ADVERTISEMENT

ಸಿನಿಮಾದಲ್ಲೇ ಸಂತೋಷ!

ಅಮಿತ್ ಎಂ.ಎಸ್.
Published 12 ಜೂನ್ 2012, 19:30 IST
Last Updated 12 ಜೂನ್ 2012, 19:30 IST

ಪತ್ರಕರ್ತನಾಗಲು ಪೆನ್ನು ಹಿಡಿದ ಅವರು ಬರೆಯಲು ಆರಂಭಿಸಿದ್ದು ಕವಿತೆಗಳನ್ನು. ಆದರೆ ಬದುಕಿನ ದಿಕ್ಕನ್ನು ಬದಲಿಸಿದ್ದು ಸಿನಿಮಾ ಆಸಕ್ತಿ. ಸಂತೋಷ್ ನಾಯಕ್ ಇತ್ತೀಚಿನ ದಿನಗಳಲ್ಲಿ ಗುರುತಿಸಿಕೊಳ್ಳುವ ಯುವ ಚಿತ್ರಸಾಹಿತಿಗಳಲ್ಲಿ ಒಬ್ಬರು.

ಉಜಿರೆಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಮುಗಿಸಿರುವ ಸಂತೋಷ್ ಪತ್ರಿಕೋದ್ಯಮದ ಬದಲಿಗೆ ಆಯ್ದುಕೊಂಡದ್ದು ಸಿನಿಮಾ ಸಾಹಿತ್ಯವನ್ನು. ಇತ್ತೀಚೆಗಷ್ಟೆ ಕಾಲೇಜು ಮೆಟ್ಟಿಲಿಳಿದು ಹೊರಬಂದ ಸಂತೋಷ್ ಹತ್ತಿರುವುದು ಚಿತ್ರರಂಗದ ಸೋಪಾನವನ್ನು.
 
ಓದುತ್ತಿದ್ದಾಗಲೇ ಸಿನಿಮಾ ಸಾಹಿತ್ಯ ರಚನೆಗಿಳಿದ ಸಂತೋಷ್ ಈಗಾಗಲೇ ಸುಮಾರು 60ಕ್ಕೂ ಅಧಿಕ ಹಾಡುಗಳನ್ನು ಬರೆದಿದ್ದಾರೆ. ಸುಮಾರು ಏಳೆಂಟು ಹೊಸ ಸಿನಿಮಾಗಳಲ್ಲಿ ಎಲ್ಲಾ ಹಾಡುಗಳನ್ನೂ ಬರೆಯುವ ಅವಕಾಶವೂ ಅವರಿಗೆ ಲಭಿಸಿದೆ.

ಮಂಗಳೂರು ಮೂಲದ ಸಂತೋಷ್ ನಾಯಕ್ ಸಾಹಿತ್ಯದ ಒಲವುಳ್ಳವರು. ಆದರೆ ಕಾವ್ಯ ಪ್ರಕಾರಕ್ಕೆ ಕೈಹಾಕಿದ್ದು ಕಾಲೇಜು ಮೆಟ್ಟಿಲೇರಿದ ಮೇಲೆಯೇ. ಪ್ರೇಮಗೀತೆಗಳಿಗಿಂತ ಗಂಭೀರ ಸಾಹಿತ್ಯದ ಜಾಡು ಹಿಡಿದ ಅವರಿಗೆ ಕವನ ಬರೆಯಲು ಹೆಚ್ಚಿನ ಸ್ಫೂರ್ತಿ ನೀಡಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ಯುವ ಕವಿ ಸ್ಪರ್ಧೆ.
 
ಅದರಲ್ಲಿ ಮೊದಲ ಬಹುಮಾನ ಗಳಿಸಿದ ಅವರಲ್ಲಿ ಸಿನಿಮಾಗಳಿಗೆ ಹಾಡು ಬರೆಯುವ ಆಸೆಯೂ ಮೊಳಕೆಯೊಡೆಯಿತು. ಅವಕಾಶ ಅರಸಿಕೊಂಡು ಬೆಂಗಳೂರಿನತ್ತ ಹೊರಟ ಅವರು ಮೊದಲು ನಡೆದದ್ದು ಸಂಗೀತ ನಿರ್ದೇಶಕ ಗುರುಕಿರಣ್ ಬಳಿಗೆ. ಗುರುಕಿರಣ್ `ಯುವ~ ಚಿತ್ರದಲ್ಲೊಂದು ಅವಕಾಶವಿತ್ತರು. ಅಲ್ಲಿಂದ ಪ್ರಾರಂಭವಾದ ಅವರ ಗೀತಪಯಣ ಸುಮಾರು 25 ಚಿತ್ರಗಳನ್ನು ದಾಟಿದೆ.

`ಜೀವಾ~, `ವಿಲನ್, `ಸತ್ಯ ಇನ್ ಲವ್~, `ಪ್ರೇಮ್ ಕಹಾನಿ~, `ಶಂಕರ್ ಐಪಿಎಸ್~, `ರಾಧಿಕಾಳ ಗಂಡ~, `ಗೋವಿಂದಾಯ ನಮಃ~ ಮುಂತಾದವು ಅವರು ಹಾಡು ಹೊಸೆದ ಪ್ರಮುಖ ಚಿತ್ರಗಳು. `ಸ್ಟೋರಿ ಕಥೆ~ ಚಿತ್ರದಲ್ಲಿ ಹಳೆಗನ್ನಡ ಪದಗಳನ್ನು ಬಳಸಿ ಅವರು ಹಾಡೊಂದನ್ನು ರಚಿಸಿದ್ದಾರೆ. ಬಾಲ್ಯದಲ್ಲಿಯೇ ಯಕ್ಷಗಾನಕ್ಕೆ ಬಣ್ಣ ಹಚ್ಚಿದ್ದು ಅವರಿಗೆ ಸಿನಿಮಾ ಲೋಕದಲ್ಲಿಯೂ ನೆರವಾಗಿದೆ. ಯಕ್ಷಗಾನ ಪದ್ಯದ ಸಾಲುಗಳನ್ನೂ ಅವರು ಇಲ್ಲಿ ಬಳಸಿಕೊಂಡಿದ್ದಾರಂತೆ.

`ಓದುತ್ತಿದ್ದಾಗಲೇ ಸಿನಿಮಾ ಸೆಳೆತ ಶುರುವಾಗಿದ್ದರಿಂದ ಆಗಾಗ್ಗೆ ಬೆಂಗಳೂರಿಗೆ ಬರಬೇಕಾಗುತ್ತಿತ್ತು. ಹೀಗಾಗಿ ಓದಿನಲ್ಲಿ ತೊಡಗಿಸಿಕೊಂಡಿದ್ದು ಕಡಿಮೆಯೇ.

ಪತ್ರಿಕೋದ್ಯಮ ನನ್ನ ಆಸಕ್ತಿಯ ಕ್ಷೇತ್ರ. ಆದರೆ, ಇತ್ತ ಬರೆಯುವ ಹುಚ್ಚು ಪತ್ರಕರ್ತನಾಗುವ ಬಯಕೆಯನ್ನು ಹಿಡಿದಿಟ್ಟಿದೆ~ ಎನ್ನುತ್ತಾರೆ ಸಂತೋಷ್ ನಾಯಕ್. ಮಾಧುರ್ಯ ಪ್ರಧಾನ ಗೀತೆಗಳು ದೀರ್ಘಕಾಲ ಜನರ ಮನಸ್ಸಿನಲ್ಲಿ ಉಳಿಯುತ್ತದೆ.

ಆದರೆ ಚಿತ್ರಕ್ಕೆ ಅಗತ್ಯವಾದ ಎಲ್ಲಾ ಬಗೆಯ ಹಾಡುಗಳನ್ನೂ ರಚಿಸಬೇಕಾಗುತ್ತದೆ. ಪದಗಳಲ್ಲಿ ವಿಶಿಷ್ಟ ಪ್ರಯೋಗ ಮಾಡುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಳ್ಳುವುದು ತಮ್ಮ ಬಯಕೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.