ADVERTISEMENT

ಸಿನಿಮೋತ್ಸವ ಪ್ರೋಗ್ರಾಂ ಅಲ್ಲ ‘ಪ್ರಾಜೆಕ್ಟ್’

ಪ್ರಜಾವಾಣಿ ವಿಶೇಷ
Published 24 ಜನವರಿ 2016, 19:30 IST
Last Updated 24 ಜನವರಿ 2016, 19:30 IST
ಬಿ.ಎಸ್. ಲಿಂಗದೇವರು
ಬಿ.ಎಸ್. ಲಿಂಗದೇವರು   

ಎಂಟನೇ ‘ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ’ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗುತ್ತಿರುವ ಚಿತ್ರೋತ್ಸವಕ್ಕೆ ಜಾಗತಿಕ ಸಿನಿಮಾ ನಿರ್ಮಾರ್ತೃಗಳು ಸಹ ಸಾಕ್ಷಿಯಾಗುತ್ತಿದ್ದಾರೆ. ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿ ಸಂಘಟಿಸುತ್ತಿರುವ ಉತ್ಸವಕ್ಕೆ ಅನೇಕರಲ್ಲಿ ಸಲಹೆ ಸೂಚನೆಗಳು ಇದ್ದೇ ಇರುತ್ತವೆ. ಅವುಗಳನ್ನು ಕೇಳಿಸುವುದು ‘ಮೆಟ್ರೊ’ ಉದ್ದೇಶ. ಚಿತ್ರೋತ್ಸವದ ಕುರಿತು ನಿರ್ದೇಶಕ ಬಿ.ಎಸ್.ಲಿಂಗದೇವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರಾಜೆಕ್ಟ್‌ಗೂ ಪ್ರೋಗ್ರಾಂಗೂ ವ್ಯತ್ಯಾಸವಿದೆ. ಪ್ರೋಗ್ರಾಂ ಎಂದರೆ ಪ್ರಚಾರ ಅಷ್ಟೇ. ಸಿನಿಮೋತ್ಸವ ಒಂದು ಪ್ರಾಜೆಕ್ಟ್ ರೀತಿ ಆಗಿ, ಕರ್ನಾಟಕದ ಸಿನಿಮಾ ನಿರ್ಮಾತೃಗಳಿಗೆ ಅನುಕೂಲವಾಗಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಜನರ ಪ್ರಜ್ಞೆಯನ್ನು ಎಚ್ಚರಿಸುವ ಕೆಲಸ ಆಗುತ್ತಿದೆ. ಪ್ರೇಕ್ಷಕರು ಉತ್ಸವಕ್ಕೆ ಬರುತ್ತಿದ್ದಾರೆ. ಅಂದರೆ ಪ್ರಾಜೆಕ್ಟ್‌ಗಿಂತ ಪ್ರೋಗ್ರಾಂಗೆ ಒತ್ತು ನೀಡುತ್ತಿದ್ದೇವೆ.

ವಿಧಾನಸೌಧದದ ಎದುರು ಸಿನಿಮೋತ್ಸವ ಉದ್ಘಾಟನೆ ಮಾಡುತ್ತಿರುವುದು ವಿಜೃಂಭಣೆಗೆ–ಹಣ ವ್ಯಯಕ್ಕೆ ಕಾರಣವಾಗುತ್ತದೆ. ಇಲ್ಲಿ ದುಂದುವೆಚ್ಚಗಳು ಆಗಬಾರದು. ಇದರಿಂದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಯಾವ ರೀತಿಯ ಅನುಕೂಲ? ಕಮರ್ಷಿಯಲ್ ಸಿನಿಮಾ ಮಾಡಿದಂತೆ ಆಗುತ್ತದೆ. ಈ ವರ್ಷ ವಿಧಾನಸೌಧದ ಎದುರು ಮಾಡಿದರೆ, ಮುಂದಿನ ವರ್ಷವೂ ಅಲ್ಲಿಯೇ ಆಗುತ್ತದೆಯೇ? ಒಂದು ಪರಂಪರೆಯನ್ನು ಹುಟ್ಟು ಹಾಕಿದ ಮೇಲೆ ಅದು ಮುಂದುವರಿಯಬೇಕು ಅಲ್ಲವೇ? ಈ ವಿಷಯವಾಗಿ ಅಕಾಡೆಮಿ, ಸರ್ಕಾರ ಏನಾದರೂ ಪ್ಲಾನ್ ಮಾಡಿವೆಯೇ? ಯಾವುದೋ ಒಂದು ವರ್ಷ ಮಾಡುವುದರ ಸಾರ್ಥಕತೆ ಏನು?

ನಮ್ಮಲ್ಲಿನ್ನೂ ಆತಿಥ್ಯ ಶುರುವಾದಂತೆ ಕಾಣಿಸುತ್ತಿಲ್ಲ. ವಿದೇಶಿ ಅತಿಥಿಗಳು ಯಾರು ಯಾರು ಬರುತ್ತಿದ್ದಾರೆ ಎನ್ನುವುದು ಈಗಾಗಲೇ ನಿಕ್ಕಿ ಆಗಿರಬೇಕು. ಆ ಬಗ್ಗೆ ಒಂದು ಮಾಹಿತಿಯನ್ನು ಕನ್ನಡ ನಿರ್ಮಾಪಕ–ನಿರ್ದೇಶಕರಿಗೆ ನೀಡಿದ್ದರೆ ಯಾರ ಜತೆ– ಯಾವ ರೀತಿ ಸಂವಾದಗಳನ್ನು ನಾವು ಮಾಡಬಹುದು, ನಮಗೆ ಯಾವ ರೀತಿ ಅನುಕೂಲವಾಗುತ್ತದೆ ಎನ್ನುವುದಕ್ಕೆ ಸಿದ್ಧವಾಗಲು ನೆರವಾಗುತ್ತಿತ್ತು.

ಉದ್ಘಾಟನಾ ಸಮಾರಂಭ ಮತ್ತು ಸಮಾರೋಪಕ್ಕೆ ದುಂದು ವೆಚ್ಚ ಮಾಡಲಾಗುತ್ತಿದೆ. ಇದರಿಂದ ಯಾವುದೇ ಅನುಕೂಲಗಳಿಲ್ಲ. ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರದರ್ಶನವಾಗುವ ಎಲ್ಲ ಚಿತ್ರಗಳಿಗೆ ಗೌರವ ಧನ ನೀಡಲಾಗುತ್ತದೆ. ಇದು ಉತ್ತಮ ಬೆಳವಣಿಗೆ. ಆದರೆ ಬೇರೆಡೆಗಳಲ್ಲಿ ಈ ಪರಿಪಾಠವಿಲ್ಲ. ಅವರು ವಿದೇಶಿ ಚಿತ್ರಗಳಿಗಷ್ಟೇ ಗೌರವ ಧನ ನೀಡುತ್ತಾರೆ. ವಿದೇಶಿ ಚಿತ್ರಗಳಿಗೆ ಲಕ್ಷಾಂತರ ರೂಪಾಯಿ ನೀಡುವ ಜೊತೆಗೆ ಬೇರೆ ದುಂದು ವೆಚ್ಚ ತಪ್ಪಿಸಿ, ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಭಾರತೀಯ ಭಾಷಾ ಚಿತ್ರಗಳಿಗೂ ಗೌರವ ಧನ ನೀಡಿದರೆ ಅನುಕೂಲವಿತ್ತು. ಈಗ ಐದರಿಂದ ಹತ್ತು ಸಾವಿರ ರೂಪಾಯಿ ನೀಡುತ್ತಿದ್ದಾರೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದರೆ ಐವತ್ತು ಸಾವಿರವನ್ನಾದರೂ ನೀಡಬಹುದು.

ಸಿನಿಮೋತ್ಸವದಲ್ಲಿ ಏನಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಹೀಗಾಗಬಾರದು. ಕಾರ್ಯಕ್ರಮ ಆಯೋಜನೆಗೆ ವಿವಿಧ ಕಮಿಟಿಗಳನ್ನು ಮಾಡಿದ್ದಾರೆ. ಆದರೆ ಉತ್ಸವಕ್ಕೆ ಆಯ್ಕೆಯಾದ ಸಿನಿಮಾಗಳ ಉತ್ತೇಜನಕ್ಕೆ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಯೂ ಏಳುತ್ತದೆ. ಈ ಬಗ್ಗೆ ಒಂದು ಮಾತುಕತೆಯೂ ಆಗಿಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಆಗುತ್ತಿಲ್ಲ. ರೆಡ್ ಕಾರ್ಪೆಟ್ ಹಾಕಿ ಸ್ವಾಗತ ನೀಡಬೇಕು ಎಂದಲ್ಲ.

ಆತ್ಮೀಯವಾಗಿ, ಕೊನೆಯ ಪಕ್ಷ ಸಂವಾದಗಳ ಬಗ್ಗೆ ತಿಳಿಸಿ, ಪಾಲ್ಗೊಳ್ಳಿ ಎಂದು ಒಂದು ಸಣ್ಣ ಆಹ್ವಾನವನ್ನಾದರೂ ಚಿತ್ರೋದ್ಯಮದವರಿಗೆ ನೀಡಬಹುದಿತ್ತು. ಜನಪ್ರಿಯ ಕಲಾವಿದರು ಉದ್ಘಾಟನಾ ಸಮಾರಂಭಕ್ಕೆ ಬಂದು, ಪತ್ರಿಕೆಗಳಲ್ಲಿ ರಾರಾಜಿಸಿದರೆ ಅದೇ ಯಶಸ್ಸು ಎನ್ನುವ ಪರಿಸ್ಥಿತಿ ಉಂಟಾಗಿದೆ. ಅವೆಲ್ಲದರ ಜೊತೆಗೇ ಕನ್ನಡ ಸಿನಿಮಾ ನಿರ್ಮಾತೃಗಳನ್ನೂ ಹೆಚ್ಚು ಹೆಚ್ಚು ಒಳಗೊಳ್ಳಬೇಕಾದ ಅಗತ್ಯವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.