ADVERTISEMENT

ಸನಾತನಿಯ ಡಯೆಟ್ಟು

ಎಚ್.ಎಸ್.ರೋಹಿಣಿ
Published 27 ಫೆಬ್ರುವರಿ 2012, 19:30 IST
Last Updated 27 ಫೆಬ್ರುವರಿ 2012, 19:30 IST
ಸನಾತನಿಯ ಡಯೆಟ್ಟು
ಸನಾತನಿಯ ಡಯೆಟ್ಟು   

ಕಣ್ಣಲ್ಲಿ ಕಡಲಷ್ಟು ಆಸೆ. ಮುಗುಳ್ನಗುವಲ್ಲಿ ಬಣ್ಣದ ಬದುಕಿನ ಬೆರಗು. ನಿರಂತರತೆಯತ್ತ ತಿರಸ್ಕಾರದ ದೃಷ್ಟಿ. ಇವಿಷ್ಟೂ ನಟಿ ಸನಾತನಿ.

ಇತ್ತೀಚೆಗೆ ತೆರೆಕಂಡ ರಮೇಶ್ ಅರವಿಂದ್ ನಿರ್ದೇಶನದ `ನಮ್ಮಣ್ಣ ಡಾನ್~ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿರುವ ಸನಾತನಿ, ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿದ್ದಾರೆ. ಅವರ ಮೊದಲ ಚಿತ್ರ `ಕ್ರೇಜಿ ಕುಟುಂಬ~ದ ನಾಯಕ ಕೂಡ ರಮೇಶ್ ಅರವಿಂದ್ ಎಂಬುದು ಅವರ ಖುಷಿಗೆ ಮತ್ತೊಂದು ಕಾರಣ.

`ಕ್ರೇಜಿ ಕುಟುಂಬ~ ಚಿತ್ರದಲ್ಲಿ ತಮ್ಮ ವಯಸ್ಸಿಗೆ ಮೀರಿದ ಪಾತ್ರವನ್ನು ಸನಾತನಿ ನಿರ್ವಹಿಸಿದ್ದರಂತೆ. ಅದರಿಂದ ಮದುವೆಯಾದ ಹೆಂಗಸಿನಂತೆ ಮೇಕಪ್ ಹಾಕಿಕೊಂಡಿದ್ದ ಅವರಿಗೆ ವಯಸ್ಸಾಗಿದೆ ಎಂದೇ ಭಾವಿಸಿಲಾಗಿತ್ತಂತೆ. ಅದನ್ನು ಮೀರಲು ಇದೀಗ ದೇಹದ ತೂಕ ಇಳಿಸಿಕೊಂಡು, ಮೈಕಾಂತಿ ನಿರ್ವಹಣೆ ಬಗ್ಗೆ ಗಮನ ಕೊಟ್ಟಿರುವ ಸನಾತನಿ ಸದ್ಯಕ್ಕೆ ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

“ನಮ್ಮಣ್ಣ ಡಾನ್~ ನಂತರ ಅಂಥದ್ದೇ ಕಾಮಿಡಿ ಕತೆ ಇರುವ ಪಾತ್ರಗಳು ಹುಡುಕಿ ಬರುತ್ತಿವೆ. ಅದರಿಂದ ನಿರಾಕರಿಸುತ್ತಿದ್ದೇನೆ. `ಕ್ರೇಜಿಕುಟುಂಬ~ ಕೂಡ ಕಾಮಿಡಿ ಸಿನಿಮಾ. ಅದರಿಂದ ವಿಭಿನ್ನ ಪಾತ್ರಗಳಲ್ಲಿ ನಟಿಸಲು ಇಷ್ಟವಾಗುತ್ತಿದೆ” ಎನ್ನುವ ಅವರು ಹಳ್ಳಿ ಕತೆ ಹೊಂದಿದ ಸಿನಿಮಾವೊಂದನ್ನು ಒಪ್ಪಿಕೊಳ್ಳಲು ಮನಸ್ಸು ಮಾಡಿದ್ದಾರೆ.

`ಸಿನಿಮಾದ ಕತೆ ನೋಡಿ ಪಾತ್ರವನ್ನು ಒಪ್ಪಿಕೊಳ್ಳುವೆ. ಪಾತ್ರಕ್ಕೆ ಅವಶ್ಯಕತೆ ಇದ್ದರೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಿದ್ಧ~ ಎನ್ನುವ ಸನಾತನಿಗೆ ತಮಿಳಿನಿಂದಲೂ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಅವೆಲ್ಲಾ ಚರ್ಚೆಯಲ್ಲಿವೆ.

ಸನಾತನಿ ನಾಯಕಿಯಾಗಿದ್ದ ಮತ್ತೊಂದು ಚಿತ್ರ `ಡಯಾನಾ~. ಚಿತ್ರೀಕರಣ ಮುಗಿದು ವರ್ಷವೇ ಕಳೆದರೂ ಬಿಡುಗಡೆಯ ಭಾಗ್ಯ ಕಂಡಿಲ್ಲ. ಅದರ ಬಗ್ಗೆ ನೋವಿನಿಂದಲೇ ಮಾತನಾಡುವ ಅವರು, ಚಿತ್ರತಂಡಕ್ಕೂ ತಮಗೂ ಇದೀಗ ಸಂಪರ್ಕವೇ ಇಲ್ಲ ಎನ್ನುತ್ತಾರೆ.

ಇತ್ತೀಚಿನವರೆಗೂ ಝೀ ವಾಹಿನಿಯಲ್ಲಿ ಪ್ರಸಾರವಾಗುವ `ಒಗ್ಗರಣೆ ಡಬ್ಬಿ~ ಅಡುಗೆ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಸನಾತನಿ ಇದೀಗ ಅದನ್ನೂ ಬಿಟ್ಟಿದ್ದಾರೆ.

`ಕೆಲವೊಮ್ಮೆ ನಾಲ್ಕು ಎಪಿಸೋಡುಗಳ ಚಿತ್ರೀಕರಣ ನಡೆಯುತ್ತಿತ್ತು. ಆಗೆಲ್ಲಾ ನಿರಂತರವಾಗಿ ನಿಲ್ಲಬೇಕಿದ್ದ ಕಾರಣ ಕಾಲು ನೋವು ಬಂತು. ಅದಕ್ಕೆ ಚಿಕಿತ್ಸೆ ಪಡೆದುಕೊಂಡೆ. ಅದರಿಂದ ಸದ್ಯಕ್ಕೆ ನಿರೂಪಣೆ ಬೇಡ ಎಂಬ ತೀರ್ಮಾನಕ್ಕೆ ಬಂದಿರುವೆ~ ಎನ್ನುವ ಅವರ ನಿರ್ಧಾರದ ಹಿಂದೆ ಟೀವಿ ಕಾರ್ಯಕ್ರಮಗಳನ್ನು ಒಪ್ಪಿಕೊಂಡರೆ ಸಿನಿಮಾ ಅವಕಾಶಗಳು ತಪ್ಪಿಹೋಗಬಹುದು ಎಂಬ ಎಚ್ಚರಿಕೆಯೂ ಇದೆ.

ತೆಳ್ಳಗಾಗಲು ಪ್ರತಿದಿನ ಜಿಮ್‌ನಲ್ಲಿ ಬೆವರಿಳಿಸಿದ್ದ ಸನಾತನಿ ಇದೀಗ ಮನೆಯಲ್ಲಿಯೇ ಸಮತೂಕ ಕಾಪಾಡಿಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ. ಮತ್ತಷ್ಟು ಸಣ್ಣಗಾಗುವುದು ಬೇಡ ಎಂಬ ಹಿತೈಷಿಗಳ ಮಾತಿಗೆ ಓಗೊಟ್ಟಿರುವ ಅವರು ಸೇವಿಸುವ ಆಹಾರ ಹಿತಮಿತವಾದದ್ದು.
`ಫ್ಯಾಷನ್ ವಿನ್ಯಾಸ ಕಲಿತಿರುವುದರಿಂದ ಬಿಡುವಿನ ಅವಧಿಯಲ್ಲಿ ಕೆಲವು ಪ್ರಾಜೆಕ್ಟ್‌ಗಳನ್ನು ಮಾಡುತ್ತಿರುತ್ತೇನೆ~ ಎನ್ನುವ ಅವರು, ಇತ್ತೀಚೆಗೆ ಸ್ವಿಮ್ ಸೂಟ್ ಧರಿಸಲು ಸಾಧ್ಯವಿಲ್ಲ ಎಂದು ಹೇಳಿ ಅವಕಾಶವೊಂದನ್ನು ಕಳೆದುಕೊಂಡಿರುವುದೂ ಉಂಟು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.