ADVERTISEMENT

‘ಸಮ್ಯಕ್‌’ ಮಳಿಗೆಯಲ್ಲಿ ಊರ್ಮಿಳಾ ಮುನಿಸು

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಊರ್ಮಿಳಾ ಮಾತೋಂಡ್ಕರ್‌
ಊರ್ಮಿಳಾ ಮಾತೋಂಡ್ಕರ್‌   

ಮಳಿಗೆಯೊಳನೇ ಕಾಲಿಟ್ಟೊಡನೇ ಕಣ್ಣಿಗೆ ಕಂಡಿದ್ದು ಸಾಲು ಸಾಲಾಗಿ ಜೋಡಿಸಿಟ್ಟ ಹೂದಾನಿಗಳು, ಗೊಂಬೆಗಳ ಮೇಲೆ ಬಗೆ ಬಗೆ ವಿನ್ಯಾಸ, ಬಣ್ಣಗಳ ಸೀರೆ, ಲೆಹೆಂಗಾಗಳು. ಮಹಿಳೆಯರ ಕಲೆಕ್ಷನ್‌ನಲ್ಲಿ ಇಕ್ಕಟ್‌, ಬನಾರಸಿ, ಕಾಂಚಿಪುರಂ, ಟಸ್ಸಾರ್‌ ರೇಷ್ಮೆ, ಬಾಂಧನಿ ಸೇರಿದಂತೆ ನಾನಾ ಬಗೆಯ ಸೀರೆಗಳು, ಕಾಕ್‌ಟೇಲ್‌ ಗೌನ್‌ಗಳು, ಲೆಹೆಂಗಾಗಳು, ಘಾಗ್ರಾಗಳು ಆಕರ್ಷಕವಾಗಿದ್ದವು. ಹಾಗೇ ಮುಂದಕ್ಕೆ ಹೋದಾಗ ಸಣ್ಣ ವೇದಿಕೆಯಲ್ಲಿ ‘ಸಮ್ಯಕ್’ ಹೊಸ ವಿನ್ಯಾಸದ ಲೆಹೆಂಗಾ ತೊಟ್ಟಿದ್ದ ರೂಪದರ್ಶಿಗಳು ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದರು.

ರಿಚ್ಮಂಡ್‌  ರಸ್ತೆಯಲ್ಲಿರುವ ಪ್ರಸಿದ್ಧ ಸೀರೆ ಬೋಟಿಕ್‌ ‘ಸಮ್ಯಕ್‌’ ಹೊಸ ಕಲೆಕ್ಷನ್‌ ಅನ್ನು ಅನಾವರಣ ಮಾಡಿದೆ. ಈ ಕಲೆಕ್ಷನ್‌ಗೆ ‘ವಿಂಟೇಜ್‌ ರನ್‌ ವೇ’ ಎಂದು ಹೆಸರಿಟ್ಟಿದ್ದು, ಶನಿವಾರ ಈ ಕಲೆಕ್ಷನ್‌ ಉದ್ಘಾಟನೆಯ ಪ್ರಮುಖ ಆಕರ್ಷಣೆಯಾಗಿದ್ದವರು ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌.

ಉದ್ಘಾಟನೆಗೂ ಮುನ್ನ ಸಮ್ಯಕ್‌ ಸೀರೆ ಮಳಿಗೆಯಲ್ಲಿ ಹಬ್ಬದ ವಾತಾವರಣವೇ ತುಂಬಿತ್ತು. ಸಮ್ಯಕ್‌ ಮಳಿಗೆಯ ಮಾಲೀಕರ ಕುಟುಂಬ ಸದಸ್ಯರು ಡಿಸೈನರ್‌ ವಿನ್ಯಾಸದ ಉಡುಗೆಗಳಲ್ಲಿ ಮಿಂಚುತ್ತಿದ್ದರು. ಮಳಿಗೆಯ ಸಿಬ್ಬಂದಿ ಮದುವೆ ಮನೆಯೇನೋ ಎಂಬಂತೆ ಖುಷಿಯಿಂದ ಓಡಾಡುತ್ತಿದ್ದರು. ಇಲ್ಲಿಯವರ ಈ ಖುಷಿಗೆ ಮತ್ತೊಂದು ಕಾರಣ ನಟಿ ಊರ್ಮಿಳಾ ಮಾತೋಂಡ್ಕರ್‌ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.  

ADVERTISEMENT

ಊರ್ಮಿಳಾರನ್ನು ನೋಡುವ ಕಾತರ, ಖುಷಿ ಎಲ್ಲರಲ್ಲಿ ಎದ್ದು ಕಾಣುತ್ತಿತ್ತು. ಸುಮಾರು ಮೂರು ಗಂಟೆ ತಡವಾಗಿ ಬಿಳಿ ಬಣ್ಣದ ಕಾರಿನಲ್ಲಿ ಬಂದಿಳಿದರು ನಟಿ ಊರ್ಮಿಳಾ. ಕಣ್ಣಿಗೆ ಕಪ್ಪು ಕನ್ನಡಕ, ಹಳದಿ ಬಣ್ಣದ ಉದ್ದ ಗೌನ್‌ ಧರಿಸಿದ್ದ ಊರ್ಮಿಳಾ ಮಳಿಗೆಯ ಪ್ರವೇಶ ದ್ವಾರ ದಾಟಿ ಒಳಬಂದರಷ್ಟೇ. ಹಿನ್ನೆಲೆಯಲ್ಲಿ ‘ಯಾಯಿ ರೇ ಯಾಯಿ ರೇ’ ಹಾಡು ಮೊಳಗಿತು. ಅವರ ಸ್ವಾಗತಕ್ಕೆ ಪೂರ್ಣ ತಯಾರಿ ನಡೆಸಿದ್ದ ‘ಸಮ್ಯಕ್‌’ ಮಂದಿ, ಮರುಕ್ಷಣದಲ್ಲಿಯೇ ಪೆಚ್ಚಾಗಿ ನಿಂತರು, ಹಾಡೂ ನಿಂತುಹೋಯಿತು. ಹೊಸ ಕಲೆಕ್ಷನ್‌ ಅನ್ನು ದೂರದಿಂದಲೇ ನೋಡಿದ ಊರ್ಮಿಳಾ, ಅದೇನಾಯಿತೋ ಇದ್ದಕಿದ್ದಂತೆ ಕಣ್ಣಲ್ಲಿ ಕೋಪ ಕಾರುತ್ತಾ ಹಿಂತಿರುಗಿ ಹೋಗಿಬಿಟ್ಟರು. ಎಲ್ಲರಿಗೂ ಶಾಕ್‌. ಅವರ ಕೈಯಿಂದಲೇ ಉದ್ಘಾಟನೆಗೆ ಕಾದಿದ್ದ ರಿಬ್ಬನ್‌ ಅನ್ನು ಊರ್ಮಿಳಾ ಕತ್ತರಿಸಲೇ ಇಲ್ಲ. ಯಾರು, ಯಾವ ರೀತಿ ಮನ ಒಲಿಸಲು ಪ್ರಯತ್ನಪಟ್ಟರೂ, ಕಾರಣವನ್ನೂ ಬಿಟ್ಟುಕೊಡದೇ ಪಟ್ಟು ಹಿಡಿದು ಅವರು ಕುಳಿತುಕೊಂಡರು.

ಅವರ ಬರುವಿಕೆಗಾಗಿ ಸುಮಾರು ಹೊತ್ತಿನಿಂದ ಕಾದಿದ್ದ ಮಾಧ್ಯಮ ಮಿತ್ರರು ಹಾಗೂ ಅಭಿಮಾನಿಗಳಿಗೆ ಈಗ ಪೆಚ್ಚಾಗುವ ಸರದಿ. ಅಷ್ಟು ಹೊತ್ತು ಕಾದಿದ್ದ ಅವರೆಲ್ಲರೂ, ‘ಐಶ್ವರ್ಯಾ ರೈ ಅಂತಹವರೇ ಮಾಧ್ಯಮದ ಜೊತೆ ಎಷ್ಟು ಚೆನ್ನಾಗಿ ನಡೆದುಕೊಳ್ಳುತ್ತಾರೆ, ಗೌರವ ಕೊಡುತ್ತಾರೆ. ಇವಳೇನು ಬಾಲಿವುಡ್‌ನಲ್ಲಿ ಒಂದು ಕಾಲದಲ್ಲಿದ್ದೆ ಅಂತಾ ಹೀಗೆ ಆಡ್ತಾಳೆ’ ಅಂತಾ ಆಡಿಕೊಂಡಿದ್ದು ಎಲ್ಲರಿಗೂ ಕೇಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.