ADVERTISEMENT

ಸರಳ ಉಜ್ವಲಾ

ಎಚ್.ಎಸ್.ರೋಹಿಣಿ
Published 31 ಮಾರ್ಚ್ 2013, 19:59 IST
Last Updated 31 ಮಾರ್ಚ್ 2013, 19:59 IST
ಸರಳ ಉಜ್ವಲಾ
ಸರಳ ಉಜ್ವಲಾ   

`ನಾನು ಯಾರೊಂದಿಗೂ ನನ್ನನ್ನು ಹೋಲಿಸಿಕೊಳ್ಳುವುದಿಲ್ಲ. ಯಾವುದೇ ಪಾತ್ರವಾಗಲಿ ಅದನ್ನು ನನಗೆ ಕೊಟ್ಟಾಗ ಮಾತ್ರ ನನ್ನ ಸಾಮರ್ಥ್ಯ ಅಳೆಯಲು ಸಾಧ್ಯ. ಅಂಥ ಪ್ರಯೋಗಗಳಿಗೆ ನಾನೀಗ ಸಿದ್ಧ' ಎಂದರು ನಟಿ ಉಜ್ವಲಾ.

ಮೊದಲ ಸಿನಿಮಾದಲ್ಲಿಯೇ ಪೌರಾಣಿಕ ಪಾತ್ರ ನಿರ್ವಹಿಸಲು ಒಪ್ಪಿಕೊಂಡ ಅವರನ್ನು ಗೆಳೆಯರು ಹಂಗಿಸಿದ್ದರಂತೆ. ಆದರೂ ಎದೆಗುಂದದೆ ಪ್ರಯೋಗ ಮಾಡಿದ ಅವರಿಗೆ `ಸಿನಿಮಾದಲ್ಲಿ ಎಲ್ಲಕ್ಕಿಂಥ ಮುಖ್ಯ ಅಭಿನಯ' ಎನಿಸಿದೆ.

ಉಜ್ವಲಾ ಕೊಡಗಿನ ಸೋಮವಾರಪೇಟೆಯವರು. `ಶ್ರೀ ಅಮರೇಶ್ವರ ಮಹಾತ್ಮೆ' ಅವರು ನಟಿಸಿದ ಮೊದಲ ಸಿನಿಮಾ. ಅದರ ನಿರ್ದೇಶಕ ಅರವಿಂದ ಮುಳಗುಂದ. ಅವರೇ ಪವಿತ್ರಾ ಬೆಳ್ಳಿಯಪ್ಪ ಎಂದಿದ್ದ ಹೆಸರನ್ನು ಉಜ್ವಲಾ ಎಂದು ಬದಲಿಸಿದರಂತೆ. ಅದನ್ನು ಇಷ್ಟಪಟ್ಟು ಉಳಿಸಿಕೊಂಡಿರುವ ಉಜ್ವಲಾಗೆ ತಮ್ಮ ಸಿನಿಮಾ ವೃತ್ತಿಬದುಕು ಅದೇ ಹೆಸರಲ್ಲಿ ಮುಂದುವರಿಯಬೇಕು ಎಂಬಾಸೆ.

ಸದ್ಯ ಬಿ.ರಾಮಾಚಾರಿ ನಿರ್ದೇಶನದ `ಕುಂಬಿ' ಚಿತ್ರವನ್ನು ಒಪ್ಪಿಕೊಂಡಿರುವ ಅವರು ಮೊದಲ ಸಿನಿಮಾ ಬಿಡುಗಡೆಗೆ ಮುಂಚೆಯೇ ಮತ್ತೊಂದು ಗಟ್ಟಿ ಪಾತ್ರ ಸಿಕ್ಕಿದ್ದನ್ನು ಖುಷಿಯಿಂದ ಹೇಳಿಕೊಳ್ಳುತ್ತಾರೆ.

“ನಾನು ನಟನೆಗೆ ಯಾವ ತರಬೇತಿಯನ್ನೂ ಪಡೆಯಲಿಲ್ಲ. ಶಾಲಾ ಕಾಲೇಜು ದಿನಗಳಿಂದಲೂ ನಾಟ್ಯ, ನಾಟಕದಲ್ಲಿ ಭಾಗವಹಿಸುತ್ತಿದ್ದೆ. ಭರತನಾಟ್ಯದಲ್ಲಿ ಜೂನಿಯರ್ ಆಗಿದೆ. `ಶ್ರೀ ಅಮರೇಶ್ವರ ಮಹಾತ್ಮೆ'ಯಲ್ಲಿ ನಿರ್ದೇಶಕರು ಹೇಳಿಕೊಟ್ಟಂತೆ ನಟಿಸಿ ನನ್ನೊಳಗಿನ ನಟಿಯನ್ನು ಹೊರತಂದೆ. ಆ ಚಿತ್ರದ ಪೌರಾಣಿಕ ಪಾತ್ರ ಒಪ್ಪಿಕೊಂಡ ನಂತರ ಅಂಥದೇ ಅನೇಕ ಸಿನಿಮಾಗಳು ನೋಡಿ ಗಮನಿಸಿ ಅಭಿನಯ ಕಲಿತೆ. ಎಲ್ಲಕ್ಕಿಂಥ ಹೆಚ್ಚಾಗಿ ನಿರ್ದೇಶಕರು ಅಂದಿನ ದೃಶ್ಯಗಳ ಬಗ್ಗೆ ತಿಳಿಸಿ ಹೇಳುತ್ತಿದ್ದ ರೀತಿ ನನ್ನಲ್ಲಿ ಆತ್ಮವಿಶ್ವಾಸ ತುಂಬುತ್ತಿತ್ತು” ಎನ್ನುವ ಅವರಿಗೆ ಧಾರಾವಾಹಿಗಳಲ್ಲೂ ನಟಿಸಲು ಅವಕಾಶ ಬಂದಿತ್ತಂತೆ.

`ಧಾರಾವಾಹಿಗಳಿಗೆ ಹೆಚ್ಚು ದಿನ ಮೀಸಲಿಡಬೇಕಿರುತ್ತದೆ. ಸಿನಿಮಾ ಆದರೆ 40-50ದಿನದಲ್ಲಿ ಮುಗಿದು ಹೋಗುವುದರಿಂದ ಶಿಕ್ಷಣದ ಕಡೆಗೂ ಗಮನ ಹರಿಸಬಹುದು' ಎನ್ನುವ ಅವರು ಸದ್ಯ ಜೈನ್ ಕಾಲೇಜಿನಲ್ಲಿ ಎಂಕಾಂ ಓದುತ್ತಿದ್ದಾರೆ. 

`ಸಿನಿಮಾಗಳಲ್ಲಿ ಗ್ಲಾಮರಸ್ಸಾಗಿ ಕಾಣಿಸಿಕೊಳ್ಳಲು ಅಭ್ಯಂತರವಿಲ್ಲ. ಆದರೆ ಅತಿಯಾದ ಎಕ್ಸ್‌ಪೋಸ್ ಮಾಡಲ್ಲ. ಈಜುಡುಗೆ ತೊಡಲ್ಲ' ಎಂದು ಖಡಕ್ಕಾಗಿ ಹೇಳುವ ಉಜ್ವಲಾಗೆ ಮುಂದೊಂದು ದಿನ ಉದ್ಯಮಿಯಾಗುವಾಸೆ.

ಆರಂಭದಲ್ಲಿ ಸಿನಿಮಾ ನಟಿಯಾಗಬೇಕೆಂದು ಹೇಳಿದಾಗ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತಂತೆ. ಆದರೆ ತಮ್ಮ ಆಯ್ಕೆಗಳನ್ನು ಖಚಿತಪಡಿಸಿದ ಮೇಲೆ ಮನೆಯವರು ಹಸಿರು ನಿಶಾನೆ ತೋರಿದರಂತೆ.

`ಯೋಗ್ಯ ಮೈಕಟ್ಟು ನಿರ್ವಹಿಸಲು ಪ್ರತಿದಿನ ಯೋಗ ಮಾಡುವ ಜೊತೆಗೆ ಒಂದು ಗಂಟೆ ಜಿಮ್‌ಗೂ ಹೋಗುವ ಅವರು ಬಿಡದೇ ಮಾಡುವ ನೃತ್ಯಾಭ್ಯಾಸ ಕೂಡ ದೇಹವನ್ನು ರೂಪಿಸುತ್ತಿದೆಯಂತೆ. ಡಯಟ್ ಅವರಿಗೆ ಒಗ್ಗುವುದಿಲ್ಲವಂತೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.