ADVERTISEMENT

ಸಮಾಜ ಬದಲಿಸಬಲ್ಲವು ಸಿನಿಮಾಗಳು

ಸುರೇಖಾ ಹೆಗಡೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಮೊಹಸೇನ್‌ ಘಾರಾಯ್‌    ಚಿತ್ರ: ಬಿ.ಎಚ್‌.ಶಿವಕುಮಾರ್‌
ಮೊಹಸೇನ್‌ ಘಾರಾಯ್‌ ಚಿತ್ರ: ಬಿ.ಎಚ್‌.ಶಿವಕುಮಾರ್‌   

ನಿಮ್ಮ ಬಗ್ಗೆ ಹೇಳಿ.
ನಾನು ಇರಾನ್‌ನ ಬೆಹಶೆಹರ್‌ನವನು. ಓದಿದ್ದು ಮೈನಿಂಗ್‌ ಎಂಜಿನಿಯರಿಂಗ್‌. ಕಾಲೇಜು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ನನಗೆ ಸಿನಿಮಾ ಮಾಡುವ ಆಸೆ ಶುರುವಾಯಿತು. ಹೀಗಾಗಿ ಎಂಜಿನಿಯರಿಂಗ್‌ ಮುಗಿಯುತ್ತಿದ್ದಂತೆ ಸಹ ನಿರ್ದೇಶಕನಾಗಿ ಕೆಲಸ ಪ್ರಾರಂಭಿಸಿದೆ. ಇರಾನ್‌ನಲ್ಲಿ ಪ್ರಖ್ಯಾತಿ ಗಳಿಸಿದ ಬೆಹ್ರಂ ಬಾಯ್‌ಜಾಯ್‌, ರೇಜಾ ಮಿರ್ಕಾರಿಮಿ, ಮಾಜಿದ್‌ ಮಜಿದಿ, ಮೊಹಸೇನ್‌ ಅಬ್ದಾಲ್‌ ವಹಾಬ್‌ ಅವರ ಬಳಿ ನಿರ್ದೇಶನದ ಪಟ್ಟುಗಳನ್ನು ಕಲಿತೆ. ಕಾಸ್ಟಿಂಗ್‌, ಎಡಿಟಿಂಗ್‌ ಹಾಗೂ ಪ್ರೊಡಕ್ಷನ್‌ ಕೆಲಸಗಳಲ್ಲೂ ತೊಡಗಿಕೊಂಡೆ. 2013ರಲ್ಲಿ ಜಂಟಿಯಾಗಿ ‘ಡೋಂಟ್‌ ಬಿ ಟೈಯರ್ಡ್‌’ ಎನ್ನುವ ಸಿನಿಮಾ ಮಾಡಿದ್ದೆ. ಬ್ಲಾಕೇಜ್‌ ನನ್ನ ಮೊದಲ ಸ್ವತಂತ್ರ ಸಿನಿಮಾ.

ನಿಮ್ಮ ಸಿನಿಮಾ ವಿಷಯ ಏನಾಗಿರುತ್ತದೆ?
ಯಾವುದಾದರೂ ರೂಪದಲ್ಲಿ ಸಮಾಜಕ್ಕೆ ಸಹಾಯವಾಗುವಂಥ ಕೆಲಸ ಮಾಡಬೇಕು ಎಂಬುದು ನನ್ನ ಆಸೆ. ಈ ನಿಟ್ಟಿನಲ್ಲಿ ಸಿನಿಮಾ ಪ್ರಬಲ ಮಾಧ್ಯಮವಾಗಬಲ್ಲುದು ಎನ್ನುವುದು ನನ್ನ ಬಲವಾದ ನಂಬಿಕೆ. ಹೀಗಾಗಿ ಸಿನಿಮಾ ವಸ್ತು ಆಯ್ಕೆ ಮಾಡಿಕೊಳ್ಳುವಾಗ ಸಾಮಾಜಿಕ ಸಮಸ್ಯೆಗಳ ಕುರಿತಾದ ವಿಷಯವನ್ನೇ ನಾನು ಆಯ್ದುಕೊಳ್ಳುತ್ತೇನೆ. ಅದರಲ್ಲೂ ಸಾಮಾನ್ಯ ಜನರನ್ನೇ ಮೂಲವಾಗಿಸಿಕೊಂಡು ಪಾತ್ರಗಳನ್ನು ಹೆಣೆಯುತ್ತೇನೆ.

ಮನುಷ್ಯ ಮೇಲ್ನೋಟಕ್ಕೆ ಒಳ್ಳೆಯವನಂತೆ ಕಂಡರೂ ಒಳಮನಸ್ಸಿನಲ್ಲಿ ಸಾಕಷ್ಟು ಕ್ರೌರ್ಯ ತುಂಬಿರುತ್ತದೆ. ಚಿತ್ರಗಳ ಮೂಲಕ ಅವುಗಳನ್ನು ಹೇಳುತ್ತಾ, ಅದರಿಂದ ಇನ್ನೊಬ್ಬರಿಗೆ ಉಂಟಾಗುವ ಸಮಸ್ಯೆಗಳನ್ನು ಚಿತ್ರಿಸಿದಾಗ ಸಾಮಾನ್ಯ ಜನರೂ ಬದಲಾವಣೆ ತಂದುಕೊಳ್ಳಲು ಸಾಧ್ಯ. ಅದೂ ಅಲ್ಲದೆ ಸಿನಿಮಾ ಪಾತ್ರಗಳು ಸಾಮಾನ್ಯರ ಬದುಕಿನೊಂದಿಗೆ ಹೋಲುವಂತಿರಬೇಕು. ಇರಾನ್‌ನ ಹೆಚ್ಚಿನ ಸಿನಿಮಾಗಳು ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವಂತೆಯೇ ಚಿತ್ರಿತವಾಗಿರುತ್ತವೆ.

ADVERTISEMENT

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಡಂಬನೆ ಇರಾನ್‌ನ ಅನೇಕ ಸಿನಿಮಾಗಳಲ್ಲಿ ಇರುತ್ತವೆ. ಹೀಗಿದ್ದೂ ಬಿಡುಗಡೆಗೆ ಸಮಸ್ಯೆ ಆಗುವುದಿಲ್ಲವೇ?
ಖಂಡಿತ ಆಗುತ್ತದೆ. ಎಲ್ಲಾ ದೇಶಗಳಂತೆ ನಮ್ಮಲ್ಲಿಯೂ ಸಿನಿಮಾ ಬಿಡುಗಡೆಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದರೆ  ಸಮಸ್ಯೆಗಳಿಂದ ಹೊರಬರಲೂ ಸಾಕಷ್ಟು ಮಾರ್ಗಗಳಿರುತ್ತವೆ. ಅವನ್ನು ಹಿಂಬಾಲಿಸುತ್ತೇವೆ. ಅಲ್ಲದೆ ಸಿನಿಮಾಗಳಿಗೆ ಸೆನ್ಸಾರ್‌ ಎನ್ನುವ ಬೇಲಿ ಇರಬಾರದು. ಅದು ನಿರ್ದೇಶಕನ ಯೋಚನಾ ಸ್ವಾತಂತ್ರ್ಯವನ್ನು, ಕ್ರಿಯಾಶೀಲ ಮನಸ್ಸನ್ನು ನಾಶ ಮಾಡಿದಂತೆ.

ಯಾವುದಾದರೂ ಭಾರತೀಯ ಸಿನಿಮಾ ನೋಡಿದಿರಾ?
ಹೌದು, ನ್ಯೂಟನ್‌ ಸಿನಿಮಾ ನೋಡಿದ್ದೇನೆ. ಬಾಲಿವುಡ್‌ ಸಿನಿಮಾ ಇದಾಗಿದ್ದು, ರಾಜಕುಮಾರ್‌ ಎನ್ನುವವರು ಅಭಿನಯಿಸಿದ್ದಾರೆ. ಆಸ್ಕರ್‌ಗೆ ನಾಮಿನೇಟ್‌ ಆಗಿದೆ. ತುಂಬಾ ಚೆನ್ನಾಗಿದೆ. ಇಷ್ಟವಾಯಿತು.

ಇರಾನ್‌ ಸಿನಿಮಾಕ್ಕೂ ಭಾರತೀಯ ಸಿನಿಮಾಗಳಿಗೂ ಏನೂ ವ್ಯತ್ಯಾಸ ಕಾಣಿಸುತ್ತದೆ?
ಇರಾನ್‌ ಹಾಗೂ ಭಾರತೀಯ ಸಿನಿಮಾಗಳಲ್ಲಿ ಅಂಥ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಸಂಸ್ಕೃತಿ, ಜೀವನ ಕ್ರಮಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ. ಆದರೆ ಇರಾನ್‌ನ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿಯ ಚಿತ್ರಗಳು ತೀರಾ ಭಾವನಾತ್ಮಕವಾಗಿವೆ ಎನಿಸುತ್ತದೆ.

ಬೆಂಗಳೂರು ಹೇಗೆನಿಸಿತು?
ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದು. ತುಂಬಾ ಸುಂದರವಾದ ನಗರ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಈ ನಗರ ತುಂಬಾ ಇಷ್ಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.