭಾವನೆ ನಮ್ಮಲ್ಲಿರುವುದು ವಿಪರ್ಯಾಸ. ಹೊಸಬರಿಗೆ ಮಣೆ ಹಾಕುವುದರಲ್ಲಿ ನಾವೇನು ಹಿಂದಿಲ್ಲ. ಹಂಸಲೇಖ, ವಿ. ಮನೋಹರ್, ಗುರುಕಿರಣ್ ಹೊಸಬರಾಗಿಯೇ ಸಂಗೀತ ಲೋಕಕ್ಕೆ ಕಾಲಿಟ್ಟವರು.
ಇನ್ನೊಂದು ಅಂಶ- ಕಳೆದ ಒಂದು ದಶಕಗಳಲ್ಲಿ ಕ್ಯಾಸೆಟ್ ಕೊಳ್ಳುವವರ ಸಂಖ್ಯೆ ಶೇ.30ಕ್ಕೆ ಇಳಿದಿದೆ. ಐಪ್ಯಾಡ್, ಚಿಪ್, ಅಂತರ್ಜಾಲಗಳ ಪೈಪೋಟಿಯಿಂದ ಧ್ವನಿಸುರುಳಿ ಕ್ಷೇತ್ರ ಬಡವಾಗಿದೆ. ಒಳ್ಳೆ ಸಂಗೀತಕ್ಕೆ ಸ್ಪಂದನೆ ಇದೆ ಎಂಬ ನಂಬಿಕೆ ಮಾತ್ರ ಉಳಿದಿದೆ.
-ವೇಲು, ಲಹರಿ ಆಡಿಯೋ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.