ADVERTISEMENT

ಸಪೂರ ವ್ಯಕ್ತಿಯ ತೂಕದ ಮಾತು

ಪ್ರಕಾಶ್ ಶೆಟ್ಟಿ ಕಂಡ ಸಿಟಿ ಜನ್ರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2014, 19:30 IST
Last Updated 25 ಸೆಪ್ಟೆಂಬರ್ 2014, 19:30 IST

*ಮನೆಯಲ್ಲಿ ನಿಮಗೆ ಎಂದಾದರೂ ’ಪಿ.ಜಿ.’ ಐ ಮೀನ್...ಪೇಯಿಂಗ್ ಗೆಸ್ಟ್ ಎಂಬ ಭಾವನೆ ಬಂದಿದೆಯಾ ಪಿ.ಜಿ.ನಾರಾಯಣರೇ?
ನನ್ನ ಗೆಳೆಯರೂ ನನಗೆ  ‘ಪೇಯಿಂಗ್ ಗೆಸ್ಟ್ ನಾರಾಯಣ’ ಎಂದು ಅಡ್ಡ ಹೆಸರಿಟ್ಟಿದ್ದಾರೆ. ನೀವು ಹೇಳಿದಂತೆ ಮನೆ ಯಜಮಾನನೂ ಒಂದು ರೀತಿಯಲ್ಲಿ ಪೇಯಿಂಗ್ ಗೆಸ್ಟ್! ತಿಂಗಳು ತಿಂಗಳು ಹಣ ತರದಿದ್ದರೆ ಆತನನ್ನು ನಂಬಿದವರ ಕತೆ ಗೋವಿಂದ! ಹಾಗೆ ನೋಡಿದರೆ ಈಗ ಬಹಳಷ್ಟು ಮನೆಗಳಲ್ಲಿ ಗಂಡ್ಸು ಹೆಂಗ್ಸು ಅಂತಲ್ಲ, ಎಲ್ಲರೂ ‘ಪೇಯಿಂಗ್ ಗೆಸ್ಟ್’ಗಳೇ!

*ನೀವು ತಾತನೋ, ಮುತ್ತಾತನೋ ಆದಾಗ  ಹೇಳಬಯಸುವ  ’ಅಂದಕಾಲತ್ತಿಲ್ ಡೈಲಾಗ್’ ಯಾವುದಿರಬಹುದು?
ಇನ್ನೇನು... ನನ್ನ ತಾತ ಹೇಳ್ತಿದ್ದದ್ದನ್ನೇ ಒಂದಿಷ್ಟು ಬದಲಾವಣೆ ಮಾಡಿ ಹೇಳಬೇಕಾಗುತ್ತದೆ. ಅವರು, ‘ನೂರು ರೂಪಾಯಿ ಇಟ್ಕೊಂಡು ಮಂಡಿಪೇಟೆಗೆ ಹೋದರೆ  ದೊಡ್ದ ಮೂಟೆಯಲ್ಲಿ ತರಕಾರಿ ತರುತ್ತಿದ್ದೆ’ ಅನ್ನುತ್ತಿದ್ದರು. ನಾನು ‘ನನ್ನ ಕಾಲದಲ್ಲಿ ನೂರು ರೂಪಾಯಿಗೆ ಒಂದು ಕೇಜಿ ಬಾಳೆಹಣ್ಣು ಸಿಗ್ತಾ ಇತ್ತು!’ ಅನ್ನಬೇಕಾಗುತ್ತೋ ಏನೋ!

*ನಿಜ, ನಿಜ.. ಬಾಳೆಹಣ್ಣಿಗೆ ಆವಾಗ ಕೇಜಿಗೆ ಐನೂರಾಗ್ಬಿಟ್ಟರೆ ಹಾಗೆ ಹೇಳದೆ ಬೇರೆ ವಿಧಿಯಿಲ್ಲ! ಹಾ! ಕೇಜಿ ಅಂದಾಗ ನೆನಪಾಯಿತು ...ನಿಮಗೆ ತೂಕದ ವ್ಯಕ್ತಿಯಾಗಬೇಕೆಂದು ಆಸೆ ಇಲ್ಲವೇ?
ನಾನೊಬ್ಬ ಸಾಮಾನ್ಯ ವ್ಯಕ್ತಿ. ನನಗೆ ಯಾವತ್ತೂ ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳಲು ಇಷ್ಟವೇ ಇಲ್ಲ.

*ಓಹೋ!  ನಿಮ್ಮ ಈ ತೆಳ್ಳಗಿನ ದೇಹದ ರಹಸ್ಯ ಇದೇನಾ? ಮಾತಿನಲ್ಲೂ ತೂಕ ಮೇಂಟೇನ್ ಮಾಡಿಕೊಂಡಿದ್ದೀರಾ?
ಹೌದು, ನಾನು ತೂಕದ ವ್ಯಕ್ತಿ ಅಲ್ಲದಿದ್ದರೂ ತೂಕದ ಮಾತು ಆಡ್ತೀನಿ.  ಏಕ್ ದಂ ಯೋಚನೆ ಮಾಡದೆ ಮಾತನಾಡುವ ಅಭ್ಯಾಸವಿಲ್ಲ. ಕ್ವಿಂಟಲ್ ಲೆಕ್ಕದಲ್ಲಿ ಮಾತನಾಡುವುದಕ್ಕಿಂತ ಬರೀ ಗ್ರಾಮ್ ಲೆಕ್ಕದಲ್ಲಿ ಮಾತನಾಡಬೇಕು.

*ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯವಿದೆಯಾ?
ಈ ಪ್ರಶ್ನೆಯನ್ನ ಜಂಭ ಕೊಚ್ಚಿಕೊಳ್ಳುವವರಲ್ಲಿ ಕೇಳಬೇಕು. ನನಗೆ ಜಂಭದ ಸವಾರಿ ಮಾಡಿ ಅಭ್ಯಾಸವಿಲ್ಲ.

*ಒಬ್ಬ ಕಾಮೆಡಿಯನ್ನೋ, ವ್ಯಂಗ್ಯಚಿತ್ರಕಾರನೋ ಅಥವಾ ನಗೆಬರಹಗಾರನೋ ಮುಖ್ಯಮಂತ್ರಿಯಾದರೆ ಹೇಗಿರಬಹುದು, ನಾರಾಯಣರೇ ?
ಜನತೆಯನ್ನು ನಗಿಸುತ್ತಲೇ ಆಡಳಿತ ನಡೆಸಬಹುದು. ಆದರೆ ಜನ ನಕ್ಕು ನಕ್ಕು ಸುಸ್ತಾಗಿ ಕೊನೆಗೆ ಆತನನ್ನು ‘ಹಾಸ್ಯಾಸ್ಪದ ಮುಖ್ಯಮಂತ್ರಿ’ ಎಂದು ಕರೆಯದಿದ್ದರೆ ಸಾಕು! 

*ಈಚೆಗೆ ಇನ್‌ಲ್ಯಾಂಡ್‌ ಲೆಟರ್ ಕಂಡಿದ್ದೀರಾ? ಅಥವಾ ಯಾರಾದರೂ ಗೆಳೆಯರು ಕೈಯಲ್ಲಿ ಬರೆದ ಅಂಚೆ ಪತ್ರ ಸಿಕ್ಕಿದೆಯಾ?
ಅಂತಹ ಕೈ ಬರಹದ ಪತ್ರ ಸಿಗದೆ ಬಹುಶಃ ಇಪ್ಪತ್ತು ವರ್ಷಗಳೇ ಆಗಿರಬೇಕ್ರೀ! ಬಹಳ ವರ್ಷಗಳ ಹಿಂದಿನ ನೆನಪು. ಹೆಂಡತಿ ಚಿತ್ರದುರ್ಗದಲ್ಲಿ ಕೆಲ್ಸದಲ್ಲಿದ್ದಾಗ, ನಾನು ಬೆಂಗಳೂರಿನಲ್ಲಿದ್ದೆ ನೋಡಿ... ಆಗ ಇನ್‌ಲ್ಯಾಂಡ್‌ ಲೆಟರ್ ನನ್ನ ಬದುಕಿನ ಅವಿಭಾಜ್ಯ ಅಂಗವಾಗಿತ್ತು!

*ಈಗ ದೂರದ ಊರಿನಿಂದ ನೆಂಟರು ನಿಮ್ಮ ಮನೆಗೆ ಬಂದು ವಾಪಸು ಹೋಗುವಾಗ ‘ಪತ್ರ ಬರೆಯಿರಿ’ ಎಂದು ನಿಮ್ಮ ಬಾಯಿಯಿಂದ ತಪ್ಪಿ ಬಂದ್ಬಿಟ್ಟರೆ ಏನಾಗಬಹುದು?
ಏನಾಗುತ್ತೆ? ಎಲ್ಲರೂ ನಗಬಹುದು. ಆಗ ನಾನು ಸಮಯಪ್ರಜ್ಞೆ ಬಳಸಿ, ‘ಹೇಗಿದೆ ನನ್ನ ಹಾಸ್ಯಪ್ರಜ್ಞೆ?’ ಎಂದು ಅವರೊಂದಿಗೆ ನಗುವುದು ಜಾಣತನ.

*ಮಳೆ ಬಂದಾಗ ಮಾತ್ರ  ಬಸ್ ನಿಲ್ದಾಣದ ಒಳಗೆ ನಿಲ್ಲುವ ಅಭ್ಯಾಸ  ನಿಮಗೂ ಕರಗತವಾಗಿದೆಯೇ?
ಏನ್ಮಾಡೋಣ ಹೇಳಿ! ಬಸ್ ನಿಲ್ದಾಣ ಇರುವುದು ಜಾಹೀರಾತುಗಳಿಗಾಗಿ ಅಷ್ಟೇ. ನಾಯಿ, ದನಗಳಿಗೂ ಅದೊಂದು ತಂಗುದಾಣ. ಬಹಳಷ್ಟು ಬಸ್ ಚಾಲಕರೂ ಹಾಗಂತ ತಿಳ್ಕೊಂಡಿರುವುದರಿಂದ ಅವರು ಬಸ್ಸನ್ನು ನಿಲ್ದಾಣ ಬಿಟ್ಟು ಬೇರೆಲ್ಲೋ ನಿಲ್ಲಿಸ್ತಾರೆ.

*ಹಿಂದಿನ ವಿಜಯನಗರ ಸಾಮ್ರಾಜ್ಯದಲ್ಲಿ ಬೀದಿ ಬದಿಯಲ್ಲೇ ಚಿನ್ನ ವೈಡೂರ್ಯ ಮಾರುತ್ತಿದ್ದರಂತೆ. ಈಗ ನಿಮ್ಮ ವಾಸಸ್ಥಳ ವಿಜಯನಗರದ ಬೀದಿ ಬದಿಯಲ್ಲಿ ಏನು ಸಿಗುತ್ತೇ?
ನಮ್ಮ ಬೀದಿಯಲ್ಲಿ ತರಕಾರಿಗಳ ಸಂತೆನೇ ಇದೆ. ಈಗ ತರಕಾರಿಗಳೂ ಚಿನ್ನದಂತೆ ಬೆಲೆಬಾಳುವ ವಸ್ತುಗಳೇ ಅಲ್ಲವೇ ಸಾರ್? ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಇನ್ನೊಂದು ಸಾಮ್ಯತೆ ಇದೆ ನೋಡಿ! ಅಂದು ಶ್ರೀ ಕೃಷ್ಣದೇವರಾಯ ಇದ್ದರು. ಈಗ ಇಲ್ಲಿ ಎಂಎಲ್ಎ ಕೃಷ್ಣಪ್ಪ ನಮ್ಮ ಅಧಿಪತಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.