ADVERTISEMENT

ಸಿಟಿಜೆನ್

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST
ಸಿಟಿಜೆನ್
ಸಿಟಿಜೆನ್   

ಪ್ರಯಾಣಿಕನ ಬದುಕು

ಕಲ್ಯಾಣಪ್ಪ ವಯಸ್ಕನಾದುದರ ಹಿಂದೆಯೇ ಪರಿವ್ರಾಜಕನಾಗಿ ಬೆಂಗಳೂರು ಬಿಟ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಕೆಂಪೇಗೌಡರು ಬೆಂಗಳೂರಿನ ಎಲ್ಲೆಗಳನ್ನು ಗುರುತಿಸಲು ಗೋಪುರಗಳನ್ನು ಕಟ್ಟಿದ್ದು ಈ ಪರಿವ್ರಾಜಕತ್ವಕ್ಕೆ ಒಂದು ನಿಮಿತ್ತವಾಯಿತಷ್ಟೇ. ಮೂಲತಃ ಕಲ್ಯಾಣಪ್ಪ ಒಂದು ಬಗೆಯಲ್ಲಿ ಪರಿವ್ರಾಜಕ ಜೀವಿ. ಇದಕ್ಕೆ ಸಂಬಂಧಿಸಿದಂತೆ ಒಂದು ದೃಷ್ಟಾಂತವಿದೆ. ಇದು ಗುರು ಟಾ-ರಸರ ಬಳಿ ಶಿಷ್ಯನಾಗಿದ್ದಾಗ ನಡೆದದ್ದು ಎನ್ನಲಾಗುತ್ತದೆ.

ಗುರು ಟಾ-ರಸರು ಸ್ವಭಾವತಃ ಅಲೆಮಾರಿ. ಅವರ ಆಶ್ರಮಕ್ಕೆ ಒಂದು ನೆಲೆ ಎಂಬುದೇನೂ ಇಲ್ಲ. ಶಿಷ್ಯರ ಜೊತೆಗೆ ಎಲ್ಲಾದರೂ ಕೆಲಕಾಲ ನಿಂತರೆ ಅದೇ ಆಶ್ರಮ. ಇಂಥದ್ದೊಂದು ತಾತ್ಕಾಲಿಕ ಆಶ್ರಮದಲ್ಲಿ ಕಲ್ಯಾಣಪ್ಪನಿರುವಾಗ ಅಲ್ಲಿಗೆ ದೂರದೂರಿನ ಬುದ್ಧಿಜೀವಿಯೊಬ್ಬರು ಬಂದರು. ತಿರುಗಾಟದಲ್ಲಿ ನಿದ್ರೆ ಮತ್ತು ಆಹಾರಗಳು ಸರಿಯಿಲ್ಲದೆ ಅವರು ಸೊರಗಿದ್ದರು. ಹಗಲಿಡೀ ಟಾ-ರಸರ ಜೊತೆ ಚರ್ಚಿಸಿದರು. ರಾತ್ರಿ ಮಲಗುವುದಕ್ಕೆ ಕಲ್ಯಾಣಪ್ಪ ವ್ಯವಸ್ಥೆ ಮಾಡಿಕೊಡುತ್ತಾನೆಂದು ಟಾ-ರಸರು ಹೇಳಿದರು. ಅದರಂತೆಯೇ ಆತನನ್ನು ಕಲ್ಯಾಣಪ್ಪ ತಾನು ಮಲಗುವ ಸ್ಥಳಕ್ಕೆ ಕರೆತಂದ. ಅದೊಂದು ಖಾಲಿ ಜೋಪಡಿ. ಒಳಗೆ ಯಾವ ವಸ್ತುಗಳೂ ಇರಲಿಲ್ಲ. ಆ ಬುದ್ಧಿಜೀವಿ ಆಶ್ಚರ್ಯದಿಂದ `ಹಾಸಲು ಹೊದೆಯಲು ಬೇಕಾದ ಏನೂ ಇಲ್ಲವಲ್ಲ~ ಎಂದ. ಕಲ್ಯಾಣಪ್ಪ ಅದೇ ಆಶ್ಚರ್ಯದೊಂದಿಗೆ ಮರುಪ್ರಶ್ನೆ ಹಾಕಿದ, `ತಮ್ಮ ಹಾಸಿಗೆ ಹೊದಿಕೆಗಳೆಲ್ಲಾ ಎಲ್ಲಿವೆ?~. ಆ ಬುದ್ಧಿಜೀವಿ `ನಾನೊಬ್ಬ ಪ್ರಯಾಣಿಕನಲ್ಲವೇ... ಅವು ಮನೆಯಲ್ಲಿವೆ~ ಎಂದ. ಅದಕ್ಕುತ್ತರಿಸಿದ ಕಲ್ಯಾಣಪ್ಪ `ನಾನೂ ಪ್ರಯಾಣಿಕನೇ. ಹಾಸಿ ಹೊದೆಯಲು ಬೇಕಾದುದೆಲ್ಲಾ ಇರಬೇಕಾದಲ್ಲಿ ಇವೆ~ ಎಂದ. ಬುದ್ಧಿಜೀವಿಗೆ ಆ ರಾತ್ರಿಯಿಂದ ನಿದ್ರೆಯ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಿತು.

`ಇಲ್ಲ~ಗಳ ಸಂತೋಷ
ಬೆಂಗಳೂರಿನಲ್ಲಿ ಹೊಸ ಹೊಸ ಮಾಲ್‌ಗಳು ಆರಂಭವಾದ ಮೇಲೆ ಕಲ್ಯಾಣಪ್ಪ ಹೆಚ್ಚು ಹೆಚ್ಚು ಅವುಗಳ ಒಳಗೇ ತಿರುಗಾಡುತ್ತಿರುತ್ತಾನೆ. ಹೊರ ವಲಯದಲ್ಲಿ ಸಿಕ್ಕು ಪರಿಚಿತರಾದ ಹಲವರು ಅವನಿಗೆ ಮಾಲ್‌ನೊಳಗೆ ಹಲವು ಬಾರಿ ಕಾಣ ಸಿಗುತ್ತಿರುತ್ತಾರೆ. ಕಲ್ಯಾಣಪ್ಪನ ಹಿನ್ನೆಲೆ ಅರಿಯದ ಇವರು ಸಹಜವಾಗಿ ನಕ್ಕು ಅಂಗಡಿಗಳಿಂದ ಅಂಗಡಿಗಳಿಗೆ ಹೋಗುತ್ತಿದ್ದರು. ಒಮ್ಮೆ  ವೃತ್ತಿಪರ ವಿರಾಗಿಯೊಬ್ಬರು ಒರಾಯನ್ ಮಾಲ್‌ನಲ್ಲಿ ಕಲ್ಯಾಣಪ್ಪನಿಗೆ ಸಿಕ್ಕರು. ಕಲ್ಯಾಣಪ್ಪನ ಹಿನ್ನೆಲೆ ತಿಳಿದಿದ್ದ ಅವರಿಗೆ ಒಂದು ಬಗೆಯಲ್ಲಿ ಸಂತೋಷವಾಯಿತು. ಈ ಮಹಾ ಸನ್ಯಾಸಿ ಕೂಡ ತನ್ನಂತೆಯೇ ಆಗಿದ್ದಾನೆ ಎಂಬ ಸಂತೋಷವನ್ನು ಅದುಮಿಟ್ಟುಕೊಂಡು `ನಮ್ಮ ಭಕ್ತರೊಬ್ಬರು ಹೊಸ ಅಂಗಡಿ ತೆರೆಯುತ್ತಿದ್ದಾರೆ. ಅವರನ್ನು ಆಶೀರ್ವದಿಸಲು ಬಂದಿದ್ದೆ~ ಎಂದರು.

ಭಕ್ತರ ಬಂಧನ ಬಯಸದ ಕಲ್ಯಾಣಪ್ಪ ಸುಮ್ಮನೆ ಗೋಣಾಡಿಸಿದ. ಆ ವೃತ್ತಿಪರ ವಿರಾಗಿಗೆ ಕಲ್ಯಾಣಪ್ಪನನ್ನು ಛೇಡಿಸುವ ಮನಸ್ಸಾಗಿ `ತಮಗೆ ಇಲ್ಯ್‌ವ ಅಲೌಕಿಕ ಸಂತೋಷವಿದೆಯೆಂದು ತಿಳಿಯಲಿಲ್ಲ~ ಎಂದ. ಆಗ ಕಲ್ಯಾಣಪ್ಪ ಉತ್ತರಿಸಿದ `ಇಲ್ಲಿ ಸಿಗುವ ಸಂತೋಷ ನನಗೆ ಇನ್ನೆಲ್ಲೂ ಸಿಗುವುದಿಲ್ಲ. ಇಲ್ಲಿ ಬರುವ ಸಾವಿರಾರು ಮಂದಿ ಮುಗಿಬಿದ್ದು ಖರೀದಿಸುತ್ತಿರುವ ಒಂದು ವಸ್ತು ಕೂಡ ಇಲ್ಲದೆ ನಾನು ಬದುಕುತ್ತಿದ್ದೇನೆಂದು ತಿಳಿಯುವುದು ಸಂತೋಷದ ಸಂಗತಿಯಲ್ಲವೇ?~ ಆ ವೃತ್ತಿಪರ ವಿರಾಗಿ ಮತ್ತೆ ಕಲ್ಯಾಣಪ್ಪನ ಕಣ್ಣಿಗೆ ಬೀಳಲಿಲ್ಲ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT