ADVERTISEMENT

ಸಿಟಿಜೆನ್

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಮೇ 2012, 19:30 IST
Last Updated 4 ಮೇ 2012, 19:30 IST
ಸಿಟಿಜೆನ್
ಸಿಟಿಜೆನ್   

ದೇವರ ಕಷ್ಟ

ಇದು ಕಲ್ಯಾಣಪ್ಪ ಬಾಲಕನಾಗಿದ್ದಾಗ ನಡೆದ ಘಟನೆ. ಅಜ್ಜಿಯ ಜೊತೆಯೇ ಬೆಳೆಯುತ್ತಿದ್ದ ಬಾಲಕ ಕಲ್ಯಾಣಪ್ಪನಿಗೆ ಬೆಂಗಳೂರಿನ ತುಂಬಾ ಗೆಳೆಯರೇ. ಒಮ್ಮೆ ಕಲ್ಯಾಣಪ್ಪ ಗೆಳೆಯರ ಜೊತೆಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಕಲ್ಯಾಣಪ್ಪ ಅಡಗಿ ಕುಳಿತಾಗ ಗೆಳೆಯ ಅವನನ್ನು ಪತ್ತೆ ಹಚ್ಚಿದ. ಮತ್ತೆ ಕಲ್ಯಾಣಪ್ಪನ ಸರದಿ ಬಂತು. ಹುಡುಗ ಅಡಗಿ ಕುಳಿತರೆ ಕಲ್ಯಾಣಪ್ಪ ಅವನನ್ನು ನೋಡಿದರೂ ನೋಡದವನಂತೆ ವರ್ತಿಸತೊಡಗಿದ.

ಕಲ್ಯಾಣಪ್ಪನ ವರ್ತನೆಯಿಂದ ಜೊತೆಗಾರನಿಗೆ ಸಿಟ್ಟು ಬಂತು. ಅವನು ಅಜ್ಜಿಯ ಬಳಿ ಹೋಗಿ `ಕಲ್ಯಾಣಪ್ಪ ಕಣ್ಣಾ ಮುಚ್ಚಾಲೆ ಆಡಲು ಬಂದು ನನ್ನನ್ನು ಪತ್ತೆ ಹಚ್ಚುತ್ತಲೇ ಇಲ್ಲ~ ಎಂದು ದೂರು ಹೇಳಿದ.

ADVERTISEMENT

ಅಜ್ಜಿ ಕಲ್ಯಾಣಪ್ಪನನ್ನು ಕರೆದು ಇದೇನು ಹೀಗೆ ಎಂದು ವಿಚಾರಿಸಿದಳು. ಅದಕ್ಕೆ ಕಲ್ಯಾಣಪ್ಪ ಉತ್ತರಿಸಲೇ ಇಲ್ಲ. ಅಜ್ಜಿ ಹಲವಾರು ಬಾರಿ ಕೇಳಿದರೂ ಕಲ್ಯಾಣಪ್ಪ ಬೇರೆ ಏನೇನೋ ಮಾತನಾಡುತ್ತಾ ಹೋದ. ಅಜ್ಜಿಗೆ ಸಿಟ್ಟು ಬಂತು. ತನ್ನ ಊರುಗೋಲು ತೆಗೆದುಕೊಂಡು ಕಲ್ಯಾಣಪ್ಪನಿಗೆ ಎರಡು ಬಾರಿಸಿದಳು. ಆಗ ಕಲ್ಯಾಣಪ್ಪ ಉತ್ತರ ಕೊಟ್ಟ `ನೀನೇ ಹೇಳಿದಂತೆ ದೇವರು ಅಡಗಿ ಕುಳಿತಿದ್ದಾನೆ. ಅವನನ್ನು ಹುಡುಕಿ ಕಂಡುಕೊಳ್ಳಬೇಕು. ದೇವರನ್ನೇ ಹುಡುಕದಿರುವ ನಾನು ಇವನನ್ನೇಕೆ ಹುಡುಕಬೇಕು?~

ಯಾರು ಮೂರ್ಖ?

ಭಾರೀ ರಾಜಕೀಯ ಪ್ರಜ್ಞೆಯಿದ್ದ ಜವಾಬ್ದಾರಿವಂತ ಬೆಂಗಳೂರಿನ ಪ್ರಜೆಯೊಬ್ಬ ಕೆಟ್ಟ ಬಾರೊಂದರಲ್ಲಿ ಒಂಟಿಯಾಗಿ ಕುಳಿತು ಕುಡಿಯುತ್ತಿದ್ದ. ಈ ಬಗೆಯ ಒಂಟಿ ಕುಡುಕರಿಗೆ ಜೊತೆಯಾಗುವುದು ಕಲ್ಯಾಣಪ್ಪನ ಹವ್ಯಾಸ. ಈ ಒಂಟಿ ನಾಗರಿಕನಿಗೂ ಕಲ್ಯಾಣಪ್ಪ ಜೊತೆಯಾದ. ಎದುರು ಕುಳಿತಾಕ್ಷಣ ಆ ಕುಡುಕ ಹೇಳಿದ- `ನಾನು ಮೂರ್ಖ.~

ಕಲ್ಯಾಣಪ್ಪನಿಗೆ ಸಂತೋಷವಾಯಿತು `ನೀನು ಮೂರ್ಖ ಎಂಬುದು ನಿನಗೇ ಗೊತ್ತಿರುವುದರಿಂದ ನೀನು ಮೂರ್ಖನಲ್ಲ. ಹಾಗೆಂದು ನೀನು ಬೇಸರ ಪಟ್ಟುಕೊಳ್ಳುವುದು ಬೇಡ~.

ಆ ಒಂಟಿ ಕುಡುಕನಿಗೂ ಸಂತೋಷವಾಯಿತು. `ಹಾಗಿದ್ದರೆ ಈ ಪತ್ರಿಕೆಯವರು, ನನ್ನ ಮನೆಯವರು, ನನ್ನ ಗೆಳೆಯರೆಲ್ಲಾ ನನ್ನನ್ನು ಮೂರ್ಖ ಎನ್ನುತ್ತಿದ್ದಾರಲ್ಲಾ?~ ಎಂದು ಪ್ರಶ್ನಿಸಿದ.

ಕಲ್ಯಾಣಪ್ಪನಿಗೆ ಸಿಟ್ಟು ಬಂತು. ತನ್ನೆದುರು ಇದ್ದ ಗ್ಲಾಸಿನಲ್ಲಿದ್ದ ಪಾನೀಯವನ್ನು ಒಂದೇ ಗುಟುಕಿಗೆ ಮುಗಿಸಿ ಎದ್ದು ನಿಂತು `ಇತರರು ಮೂರ್ಖ ಎಂದು ಹೇಳುತ್ತಿರುವುದನ್ನು ಕೇಳಿಸಿಕೊಂಡು ತಾನು ಮೂರ್ಖ ಎಂದು ಅರಿತಾತ ಶತ ಮೂರ್ಖ~ ಎಂದು ಹೊರಟುಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.