ADVERTISEMENT

ಸಿಟಿಜೆನ್

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಆಗಸ್ಟ್ 2012, 19:30 IST
Last Updated 24 ಆಗಸ್ಟ್ 2012, 19:30 IST
ಸಿಟಿಜೆನ್
ಸಿಟಿಜೆನ್   

ಕೆಟ್ಟ ಯೋಚನೆಗಳು

ಗುರು ಆಲ್-ಹಾಲ್ ಅವರ ಆಶ್ರಮದಿಂದ ಕಲ್ಯಾಣಪ್ಪ ಸ್ನಾತಕನಾದ ಮೇಲೆ ನಡೆದ ಘಟನೆ ಇದು. ಆಲ್-ಹಾಲ್ ಅವರ ಆಶ್ರಮದಿಂದ ಸ್ನಾತಕರಾದ ವಿದ್ಯಾರ್ಥಿಗಳು ಕೆಲಕಾಲ ಅಲ್ಲಿಯೇ ನಿಂತು ತಾವು ಪಡೆದ ಜ್ಞಾನವನ್ನು ತಮಗಿಂತ ಕಿರಿಯರೊಂದಿಗೆ ಹಂಚಿಕೊಳ್ಳುವುದು ವಾಡಿಕೆ. ಕಲ್ಯಾಣಪ್ಪನೂ ಇದೇ ಕಾರಣಕ್ಕಾಗಿ ಅಲ್ಲಿದ್ದ. ಆದರೆ ಅವನ ಜ್ಞಾನದ ಕುರಿತಂತೆ ಶಿಕ್ಷಕರ ನಡುವೆಯೇ ದಂತಕಥೆಗಳಿದ್ದವು. ಆದ್ದರಿಂದ ಕಿರಿಯ ವಿದ್ಯಾರ್ಥಿಗಳಿಗೆ ಅವನನ್ನು ಕಂಡರೆ ಸ್ವಲ್ಪ ಭಯ. ಒಂದು ರಾತ್ರಿ ಆಶ್ರಮದೊಳಗೆ ತಿರುಗಾಡುತ್ತಿದ್ದ ಕಲ್ಯಾಣಪ್ಪ ಗಟ್ಟಿ ಧ್ವನಿಯ ಮಾತುಕತೆಗಳು ಕೇಳುತ್ತಿದ್ದ ಪರ್ಣಕುಟಿಯೊಂದರೊಳಕ್ಕೆ ನುಗ್ಗಿದ. ಕೆಲವು ವಿದ್ಯಾರ್ಥಿಗಳು ಕುಳಿತು ತಮಾಷೆಯಾಗಿ ಮಾತನಾಡಿಕೊಳ್ಳುತ್ತಿದ್ದರು. ಕಲ್ಯಾಣಪ್ಪ ಆ ಮಾತುಕತೆಯೊಳಗೆ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ `ಏನೋ ಚರ್ಚಿಸುತ್ತಿದ್ದಿರಿ?~ ಎಂದ. ಬುದ್ಧಿವಂತ ವಿದ್ಯಾರ್ಥಿಯೊಬ್ಬ `ನಮ್ಮ ಏಕಾಗ್ರತೆಯನ್ನು ಹಾಳು ಮಾಡಲು ಕೆಟ್ಟ ಯೋಚನೆಗಳು ಹೇಗೆಲ್ಲಾ ನಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂಬುದರ ಕುರಿತು ಚರ್ಚಿಸುತ್ತಿದ್ದೆವು~ ಎಂದ.

ಕಲ್ಯಾಣಪ್ಪನಿಗೆ ಆತ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಯಿತು. `ಅದಕ್ಕೆ ಇಷ್ಟೆಲ್ಲಾ ಚರ್ಚಿಸುವ ಅಗತ್ಯವಿಲ್ಲ. ಸದ್ಯಕ್ಕೆ ನೀವೇ ಕೆಟ್ಟ ಯೋಚನೆಗಳನ್ನು ಹುಡುಕಿಕೊಂಡು ಹೋಗಿ. ಅವು ನಿಮ್ಮನ್ನು ಹುಡುಕಿಕೊಂಡು ಬರುವಷ್ಟು ನೀವಿನ್ನೂ ಬೆಳೆದಿಲ್ಲ~ ಎಂದು ಮತ್ತೆ ತನ್ನ ರಾತ್ರಿಯ ವಾಯುವಿಹಾರ ಆರಂಭಿಸಿದ.

ADVERTISEMENT

ಪ್ರೀತಿಯ ಪೆಟ್ಟು

ಹೆಣ್ಣು ಮಗಳೊಬ್ಬಳು ಕಲ್ಯಾಣಪ್ಪನನ್ನು ಕೆಂಪೇಗೌಡ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಒಂದರಲ್ಲಿ ಭೇಟಿಯಾದಳು. ಕಲ್ಯಾಣಪ್ಪನನ್ನು ಕಂಡಾಕ್ಷಣವೇ ಅವಳಿಗೆ ಆತ ಯಾರೆಂದು ತಿಳಿದುಬಿಟ್ಟಿತು. ಆಕೆ ಹೇಳಿದಳು `ನಾನು ಅಣ್ಣಮ್ಮನ ಪರಮಭಕ್ತೆ, ಆಕೆಯನ್ನು ಆರಾಧಿಸದ್ದಕ್ಕೆ ಲೆಕ್ಕವೇ ಇಲ್ಲ. ಆಕೆ ಕೊಡುವುದನ್ನೆಲ್ಲಾ ತುಂಬು ಮನಸ್ಸಿನಿಂದ ನಗು ನಗುತ್ತಲೇ ಸ್ವೀಕರಿಸಿದ್ದೇನೆ~.

ಕಲ್ಯಾಣಪ್ಪನಿಗೆ ಆಕೆಯ ಸಮಸ್ಯೆ ಅರ್ಥವಾಯಿತು. ಅದನ್ನು ಸ್ಪಷ್ಟಪಡಿಸಿಕೊಳ್ಳಲು `ದೇವಿ ನಿನಗೇನು ಕೊಟ್ಟಳು?~ ಎಂದು ಪ್ರಶ್ನಿಸಿದ. ಅದಕ್ಕೆ ಆಕೆ `ಆಕೆ ಕೊಟ್ಟದ್ದು ಒಂದೆರಡು ಕಷ್ಟವೇ. ಆಕೆ ಬಯಸಿದ್ದು ಸಣ್ಣ ತ್ಯಾಗವೇ. ಎಲ್ಲವನ್ನೂ ನಗು ನಗುತ್ತಲೇ ಸಹಿಸಿಕೊಂಡೆ~ ಎಂದಳು.

ಇದಕ್ಕೆ ಪ್ರತಿಕ್ರಿಯಿಸಿದ ಕಲ್ಯಾಣಪ್ಪ `ದೇವಿ ಕಷ್ಟ ಕೊಟ್ಟಾಗ ಅದನ್ನು ಸಹಿಸಿಕೊಳ್ಳುವುದಲ್ಲ. ಅದನ್ನು ಅನುಭವಿಸಬೇಕು. ತಾಯಿ ಪ್ರೀತಿಯಿಂದ ಪೆಟ್ಟು ಕೊಟ್ಟರೂ ಮಗು ಅಳುವುದಿಲ್ಲವೇ?~ ಎಂದು ಪ್ರಶ್ನಿಸಿದ.

ಆಗಂತುಕಿಯ ರೂಪದಲ್ಲಿ ಪ್ರತ್ಯಕ್ಷಳಾಗಿದ್ದ ಅಣ್ಣಮ್ಮ ದೇವಿ ಅಂತರ್ಧಾನಳಾದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.