ADVERTISEMENT

ಸಿನಿಮಾ ರೂಪದಲ್ಲಿ ‘ದಿ ಬೆಟ್’

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST
ಸಿನಿಮಾ ರೂಪದಲ್ಲಿ ‘ದಿ ಬೆಟ್’
ಸಿನಿಮಾ ರೂಪದಲ್ಲಿ ‘ದಿ ಬೆಟ್’   

ಹೊಸದೊಂದು ಕನ್ನಡ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಇದು ಹೊಸದಷ್ಟೇ ಅಲ್ಲ, ವಿಭಿನ್ನ ಕೂಡ ಹೌದು. ಈ ಸಿನಿಮಾದಲ್ಲಿನ ಪಾತ್ರಧಾರಿ ಒಬ್ಬನೇ ಎಂಬುದು ಇದರ ವೈಶಿಷ್ಟ್ಯ. ಸಿನಿಮಾ ಹೆಸರು ‘ಕೈವಲ್ಯ’.

ರಷ್ಯನ್ ಲೇಖಕ ಆ್ಯಂಟನ್ ಚೆಕೊವ್ ಬರೆದ ‘ದಿ ಬೆಟ್’ ಎನ್ನುವ ಸಣ್ಣ ಕಥೆಯನ್ನು ಆಧರಿಸಿದ ಸಿನಿಮಾ ಇದು. ಈ ಕಥೆ ಕನ್ನಡಕ್ಕೂ ಅನುವಾದವಾಗಿದೆ. ಇದನ್ನು ಕನ್ನಡ ಸಿನಿಮಾ ರೂಪಕ್ಕೆ ತರುತ್ತಿರುವವರು ನಿರ್ದೇಶಕ ರವೀಂದ್ರ ವಂಶಿ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ರವೀಂದ್ರ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಅವರ ಜೊತೆ ಸಿನಿಮಾ ತಂಡದ ಸದಸ್ಯರೂ ಇದ್ದರು. ಭಾರತೀಯ ಚಿತ್ರರಂಗದಲ್ಲಿ ಇದೊಂದು ವಿಶೇಷ ಪ್ರಯೋಗಾತ್ಮಕ ಚಿತ್ರ ಎಂದು ತಂಡ ಹೇಳಿಕೊಂಡಿದೆ.

ADVERTISEMENT

‘ಒಂದೂ ಮುಕ್ಕಾಲು ಗಂಟೆಯ ಸಿನಿಮಾ ಇದು. ಒಬ್ಬನನ್ನು ಹೊರತುಪಡಿಸಿದರೆ ತೆರೆಯ ಮೇಲೆ ಇನ್ಯಾರೂ ಕಾಣಿಸುವುದಿಲ್ಲ. ಇದನ್ನು ನಾವು ಚಿತ್ರೋತ್ಸವಗಳಲ್ಲಿ ಪ್ರದರ್ಶಿಸುವ ಉದ್ದೇಶವೊಂದರಿಂದಲೇ ಸಿದ್ಧಪಡಿಸಿಲ್ಲ. ಕಮರ್ಷಿಯಲ್ ಆಗಿಯೂ ಈ ಸಿನಿಮಾ ಮಾಡಿದ್ದೇವೆ’ ಎಂದರು ರವೀಂದ್ರ.

‘ಒಬ್ಬನೇ ಕಲಾವಿದ ಇರುವ ಸಿನಿಮಾವನ್ನು ವೀಕ್ಷಕರಿಗೆ ಹೇಗೆ ತೋರಿಸುತ್ತೀರಿ’ ಎಂದು ಪ್ರಶ್ನಿಸಿದಾಗ, ‘ಎಷ್ಟು ಜನ ಪಾತ್ರಧಾರಿಗಳು ಇದ್ದಾರೆ ಎಂದು ವೀಕ್ಷಕರು ಕೇಳುವುದಿಲ್ಲ. ಅವರು ಬರುವುದು ಒಳ್ಳೆಯ ಕಥೆಯನ್ನು ನೋಡಲು. ಒಳ್ಳೆಯ ಸಿನಿಮಾವನ್ನು ಜನ ಖಂಡಿತ ವೀಕ್ಷಿಸುತ್ತಾರೆ ಎಂಬುದು ನನ್ನ ನಂಬಿಕೆ’ ಎಂದು ಉತ್ತರಿಸಿದರು.

ಈಗಾಗಲೇ ಜನಪ್ರಿಯವಾಗಿರುವ ಕಥೆಯೊಂದನ್ನು ಸಿನಿಮಾ ಮಾಡುವುದು ರವೀಂದ್ರ ಅವರಿಗೆ ಸವಾಲಾಗಿತ್ತಂತೆ.

‘ಈ ಸಿನಿಮಾಕ್ಕೆ ನಾನೊಬ್ಬನೇ ನಟ ಆಗಿರುವ ಕಾರಣ, 18 ದಿನಗಳ ಚಿತ್ರೀಕರಣವು ನನ್ನ ಮನಸ್ಸು ಮತ್ತು ದೇಹವನ್ನು ಸುಸ್ತುಮಾಡಿತ್ತು’ ಎಂದರು ನಟ ಕೈಲಾಶ್. ಪರಮ್ ಗುಬ್ಬಿ ಅವರು ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ವೀರ ಸಮರ್ಥ ಸಂಗೀತ, ಜೀವನ್ ಗೌಡ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.