ADVERTISEMENT

ಸಿತಾರ್ ಖಬರ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

`ಸಿತಾರ್ ಮೂರು ತಿಂಗಳ ಕೋರ್ಸೋ, ಆರು ತಿಂಗಳದ್ದೋ ಎಂದು ಈಗಿನ ಮಕ್ಕಳು ಕೇಳಲು ಬರುತ್ತಾರೆ. ಪುಟ್ಟ ಕಂಗಳನ್ನು ಅರಳಿಸಿ ಪುಟಾಣಿಗಳು ಇಂಥ ಪ್ರಶ್ನೆಗಳನ್ನು ಕೇಳಿದರೆ ಏನೆಂದು ಉತ್ತರಿಸಬೇಕು..? ಇಂದಿನ ಸಂಗೀತ ವಿದ್ಯಾರ್ಥಿಗಳಿಗೆ ಬೇಗ ಕಲಿಯಬೇಕು, ಟೀವಿಯಲ್ಲಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು, ಹೆಸರು ಬರಬೇಕು. ಮಕ್ಕಳಂತೆ ಪೋಷಕರೂ. ಸಂಗೀತದಲ್ಲಿ ಸಾಧನೆಯಿಲ್ಲದಿದ್ದರೆ ಹೇಗೆ~ ಎಂದು ಪ್ರಶ್ನಿಸುತ್ತಲೇ ಮಾತಿನ ಲಹರಿಯನ್ನು ಹರಿಯಬಿಡುತ್ತಾರೆ ಖ್ಯಾತ ಸಿತಾರ್ ವಾದಕ ಉಸ್ತಾದ್ ಶಫೀಕ್ ಖಾನ್.

ಅಮ್ಜದ್ ಅಲಿಖಾನ್ ಅವರಿಗೆ ಸರೋದ್‌ನಲ್ಲಿ ಪರಿಪಕ್ವ ನುಡಿಸಾಣಿಕೆ ಕಲೆ ಇದ್ದರೂ 72ರ ಈ ವಯಸ್ಸಿನಲ್ಲೂ `ನಾನು ಇನ್ನೂ ಕಲಿಯಬೇಕು; ಸಂಗೀತದಲ್ಲಿ ಹೊಸ ಅನ್ವೇಷಣೆ ಮಾಡಬೇಕು~ ಎಂಬ ತುಡಿತ ಇರುವಾಗ ಇಂದಿನ ಮಕ್ಕಳಿಗೆ ಇದ್ಯಾವ ಪ್ರಚಾರದ ಹುಚ್ಚು... ಜನಪ್ರಿಯತೆಯ ಗುಂಗು... ಹೀಗಾದರೆ ಸಂಗೀತ ಉಳಿಯೋದು ಹೇಗೆ ಎಂಬ ಆತಂಕ ಶಫೀಕ್ ಖಾನ್‌ಗೆ.

`ಕೋಗಿಲೆ ಕಂಠದ ಗಾಯಕಿ ಲತಾ ಮಂಗೇಶ್ಕರ್ ತಂದೆ ದೀನಾನಾಥ್ ಮಂಗೇಶ್ಕರ್ ಅವರ ಪುಣ್ಯತಿಥಿ ಸಮಾರಂಭ. ಅವರ ಸವಿನೆನಪಿನಲ್ಲಿ ನಡೆಸುವ ಸಂಗೀತ ಕಛೇರಿಯಲ್ಲಿ ಸಿತಾರ್ ಜುಗಲ್‌ಬಂದಿ. ಸಹೋದರ ರಫೀಕ್ ಖಾನ್ ಮತ್ತು ತಮ್ಮ ಮೊದಲ ಕಛೇರಿ ಅದು. 1985ರಲ್ಲಿ, ಗೋವಾದಲ್ಲಿ. ಈ ಕಛೇರಿಗೆ ನಡೆಸಿದ ರಿಯಾಜ್ ಅಷ್ಟಿಷ್ಟಲ್ಲ. ಇದಾದ ಮೇಲೆ ಸಾಕಷ್ಟು ಜುಗಲ್‌ಬಂದಿ ನಡೆಸಿದ್ದೇವೆ, ಬಾನ್ಸುರಿ ಜೊತೆಗೂ ಸಿತಾರ್ ಕಛೇರಿ ನೀಡಿದ್ದೇವೆ; ಆದರೆ ಎಂದೂ ಜನಪ್ರಿಯತೆಗಾಗಿ ಸಿತಾರ್ ಕಲಿಯಲಿಲ್ಲ~ ಎಂದು ತಾವು ಸವೆಸಿದ ಹಾದಿಯನ್ನು ಸ್ಮರಿಸುತ್ತಾರೆ.

ADVERTISEMENT

ಹಾಗೆ ನೋಡಿದರೆ ಶಫೀಕ್-ರಫೀಕ್ ಜೋಡಿ ಸಿತಾರ್‌ನಲ್ಲಿ ಇಷ್ಟೊಂದು ಜನಪ್ರಿಯವಾಗಲು ಸತತ ರಿಯಾಜ್ ಜತೆಗೆ ಅವರ ಮನೆತನವೇ ಕಾರಣ. ತಮ್ಮ ಏಳು ತಲೆಮಾರಿನ ಕುಟುಂಬದವರು ಸಿತಾರ್ ನುಡಿಸುತ್ತಲೇ ಬಂದವರು. ಅಜ್ಜ, ತಂದೆ, ಚಿಕ್ಕಪ್ಪ ಸಿತಾರ್‌ನಲ್ಲಿ ಖ್ಯಾತರಾಗಿದ್ದರು. ತಮ್ಮ 6-7ನೇ ವಯಸ್ಸಿನಲ್ಲೇ ಸಿತಾರ್ ತಾಲೀಮು ಆರಂಭ. ಎಸ್ಸೆಸ್ಸೆಲ್ಸಿ ಮುಗಿಯುವ ವೇಳೆಗೆ  ಖಾನ್ ಸಹೋದರರ ಜುಗಲ್‌ಬಂದಿ ಕಛೇರಿ ಪಕ್ವ, ಪರಿಪೂರ್ಣತೆ ಪಡೆಯಲು ಆರಂಭಿಸಿತು. ಇಬ್ಬರೂ ಅವಳಿ ಮಕ್ಕಳಾದ್ದರಿಂದ ಜುಗಲ್‌ಬಂದಿಯೇ ನಡೆಸಿದರೆ ಅದು ವಿಶಿಷ್ಟವಾಗಿರುತ್ತದೆ ಎಂಬುದು ತಂದೆಯ ಕನಸು. ಅದನ್ನು ನನಸಾಗಿಸಿದವರು ಖಾನ್ ಸಹೋದರರು.

ಅಂದಹಾಗೆ, ಸಿತಾರ್‌ನಲ್ಲಿ ಮೊದಲಿಗೆ ಇದ್ದದ್ದು ಬರೀ ಮೂರು ತಂತಿಗಳು. ಆದರೆ ಇದೀಗ ಏಳು ತಂತಿ ಸಿತಾರ್ ಬಂದಿದೆ. ಇದು ಈ ಖಾನ್ ಸಹೋದರರ ಅಜ್ಜ ರೆಹಮತ್ ಖಾನ್ ಮಾಡಿದ್ದ ಪ್ರಯೋಗ. ಕರ್ಜ್ ಮತ್ತು ಪಂಚಮ ಎಂಬ ಎರಡು ಆಧಾರ ಸ್ವರಗಳನ್ನು ಇಟ್ಟುಕೊಂಡು ಸಿತಾರ್‌ಗೆ ನೀಡಿದ ಹೊಸ ರೂಪ. ಇದು ಇಂದು ಮನೆಮಾತು.

ಪುರಾತನ ವಾದ್ಯ

ಹಾಗೆ ನೋಡಿದರೆ ಎಲ್ಲ ತಂತಿವಾದ್ಯಗಳ ತಾಯಿ ವೀಣೆಯ ಮತ್ತೊಂದು ರೂಪವೇ ಸಿತಾರ್. ಇದನ್ನು ಅಮೀರ್ ಖುಸ್ರೊ ಕಂಡುಹಿಡಿದ. ಅಪ್ಪಟ ಭಾರತೀಯ ವಾದ್ಯವಾಗಿರುವ ಸಿತಾರ್ ಇದೀಗ ಫ್ಯೂಷನ್ ಸಂಗೀತದಲ್ಲೂ ಹೆಚ್ಚಾಗಿ ಬಳಕೆಯಾಗುತ್ತಿದೆ.

ಉತ್ತಮ ಗುಣಮಟ್ಟದ ಸಿತಾರ್ ಮೀರಜ್, ದೆಹಲಿ, ಕೋಲ್ಕತ್ತಾಗಳಲ್ಲಿ ಸಿಗುತ್ತದೆ. ಬೆಲೆ ಅಂದಾಜು 10ರಿಂದ 30 ಸಾವಿರ ರೂಪಾಯಿ. ದೆಹಲಿಯ ರಿಕ್ಕಿರಾಮ್ ಹಲವಾರು ವರ್ಷಗಳಿಂದ ಸಿತಾರ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಸಿತಾರ್ ಇವರ ಬಳಿ ಸಿಗುತ್ತದೆ. ಬೆಲೆ 65ರಿಂದ 75 ಸಾವಿರ ರೂಪಾಯಿ.

ನಗರದ ಮಿಲ್ಲರ್ ರಸ್ತೆಯ ಬೆನ್ಸನ್ ಟೌನ್‌ನಲ್ಲಿ ನ್ಯೂ ಲೆವಿಸ್ ಅಂಡ್ ಸನ್ಸ್ 080-23536724, ಫ್ರೇಜರ್ ಟೌನ್‌ನ ಶಿವ ಮ್ಯೂಸಿಕಲ್ಸ್ 080-66493293, ಇಂದಿರಾ ನಗರದ ಥಾಮ್ಸನ್ ಮ್ಯೂಸಿಕ್ ಹೌಸ್ 080-42543000 ನಲ್ಲಿ ಸಿತಾರ್ ಸಿಗುತ್ತದೆ.
ನೀವೂ ಸಿತಾರ್ ಮಾಂತ್ರಿಕ ಪಂ. ರವಿಶಂಕರ್ ಅವರಂತೆ ಆಗಬೇಕೆ? ಎಷ್ಟು ಗಂಟೆ, ಹೇಗೆ ತಾಲೀಮು ನಡೆಸಬೇಕು, ಸಿತಾರ್ ಹಿಡಿಯುವುದು ಹೇಗೆ..? ಪುಟ್ಟ ಕೈಗಳ ಕೋಮಲ ಬೆರಳುಗಳಲ್ಲಿ ಸಿತಾರ್ ತಂತಿಗಳನ್ನು ಮೀಟಿ ಸ್ವರಗಳನ್ನು ಹೊರಡಿಸಿ. ಸ ರೆ ಗ ಪ ನಿ ಸ... ಸ ನಿ ಪ ಗ ರೆ ಸ... ಔಡವ ಸ್ವರ ಸಮೂಹವುಳ್ಳ ಸುಮಧುರ ಹಂಸಧ್ವನಿ ರಾಗದಿಂದಲೇ ಆರಂಭಿಸುತ್ತೀರಾ ನೋಡಿ ಮತ್ತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.