ADVERTISEMENT

ಸಮಾಜದ ಮನಸ್ಥಿತಿಯ ಕನ್ನಡಿ ‘ಅಮೂರ್ತ’

ಸುಮನಾ ಕೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಸಮಾಜದ ಮನಸ್ಥಿತಿಯ  ಕನ್ನಡಿ ‘ಅಮೂರ್ತ’
ಸಮಾಜದ ಮನಸ್ಥಿತಿಯ ಕನ್ನಡಿ ‘ಅಮೂರ್ತ’   

ಹೆಣ್ಣಿನ ಮೇಲಿನ ದೌರ್ಜನ್ಯ ಹಾಗೂ ಅದರಿಂದ ಕುಟುಂಬದ ಮೇಲೆ ಆಗುವ ಪರಿಣಾಮಗಳ ಕಥಾವಸ್ತುವನ್ನು ‘ಅಮೂರ್ತ’ಕಿರುಚಿತ್ರ ಹೊಂದಿದೆ.

ಹೆಣ್ಣಿನ ಮೇಲೆ ಅತ್ಯಾಚಾರ ನಡೆದಾಗ ಸಮಾಜವು ಆಕೆಯನ್ನೇ ತಪ್ಪಿತಸ್ಥೆಯಂತೆ ನೋಡುತ್ತದೆ. ಮಾಧ್ಯಮಗಳು ಬ್ರೇಕಿಂಗ್‌ ನ್ಯೂಸ್‌ ನೀಡುವ ಧಾವಂತದಲ್ಲಿ   ಆಕೆಯದೇ ತಪ್ಪು ಎಂಬಂತೆ ಬಿಂಬಿಸುತ್ತವೆ. ಆಗ  ಹೆಣ್ಣಿನ ಮನಸ್ಥಿತಿ ಹೇಗಿರುತ್ತದೆ? ಇದರಿಂದ ಆಕೆ, ಕುಟುಂಬದ ಸದಸ್ಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ...

ನಿರ್ದೇಶಕ ಅರವಿಂದ ಕುಪ್ಳೀಕರ್‌ ಅವರು ‘ಅಮೂರ್ತ’ ಚಿತ್ರದಲ್ಲಿ ಸಮಾಜದ ಇಂತಹ ಮನಸ್ಥಿತಿಯನ್ನು ಪ್ರಶ್ನಿಸುವ ಪ್ರಯತ್ನ ಮಾಡಿದ್ದಾರೆ.  ಜಯಂತ ಕಾಯ್ಕಿಣಿ ಅವರ ‘ಕನ್ನಡಿ ಇಲ್ಲದ ಊರಲಿ’ ಸಣ್ಣ ಕತೆಯಿಂದ ಪ್ರೇರಣೆಗೊಂಡು ಅರವಿಂದ ಕುಪ್ಳೀಕರ್‌ ಅವರು ‘ಅಮೂರ್ತ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾರೆ. ಎಲ್.ವಿ. ಪ್ರಸಾದ್ ಫಿಲ್ಮ್ ಅಂಡ್ ಟಿ.ವಿ. ಅಕಾಡೆಮಿ ನಿರ್ಮಾಣ ಮಾಡಿದೆ.

ADVERTISEMENT

ಒಟ್ಟು 14.33 ನಿಮಿಷಗಳ ಈ ಚಿತ್ರ ಅಪ್ಪ–ಮಗಳ ಭಾವನಾತ್ಮಕ ಕತೆಯೊಂದಿಗೆ ಆರಂಭವಾಗುತ್ತದೆ. ತನ್ನ ಮಗಳಿಗೆ ಮದುವೆ ಮಾಡಿಸಬೇಕು ಎಂದು ಅಪ್ಪ, ಏಕಾಂತ್‌ ಎಂಬಾತನ ಮನೆಗೆ ಹೋಗಿ ಮಗಳು ಶಾಲಿನಿಯ ಫೋಟೊ ಹಾಗೂ ವಿವರ ನೀಡುತ್ತಾನೆ. ಮನೆಗೆ ಬಂದ ಬಳಿಕ ಆತನಿಗೆ ಹಿಂದಿನ ಕಹಿನೆನಪುಗಳು ಕಾಡಲಾರಂಭಿಸುತ್ತವೆ.

ಪುನಃ ಏಕಾಂತ್‌ ಬಳಿ ಬಂದು ‘ಮಗಳು ಶೀಲವಂತೆ’ ಎಂದು ಒತ್ತಿ ಒತ್ತಿ ಹೇಳುವುದು ಅಪ್ಪನೊಬ್ಬನ ಜರ್ಝರಿತ ಮನಸ್ಸನ್ನು ತೋರಿಸುತ್ತದೆ.  ಮುಂದೆ ಏಕಾಂತ್‌ಗೆ ಶಾಲಿನಿ ಮೇಲೆ ನಡೆದ ಅತ್ಯಾಚಾರ ಯತ್ನ, ಆಕೆಯನ್ನು ಸಮಾಜ ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಗೊತ್ತಾಗುತ್ತದೆ.   ಇಲ್ಲಿ ಅಪ್ಪನಿಗೆ ಮಗಳ ಮೇಲಿನ ಪ್ರೀತಿ, ಮನಸ್ಸಿನ ನೋವು ಮನ ಮಿಡಿಯುವಂತಿದೆ.

ಅತ್ಯಾಚಾರ, ಸ್ತ್ರಿ ಶೋಷಣೆಯಂತಹ ಸಂದರ್ಭದಲ್ಲಿ ಸಮಾಜ ಹಾಗೂ ಮಾಧ್ಯಮಗಳ ಜವಾಬ್ದಾರಿ, ಹೊಣೆಗಾರಿಕೆ ಏನು? ಎಂಬುದನ್ನು ಚಿತ್ರ ಧ್ವನಿಸುತ್ತದೆ. ‘ಮಾಧ್ಯಮಗಳು ಸಂತ್ರಸ್ತ ಯುವತಿಯನ್ನು ತೋರಿಸುತ್ತದೆ. ಆದರೆ ಅಲ್ಲಿಂದ ಹೊರಬಂದ ಬಳಿಕ ಅಕ್ಕಪಕ್ಕದವರ ಅಪಹಾಸ್ಯಕ್ಕೆ ಒಳಗಾಗುತ್ತಾರೆ ಎಂಬುದು ಸಮಾಜಕ್ಕೆ ಅರಿವಾಗಬೇಕು’ ಎಂದು ಅರವಿಂದ ಕುಪ್ಳೀಕರ್‌ ಹೇಳುತ್ತಾರೆ.

ತನ್ನ ಮಗಳ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಕೂಗುವ ಅಪ್ಪನ ಮಾತು, ಮಾಧ್ಯಮಗಳ ಬೊಬ್ಬೆ ನಡುವೆ ಕ್ಷೀಣವಾಗುವಂತಹ ಅಸಹಾಯಕತೆಯನ್ನು ಚಿತ್ರದಲ್ಲಿ ಚೆನ್ನಾಗಿ ಮೂಡಿಸಲಾಗಿದೆ.  ಅಪ್ಪನ ಪಾತ್ರದಲ್ಲಿ ಹಿರಿಯ ನಟ ಶ್ರೀನಿವಾಸ್‌ ಮೇಷ್ಟ್ರು, ಶಾಲಿನಿಯಾಗಿ ನಟಿ ನಿಖಿತಾ, ಏಕಾಂತ್‌ ಪಾತ್ರದಲ್ಲಿ ಅನಿಲ್‌ ಕುಮಾರ್‌ ನಟಿಸಿದ್ದಾರೆ.

ಸುಧೀರ್‌ ಕೆ. ಪ್ರಭಾತ್‌ ಅವರ ಸಿನಿಮಾಟೋಗ್ರಫಿ ಚೆನ್ನಾಗಿದೆ. ಚಿತ್ರೀಕರಣಕ್ಕೆ  ಆರ್ರಿ (Arry) 35ಎಂಎಂ ಮೂವಿ ಕ್ಯಾಮೆರಾ ಬಳಸಲಾಗಿದೆ. ಇನ್ನು ಶಿಶಿರ ಕೆ.ವಿ. ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಹನೀಶ್‌ ಮಹಮದ್‌ ಮುಸ್ತಫಾ ಸಂಕಲನ ಕೆಲಸವನ್ನೂ ಚಿತ್ರದಲ್ಲಿ ಕಾಣಬಹುದಾಗಿದೆ.
ಅರವಿಂದ ಕುಪ್ಳೀಕರ್‌ ಬಗ್ಗೆ..

ಅರವಿಂದ ಅವರು ಎರಡು ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಒಲವು ಹೊಂದಿರುವ ಇವರು, ಪ್ರಕಾಶ್‌ ರೈ ನಿರ್ದೇಶನದ ‘ಒಗ್ಗರಣೆ’ ಚಿತ್ರದಲ್ಲಿ ಸಹನಟರಾಗಿ ಅಭಿನಯಿಸಿದ್ದರು. ಅದೇ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದರು.

ಇನ್ನು ‘ದೇವರ ನಾಡಲ್ಲಿ’ ಸಿನಿಮಾಕ್ಕೆ ಬಿ.ಸುರೇಶ್‌ ಅವರ ಜೊತೆ ಕೆಲಸ ಮಾಡಿದ್ದಾರೆ. ಪ್ರಕಾಶ್‌ ರೈ ಅವರ ‘ಇದೊಳ್ಳೆ ರಾಮಾಯಣ’ದಲ್ಲೂ ಬಣ್ಣ ಹಚ್ಚಿದ್ದಾರೆ.  

****
ಕಿರುಚಿತ್ರ: ‘ಅಮೂರ್ತ’
ಅವಧಿ: 14.33 ನಿಮಿಷ
ನಿರ್ದೇಶನ: ಅರವಿಂದ ಕುಪ್ಳೀಕರ್‌
ಛಾಯಾಗ್ರಹಣ: ಜಾನ್ ಫರ್ನಾಂಡಿಸ್‌, ಪ್ರದೀಪ್‌, ಸಂದೀಪ್‌, ಅಂಕಿತ್‌
ಪಾತ್ರಧಾರಿಗಳು: ಶ್ರೀನಿವಾಸ ಮೇಷ್ಟ್ರು, ಅನಿಲ್‌ಕುಮಾರ್‌, ನಿಖಿತಾ, ಸುರಭಿ ವಸಿಷ್ಠ
ಕಿರುಚಿತ್ರದ ಕೊಂಡಿ: bit.ly/2rUo2SH
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.